ಚೆನ್ನೈ ಸೂಪರ್ ಕಿಂಗ್ಸ್‌ಗೆ ಮತ್ತೆ ಶರಣೆಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು!

ಬ್ಯಾಟಿಂಗ್‌ಗೆ ಸವಾಲಿನಿಂದ ಕೂಡಿದ್ದ ಎಂಸಿಎ ಪಿಚ್‌ನಲ್ಲಿ ತಡಬಡಾಯಿಸಿದ ಆರ್‌ಸಿಬಿ, ಚೆನ್ನೈ ಗೆಲುವಿಗೆ ನೀಡಿದ್ದು ಕೇವಲ ೧೨೮ ರನ್‌ಗಳನ್ನಷ್ಟೆ. ಜಯದ ಹಾದಿಯಲ್ಲಿ ಒಂದಷ್ಟು ತಿಣುಕಿದರೂ, ಧೋನಿ (೩೧) ಮತ್ತು ಡ್ವೇನ್ ಬ್ರಾವೊ (೧೪) ಅಜೇಯ ಆಟ ಆರ್‌ಸಿಬಿ ಮತ್ತೆ ಚೆನ್ನೈಗೆ ಶರಣೆನ್ನುವಂತೆ ಮಾಡಿತು

ಅಲ್ಪ ಮೊತ್ತ ಗಳಿಸಿದರೂ, ಅದನ್ನು ಸಮರ್ಥಿಸಿಕೊಳ್ಳುವಲ್ಲಿ ಆರ್‌ಸಿಬಿ ಬೌಲಿಂಗ್ ಏನೂ ಸನ್‌ರೈಸರ್ಸ್ ಹೈದರಾಬಾದ್‌ನಂಥ ಮೊನಚು ಹಾಗೂ ಚಾಣಾಕ್ಷತನದಿಂದ ಕೂಡಿಲ್ಲ ಎಂಬುದು ಮತ್ತೊಮ್ಮೆ ನಿರೂಪಿತವಾಯಿತು. ತಂಡದ ಸ್ಟಾರ್ ಸ್ಪಿನ್ನರ್ ಎಂದು ನೆಚ್ಚಿಕೊಂಡಿದ್ದ ಯಜುವೇಂದ್ರ ಚಾಹಲ್ ಮೊದಲ ಓವರ್‌ನಲ್ಲಿ ಕೇವಲ ೭ ರನ್ ನೀಡಿದರಾದರೂ, ನಿರ್ಣಾಯಕ ಘಟ್ಟದಲ್ಲಿ ಅವರನ್ನು ಕ್ರೀಸ್‌ಗಿಳಿಸಿದ ಕೊಹ್ಲಿ ಏಕಾದರೂ ಅವರ ಕೈಗೆ ಚೆಂಡನ್ನು ಕೊಟ್ಟೆನೋ ಎಂಬಂತೆ ಪರಿತಪಿಸಿಹೋದರು.

ವಾಸ್ತವವಾಗಿ ಚೆನ್ನೈ ಅನ್ನು ಸಾಧ್ಯವಾದಷ್ಟೂ ಮಟ್ಟಿಗೆ ನಿಯಂತ್ರಿಸಿದ್ದ ಆರ್‌ಸಿಬಿ, ಹದಿನೆಂಟನೇ ಓವರ್‌ನಲ್ಲಿ ತಾನಾಗಿಯೇ ಗೆಲುವನ್ನು ಚೆನ್ನೈ ಕೈಗಿತ್ತಿತು. ಮೊದಲ ಎಸೆತವನ್ನು ವೈಡ್ ಎಸೆದ ಚಾಹಲ್, ಎರಡನೇ ಎಸೆತದಲ್ಲಿ ಯಾವುದೇ ರನ್ ನೀಡಲಿಲ್ಲ. ಆದರೆ, ಮೂರನೇ ಎಸೆತವನ್ನು ಧೋನಿ ಸಿಕ್ಸರ್‌ಗೆ ಎತ್ತಿದರೆ, ನಂತರದ ಎಸೆತ ನೋಬಾಲ್ ಆಗಿತ್ತು! ಫ್ರೀ ಹಿಟ್‌ನಲ್ಲಿ ಮತ್ತೊಂದು ಸಿಕ್ಸರ್ ಎತ್ತಿದ ಧೋನಿ, ಐದನೇ ಎಸೆತದಲ್ಲಿ ಒಂದು ರನ್ ಗಳಿಸಿ ವಿಜಯದ ರನ್ ಬಾರಿಸಲು ಡ್ವೇನ್ ಬ್ರಾವೊಗೆ ಬಿಟ್ಟುಕೊಟ್ಟರು. ಒಟ್ಟಾರೆ ಮತ್ತೊಮ್ಮೆ ತಂಡದ ಗೆಲುವಿನಲ್ಲಿ, ಅದರಲ್ಲೂ ಈ ಋತುವಿನ ಎರಡೂ ಪಂದ್ಯಗಳಲ್ಲಿ ಆರ್‌ಸಿಬಿ ವಿರುದ್ಧದ ಗೆಲುವಿನಲ್ಲಿ ಈ ರಾಂಚಿ ಕ್ರಿಕೆಟಿಗ ನಿರ್ಣಾಯಕರೆನಿಸಿದರು.

ಪ್ಲೇ-ಆಫ್ ಕನಸಿಗೆ ಕೊಳ್ಳಿ?: ಅಂದಹಾಗೆ, ಈ ಸೋಲಿನಿಂದಾಗಿ ಆರ್‌ಸಿಬಿಯ ಪ್ಲೇಆಫ್ ಕನಸಿಗೆ ಕೊಳ್ಳಿ ಇಟ್ಟಂತಾಗಿದೆ. ಒಟ್ಟು ಒಂಬತ್ತು ಪಂದ್ಯಗಳಲ್ಲಿ ೩ರಲ್ಲಷ್ಟೇ ಗೆಲುವು ಸಾಧಿಸಿ, ಆರು ಪಂದ್ಯಗಳಲ್ಲಿ ಸೋತಿರುವ ಕೊಹ್ಲಿ ಪಡೆ, ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ. ಡೆಲ್ಲಿ ಡೇರ್‌ಡೆವಿಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ಕೊನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ತಲಾ ೬ ಪಾಯಿಂಟ್ಸ್ ಗಳಿಸಿ ಪ್ಲೇಆಫ್‌ಗಾಗಿ ಹೋರಾಟ ನಡೆಸುತ್ತಿದ್ದು, ಆರ್‌ಸಿಬಿ ಉಳಿದ ಐದೂ ಪಂದ್ಯಗಳಲ್ಲಿ ಕಡ್ಡಾಯವಾಗಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಈ ಪೈಕಿ, ಒಂದು ಇಲ್ಲವೇ ಎರಡು ಪಂದ್ಯಗಳಲ್ಲಿ ಸೋತರೂ ಆರ್‌ಸಿಬಿಯ ಈ ಋತುವಿನ ಐಪಿಎಲ್ ಅಭಿಯಾನಕ್ಕೆ ತೆರೆ ಬೀಳಲಿದೆ.

ಭೀತಿಗೆ ಸಿಲುಕಿದ್ದ ಚೆನ್ನೈ: ಅಲ್ಪ ಮೊತ್ತ ಗಳಿಸಿದ್ದ ಹಿನ್ನೆಲೆಯಲ್ಲಿ ಆರ್‌ಸಿಬಿ, ಆರಂಭದಲ್ಲೇ ಚೆನ್ನೈ ಮೇಲೆ ಒತ್ತಡ ಹೇರಲು ಒಂದೆರಡು ವಿಕೆಟ್ ಗಳಿಸಲೇಬೇಕಿತ್ತು. ಅದಕ್ಕೆ ತಕ್ಕಂತೆ ಶೇನ್ ವಾಟ್ಸನ್ (೧೧) ವೇಗಿ ಉಮೇಶ್ ಯಾದವ್ ೩ನೇ ಓವರ್‌ನ ಕೊನೇ ಎಸೆತದಲ್ಲಿ ಬೌಲ್ಡ್ ಆಗಿ ಕ್ರೀಸ್ ತೊರೆದರು. ಆನಂತರದಲ್ಲಿ ಅಂಬಟಿ ರಾಯುಡು (೩೨) ಮತ್ತು ಸುರೇಶ್ ರೈನಾ (೨೫) ಕೂಡ ಹೇಳಿಕೊಳ್ಳುವಂಥ ಜೊತೆಯಾಟವಾಡಲಿಲ್ಲ. ಕೇವಲ ಇವರೀರ್ವರ ಜೊತೆಯಾಟ ಕೇವಲ ೪೪ ರನ್‌ಗೆ ಸೀಮಿತವಾಯಿತು. ಇನ್ನು, ಇಬ್ಬರನ್ನೂ ಕ್ರೀಸ್‌ನಿಂದ ಹೊರಗಟ್ಟಿದ ಮೇಲಂತೂ, ಚೆನ್ನೈ ಒಂದಷ್ಟು ಚಡಪಡಿಕೆಗೆ ಒಳಗಾಯಿತು. ಆದರೆ, ಧೋನಿ ಹಾಗೂ ಬ್ರಾವೊ ೫ನೇ ವಿಕೆಟ್‌ಗೆ ಮುರಿಯದ ೪೮ ರನ್ ಕಲೆಹಾಕಿ ಆರ್‌ಸಿಬಿಗೆ ಸೋಲುಣಿಸಿದರು.

ಇದನ್ನೂ ಓದಿ : ಕೊಹ್ಲಿ ಸಾರಥ್ಯದ ಚಾಲೆಂಜರ್ಸ್‌ಗೆ ಚೆನ್ನೈ ಲೆಕ್ಕಾ ಚುಕ್ತಾ ಮಾಡುವ ಧಾವಂತ

ಜಡೇಜಾ ಸ್ಪಿನ್ ಜಾದೂ: ಇದಕ್ಕೂ ಮುನ್ನ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ಮೈದಾನದಲ್ಲಿ ಶನಿವಾರ ನಡೆದ ಈ ಋತುವಿನ ೩೫ನೇ ಐಪಿಎಲ್ ಪಂದ್ಯದಲ್ಲಿ ಬಲಿಷ್ಠ ಚೆನ್ನೈಗೆ ಆರ್‌ಸಿಬಿ ಸುಲಭ ಗುರಿ ನೀಡಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಧೋನಿ, ಆರ್‌ಸಿಬಿಯನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿದರು. ಅವರ ಪ್ರಬುದ್ಧ ನಿರ್ಣಯವನ್ನು ಚೆನ್ನೈ ಬೌಲರ್‌ಗಳು ವಿಶೇಷವಾಗಿ ಸ್ಪಿನ್ನರ್ ರವೀಂದ್ರ ಜಡೇಜಾ (೧೮ಕ್ಕೆ ೩) ಮತ್ತು ಹರ್ಭಜನ್ ಸಿಂಗ್ (೨೨ಕ್ಕೆ ೨) ಬಲವಾಗಿ ಸಮರ್ಥಿಸಿಕೊಂಡರು. ಈ ಋತುವಿನಲ್ಲಿ ಮೊದಲ ಬಾರಿಗೆ ಅಪೂರ್ವ ಬೌಲಿಂಗ್ ಪ್ರದರ್ಶಿಸಿದ ಜಡೇಜಾ, ಆರ್‌ಸಿಬಿ ಕಪ್ತಾನ ವಿರಾಟ್ ಕೊಹ್ಲಿ (೮), ಮನ್‌ದೀಪ್ ಸಿಂಗ್ (೭) ಹಾಗೂ ಪಾರ್ಥೀವ್ ಪಟೇಲ್ ವಿಕೆಟ್‌ ಎಗರಿಸಿ ಆರ್‌ಸಿಬಿ ಇನ್ನಿಂಗ್ಸ್‌ಗೆ ಬಲವಾದ ಪೆಟ್ಟುನೀಡಿದರು.

ಮೆಕಲಮ್ ವೈಫಲ್ಯ: ನ್ಯೂಜಿಲೆಂಡ್ ಆಟಗಾರ ಬ್ರೆಂಡನ್ ಮೆಕಲಮ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಪಾರ್ಥೀವ್ ಪಟೇಲ್, ಎಚ್ಚರಿಕೆಯಿಂದ ಕಟ್ಟಿದ ಇನ್ನಿಂಗ್ಸ್ ಆರ್‌ಸಿಬಿಯ ಜೀವಾಳವೆನಿಸಿತು. ಎರಡನೇ ಓವರ್‌ನಲ್ಲಿ ದಾಳಿಗಿಳಿದ ದ.ಆಫ್ರಿಕಾ ವೇಗಿ ಲುಂಗಿ ಗಿಡಿ ಎರಡನೇ ಎಸೆತದಲ್ಲೇ ಮೆಕಲಮ್ ವಿಕೆಟ್ ಎಗರಿಸಿ ಚೆನ್ನೈ ಪಾಳೆಯದಲ್ಲಿ ಹರ್ಷದ ಚಿಲುಮೆ ಉಕ್ಕಿಸಿದರು. ಭರ್ಜರಿ ಹೊಡೆತಕ್ಕೆ ಯತ್ನಿಸಿದ ಮೆಕಲಮ್, ಶಾರ್ದೂಲ್ ಠಾಕೂರ್‌ಗೆ ಕ್ಯಾಚಿತ್ತು ಪೆವಿಲಿಯನ್ ದಾರಿ ತುಳಿದರು. ೩ ಎಸೆತಗಳನ್ನು ಎದುರಿಸಿದ ಅವರು, ೧ ಬೌಂಡರಿ ಸೇರಿದ ೫ ರನ್‌ಗೆ ವಿಕೆಟ್ ಒಪ್ಪಿಸಿದರು.

ದಿಗ್ಗಜರಿಂದ ಆಘಾತ: ಮೆಕಲಮ್ ನಿರ್ಗಮನದ ನಂತರ ಆಡಲಿಳಿದ ನಾಯಕ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಹಿಂದಿನ ಬಿರುಸೇನಿರಲಿಲ್ಲ. ಕ್ರೀಸ್‌ಗೆ ಕಚ್ಚಿ ನಿಲ್ಲಲು ಹೆಣಗುತ್ತಿದ್ದ ಅವರು ಎದುರಿಸಿದ ೧೧ ಎಸೆತಗಳಲ್ಲಿ ಒಂದೇ ಒಂದು ಬೌಂಡರಿ ಬಾರಿಸಿದ್ದು ಅವರ ಅಭದ್ರತಾ ಭಾವವನ್ನು ಒತ್ತಿಹೇಳಿತು. ಇದೇ ಚಡಪಡಿಕೆಯಲ್ಲಿದ್ದ ಅವರನ್ನು ೭ನೇ ಓವರ್‌ನ ಮೊದಲ ಎಸೆತದಲ್ಲೇ ಜಡೇಜಾ ಬೌಲ್ಡ್ ಮಾಡಿ ಚೆನ್ನೈ ಮತ್ತೊಮ್ಮೆ ನಗೆಬೀರುವಂತೆ ಮಾಡಿದರು. ಎಲ್ಲಕ್ಕಿಂತ ಮಿಗಿಲಾಗಿ, ಆರ್‌ಸಿಬಿಯ ಹಾಹಾಕಾರಕ್ಕೆ ಕಾರಣವಾದದ್ದು ಎಬಿ ಡಿವಿಲಿಯರ್ಸ್ (೧) ಕ್ರೀಸ್ ತೊರೆದಾಗ. ೮ನೇ ಓವರ್‌ನ ಮೂರನೇ ಎಸೆತದಲ್ಲಿ ಹರ್ಭಜನ್ ಸಿಂಗ್ ಅವರನ್ನು ಸ್ಟಂಪೌಟ್‌ ಸುಳಿಗೆ ಸಿಲುಕಿಸಿದರು. ಜ್ವರದ ಬೇನೆಯಿಂದ ಚೇತರಿಸಿಕೊಂಡು ಮೈದಾನಕ್ಕಿಳಿದಿದ್ದ ಎಬಿಡಿಯನ್ನು ಧೋನಿ ಸ್ಟಂಪೌಟ್ ಮಾಡಿ ಆರ್‌ಸಿಬಿಗೆ ಭಾರಿ ಬರೆ ಎಳೆದರು. ಎರಡು ಓವರ್‌ಗಳಲ್ಲಿ ಪ್ರಮುಖ ಎರಡು ವಿಕೆಟ್‌ಗಳನ್ನು ಕಳೆದುಕೊಂಡ ಆರ್‌ಸಿಬಿ ಇನ್ನಿಲ್ಲದಂತೆ ನಲುಗಿತು.

ಪಾರ್ಥೀವ್ ಆಸರೆ: ಒಂದೆಡೆ ವಿಕೆಟ್ ಉರುಳುತ್ತ ಸಾಗಿದರೂ, ವಿಚಲಿತವಾಗದೆ ಸ್ಥಿರ ಪ್ರದರ್ಶನ ನೀಡುತ್ತ ಸಾಗಿದ ಪಾರ್ಥೀವ್ ಪಟೇಲ್, ತಂಡದ ಇನ್ನಿಂಗ್ಸ್ ಇನ್ನಷ್ಟು ತಳಕಚ್ಚದಂತೆ ನೋಡಿಕೊಂಡರು. ೩೭ ಎಸೆತಗಳಲ್ಲಿ ೫ ಬೌಂಡರಿ, ೨ ಸಿಕ್ಸರ್ ಸೇರಿದ ಅರ್ಧಶತಕ ಪೂರೈಸಿದ ಪಾರ್ಥೀವ್ ಪಟೇಲ್ ಐಪಿಎಲ್‌ನಲ್ಲಿ ೧೧ನೇ ಅರ್ಧಶತಕ ದಾಖಲಿಸಿದರು. ಆದರೆ, ಇನ್ನಷ್ಟು ಹೊತ್ತು ಅವರು ಕ್ರೀಸ್‌ನಲ್ಲಿ ನಿಲ್ಲಲು ಜಡೇಜಾ ಬಿಡಲಿಲ್ಲ. ಆದಾಗ್ಯೂ, ದಕ್ಷಿಣ ಆಫ್ರಿಕಾದ ಕ್ವಿಂಟಾನ್ ಡಿಕಾಕ್ ಬದಲು ತಂಡದಲ್ಲಿ ಸ್ಥಾನ ಪಡೆದಿದ್ದ ಪಾರ್ಥೀವ್, ಈ ಋತುವಿನಲ್ಲಿ ಸಿಕ್ಕ ಮೊದಲ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರಲ್ಲದೆ, ಅಪಾಯಕ್ಕೆ ಸಿಲುಕುತ್ತಿದ್ದ ತಂಡದ ಇನ್ನಿಂಗ್ಸ್‌ಗೂ ಆಸರೆಯಾದರು.

ಸಂಕ್ಷಿಪ್ತ ಸ್ಕೋರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: ೨೦ ಓವರ್‌ಗಳಲ್ಲಿ ೧೨೭/೯ (ಪಾರ್ಥೀವ್ ಪಟೇಲ್ ೫೩, ಟಿಮ್ ಸೌಥೀ ೩೬*; ರವೀಂದ್ರ ಜಡೇಜಾ ೧೮ಕ್ಕೆ ೩) ಚೆನ್ನೈ ಸೂಪರ್ ಕಿಂಗ್ಸ್: ೧೮ ಓವರ್‌ಗಳಲ್ಲಿ ೧೨೮/೪ (ಅಂಬಟಿ ರಾಯುಡು ೩೨, ಧೋನಿ ೩೧*, ಡ್ವೇನ್ ಬ್ರಾವೊ ೧೪*; ಉಮೇಶ್ ಯಾದವ್ ೧೫ಕ್ಕೆ ೨) ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್‌ಗೆ ೬ ವಿಕೆಟ್ ಗೆಲುವು ಪಂದ್ಯಶ್ರೇಷ್ಠ: ರವೀಂದ್ರ ಜಡೇಜಾ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More