ಮ್ಯಾಡ್ರಿಡ್ ಓಪನ್: ಪ್ರೀಕ್ವಾರ್ಟರ್‌ಫೈನಲ್‌ ತಲುಪಿದ ಮರಿಯಾ ಶರಪೋವಾ

ವಿಶ್ವದ ಮಾಜಿ ನಂ.೧ ಆಟಗಾರ್ತಿ ಹಾಗೂ ಐದು ಗ್ರಾಂಡ್‌ಸ್ಲಾಮ್ ಪ್ರಶಸ್ತಿ ವಿಜೇತೆ ಮರಿಯಾ ಶರಪೋವಾ, ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯಲ್ಲಿ ಹದಿನಾರರ ಘಟ್ಟಕ್ಕೆ ಕಾಲಿಟ್ಟರು. ೨ನೇ ಸುತ್ತಿನಲ್ಲಿ ಈ ರಷ್ಯನ್ ಆಟಗಾರ್ತಿ ರೊಮೇನಿಯಾದ ಐರಿನಾ ಬೆಗು ವಿರುದ್ಧ ನೇರ ಸೆಟ್‌ಗಳಲ್ಲಿ ಜಯಿಸಿದರು

ಮೊದಲ ಸೆಟ್‌ನಲ್ಲಿ ನೀಡಿದ ದಿಟ್ಟ ಹೋರಾಟ ಎರಡನೇ ಸೆಟ್‌ನಲ್ಲಿ ರೊಮೇನಿಯಾ ಆಟಗಾರ್ತಿಯಿಂದ ವ್ಯಕ್ತವಾಗಲಿಲ್ಲ. ಬದಲಿಗೆ, ರಷ್ಯನ್ ಆಟಗಾರ್ತಿಯ ಪ್ರಚಂಡ ಆಟಕ್ಕೆ ತಬ್ಬಿಬ್ಬುಗೊಂಡ ಬೆಗು, ಸುಲಭವಾಗಿಯೇ ಮಣಿದರು. ಹೀಗಾಗಿ ಸೋಮವಾರ (ಮೇ ೭) ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಮರಿಯಾ ಶರಪೋವಾ, ಐರಿನಾ ಕೆಮೆಲಿಯಾ ಬೆಗು ವಿರುದ್ಧ ೭-೫, ೬-೧ ಸೆಟ್‌ಗಳಿಂದ ಮಣಿಸಿ ಅಂತಿಮ ಎಂಟರ ಘಟ್ಟಕ್ಕೆ ಕಾಲಿಟ್ಟರು.

ದಿನದ ಹಿಂದಷ್ಟೇ ಮೊದಲ ಸುತ್ತಿನ ಪಂದ್ಯದಲ್ಲಿ ಮಿಹೇಲಾ ಬುಜಾರ್‌ನೆಸ್ಕು ವಿರುದ್ಧ 6-4, 6-1 ನೇರ ಸೆಟ್‌ಗಳಲ್ಲಿ ಗೆಲುವು ಪಡೆದಿದ್ದ ಶರಪೋವಾ, ಈ ಋತುವಿನಲ್ಲಿ ಅನುಭವಿಸಿದ್ದ ಮೊದಲ ಸುತ್ತಿನ ಸತತ ನಾಲ್ಕು ಪಂದ್ಯಗಳ ಸೋಲಿನ ಸರಪಳಿಯನ್ನು ತುಂಡರಿಸಿದ್ದರು. ಗಟ್ಟಿ ಅಂಕಣದ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವುದರೊಂದಿಗೆ ಮಾಸಾಂತ್ಯದಲ್ಲಿ ಶುರುವಾಗಲಿರುವ ಪ್ರತಿಷ್ಠಿತ ಫ್ರೆಂಚ್ ಓಪನ್‌ಗೆ ಅಣಿಯಾಗಲು ಶರಪೋವಾ ನಿರ್ಧರಿಸಿದ್ದಾರೆ.

ನಿಷೇಧಿತ ಉದ್ದೀಪನಾ ಮದ್ದು ಸೇವನೆಯಿಂದಾಗಿ ಅಮಾನತು ಶಿಕ್ಷೆ ಪೂರೈಸಿ ಮತ್ತೆ ಅಂತಾರಾಷ್ಟ್ರೀಯ ಟೆನಿಸ್‌ಗೆ ಮರಳಿರುವ ಶರಪೋವಾ, ವಿಶ್ವ ಮಹಿಳಾ ಟೆನಿಸ್ ಶ್ರೇಯಾಂಕದ ಟಾಪ್ ೬೦ ಪಟ್ಟಿಯಿಂದಲೂ ಹೊರಗಿದ್ದಾರೆ. “ನಾನು ೬೦-೭೦ನೇ ಸ್ಥಾನದಲ್ಲಿ ಉಳಿಯಬೇಕೋ, ಖಂಡಿತವಾಗಿಯೂ ಇಲ್ಲ. ಮುಂದಿನ ದಿನಗಳಲ್ಲಿ ನನ್ನ ಶ್ರೇಯಾಂಕ ಸುಧಾರಿಸಲಿದೆ. ಆ ದಿಸೆಯಲ್ಲಿ ಹಿಂದಿಗಿಂತಲೂ ಹೆಚ್ಚಿಗೆ ಅಭ್ಯಾಸ ನಡೆಸುತ್ತಿದ್ದೇನೆ,’’ ಎಂದು ಮೊದಲ ಸುತ್ತಿನ ಪಂದ್ಯ ಮುಗಿದ ನಂತರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶರಪೋವಾ ತಿಳಿಸಿದ್ದರು.

ಇದನ್ನೂ ಓದಿ : ಇಂಡಿಯನ್ ವೆಲ್ಸ್ ಟೆನಿಸ್: ಮೊದಲ ಸುತ್ತಲ್ಲೇ ಮುಗ್ಗರಿಸಿದ ಮರಿಯಾ ಶರಪೋವಾ

ಪ್ರಬಲ ಪೈಪೋಟಿ: ಅಂದಹಾಗೆ, ಪ್ರಸಕ್ತ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ವಿಶ್ವದ ಪ್ರಮುಖ ಆಟಗಾರ್ತಿಯರಾದ ವಿಕ್ಟೋರಿಯಾ ಅಜರೆಂಕಾ, ಕೆರೊಲಿನಾ ಪ್ಲಿಸ್ಕೋವಾ ಹಾಗೂ ವಿಶ್ವದ ನಂ ೧ ಆಟಗಾರ್ತಿ ರೊಮೇನಿಯಾದ ಸಿಮೊನಾ ಹ್ಯಾಲೆಪ್‌ ಹಾಗೂ, ಈ ಋತುವಿನ ಮೊದಲ ಗ್ರಾಂಡ್‌ಸ್ಲಾಮ್ ಆಸ್ಟ್ರೇಲಿಯಾ ಓಪನ್ ವಿಜೇತೆ, ಕೆರೋಲಿನ್ ವೋಜ್ನಿಯಾಕಿ ಮತ್ತು ಸ್ಪೇನ್ ಆಟಗಾರ್ತಿ ಗಾರ್ಬೈನ್ ಮುಗುರುಜಾ ಕಣದಲ್ಲಿದ್ದು, ಶರಪೋವಾಗೆ ಪ್ರಬಲ ಪೈಪೋಟಿ ಎದುರಾಗಲಿರುವುದು ನಿಶ್ಚಿತವಾಗಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More