ಮುಂಬೈ-ಕಿಂಗ್ಸ್ ಇಲೆವೆನ್ ಪಂಜಾಬ್ ಗೆಲುವಿನಿಂದ ಹೆಚ್ಚಿದ ಪ್ಲೇ ಆಫ್ ಪೈಪೋಟಿ  

ವಾರಾಂತ್ಯದಲ್ಲಿ ನಡೆದ ನಾಲ್ಕು ಪಂದ್ಯಗಳು ಐಪಿಎಲ್ ಅಂಕಪಟ್ಟಿಯಲ್ಲಿನ ಕೆಳ ನಾಲ್ಕು ತಂಡಗಳ ನಡುವೆ ಚಡಪಡಿಕೆ ಹೆಚ್ಚಿಸಿದೆ. ಅದರಲ್ಲೂ, ಕೆಕೆಆರ್ ವಿರುದ್ಧ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ಸ್ ವಿರುದ್ಧದ ಕಿಂಗ್ಸ್ ಗೆಲುವು ಪ್ಲೇಆಫ್ ಸ್ಥಾನಕ್ಕಾಗಿನ ಪೈಪೋಟಿಯನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದಿದೆ

ಹನ್ನೊಂದನೇ ಐಪಿಎಲ್ ಆವೃತ್ತಿಯ ಪ್ಲೇಆಫ್ ಸ್ಥಾನಕ್ಕಾಗಿನ ಪೈಪೋಟಿಯಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಇನ್ನೂ ತನ್ನ ಹೋರಾಟವನ್ನು ಜೀವಂತವಾಗಿಟ್ಟಿದೆ. ಭಾನುವಾರ (ಮೇ ೬) ವಾಂಖೆಡೆ ಮೈದಾನದಲ್ಲಿ ನಡೆದ ಈ ಋತುವಿನ ೩೭ನೇ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ೧೩ ರನ್ ಗೆಲುವು ಕಂಡ ಅದು, ಟೂರ್ನಿಯಲ್ಲಿನ ತನ್ನ ಇರುವಿಕೆಯನ್ನು ಇನ್ನಷ್ಟು ಖಾತ್ರಿಪಡಿಸಿದೆ.

ಇತ್ತ, ಮುಂಬೈ ವಿರುದ್ಧ ಸೋಲನುಭವಿಸಿದರೂ, ದಿನೇಶ್ ಕಾರ್ತಿಕ್ ನಾಯಕತ್ವದ ಕೆಕೆಆರ್ ಪ್ಲೇ ಆಫ್ ಅವಕಾಶದ ಬಾಗಿಲೇನೂ ಇನ್ನೂ ಮುಚ್ಚಿಲ್ಲ. ಅಂಕಪಟ್ಟಿಯ ಮೇಲಿನ ನಾಲ್ಕು ತಂಡಗಳ ಜತೆಗಿನ ಅದರ ಜಿದ್ದಾಜಿದ್ದಿ ಮುಂದುವರಿದಿದೆ. ಆದರೆ, ಡೆಲ್ಲಿ ಡೇರ್‌ಡೆವಿಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಆಫ್ ಈಗ ಡೋಲಾಯಮಾನ ಸ್ಥಿತಿಯಲ್ಲಿದೆ. ಏತನ್ಮಧ್ಯೆ, ಕಿಂಗ್ಸ್ ಎದುರು ಸೋಲನುಭವಿಸಿದ ರಾಜಸ್ಥಾನ ರಾಯಲ್ಸ್‌ನ ಪ್ಲೇಆಫ್ ಹಾದಿ ಬಹುತೇಕ ಮುಚ್ಚಿಹೋಗಿದೆ. ಸ್ಪಾಟ್ ಫಿಕ್ಸಿಂಗ್ ಹಗರಣದಿಂದಾಗಿ ಎರಡು ವರ್ಷಗಳ ಅಮಾನತು ಶಿಕ್ಷೆ ಪೂರೈಸಿ ಐಪಿಎಲ್ ಕೂಟಕ್ಕೆ ಮರಳಿದ್ದ ಚೊಚ್ಚಲ ಐಪಿಎಲ್ ಚಾಂಪಿಯನ್ ರಾಯಲ್ಸ್, ನಿರಾಸೆಯ ಬೇಗುದಿಯಲ್ಲಿ ಬೇಯುವಂತಾಗಿದೆ.

ಮನೆಯಂಗಣದಲ್ಲಿ ಜಯದ ಸವಿ

ಅಂದಹಾಗೆ, ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಮನೆಯಂಗಣದಲ್ಲಿ ಜಯದ ಸವಿಯುಂಡಿತು. ತಂಡದ ಈ ಗೆಲುವಿನಲ್ಲಿ ಸೂರ್ಯಕುಮಾರ್ ಯಾದವ್ (೫೯: ೩೯ ಎಸೆತ, ೭ ಬೌಂಡರಿ, ೨ ಸಿಕ್ಸರ್) ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (ಅಜೇಯ ೩೫: ೨೦ ಎಸೆತ, ೪ ಬೌಂಡರಿ, ೧ ಸಿಕ್ಸರ್) ನಿರ್ಣಾಯಕ ಪಾತ್ರ ವಹಿಸಿದರು.

ತಂಡಕ್ಕೆ ಗೆಲುವು ತಂದುಕೊಡಲು ಕೊನೇ ಹಂತದಲ್ಲಿ ನಾಯಕ ದಿನೇಶ್ ಕಾರ್ತಿಕ್ (೩೬: ೨೬ ಎಸೆತ, ೫ ಬೌಂಡರಿ, ೧ ಸಿಕ್ಸರ್) ನಡೆಸಿದ ಅಜೇಯ ಹೋರಾಟ ಫಲ ನೀಡಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಅವರಿಗೆ ಸರಿಸಾಟಿ ಪ್ರದರ್ಶನ ನೀಡಲು ವಿಫಲವಾದ ಆಂಡ್ರೆ ರಸೆಲ್ (೯), ಸುನೀಲ್ ನರೇನ್ (೫) ನಿರ್ಗಮನ ಮುಂಬೈ ಮತ್ತೆ ಮೇಲುಗೈ ಸಾಧಿಸುವಂತೆ ಮಾಡಿತು.

ಪ್ಲೇ ಆಫ್ ಸ್ಥಾನಕ್ಕಾಗಿನ ತನ್ನ ಹೋರಾಟವನ್ನು ಜೀವಂತವಾಗಿಡಲು ಮುಂಬೈ ಇಂಡಿಯನ್ಸ್ ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಅದರಂತೆ, ಆರಂಭಿಕ ಸೂರ್ಯಕುಮಾರ್ ಮತ್ತು ಎವಿನ್ ಲೆವಿಸ್ (೪೩: ೨೮ ಎಸೆತ, ೫ ಬೌಂಡರಿ, ೨ ಸಿಕ್ಸರ್) ಮೊದಲ ವಿಕೆಟ್‌ಗೆ ಭರ್ಜರಿ ೯೧ ರನ್ ಕಾಣಿಕೆ ನೀಡಿದರು. ಆನಂತರ ತಂಡದ ಇನ್ನಿಂಗ್ಸ್ ಅನ್ನು ಸ್ಪರ್ಧಾತ್ಮಕವಾಗಿಸಿದ್ದು ಹಾರ್ದಿಕ್ ಪಾಂಡ್ಯ. ಅಂದಹಾಗೆ, ಕಳೆದ ಶುಕ್ರವಾರವಷ್ಟೇ ಕಿಂಗ್ಸ್ ಇಲೆವೆನ್ ಪಂಜಾಬ್ ಅನ್ನು ಮುಂಬೈ ಮಣಿಸಿತ್ತು. ಹೀಗಾಗಿ ಒಂದರ ಹಿಂದೊಂದರಂತೆ ಎರಡು ಗೆಲುವು ಸಾಧಿಸಿದ ಅದು ಇದೀಗ, ಹ್ಯಾಟ್ರಿಕ್ ಗೆಲುವಿಗೆ ಸಜ್ಜಾಗಿದೆ.

ಎಡವಿದ ಕೆಕೆಆರ್

ಗೆಲ್ಲಲು ೧೮೨ ರನ್ ಗುರಿ ಪಡೆದಿದ್ದ ಕೋಲ್ಕತಾ ನೈಟ್ ರೈಡರ್ಸ್ ಆರಂಭದಲ್ಲೇ ಎಡವಿತು. ಕ್ರಿಸ್ ಲಿನ್ (೧೭) ಮತ್ತು ಶುಭ್ಮನ್ ಗಿಲ್ (೭) ತ್ವರಿತಗತಿಯಲ್ಲಿ ಕ್ರೀಸ್ ತೊರೆದರು. ಕೇವಲ ೨೮ ರನ್‌ಗಳಿಗೆ ಆರಂಭಿಕರಿಬ್ಬರನ್ನೂ ಕಳೆದುಕೊಂಡ ಕೆಕೆಆರ್, ಆನಂತರದಲ್ಲಿ ನಿತೀಶ್ ರಾಣಾ (೩೧: ೨೭ ಎಸೆತ, ೩ ಬೌಂಡರಿ, ೧ ಸಿಕ್ಸರ್) ಹಾಗೂ ರಾಬಿನ್ ಉತ್ತಪ್ಪ (೫೪: ೩೫ ಎಸೆತ, ೬ ಬೌಂಡರಿ, ೩ ಸಿಕ್ಸರ್)ಜೋಡಿ ನೀಡಿದ ಉತ್ತಮ ಜತೆಯಾಟದಿಂದ ತುಸು ಚೇತರಿಸಿಕೊಂಡಿತು. ೪ ರನ್ ಗಳಿಸಿದ್ದಾಗ ಮಯಾಂಕ್ ಮಾರ್ಕಂಡೆಯಿಂದ ಜೀವದಾನ ಪಡೆದಿದ್ದ ಉತ್ತಪ್ಪ, ಅವರಿಗೇ ಸತತ ಎರಡು ಸಿಕ್ಸರ್‌ ಸಿಡಿಸಿದರು. ಕೃನಾಲ್ ಪಾಂಡ್ಯ ಮತ್ತು ಮಾರ್ಕಂಡೆಯ ಎರಡು ಓವರ್‌ಗಳಲ್ಲಿ ರಾಣಾ-ಉತ್ತಪ್ಪ ೩೦ ರನ್ ಕಲೆಹಾಕಿದರು. ಆದರೆ, ಈ ಜೋಡಿಯ ನಿರ್ಗಮನದ ಬಳಿಕ ಕೆಕೆಆರ್, ಸಂಕಷ್ಟಕ್ಕೆ ಸಿಲುಕಿತು.

೪ ಓವರ್‌ಗಳಲ್ಲಿ ಕೇವಲ ೧೯ ರನ್ ನೀಡಿದ ಹಾರ್ದಿಕ್ ಪಾಂಡ್ಯ ೨ ವಿಕೆಟ್ ಎಗರಿಸಿದರೆ, ಕೃನಾಲ್, ಮಾರ್ಕಂಡೆ, ಜಸ್ಪ್ರೀತ್ ಬುಮ್ರಾ ಹಾಗೂ ಮಿಚೆಲ್ ಮೆಕ್ಲನಘನ್ ತಲಾ ಒಂದೊಂದು ವಿಕೆಟ್ ಎಗರಿಸಿ ತಂಡದ ಗೆಲುವಿಗೆ ನೆರವಾದರು.

ಸಂಕ್ಷಿಪ್ತ ಸ್ಕೋರ್

ಮುಂಬೈ ಇಂಡಿಯನ್ಸ್: ೨೦ ಓವರ್‌ಗಳಲ್ಲಿ ೧೮೧/೪ (ಸೂರ್ಯಕುಮಾರ್ ೫೯, ಎವಿನ್ ಲೆವಿಸ್ ೪೩; ಆಂಡ್ರೆ ರಸೆಲ್ ೧೨ಕ್ಕೆ ೨) ಕೋಲ್ಕತಾ ನೈಟ್ ರೈಡರ್ಸ್: ೨೦ ಓವರ್‌ಗಳಲ್ಲಿ ೧೬೮/೬ (ರಾಬಿನ್ ಉತ್ತಪ್ಪ ೫೪; ಹಾರ್ದಿಕ್ ಪಾಂಡ್ಯ ೧೯ಕ್ಕೆ ೨) ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ ೧೩ ರನ್ ಗೆಲುವು ಪಂದ್ಯಶ್ರೇಷ್ಠ: ಹಾರ್ದಿಕ್ ಪಾಂಡ್ಯ

ರಾಹುಲ್ ಅಜೇಯ ಆಟ

ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಕನ್ನಡಿಗ ಕೆ ಎಲ್ ರಾಹುಲ್ (೮೪: ೫೪ ಎಸೆತ, ೭ ಬೌಂಡರಿ, ೩ ಸಿಕ್ಸರ್) ಅಜೇಯ ಬ್ಯಾಟಿಂಗ್ ನೆರವಿನೊಂದಿಗೆ ಕಿಂಗ್ಸ್ ಇಲೆವೆನ್ ಪಂಜಾಬ್, ರಾಯಲ್ಸ್ ವಿರುದ್ಧ ಸುಲಭ ಜಯ ಪಡೆಯಿತು. ಇಂದೋರ್‌ನ ಹೋಳ್ಕರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ ೧೫೩ ರನ್ ಗುರಿ ಪಡೆದಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಇನ್ನೂ ಎಂಟು ಎಸೆತಗಳು ಬಾಕಿ ಇರುವಂತೆಯೇ ಕೇವಲ ೪ ವಿಕೆಟ್ ಕಳೆದುಕೊಂಡು ೧೫೫ ರನ್ ಗಳಿಸಿ ಜಯಶಾಲಿಯಾಯಿತು.

ವಿಂಡೀಸ್ ಆಟಗಾರ ಕ್ರಿಸ್ ಗೇಲ್ (೮), ಮಯಾಂಕ್ ಅಗರ್ವಾಲ್ (೨) ಎರಡಂಕಿ ದಾಟದೆ ಹೋದಾಗ ಎಚ್ಚರಿಕೆಯಿಂದ ಇನ್ನಿಂಗ್ಸ್ ಕಟ್ಟಿದ ರಾಹುಲ್‌ಗೆ, ಈ ಇಬ್ಬರ ನಿರ್ಗಮನದ ನಂತರ ಆಡಲಿಳಿದ ಕರ್ನಾಟಕದ ಸಹ ಆಟಗಾರ ಕರುಣ್ ನಾಯರ್ (೩೧: ೨೩ ಎಸೆತ, ೨ ಬೌಂಡರಿ, ೨ ಸಿಕ್ಸರ್) ಕೆಲ ಕಾಲ ಸಾಥ್ ನೀಡಿದರು. ಆದರೆ, ೧೧ನೇ ಓವರ್‌ನಲ್ಲಿ ಅನುರೀತ್ ಸಿಂಗ್, ನಾಯರ್ ಅವರನ್ನು ಬೌಲ್ಡ್ ಮಾಡಿ ಈ ಜೋಡಿಯನ್ನು ಬೇರ್ಪಡಿಸಿದರು.

ಬಳಿಕ ಬಂದ ಅಕ್ಷರ್ ಪಟೇಲ್ (೪) ಕನ್ನಡಿಗ ಕೆ ಗೌತಮ್ ಬೌಲಿಂಗ್‌ನಲ್ಲಿ ಡಿಆರ್ಕಿ ಶಾರ್ಟ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದರು. ಆನಂತರ ಮಾರ್ಕಸ್ ಸ್ಟಾಯ್ನಿಸ್ (೨೩: ೧೬ ಎಸೆತ, ೨ ಬೌಂಡರಿ, ೧ ಸಿಕ್ಸರ್) ಜೊತೆಗೆ ರಾಹುಲ್ ಕಿಂಗ್ಸ್ ಇಲೆವೆನ್‌ಗೆ ಸುಲಭ ಜಯ ದೊರಕಿಸಿಕೊಟ್ಟರು. ಈ ಗೆಲುವಿನೊಂದಿಗೆ ಹೋಳ್ಕರ್ ಮೈದಾನದಲ್ಲಿ ರನ್‌ ಚೇಸಿಂಗ್‌ನಲ್ಲಿ ಏಳಕ್ಕೆ ಏಳು ತಂಡಗಳೂ ಗೆಲುವು ಸಾಧಿಸಿದಂತಾಯಿತು.

ಇದನ್ನೂ ಓದಿ : ಮುಂಬೈ ಇಂಡಿಯನ್ಸ್‌ ಪ್ಲೇಆಫ್ ಆಸೆ ಜೀವಂತವಾಗಿಟ್ಟ ಸೂರ್ಯಕುಮಾರ್

ಮತ್ತೆ ಮಿಂಚಿದ ಮುಜೀಬ್: ಕಿಂಗ್ಸ್ ಇಲೆವೆನ್ ಪಂಜಾಬ್ ಗೆಲುವಿನಲ್ಲಿ ರಾಹುಲ್ ಹೇಗೆ ನಿರ್ಣಾಯಕರಾದರೋ, ಅದೇ ರೀತಿ ಆಫ್ಘನ್ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಕೂಡ ಮಹತ್ವದ ಪಾತ್ರ ವಹಿಸಿದರು. ಮತ್ತೊಮ್ಮೆ ಆಕರ್ಷಕ ಸ್ಪೆಲ್‌ನಿಂದ ಗಮನ ಸೆಳೆದ ಅವರು, ಕೇವಲ ೨೭ ರನ್‌ಗಳಿಗೆ ೩ ಪ್ರಮುಖ ವಿಕೆಟ್ ಪಡೆದು, ರಾಯಲ್ಸ್ ಇನ್ನಿಂಗ್ಸ್‌ ಅನ್ನು ೧೫೨ ರನ್‌ಗಳಿಗೆ ನಿಯಂತ್ರಿಸಿದರು.

ಜೋಸ್ ಬಟ್ಲರ್ ಅರ್ಧಶತಕ: ಆರಂಭಿಕನಾಗಿ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಆಟಗಾರ ಜೋಸ್ ಬಟ್ಲರ್ (೫೧: ೩೯ ಎಸೆತ, ೭ ಬೌಂಡರಿ) ತಂಡದ ಪರ ವೈಯಕ್ತಿಕ ಗರಿಷ್ಠ ಸ್ಕೋರ್‌ಧಾರಿ ಎನಿಸಿದರು. ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ರಾಯಲ್ಸ್ ಮತ್ತೆ ಪುಟಿದೇಳಲೇ ಇಲ್ಲ. ೩ ರನ್ ಗಳಿಸುವಷ್ಟರಲ್ಲೇ ಡಿಆರ್ಕಿ ಶಾರ್ಟ್ (೨) ವಿಕೆಟ್ ಕಳೆದುಕೊಂಡ ಅದಕ್ಕೆ ನಾಯಕ ರಹಾನೆಯಿಂದಲೂ (೫) ಚೇತರಿಕೆ ಸಿಗಲಿಲ್ಲ. ಸಂಜು ಸ್ಯಾಮ್ಸನ್ (೨೮) ಒಂದಷ್ಟು ಹೊತ್ತು ಕ್ರೀಸ್‌ನಲ್ಲಿ ನಿಲ್ಲುವಂತೆ ಮಾಡಿದರಾದರೂ, ಅವರು ಕೂಡ ಕೈಚೆಲ್ಲಿದರು. ತಂಡದ ಅಸ್ಥಿರ ಬ್ಯಾಟಿಂಗ್ ಮಧ್ಯೆಯೂ ಜೋಸ್ ಬಟ್ಲರ್ ಅರ್ಧಶತಕ ಪೂರೈಸಿದ್ದೇ ರಾಯಲ್ಸ್‌ನ ಸಾಧನೆ ಎನಿಸಿತು.

ಸಂಕ್ಷಿಪ್ತ ಸ್ಕೋರ್

ರಾಜಸ್ಥಾನ ರಾಯಲ್ಸ್: ೨೦ ಓವರ್‌ಗಳಲ್ಲಿ ೧೫೨/೯ (ಜೋಸ್ ಬಟ್ಲರ್ ೫೧; ಮುಜೀಬ್ ಉರ್ ರೆಹಮಾನ್ ೨೭ಕ್ಕೆ ೩) ಕಿಂಗ್ಸ್ ಇಲೆವೆನ್ ಪಂಜಾಬ್: ೧೮.೪ ಓವರ್‌ಗಳಲ್ಲಿ ೧೫೫/೪ (ಕೆ ಎಲ್ ರಾಹುಲ್ ಅಜೇಯ ೮೪; ಕೆ ಗೌತಮ್ ೧೮ಕ್ಕೆ ೧) ಫಲಿತಾಂಶ: ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ೬ ವಿಕೆಟ್ ಗೆಲುವು ಪಂದ್ಯಶ್ರೇಷ್ಠ: ಮುಜೀಬ್ ಉರ್ ರೆಹಮಾನ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More