ಸನ್‌ರೈಸರ್ಸ್ ಅಂಗಣದಲ್ಲಿ ಆರ್‌ಸಿಬಿ ಮುಂದಿದೆ ಕಟ್ಟಕಡೆಯ ಅವಕಾಶ

ಭಾನುವಾರ (ಮೇ ೬) ಮುಂಬೈ ಇಂಡಿಯನ್ಸ್ ಕೆಕೆಆರ್ ವಿರುದ್ಧ ಗೆಲುವು ಸಾಧಿಸುತ್ತಲೇ ಆರ್‌ಸಿಬಿಯ ಪ್ಲೇಆಫ್ ಕನಸಿಗೆ ಕೊಳ್ಳಿ ಇಟ್ಟಂತಾಗಿದೆ. ಇದೀಗ, ಸನ್‌ರೈಸರ್ಸ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿರುವ ವಿರಾಟ್ ಕೊಹ್ಲಿ ಪಡೆ, ಈ ಪಂದ್ಯವನ್ನೇನಾದರೂ ಕೈಚೆಲ್ಲಿದರೆ ಅದರ ಅಭಿಯಾನಕ್ಕೆ ತೆರೆಬೀಳಲಿದೆ

ಚೊಚ್ಚಲ ಆವತ್ತಿಯಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆಯ್ಕೆ ಹಲವು ವೈಚಿತ್ರ್ಯಗಳಿಂದ ಕೂಡಿದೆ. ಈ ಋತುವಿನ ಹರಾಜಿನಿಂದಲೂ ಈ ವೈಚಿತ್ರ್ಯದಿಂದ ಅದು ಮುಕ್ತವೇನಾಗಿರಲಿಲ್ಲ. ಅಂದಹಾಗೆ, ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಮತ್ತೊಂದು ನಿರಾಸೆಯ ಕಾರ್ಮೋಡವೇ ಆರ್‌ಸಿಬಿ ಅಭಿಮಾನಿಗಳನ್ನು ಆವರಿಸಿದೆ.

ಹೆಚ್ಚೂಕಮ್ಮಿ ಪ್ಲೇ-ಆಫ್ ಹಾದಿ ಕೊಹ್ಲಿ ಪಡೆಯ ಪಾಲಿಗೆ ಮಸುಕಾಗಿದ್ದರೂ, ಎಲ್ಲೋ ಒಂದು ಗುಟುಕು ಆಸೆಯನ್ನು ತಂಡ ಇರಿಸಿಕೊಂಡಿದೆ. ಅದರೆ, ಇಂದು ಸಂಜೆ (ಮೇ ೭) ನಡೆಯಲಿರುವ ತನ್ನ ಹತ್ತನೇ ಪಂದ್ಯ ಅಕ್ಷರಶಃ ಆರ್‌ಸಿಬಿ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸುವ ಛಲ ತೊಟ್ಟಿದ್ದು, ಒಂದೊಮ್ಮೆ ಈ ಪಂದ್ಯವನ್ನೇನಾದರೂ ಅದು ಕೈಚೆಲ್ಲಿದರೆ ಪ್ಲೇ-ಆಫ್ ಬಾಗಿಲು ಅಧಿಕೃತವಾಗಿ ಮುಚ್ಚಲಿದೆ.

ಸಮಬಲ ಹೋರಾಟ: ಐಪಿಎಲ್ ಇತಿಹಾಸದಲ್ಲಿ ಒಟ್ಟು ೧೦ ಬಾರಿಯ ಮುಖಾಮುಖಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಕೇವಲ ಒಂದು ಪಂದ್ಯದ ಗೆಲುವಿನ ಅಂತರದಿಂದ ಮೇಲುಗೈ ಸಾಧಿಸಿದೆ. ಅರ್ಥಾತ್, ಆರ್‌ಸಿಬಿ ೪ ಪಂದ್ಯಗಳಲ್ಲಿ ಗೆದ್ದಿದ್ದರೆ ಸನ್‌ರೈಸರ್ಸ್ ೫ರಲ್ಲಿ ಜಯ ಸಾಧಿಸಿದೆ. ಇನ್ನುಳಿದ ಪಂದ್ಯ ಒಂದು ಪಂದ್ಯ ಟೈ ಆಗಿದೆ. ಹೀಗಾಗಿ, ಇತ್ತಂಡಗಳ ನಡುವೆಯೂ ಸಮಬಲದ ಹೋರಾಟವಿದೆ ಎಂಬುದನ್ನು ಈ ಹಿಂದಿನ ಪಂದ್ಯಗಳು ಸಾಬೀತುಪಡಿಸಿದ್ದು, ಬಹುತೇಕ ಇವತ್ತಿನ ಪಂದ್ಯವೂ ಇಂಥದ್ದೇ ಹೋರಾಟದಿಂದ ಕೂಡಿರುವ ಸಾಧ್ಯತೆ ಇದೆ.

ಇದನ್ನೂ ಓದಿ : ಮುಂಬೈ-ಕಿಂಗ್ಸ್ ಇಲೆವೆನ್ ಪಂಜಾಬ್ ಗೆಲುವಿನಿಂದ ಹೆಚ್ಚಿದ ಪ್ಲೇ ಆಫ್ ಪೈಪೋಟಿ  

ಸಾಂಘಿಕ ಬ್ಯಾಟಿಂಗ್ ಅಗತ್ಯ: ಸ್ಟಾರ್ ಆಟಗಾರರಿಂದ ಕೂಡಿರುವ ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ಸಾಂಘಿಕ ಪ್ರದರ್ಶನ ಇನ್ನೂ ವ್ಯಕ್ತವಾಗಿಲ್ಲ. ಅದರಲ್ಲೂ, ದಕ್ಷಿಣ ಆಫ್ರಿಕಾದ ಕ್ವಿಂಟಾನ್ ಡಿಕಾಕ್ ಮತ್ತು ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿಲ್ಲ. ಮುಖ್ಯವಾಗಿ, ಮೆಕಲಮ್ ವೈಫಲ್ಯ ತಂಡದ ಆರಂಭವನ್ನು ಅಸ್ಥಿರಗೊಳಿಸಿದೆ. ಇನ್ನು, ನಾಯಕ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್‌ನ ಪ್ರಮುಖ ಆಧಾರಸ್ತಂಭವಾಗಿದ್ದು, ಇವರಿಬ್ಬರ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿಯೂ ಸ್ಥಿರ ಆಟ ಹೊರಹೊಮ್ಮಬೇಕಿದೆ.

ಏತನ್ಮಧ್ಯೆ, ಬೌಲಿಂಗ್‌ನಲ್ಲಿ ಆರ್‌ಸಿಬಿ ಕೊಂಚ ಸುಧಾರಿತ ಪ್ರದರ್ಶನ ನೀಡುತ್ತ ಬಂದಿದೆ. ವೇಗಿ ಉಮೇಶ್ ಯಾದವ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅವರಿಗೆ ಮತ್ತೊಂದು ಬದಿಯಲ್ಲಿ ಮೊಹಮದ್ ಸಿರಾಜ್ ಮತ್ತು ಟಿಮ್ ಸೌಥೀ, ಕಾಲಿನ್ ಡಿ ಗ್ರಾಂಡಮ್ ಕೂಡ ನೆರವಾಗುತ್ತಿದ್ದಾರೆ. ಸ್ಪಿನ್ ವಲಯದಲ್ಲಿ ಯಜುವೇಂದ್ರ ಚಾಹಲ್ ಮತ್ತು ವಾಷಿಂಗ್ಟನ್ ಸುಂದರ್ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಆದರೆ, ಚಾಹಲ್ ನಿರ್ಣಾಯಕ ಘಟ್ಟದಲ್ಲಿ ನೋಬಾಲ್‌ನಂಥ ಪ್ರಮಾದದ ಜೊತೆಗೆ ರನ್‌ ನೀಡಿಕೆಯಲ್ಲಿ ಉದಾರಿಯಾಗುತ್ತಿದ್ದು, ಇದರಿಂದ ಅವರು ಹೊರಬರಬೇಕಿದೆ.

ಪ್ರಚಂಡ ವಿಶ್ವಾಸದಲ್ಲಿ ಆತಿಥೇಯರು: ಪ್ಲೇ-ಆಫ್ ಸ್ಥಾನವನ್ನು ಈಗಾಗಲೇ ಖಚಿತಪಡಿಸಿಕೊಂಡಿರುವ ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ಅಂತೂ ಆರ್‌ಸಿಬಿಯನ್ನು ಮಣಿಸುವ ಭರಪೂರ ವಿಶ್ವಾಸದಲ್ಲಿದೆ. ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಲ್ಲಿರುವ ಕೇನ್ ವಿಲಿಯಮ್ಸನ್ ಸಾರಥ್ಯದ ಸನ್‌ರೈಸರ್ಸ್ ಹೈದರಾಬಾದ್, ಬ್ಯಾಟಿಂಗ್‌ಗಿಂತಲೂ ಬೌಲಿಂಗ್‌ನಲ್ಲಿ ಪ್ರಚಂಡವೆನಿಸಿದೆ.

ಶಿಖರ್ ಧವನ್ ತಿಣುಕಾಟ ಮುಂದುವರಿದಿರುವುದು ತಂಡದ ಬಹುದೊಡ್ಡ ಚಿಂತೆಯಾಗಿದ್ದರೆ, ಇಂಗ್ಲೆಂಡ್ ಆಟಗಾರ ಅಲೆಕ್ಸ್ ಹೇಲ್ಸ್ ಸಿಕ್ಕಿರುವ ಅವಕಾಶವನ್ನು ಅತ್ಯಂತ ಜವಾಬ್ದಾರಿಯಿಂದ ಸದ್ಬಳಕೆ ಮಾಡಿಕೊಂಡಿದ್ದಾರೆ. ಇತ್ತ, ಮಧ್ಯಮ ಕ್ರಮಾಂಕ ಮಾತ್ರ ಅಸ್ಥಿರತೆಯಿಂದ ಕೂಡಿದೆ. ಕನ್ನಡಿಗ ಮನೀಶ್ ಪಾಂಡೆ ಕೂಡ ಇಲ್ಲಿವರೆಗಿನ ಪಂದ್ಯಗಳಲ್ಲಿ ತನ್ನ ಸಹಜ ಆಟವಾಡಲಾಗಿಲ್ಲ. ಆದರೆ, ನಾಯಕ ವಿಲಿಯಮ್ಸನ್ ಅಂತೂ ಮನಮೋಹಕ ಬ್ಯಾಟಿಂಗ್ ನಡೆಸುತ್ತಿರುವುದು ಸನ್‌ರೈಸರ್ಸ್ ಶಕ್ತಿಯನ್ನು ಇನ್ನಷ್ಟು ಪ್ರಖರಗೊಳಿಸಿದೆ.

ಇನ್ನು, ಬೌಲಿಂಗ್‌ನಲ್ಲಂತೂ ಸನ್‌ರೈಸರ್ಸ್ ಮತ್ತಷ್ಟು ಹೊಳಪಿನಿಂದ ಕೂಡಿದೆ. ಆಫ್ಘನ್ ಸ್ಪಿನ್ನರ್ ರಶೀದ್ ಖಾನ್ ಸ್ಟಾರ್ ಬೌಲರ್ ಆಗಿದ್ದರೆ, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಪರಿಣಾಮಕಾರಿ ಎನಿಸಿದ್ದಾರೆ. ಇತ್ತ, ವೇಗಿ ಸಿದ್ಧಾರ್ಥ್ ಕೌಲ್, ಭುವನೇಶ್ವರ್ ಕುಮಾರ್ ಮತ್ತು ಥಂಪಿ ದಾಳಿಯೂ ಮೊನಚಿನಿಂದ ಕೂಡಿದ್ದು, ಒಟ್ಟಾರೆ, ಸನ್‌ರೈಸರ್ಸ್ ಹೈದರಾಬಾದ್ ತವರಿನಲ್ಲಿ ಇನ್ನೊಂದು ಗೆಲುವಿನ ಭರವಸೆಯಲ್ಲಿದೆ.

ಸಂಭವನೀಯ ಇಲೆವೆನ್

ಆರ್‌ಸಿಬಿ: ಪಾರ್ಥೀವ್ ಪಟೇಲ್ (ವಿಕೆಟ್‌ ಕೀಪರ್), ಬ್ರೆಂಡನ್ ಮೆಕಲಮ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಮನ್‌ದೀಪ್ ಸಿಂಗ್, ಕಾಲಿನ್ ಡಿ ಗ್ರಾಂಡಮ್, ಟಿಮ್ ಸೌಥಿ, ಮುರುಗನ್ ಅಶ್ವಿನ್ / ವಾಷಿಂಗ್ಟನ್ ಸುಂದರ್, ಉಮೇಶ್ ಯಾದವ್, ಮೊಹಮದ್ ಸಿರಾಜ್ ಹಾಗೂ ಯಜುವೇಂದ್ರ ಚಾಹಲ್.

ಸನ್‌ರೈಸರ್ಸ್ ಹೈದರಾಬಾದ್: ಅಲೆಕ್ಸ್ ಹೇಲ್ಸ್, ಶಿಖರ್ ಧವನ್, ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಶಕೀಬ್ ಅಲ್ ಹಸನ್, ಯೂಸುಫ್ ಪಠಾಣ್, ವೃದ್ಧಿಮಾನ್ ಸಾಹ (ವಿಕೆಟ್‌ ಕೀಪರ್), ಭುವನೇಶ್ವರ್ ಕುಮಾರ್, ರಶೀದ್ ಖಾನ್, ಸಿದ್ಧಾರ್ಥ್ ಕೌಲ್, ಸಂದೀಪ್ ಶರ್ಮಾ / ಬಸಿಲ್ ಥಂಪಿ.

ಪಂದ್ಯ ಆರಂಭ: ರಾತ್ರಿ ೮.೦೦ | ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More