ಆಫ್ಘಾನ್ ವಿರುದ್ಧದ ಏಕೈಕ ಟೆಸ್ಟ್‌ ತಂಡದಲ್ಲಿ ಕನ್ನಡಿಗ ಮಯಾಂಕ್‌ಗೆ ಸ್ಥಾನ?

ಜೂನ್ ತಿಂಗಳಿನಲ್ಲಿ ನಡೆಯಲಿರುವ ಭಾರತ ಮತ್ತು ಆಫ್ಘಾನಿಸ್ತಾನ ನಡುವಣದ ಏಕೈಕ ಟೆಸ್ಟ್ ಪಂದ್ಯಕ್ಕೆ ಬೆಂಗಳೂರಿನಲ್ಲಿ ಮಂಗಳವಾರ (ಮೇ ೮) ಟೀಂ ಇಂಡಿಯಾ ಪ್ರಕಟವಾಗಲಿದೆ. ಈ ಋತುವಿನ ದೇಶೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ಮಯಾಂಕ್‌ಗೆ ಈ ಬಾರಿಯಾದರೂ ಸ್ಥಾನ ಸಿಗುವುದೇ?

ಜೂನ್ ೧೪ರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಆಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯ ಮಾತ್ರವಲ್ಲದೆ, ಇನ್ನೂ ಕೆಲವಾರು ಕಿರಿಯರ ಪ್ರಮುಖ ಸರಣಿಗಳಗಾಗಿ ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿ ಆರು ವಿವಿಧ ತಂಡಗಳನ್ನು ಆಯ್ಕೆ ಮಾಡಲಿದೆ. ಪ್ರಸಕ್ತ ದೇಸೀಯ ಕ್ರಿಕೆಟ್ ಋತುವಿನಲ್ಲಿ ಅದ್ವಿತೀಯ ಪ್ರದರ್ಶನ ನೀಡಿದ ಮಯಾಂಕ್ ಅಗರ್ವಾಲ್, ಆಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿದೆ.

ಐಪಿಎಎಲ್ ನಂತರದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಕನಿಷ್ಠ ಆರರಿಂದ ಏಳು ಮಂದಿ ಪ್ರಮುಖ ಆಟಗಾರರು ಆಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಅಲಭ್ಯವಾಗಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಸರ್ರೆ ತಂಡದ ಪರ ಕೌಂಟಿ ಕ್ರಿಕೆಟ್ ಆಡಲು ಇಂಗ್ಲೆಂಡ್‌ಗೆ ತೆರಳಲಿದ್ದರೆ, ಚೇತೇಶ್ವರ ಪೂಜಾರ ಸೇರಿದಂತೆ ಮಿಕ್ಕ ಆಟಗಾರರು ಕೂಡ ನಿಗದಿತ ವೇಳಾಪಟ್ಟಿಗೂ ಮುನ್ನ ಅಂದರೆ, ಹದಿನೈದಿಪ್ಪತ್ತು ದಿನಗಳಿಗೆ ಮುಂಚೆಯೇ ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ.

ಸದ್ಯ, ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿರುವ ಮಯಾಂಕ್ ಅಗರ್ವಾಲ್ ಅತ್ಯುತ್ತಮ ಫಾರ್ಮ್‌ನಲ್ಲೇನೂ ಇಲ್ಲ. ಆದರೆ, ಹನ್ನೊಂದನೇ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗೂ ಮುಂಚೆ ಟೀಂ ಇಂಡಿಯಾ ಕೈಗೊಂಡಿದ್ದ ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದ ಭಾರತ ತಂಡದಲ್ಲಿ ಮಯಾಂಕ್ ಅಗರ್ವಾಲ್‌ಗೆ ಸ್ಥಾನ ಸಿಕ್ಕಿರಲಿಲ್ಲ. ಆಯ್ಕೆ ಸಮಿತಿಯ ಈ ನಡೆ ಟೀಕೆಗೆ ಗುರಿಯಾಗಿತ್ತು. ಆದರೆ, ಆಯ್ಕೆಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್, “ಮಯಾಂಕ್ ಇನ್ನಷ್ಟು ದಿನ ಕಾಯುವುದು ಉಚಿತ,” ಎಂದಿದ್ದರು. ಈ ಎಲ್ಲದರ ಹಿನ್ನೆಲೆಯಲ್ಲಿ, ಮಯಾಂಕ್ ಈ ಬಾರಿ ಆಫ್ಘಾನಿಸ್ತಾನ ವಿರುದ್ಧದ ಟೆಸ್ಟ್‌ ಪಂದ್ಯಕ್ಕೆ ಆಯ್ಕೆಯಾಗುವ ಸಂಭವವಿದೆ.

ಇದನ್ನೂ ಓದಿ : ಮಯಾಂಕ್ ಮತ್ತಷ್ಟು ಕಾಲ ಕಾಯುವುದು ಅನಿವಾರ್ಯ ಎಂದ ಎಂಎಸ್‌ಕೆ ಪ್ರಸಾದ್‌

ಅಂದಹಾಗೆ, ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ‘ಎ’ ಮತ್ತು ವೆಸ್ಟ್‌ಇಂಡೀಸ್ ‘ಎ’ ತಂಡಗಳ ವಿರುದ್ಧದ ತ್ರಿಕೋನ ಏಕದಿನ ಸರಣಿ, ಐರ್ಲೆಂಡ್ ‘ಎ’ ತಂಡದ ವಿರುದ್ಧದ ಟಿ೨೦ ಸರಣಿ, ಇಂಗ್ಲೆಂಡ್ ಪ್ರವಾಸದಲ್ಲಿನ ಟಿ೨೦ ಸರಣಿ, ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಸಮಿತಿ ವಿವಿಧ ವಿಭಾಗದ ತಂಡಗಳನ್ನು ಆರಿಸಲಿದೆ. ಏತನ್ಮಧ್ಯೆ, ಐರ್ಲೆಂಡ್ ವಿರುದ್ಧದ ಎರಡು ಟಿ೨೦ ಪಂದ್ಯ ಸರಣಿಗೂ ತಂಡವನ್ನು ಆಯ್ಕೆ ಮಾಡುವ ಸಂಭವವಿದೆ.

ರಹಾನೆಗೆ ಸ್ಥಾನ?: ಈ ಮಧ್ಯೆ ಆಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. ಪ್ರಸಕ್ತ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿರುವ ರಹಾನೆ, ತಂಡವನ್ನು ಪ್ಲೇಆಫ್‌ನತ್ತ ಮುನ್ನಡೆಸಲು ವಿಫಲವಾಗಿದ್ದಾರೆ. ಆದರೆ, ಟೆಸ್ಟ್ ಪ್ರಕಾರದಲ್ಲಿ ರಹಾನೆಗಿರುವ ಅನುಭವದ ಹಿನ್ನೆಲೆಯಲ್ಲಿ ಅವರು ತಂಡದ ಸಾರಥಿಯಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More