ಗೋಲ್ಡ್ ಕೋಸ್ಟ್‌ಗೆ ಚುಂಬಕ ವಿದಾಯ; ಮುಂದಿನ ಗುರಿ ಬರ್ಮಿಂಗ್‌ಹ್ಯಾಮ್‌

ಕಳೆದ 11 ದಿನಗಳಿಂದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ೨೧ನೇ ಕಾಮನ್ವೆಲ್ತ್ ಕೂಟಕ್ಕೆ ತೆರೆ ಬಿದ್ದಿದೆ. ಭಾರತದ ಅಥ್ಲೀಟ್‌ಗಳು ನಿರೀಕ್ಷೆಗೂ ಮೀರಿದ ಸಾಧನೆ ಮೆರೆದಿದೆ. ದೆಹಲಿ, ಮ್ಯಾಂಚೆಸ್ಟರ್ ಬಳಿಕ ಪ್ರಸಕ್ತ ಕೂಟದಲ್ಲಿ ಭಾರತ ಆಕರ್ಷಕ ಆಟವಾಡಿದ್ದು, ಬರ್ಮಿಂಗ್‌ಹ್ಯಾಮ್‌ ಕೂಟ ಮುಂದಿನ ಗುರಿಯಾಗಿದೆ

ಕೂಟದ ಆರಂಭದ ದಿನದಲ್ಲಿ ಕನ್ನಡಿಗ ಪಿ ಗುರುರಾಜ ೫೬ ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ದಿನದಿಂದು ಹಿಡಿದು, ಅಂತ್ಯ ದಿನವಾದ ಭಾನುವಾರ (ಏ.೧೫) ಬ್ಯಾಡ್ಮಿಂಟನ್ ಜೋಡಿಯಾದ ಸಾತ್ವಿಕ್ ಸಾಯಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಕಂಚಿನ ಪದಕ ಗೆಲ್ಲುವುದರೊಂದಿಗೆ ಭಾರತ ಈ ಬಾರಿಯ ಕಾಮನ್ವೆಲ್ತ್ ಕೂಟದಲ್ಲಿ ಆಕರ್ಷಕ ಪ್ರದರ್ಶನ ನೀಡಿತು. ೨೦೧೦ರ ದೆಹಲಿ ಕಾಮನ್ವೆಲ್ತ್ ಕೂಟದ ನಂತರದಲ್ಲಿ ಭಾರತದ ಅಥ್ಲೀಟ್‌ಗಳು ಅತಿಹೆಚ್ಚು ಸ್ವರ್ಣ ಪದಕಗಳನ್ನು ಗೆದ್ದ ಕೂಟ ಇದಾಗಿದ್ದುದು ಭಾರತೀಯ ಅಥ್ಲೀಟ್‌ಗಳ ಸಾಧನೆಗೆ ಸಾಕ್ಷಿ.

ಭಾರತ ಗೋಲ್ಡ್ ಕೋಸ್ಟ್ ಕೂಟದಲ್ಲಿ ೨೬ ಚಿನ್ನ, ೨೦ ಬೆಳ್ಳಿ ಹಾಗೂ ೨೦ ಕಂಚಿನ ಪದಕಗಳನ್ನು ಸೇರಿದ ೬೬ ಪದಕಗಳನ್ನು ಗೆದ್ದುಕೊಂಡಿತು. ಇದೇ ಎಂಟು ವರ್ಷಗಳ ಹಿಂದಿನ ದೆಹಲಿ ಕೂಟದಲ್ಲಿ ೩೮ ಚಿನ್ನ, ೨೭ ಬೆಳ್ಳಿ ಹಾಗೂ ೩೬ ಕಂಚಿನ ಪದಕಗಳನ್ನು ಒಳಗೊಂಡಂತೆ ೧೦೧ ಪದಕಗಳನ್ನು ಜಯಿಸಿ ಶತಕ ಸಾಧನೆ ಮೆರೆದಿತ್ತು. ಕಾಮನ್ವೆಲ್ತ್ ಕೂಟದ ಇತಿಹಾಸದಲ್ಲಿ ಭಾರತದ ಗರಿಷ್ಠ ಸಾಧನೆ ಇದು. ಇನ್ನು, ಭಾರತೀಯ ಅಥ್ಲೀಟ್‌ಗಳ ಎರಡನೇ ಗರಿಷ್ಠ ಸಾಧನೆ ಎಂದರೆ, ಅದು ಮ್ಯಾಂಚೆಸ್ಟರ್‌ ಕೂಟ. ೨೦೦೨ರಲ್ಲಿ ನಡೆದಿದ್ದ ಈ ಕೂಟದಲ್ಲಿ ಭಾರತ ೩೦ ಸ್ವರ್ಣ, ೨೨ ಬೆಳ್ಳಿ ಹಾಗೂ ೧೭ ಕಂಚಿನ ಪದಕ ಗೆದ್ದಿತ್ತು.

ಶೂಟರ್‌ಗಳ ಶ್ರೇಷ್ಠ ಸಾಧನೆ

‍ಗೋಲ್ಡ್ ಕೋಸ್ಟ್‌ ಕೂಟದಲ್ಲಿ ಭಾರತದ ಚಿನ್ನದ ಗಳಿಕೆ ಹೆಚ್ಚಿಸಿದ್ದು ಶೂಟರ್‌ಗಳು. ಈ ವಿಭಾಗದಲ್ಲಿ ನಿರೀಕ್ಷೆಯಂತೆಯೇ ಭಾರತದ ಗುರಿಕಾರರು ಏಳು ಚಿನ್ನ ಗೆದ್ದರು. ಅಂತೆಯೇ ನಾಲ್ಕು ಬೆಳ್ಳಿ ಹಾಗೂ ಐದು ಕಂಚಿನ ಪದಕಗಳು ಈ ವಿಭಾಗದಲ್ಲಿ ಭಾರತದ ಪಾಲಾದವು.

ಕುಸ್ತಿಮಲ್ಲರ ಚಿನ್ನದ ಪಟ್ಟು: ಇನ್ನು, ಈ ಕೂಟದ ಭಾರತದ ಪದಕ ಗಳಿಕೆಗೆ ಮತ್ತಷ್ಟು ಬಲ ತಂದದ್ದು ಕುಸ್ತಿಪಟುಗಳು. ಈ ವಿಭಾಗದಲ್ಲಿ ಐದು ಬಂಗಾರ ಬಂದರೆ, ಮೂರು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳು ಲಭ್ಯವಾದವು. ಇನ್ನು, ವೇಟ್‌ಲಿಫ್ಟಿಂಗ್‌ನಲ್ಲಿ ಮತ್ತು ಬಾಕ್ಸಿಂಗ್‌ನಲ್ಲಿಯೂ ಭಾರತದ ಕ್ರೀಡಾಪಟುಗಳು ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡಿದರು. ಈ ವಿಭಾಗದಲ್ಲಿ ತಲಾ ೯ ಪದಕಗಳು ಬಂದವು. ಐದು ಚಿನ್ನ, ಎರಡು ಬೆಳ್ಳಿ, ಎರಡು ಕಂಚು ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಬಂದರೆ, ಬಾಕ್ಸಿಂಗ್‌ನಲ್ಲಿ ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ಮೂರು ಕಂಚು ಪದಕಗಳು ದೊರಕಿದವು.

ಬ್ಯಾಡ್ಮಿಂಟನ್-ಟಿಟಿಯಲ್ಲಿ ಮಿಂಚು

ಇತ್ತ, ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನಿಸ್‌ನಲ್ಲಿ ಭಾರತದ ಪ್ರದರ್ಶನ ಕೂಡ ಮನೋಜ್ಞವಾಗಿತ್ತು. ಮುಖ್ಯವಾಗಿ, ಈ ಎರಡರಲ್ಲೂ ಟೀಂ ವಿಭಾಗಗಳಲ್ಲಿ ಭಾರತ ತಂಡ ಚಾರಿತ್ರಿಕ ಸಾಧನೆ ಮೆರೆಯಿತು. ಪ್ರಮುಖವಾಗಿ ಟೇಬಲ್ ಟೆನಿಸ್ ವಿಭಾಗದಲ್ಲಂತೂ ಭಾರತ ಎಂಟು ಪದಕಗಳನ್ನು ಗೆದ್ದು ಹೊಸ ಸಾಧನೆ ಮೆರೆಯಿತು. ಕಾಮನ್ವೆಲ್ತ್ ಕ್ರೀಡಾಕೂಟದ ಚರಿತ್ರೆಯಲ್ಲೇ ಈ ವಿಭಾಗದಲ್ಲಿ ಇಷ್ಟೊಂದು ಪದಕಗಳು ಭಾರತಕ್ಕೆ ದಕ್ಕಿರಲಿಲ್ಲ. ಭಾರತದ ನಂ ೧ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಈ ಕೂಟದ ಸಿಂಗಲ್ಸ್‌ನಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಈ ಸಾಧನೆ ಮಾಡಿದ ಮೊಟ್ಟಮೊದಲ ಭಾರತದ ಆಟಗಾರ್ತಿ ಎನಿಸಿದರು. ಜತೆಗೆ, ಟೀಂ ವಿಭಾಗದಲ್ಲಿಯೂ ಭಾರತದ ಐತಿಹಾಸಿಕ ಸಾಧನೆಗೆ ಈಕೆಯ ಕೊಡುಗೆಯನ್ನು ಮರೆಯುವಂತಿಲ್ಲ.

ಇನ್ನುಳಿದಂತೆ ಡಬಲ್ಸ್‌ನಲ್ಲಿ ಮೌಮಾ ದಾಸ್ ಜತೆಗೆ ಬಾತ್ರಾ ಬೆಳ್ಳಿ ಪದಕ ಜಯಿಸಿದರು. ಪುರುಷರ ವಿಭಾಗದಲ್ಲಿ ಅಚಂತಾ ಶರತ್ ಕಮಲ್ ಸಿಂಗಲ್ಸ್‌ನಲ್ಲಿ ಕಂಚು ಗೆದ್ದರೆ, ಮಣಿಕಾ ಹಾಗೂ ಶರತ್ ಮಿಶ್ರ ಡಬಲ್ಸ್‌ನಲ್ಲಿ, ಹರ್ಮೀತ್ ದೇಸಾಯಿ ಹಾಗೂ ಸನಿಲ್ ಶೆಟ್ಟಿ ಪುರುಷರ ಡಬಲ್ಸ್‌ನಲ್ಲಿ ಇದೇ ಸಾಧನೆ ಮಾಡಿದರು.

ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಆಟಗಾರರು ೨೦೧೦ರ ಸಾಧನೆಯನ್ನೂ ಮೀರಿನಿಂತದ್ದು ಗಮನಾರ್ಹ. ದೆಹಲಿ ಕೂಟದಲ್ಲಿ ನಾಲ್ಕು ಪದಕಗಳನ್ನು ಗೆದ್ದಿದ್ದ ಭಾರತದ ಶಟ್ಲರ್‌ಗಳು ಈ ಬಾರಿ ಆರು ಪದಕಗಳನ್ನು ಜಯಿಸಿದರು. ಟೀಂ ಈವೆಂಟ್‌ನಲ್ಲಿ ಚಿನ್ನ ಗೆದ್ದುದು ಕೂಡ ಅಪೂರ್ವ ಸಾಧನೆಯೇ. ಇತ್ತ, ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ಬಂಗಾರದ ಸಾಧನೆ ಮೆರೆದರೆ, ಕಿಡಾಂಬಿ ಶ್ರೀಕಾಂತ್, ಪಿ ವಿ ಸಿಂಧು ಬೆಳ್ಳಿ ಪದಕ ಜಯಿಸಿದರು. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಮತ್ತು ಎನ್ ಸಿಕ್ಕಿ ರೆಡ್ಡಿ ಜೋಡಿ ಕಂಚು ಪಡೆದರೆ, ಪುರುಷರ ಡಬಲ್ಸ್‌ನಲ್ಲಿ ಬೆಳ್ಳಿ ಬಂದಿತು.

ಇದನ್ನೂ ಓದಿ : ರೋಚಕ ಹಣಾಹಣಿಯಲ್ಲಿ ಸಿಂಧು ಮಣಿಸಿ ಕಾಮನ್ವೆಲ್ತ್ ಚಿನ್ನಕ್ಕೆ ಮುತ್ತಿಟ್ಟ ಸೈನಾ

ವೈಫಲ್ಯ ಕಂಡವರು

ಇನ್ನು, ಗೋಲ್ಡ್ ಕೋಸ್ಟ್‌ನಲ್ಲಿ ವೈಫಲ್ಯ ಕಂಡವರೆಂದರೆ ಜಿಮ್ನಾಸ್ಟಿಕ್ ಪಟುಗಳು, ಸೈಕ್ಲಿಸ್ಟ್‌ಗಳು ಹಾಗೂ ಈಜುಗಾರರು. ಎಲ್ಲಕ್ಕಿಂತ ಮಿಗಿಲಾಗಿ ಹಾಕಿಯಲ್ಲಿ ಭಾರತ ಅತೀವ ನಿರಾಸೆ ಅನುಭವಿಸಿತು. ಎಂಟು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಭಾರತ, ಕಂಚು ಪದಕಕ್ಕಾಗಿನ ಹೋರಾಟದಲ್ಲಿ ನಿರಾಸೆ ಕಂಡರೆ, ವನಿತೆಯರು ಕೂಡ ಪದಕ ಕೈಚೆಲ್ಲಿದರು. ಕೂಟದಾದ್ಯಂತ ಅಮೋಘ ಪ್ರದರ್ಶನ ನೀಡಿದ ಹೊರತಾಗಿಯೂ ಎರಡೂ ವಿಭಾಗಗಳಲ್ಲಿ ಭಾರತ ನಿರಾಸೆ ಅನುಭವಿಸಿತು. ಕಳೆದ ಬಾರಿ ಬೆಳ್ಳಿ ಪದಕ ಪಡೆದಿದ್ದ ಭಾರತ ಹಾಕಿ ತಂಡ, ನಾಲ್ಕನೇ ಸ್ಥಾನಕ್ಕೆ ಕುಸಿದು ಮುಜುಗರಕ್ಕೀಡಾಯಿತು. ೨೦೧೦ರಿಂದ ೨೦೧೪ರ ಗ್ಲಾಸ್ಗೊ ಕೂಟಗಳಲ್ಲಿ ಎರಡನೇ ಸ್ಥಾನ ಪಡೆದಿದ್ದ ಭಾರತ ಹಾಕಿ ತಂಡದ ಈ ಬಾರಿಯ ಸಾಧನೆ ತಂಡವನ್ನು ಎಚ್ಚರಿಸುವಂತಿದೆ. ಇತ್ತ, ಕಳೆದೆರಡು ಆವೃತ್ತಿಗಳಲ್ಲಿ ಐದನೇ ಸ್ಥಾನ ಪಡೆದ ವನಿತಾ ಹಾಕಿ ತಂಡ, ಈ ಬಾರಿ ೪ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

ಬರ್ಮಿಂಗ್‌ಹ್ಯಾಮ್‌ನಲ್ಲಿ ಮುಂದಿನ ಕೂಟ

ಅಂದಹಾಗೆ, ಇಪ್ಪತ್ತೊಂದನೇ ಕೂಟಕ್ಕೆ ಭಾನುವಾರ ಅಧಿಕೃತ ತೆರೆಬಿದ್ದಿದೆ. ೨೦೨೨ರ ಇಪ್ಪತ್ತೆರಡನೇ ಕೂಟ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿದ್ದು, ಭಾರತ ಮಾತ್ರವಲ್ಲ, ಕಾಮನ್ವೆಲ್ತ್ ಒಕ್ಕೂಟದ ರಾಷ್ಟ್ರಗಳೆಲ್ಲಾ ಈ ಕೂಟವನ್ನು ಗುರಿಯಾಗಿಸಿಕೊಂಡಿದೆ. ಭಾನುವಾರ ಕರಾರಾ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಭಾರತದ ನಂ ೧ ಮಹಿಳಾ ಬಾಕ್ಸರ್, ಮೇರಿ ಕೋಮ್ ಧ್ವಜಧಾರಿಯಾಗಿ ಭಾರತ ತಂಡವನ್ನು ಮುನ್ನಡೆಸಿದರು.

ಬೋಲ್ಟ್ ಮಿಂಚು: ಕಳೆದ ವರ್ಷ ವೃತ್ತಿಬದುಕಿಗೆ ವಿದಾಯ ಹೇಳಿದ ಟ್ರಿಪಲ್ ಒಲಿಂಪಿಕ್ಸ್ ಚಾಂಪಿಯನ್ ಹಾಗೂ ವಿಶ್ವದ ಶರವೇಗಿ ಉಸೇನ್ ಬೋಲ್ಟ್ ಗೋಲ್ಡ್ ಕೋಸ್ಟ್‌ನಲ್ಲಿನ ಸಮಾರೋಪ ಸಮಾರಂಭದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾದರು. ಆಸ್ಟ್ರೇಲಿಯಾದ ಹಲವಾರು ಗಾಯಕ, ಗಾಯಕಿಯರು ಈ ಸಮಾರೋಪ ಸಮಾರಂಭದಲ್ಲಿ ಗಾನಸುಧೆ ಹರಿಸಿ ಕ್ರೀಡಾಗ್ರಾಮದಿಂದ ತಂತಮ್ಮ ಸ್ಥಳಗಳಿಗೆ ತೆರಳುವ ಅಥ್ಲೀಟ್‌ ಹಾಗೂ ಅಧಿಕಾರಿಗಳಿಗೆ ಮುದದ ಬೀಳ್ಕೊಡುಗೆ ನೀಡಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More