ಧೋನಿಯ ವೀರಾವೇಶದ ಆಟ ವ್ಯರ್ಥ, ಜಯದ ಹಳಿಗೆ ಮರಳಿದ ಕಿಂಗ್ಸ್ ಇಲೆವೆನ್

ರೋಚಕತೆಯ ಗೂಡಾಗಿದ್ದ ಈ ಋತುವಿನ ಐಪಿಎಲ್‌ ಟೂರ್ನಿಯ ೧೨ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ೪ ರನ್ ಗೆಲುವು ಪಡೆಯಿತು. ಗ್ರೇಟ್ ಫಿನಿಶರ್ ಬಿರುದಾಂಕಿತ ಧೋನಿ (೭೯*) ಕೂಡ ಈ ಬಾರಿ ಎಡವಿದ್ದು, ನಟಿ ಪ್ರೀತಿ ಜಿಂಟಾ ಪಡೆ ಗೆಲುವಿಗೆ ನೆರವಾಯಿತು

ಕಿಂಗ್ಸ್‌ ಇಲೆವೆನ್ ಪಂಜಾಬ್‌ನ ತವರು ತಾಣ ಮೊಹಾಲಿಯಲ್ಲಿ ನಡೆದ ಪಂದ್ಯವು ಕೊನೆಯ ಹಂತದಲ್ಲಿ ಆತಿಥೇಯರತ್ತ ವಾಲಿತು. ಧೋನಿ ಕ್ರೀಸ್‌ನಲ್ಲಿದ್ದುದರಿಂದ ಪ್ರೀತಿ ಪಡೆ ಹೇಳಿಕೊಳ್ಳಲಾಗದ ಚಡಪಡಿಕೆಯಲ್ಲಿತ್ತು. ಆದರೆ, ಈ ಬಾರಿ ರಾಂಚಿ ಕ್ರಿಕೆಟಿಗನಿಂದ ತಂಡವನ್ನು ಗೆಲುವಿನ ದಡ ಮುಟ್ಟಿಸಲಾಗಲಿಲ್ಲ. ಹೀಗಾಗಿ, ಚೆನ್ನೈ ಸೂಪರ್ ಕಿಂಗ್ಸ್ ಪ್ರಸಕ್ತ ಟೂರ್ನಿಯಲ್ಲಿ ಮೊದಲ ಬಾರಿಗೆ ಸೋಲಿನ ರುಚಿ ಕಂಡಿತು. ಇನ್ನೊಂದೆಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ೪ ವಿಕೆಟ್ ಸೋಲನುಭವಿಸಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತೆ ಜಯದ ಹಾದಿಗೆ ಮರಳಿತು.

ಭಾನುವಾರ (ಏ.೧೫) ನಡೆದ ಪಂಜಾಬ್ ಕ್ರಿಕೆಟ್ ಸಂಸ್ಥೆಯ ಐ ಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಸ್ಫೋಟಕ ಆಟಗಾರ ಕ್ರಿಸ್‌ ಗೇಲ್ ಅವರ ಬಿಡುಬೀಸಿನ ಬ್ಯಾಟಿಂಗ್‌ನ ಮಧ್ಯೆಯೂ ನಿಗದಿತ ೨೦ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೧೯೭ ರನ್‌ಗಳನ್ನಷ್ಟೇ ಗಳಿಸಿತು. ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದ್ದ ಚೆನ್ನೈಗೆ ಈ ಮೊತ್ತವನ್ನು ಭೇದಿಸುವುದು ಕಷ್ಟವಾಗದು ಎಂಬ ಲೆಕ್ಕಾಚಾರ ಪಂಜಾಬ್ ಬೌಲರ್‌ಗಳ ಶಿಸ್ತುಬದ್ಧ ದಾಳಿಯಲ್ಲಿ ಬುಡಮೇಲಾಯಿತು.

ಧೋನಿಯನ್ನು ಹೊರತುಪಡಿಸಿದರೆ ಮಿಕ್ಕವರು ನಿರಾಸೆ ಮೂಡಿಸಿದರು. ಶೇನ್ ವಾಟ್ಸನ್ (೧೧), ಮುರಳಿ ವಿಜಯ್ (೧೨), ಸ್ಯಾಮ್ ಬಿಲ್ಲಿಂಗ್ಸ್ (೯) ಮತ್ತು ರವೀಂದ್ರ ಜಡೇಜಾ ೧೯ ರನ್‌ಗಳಿಗೆ ನಿರುತ್ತರರಾದರು. ತಂಡದ ಬ್ಯಾಟಿಂಗ್ ವೈಫಲ್ಯವನ್ನು ಒಬ್ಬಂಟಿಯಾಗಿ ಮೆಟ್ಟಿನಿಲ್ಲಲು ಯತ್ನಿಸಿದ ನಾಯಕ ಧೋನಿ ಸ್ಫೋಟಕ ಆಟದ ಮಧ್ಯೆಯೂ ತಂಡಕ್ಕೆ ಗೆಲುವು ದೊರಕಿಸಿಕೊಡಲು ಸಾಧ್ಯವಾಗಲಿಲ್ಲ. ಆಂಡ್ರ್ಯೂ ಟೈ ಪ್ರಮುಖ ಘಟ್ಟದಲ್ಲಿ ಎರಡು ವಿಕೆಟ್ ಎಗರಿಸಿ ಚೆನ್ನೈಗೆ ಮುಳುವಾದರು. ಹೀಗಾಗಿ, ೪೪ ಎಸೆತಗಳಲ್ಲಿ 6 ಬೌಂಡರಿ, ೫ ಸಿಕ್ಸರ್ ಸೇರಿದ ಅಜೇಯ ೭೯ ರನ್ ಗಳಿಸಿದ ಧೋನಿಯ ಪ್ರತಿರೋಧದ ಇನ್ನಿಂಗ್ಸ್ ವ್ಯರ್ಥವೆನಿಸಿಕೊಂಡಿತು.

ಇದನ್ನೂ ಓದಿ : ಕ್ರಿಸ್ ಗೇಲ್ ಕೈಬಿಟ್ಟು ಕೊಹ್ಲಿಗೆ ದಾಖಲೆ ಮೊತ್ತ ನೀಡಿ ತನ್ನಲ್ಲೇ ಉಳಿಸಿಕೊಂಡ ಆರ್‌ಸಿಬಿ 

ಅಬ್ಬರಿಸಿದ ಗೇಲ್-ರಾಹುಲ್: ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ಆರಂಭಿಕರಾದ ಕೆ ಎಲ್ ರಾಹುಲ್ (೩೭: ೨೨ ಎಸೆತ) ಮತ್ತು ಕ್ರಿಸ್ ಗೇಲ್ (೬೩: ೩೩ ಎಸೆತ, ೭ ಬೌಂಡರಿ, ೪ ಸಿಕ್ಸರ್) ಮೊದಲ ಎಂಟು ಓವರ್‌ಗಳಲ್ಲೇ ೯೬ ರನ್ ಕಲೆಹಾಕಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿಕೊಟ್ಟರು. ಆದರೆ, ಇವರಿಬ್ಬರ ನಿರ್ಗಮನದ ನಂತರ ತಂಡದ ಮಿಕ್ಕ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಮಟ್ಟದಲ್ಲಿ ಆಡದೆ ಅತ್ಯುತ್ತಮ ಆರಂಭ ಕಂಡಿದ್ದ ತಂಡದ ಮೊತ್ತವನ್ನು ಬೃಹತ್ತಾಗಿಸುವಲ್ಲಿ ವಿಫಲವಾದರು.

ರಾಹುಲ್ ೮ನೇ ಓವರ್‌ನಲ್ಲಿ ವಿಕೆಟ್ ಕೈಚೆಲ್ಲಿದಾಗ ತಂಡದ ಮೊತ್ತ ೯೬ ರನ್‌ಗಳಾಗಿತ್ತು. ಆನಂತರ ಇನ್ನೊಂದಷ್ಟು ರನ್ ಪೇರಿಸಿಕೊಟ್ಟ ಬಳಿಕ ಗೇಲ್ ಕೂಡ ಕ್ರೀಸ್ ತೊರೆದರು. ೧೨ನೇ ಓವರ್‌ನಲ್ಲಿ ಶೇನ್ ವಾಟ್ಸನ್, ವಿಂಡೀಸ್ ಆಟಗಾರನಿಗೆ ಪೆವಿಲಿಯನ್ ದಾರಿ ತೋರಿದರು.

ಬಳಿಕ ಮಯಾಂಕ್ ಅಗರ್ವಾಲ್ (೩೦: ೧೯ ಎಸೆತ, ೧ ಬೌಂಡರಿ, ೨ ಸಿಕ್ಸರ್), ಯುವರಾಜ್ ಸಿಂಗ್ (೨೦: ೧೩ ಎಸೆತ, ೨ ಬೌಂಡರಿ, ೧ ಸಿಕ್ಸರ್) ತುಸು ಹೋರಾಟ ನಡೆಸಲು ಯತ್ನಿಸಿದರೂ, ಸಾಧ್ಯವಾಗದೆ ಕ್ರೀಸ್ ತೊರೆದರು. ಇತ್ತ, ಏರಾನ್ ಫಿಂಚ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಕರುಣ್ ನಾಯರ್ (೨೯: ೧೭ ಎಸೆತ, ೨ ಬೌಂಡರಿ, ೧ ಸಿಕ್ಸರ್) ಮತ್ತು ನಾಯಕ ಆರ್ ಅಶ್ವಿನ್ ೧೪ ರನ್ ಗಳಿಸಿ ತಂಡದ ಮೊತ್ತವನ್ನು ೨೦೦ರ ಗಡಿ ಮುಟ್ಟಿಸಲು ಯತ್ನಿಸಿದರು. ಚೆನ್ನೈ ಪರ ಶಾರ್ದೂಲ್ ಠಾಕೂರ್ ಮತ್ತು ಇಮ್ರಾನ್ ತಾಹಿರ್ ತಲಾ ಎರಡು ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್

ಕಿಂಗ್ಸ್ ಇಲೆವೆನ್ ಪಂಜಾಬ್: ೨೦ ಓವರ್‌ಗಳಲ್ಲಿ ೧೯೭/೭ (ಗೇಲ್ ೬೩; ತಾಹಿರ್ ೩೪ಕ್ಕೆ ೨) ಚೆನ್ನೈ ಸೂಪರ್ ಕಿಂಗ್ಸ್: ೧೯೩/೫ (ಎಂ ಎಸ್ ಧೋನಿ ೭೯; ಆಂಡ್ರ್ಯೂ ಟೈ ೪೭ಕ್ಕೆ ೨) ಫಲಿತಾಂಶ: ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ೪ ರನ್ ಗೆಲುವು ಪಂದ್ಯಶ್ರೇಷ್ಠ: ಕ್ರಿಸ್ ಗೇಲ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More