ಭಾರತ-ಆಸ್ಟ್ರೇಲಿಯಾ ನಡುವೆ ಹೊನಲು ಬೆಳಕಿನ ಟೆಸ್ಟ್ ಪಂದ್ಯ ಇಲ್ಲ

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡ ಹೊನಲು ಬೆಳಕಿನ ಟೆಸ್ಟ್ ಆಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಸೋಮವಾರ (ಮೇ ೭) ಕ್ರಿಕೆಟ್ ಆಸ್ಟ್ರೇಲಿಯಾಗೆ ಖಚಿತಪಡಿಸಿದೆ. ಯಾವುದೇ ಕಾರಣಕ್ಕೂ ಪಿಂಕ್ ಚೆಂಡಿನ ಟೆಸ್ಟ್‌ ಆಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಮತ್ತೊಮ್ಮೆ ಹೇಳಿಕೆ ನೀಡಿದೆ

ಹೇಗಾದರೂ ಮಾಡಿ ಭಾರತ ತಂಡವನ್ನು ಹೊನಲು ಬೆಳಕಿನ ಟೆಸ್ಟ್‌ ಆಡುವಂತೆ ಮಾಡಬೇಕೆಂದು ಪಟ್ಟು ಹಿಡಿದಿದ್ದ ಕ್ರಿಕೆಟ್ ಆಸ್ಟ್ರೇಲಿಯಾಗೆ (ಸಿಎ) ಕಡೆಗೂ ಭ್ರಮನಿರಸನವಾಗಿದೆ. ಸಾಂಪ್ರದಾಯಿಕವಾದ ಕೆಂಪು ಚೆಂಡಿನ ಟೆಸ್ಟ್ ಪಂದ್ಯದಿಂದ ಯಾವುದೇ ಕಾರಣಕ್ಕೂ ತಾನು ವಿಮುಖವಾಗುವುದಿಲ್ಲ ಎಂಬುದನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ನಿಲುವನ್ನು ಖಚಿತಪಡಿಸಿದೆ. ಅಂದಹಾಗೆ, ಭಾರತ ತಂಡದ ಬಹುಪಾಲು ಆಟಗಾರರು ಹೊನಲು ಬೆಳಕಿನಲ್ಲಿ ಟೆಸ್ಟ್ ಪಂದ್ಯವನ್ನಾಡಿಲ್ಲ. ಇದರ ಪ್ರಯೋಗಾರ್ಥ, ಕಳೆದ ವರ್ಷ ದುಲೀಪ್ ಟ್ರೋಫಿ ಪಂದ್ಯಾವಳಿಯ ವೇಳೆ ಚೇತೇಶ್ವರ ಪೂಜಾರ ಹಾಗೂ ಮುರಳಿ ವಿಜಯ್ ಮಾತ್ರ ಹೊನಲು ಬೆಳಕಿನಲ್ಲಿ ಆಡಿದ್ದರು.

ಕೋಚ್ ರವಿಶಾಸ್ತ್ರಿ ನೇತೃತ್ವದಲ್ಲಿ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಸರ್ವೋಚ್ಚ ನ್ಯಾಯಾಲಯ ನೇಮಿತ ಆಡಳಿತ ಸಮಿತಿಗೆ (ಸಿಒಎ), “ಹೊನಲು ಬೆಳಕಿನಲ್ಲಿ ಟೆಸ್ಟ್ ಆಡಲು ಭಾರತ ತಂಡ ಇನ್ನೂ ಪಕ್ವವಾಗಿಲ್ಲ. ಇದಕ್ಕೆ ಕನಿಷ್ಠ ಒಂದೂವರೆ ವರ್ಷದ ತರಬೇತಿಯ ಅಗತ್ಯವಿದೆ. ಹೀಗಾಗಿ, ಈ ವರ್ಷಾಂತ್ಯದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಯಾವ ಕಾರಣಕ್ಕೂ ಪಿಂಕ್ ಚೆಂಡಿನ ಟೆಸ್ಟ್ ಪಂದ್ಯ ಆಡುವುದು ಸಾಧ್ಯವಿಲ್ಲ,” ಎಂಬುದನ್ನು ಖಚಿತಪಡಿಸಿದೆ.

ಇದನ್ನೂ ಓದಿ : ಟೆಸ್ಟ್ ಕ್ರಿಕೆಟ್‌ನ ಸೊಗಸುಗಾರ ಸ್ಟೀವ್ ಸ್ಮಿತ್ ವೃತ್ತಿಬದುಕಿನ ದುರಂತ ಅಧ್ಯಾಯ

ಅಂದಹಾಗೆ, ಡಿ.೬ರಿಂದ ೧೦ರವರೆಗೆ ಅಡಿಲೇಡ್‌ನಲ್ಲಿ ನಡೆಯಲಿದ್ದ ಸರಣಿಯ ಮೊದಲ ಪಂದ್ಯವನ್ನೇ ಹೊನಲು ಬೆಳಕಿನಲ್ಲಿ ಆಡಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಉತ್ಸುಕವಾಗಿತ್ತು. ಆದರೀಗ ಬಿಸಿಸಿಐನ ಖಚಿತ ನಿಲುವಿನಿಂದ ಕ್ರಿಕೆಟ್ ಆಸ್ಟ್ರೇಲಿಯಾ ನಿರಾಸೆಗೊಂಡಿದೆ. “ಸದ್ಯದ ಸ್ಥಿತಿಯಲ್ಲಿ ಟೀಂ ಇಂಡಿಯಾ ಹೊನಲು ಬೆಳಕಿನ ಟೆಸ್ಟ್ ಆಡುತ್ತಿಲ್ಲ ಎಂದು ಹೇಳಲು ವಿಷಾದವಾಗುತ್ತದೆ. ಕ್ರಿಕೆಟ್ ಆಸ್ಟ್ರೇಲಿಯಾ ಬಿಸಿಸಿಐನ ಈ ನಿಲುವಿನೊಂದಿಗೆ ಸಹಕರಿಸಬೇಕು,’’ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ, ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯವಾಹಕ ಅಧಿಕಾರಿ ಜೇಮ್ಸ್ ಸುದರ್‌ಲ್ಯಾಂಡ್‌ಗೆ ಇಮೇಲ್ ಸಂದೇಶ ರವಾನಿಸಿದ್ದಾರೆ.

ಅಂದಹಾಗೆ, ಕಳೆದ ವಾರ ಆಸ್ಟ್ರೇಲಿಯಾದ ರೇಡಿಯೊ ಸ್ಟೇಷನ್‌ವೊಂದರಲ್ಲಿ ಜೇಮ್ಸ್ ಸುದರ್‌ಲ್ಯಾಂಡ್ ಮಾತನಾಡುತ್ತಾ, “ಹೊನಲು ಬೆಳಕಿನ ಟೆಸ್ಟ್ ಪಂದ್ಯವಾಡಲು ಭಾರತ ವಿರೋಧಿಸುತ್ತಿರುವ ಪ್ರಮುಖ ಕಾರಣ ಅದು ಸರಣಿಯನ್ನು ಗೆಲ್ಲಬೇಕೆಂಬ ಹಿನ್ನೆಲೆಯಲ್ಲಿ. ಆಸ್ಟ್ರೇಲಿಯಾ ತಂಡ ಹೊನಲು ಬೆಳಕಿನಲ್ಲಿ ಆಡಿದ ಟೆಸ್ಟ್ ಪಂದ್ಯಗಳಲ್ಲಿ ಒಂದರಲ್ಲೂ ಸೋಲನುಭವಿಸದೆ ಇರುವುದು ಕೂಡ ಭಾರತದ ಕಳವಳಕ್ಕೆ ಕಾರಣ,’’ ಎಂದಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More