ರಾಹುಲ್ ಅಜೇಯ ಆಟ ವ್ಯರ್ಥ; ರಾಜಸ್ಥಾನವನ್ನು ಗೆಲ್ಲಿಸಿದ ಜೋಸ್ ಬಟ್ಲರ್

ಕನ್ನಡಿಗ ಕೆ ಎಲ್ ರಾಹುಲ್ (೯೫*) ಇನ್ನಿಂಗ್ಸ್‌ನ ಕೊನೇ ಎಸೆತದವರೆಗೂ ನಡೆಸಿದ ಹೋರಾಟ ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ಗೆಲುವು ತಂದುಕೊಡಲಿಲ್ಲ. ಬದಲಿಗೆ ಜೋಸ್ ಬಟ್ಲರ್ (೮೨) ಮತ್ತು ಬೌಲರ್‌ಗಳ ಕರಾರುವಾಕ್ ದಾಳಿಯಿಂದ ರಾಜಸ್ಥಾನ ರಾಯಲ್ಸ್ ೧೫ ರನ್ ಗೆಲುವಿನ ನಗೆಬೀರಿತು

ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎಚ್ಚರಿಕೆಯಿಂದ ಆಟವಾಡಿ ಜಯಶಾಲಿಯಾಯಿತು. ಸವಾಯ್ ಮಾನ್‌ಸಿಂಗ್ ಮೈದಾನದಲ್ಲಿ ಮಂಗಳವಾರ (ಏ.೯) ನಡೆದ ಈ ಋತುವಿನ ೪೦ನೇ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್, ಬಲಿಷ್ಠ ಕಿಂಗ್ಸ್ ಇಲೆವೆನ್ ಅನ್ನು ೧೪೩ ರನ್‌ಗಳಿಗೆ ಕಟ್ಟಿಹಾಕುವ ಮೂಲಕ ೧೫ ರನ್ ಗೆಲುವಿನೊಂದಿಗೆ ಪುಟಿದೆದ್ದಿತು.

ಇದರೊಂದಿಗೆ ಎಲ್ಲ ಎಂಟು ತಂಡಗಳೂ ತಲಾ ೧೦ ಪಂದ್ಯಗಳನ್ನಾಡಿದಂತಾಗಿದ್ದು, ಕಿಂಗ್ಸ್ ಇಲೆವೆನ್ ಪಂಜಾಬ್ ಈ ಸೋಲಿನ ಹೊರತಾಗಿಯೂ ಮೂರನೇ ಸ್ಥಾನದಲ್ಲಿದೆ. ಇತ್ತ, ಇಲ್ಲೀವರೆಗೆ ಅಂಕಪಟ್ಟಿಯ ಕೊನೇ ಸ್ಥಾನದಲ್ಲಿದ್ದ ಅಜಿಂಕ್ಯ ರಹಾನೆ ಸಾರಥ್ಯದ ರಾಜಸ್ಥಾನ ರಾಯಲ್ಸ್ ಇದೀಗ ಆರನೇ ಸ್ಥಾನಕ್ಕೆ ಜಿಗಿದಿದೆ.

ಗೆಲ್ಲಲು ೧೫೮ ರನ್ ಗುರಿ ಪಡೆದಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಆರಂಭದಲ್ಲೇ ತಡವರಿಸುವಂತೆ ಮಾಡುವಲ್ಲಿ ರಾಯಲ್ಸ್ ಬೌಲರ್‌ಗಳು ಚಾಣಾಕ್ಷತೆ ಮೆರೆದರು. ನಾಲ್ಕನೇ ಓವರ್‌ನಲ್ಲೇ ಕೇವಲ ೧೯ ರನ್‌ಗಳಿಗೆ ಮೂರು ಪ್ರಮುಖ ವಿಕೆಟ್ ಎಗರಿಸಿದ ರಾಯಲ್ಸ್, ಕಿಂಗ್ಸ್ ಮತ್ತೆ ಚೇತರಿಸಿಕೊಳ್ಳದಂತೆ ನೋಡಿಕೊಂಡಿತು. ಮುಖ್ಯವಾಗಿ, ಸ್ಫೋಟಕ ಆಟಗಾರ ಕ್ರಿಸ್ ಗೇಲ್ (೧) ಅವರನ್ನು ಮೂರನೇ ಓವರ್‌ನ ಮೊದಲ ಎಸೆತದಲ್ಲೇ ಕನ್ನಡಿಗ ಕೆ ಗೌತಮ್ (೧೨ಕ್ಕೆ ೨) ಪೆವಿಲಿಯನ್‌ ಸೇರಿಕೊಳ್ಳುವಂತೆ ಮಾಡಿದರು.

ಬಿರುಸಿನ ಹೊಡೆತಕ್ಕೆ ಮುನ್ನುಗ್ಗಿದ ಗೇಲ್, ನಿಯಂತ್ರಣ ಕಳೆದುಕೊಂಡು ಕ್ರಿಸ್‌ನಲ್ಲೇ ತಡವರಿಸಿದ್ದರ ಲಾಭ ಪಡೆದ ವಿಕೆಟ್‌ಕೀಪರ್ ಜೋಸ್ ಬಟ್ಲರ್, ಅವರನ್ನು ಸ್ಪಂಪೌಟ್ ಮಾಡಿ ಯೂನಿವರ್ಸ್ ಬಾಸ್‌ ಜತೆಗೆ ಕಿಂಗ್ಸ್‌ಗೂ ಆಘಾತ ತಂದರು. ಆನಂತರ ರಾಯಲ್ಸ್ ಬೌಲರ್‌ಗಳ ಪರಿಣಾಮಕಾರಿ ದಾಳಿಯಿಂದಾಗಿ ಕಿಂಗ್ಸ್ ಇಲೆವೆನ್, ೪೫ಕ್ಕೆ ೪, ೬೬ಕ್ಕೆ ೫ ವಿಕೆಟ್ ಕಳೆದುಕೊಂಡು ಮತ್ತೂ ತತ್ತರಿಸಿತು.

ಇದನ್ನೂ ಓದಿ : ಸನ್‌ರೈಸರ್ಸ್ ಸೊಗಸಿನ ಆಟದಲ್ಲಿ ಕಮರಿಹೋದ ಆರ್‌ಸಿಬಿ ಪ್ರಶಸ್ತಿ ಕನಸು  

ರಾಹುಲ್ ಏಕಾಂಗಿ ಹೋರಾಟ: ಕೊನೆಯ ಎಂಟು ಓವರ್‌ಗಳು ಬಾಕಿ ಇದ್ದಾಗ ೫ ವಿಕೆಟ್‌ಗೆ ೬೬ ರನ್ ಗಳಿಸಿ ತೀವ್ರ ಚಡಪಡಿಕೆಗೆ ಸಿಲುಕಿದ್ದ ತಂಡಕ್ಕೆ ಹೇಗಾದರೂ ಗೆಲುವು ತಂದುಕೊಡಬೇಕೆಂದು ಕನ್ನಡಿಗ ರಾಹುಲ್ ಇನ್ನಿಲ್ಲದ ಹೋರಾಟ ನಡೆಸಿದರು. ಆದರೆ, ಅವರ ಬಿಡುಬೀಸಿನ ಹೋರಾಟ ಗಾಳಿಯನ್ನು ಬೆನ್ನಂಟಿದಂತಾಯಿತು. ಎಷ್ಟೇ ಬಿರುಸಿನ ಆಟವಾಡಿದರೂ, ಕೊನೇ ಓವರ್‌ನಲ್ಲಿ ೩೨ ರನ್ ಗಳಿಸುವಂಥ ಅಸೀಮ ಸವಾಲು ಎದುರಾಯಿತು. ಆದರೆ, ರಾಹುಲ್ ಈ ಓವರ್‌ನಲ್ಲಿ ಬಾರಿಸಿದ ಒಂದು ಸಿಕ್ಸರ್ ಹಾಗೂ ಎರಡು ಬೌಂಡರಿಗಳು ತಂಡದ ಗೆಲುವಿಗೆ ಸಾಕಾಗಲಿಲ್ಲ. ಆದರೆ, ೭೦ ಎಸೆತಗಳಲ್ಲಿ ೧೧ ಬೌಂಡರಿ, ೨ ಸಿಕ್ಸರ್ ಸೇರಿದ ಅಜೇಯ ೯೫ ರನ್ ಗಳಿಸಿದ ರಾಹುಲ್ ತಂಡದ ಸೋಲಿನ ಅಂತರವನ್ನು ತಗ್ಗಿಸಿದರು.

ಬಟ್ಲರ್ ಬೊಂಬಾಟ್ ಆಟ: ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್‌ಗಿಳಿದ ರಾಜಸ್ಥಾನ ರಾಯಲ್ಸ್‌ಗೆ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ನಾಯಕ ಹಾಗೂ ಆರಂಭಿಕ ಅಜಿಂಕ್ಯ ರಹಾನೆ (೯) ಅಸ್ಥಿರ ಬ್ಯಾಟಿಂಗ್ ಇಲ್ಲೂ ಮುಂದುವರೆಯಿತು. ನಾಲ್ಕನೇ ಓವರ್‌ನ ನಾಲ್ಕನೇ ಎಸೆತದಲ್ಲಿ ವೇಗಿ ಆಂಡ್ರ್ಯೂ ಟೈ (೩೪ಕ್ಕೆ ೪) ಬೌಲಿಂಗ್‌ನಲ್ಲಿ ಅಕ್ಷದೀಪ್ ನಾಥ್‌ಗೆ ರಹಾನೆ ಕ್ಯಾಚಿತ್ತು ಕ್ರೀಸ್ ತೊರೆದರು. ಬಳಿಕ ಬಂದ ಕೆ ಗೌತಮ್ (೮) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆದರೆ, ಪವರ್ ಪ್ಲೇನಲ್ಲೇ ಬಟ್ಲರ್ ತಂಡದ ಮೊತ್ತ ೬೦ ರನ್ ಗಡಿ ದಾಟುವಂತೆ ನೋಡಿಕೊಂಡರು.

ಮಾರ್ಕುಸ್ ಸ್ಟಾಯ್ನಿಸ್ ನಿರ್ವಹಿಸಿದ ಮೊದಲ ಓವರ್‌ನಲ್ಲೇ ಎರಡು ಬೌಂಡರಿ ಬಾರಿಸಿದ ಬಟ್ಲರ್, ಸ್ಫೋಟಕ ಆಟದಿಂದ ತಂಡಕ್ಕೆ ಆರಂಭದಲ್ಲೇ ಭದ್ರ ಬುನಾದಿ ಹಾಕಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಅವರಿಗೆ ಅವರಷ್ಟೇ ಬಿರುಸಿನ ಜತೆಯಾಟದ ಕೊರತೆಯಿಂದಾಗಿ ರಾಯಲ್ಸ್ ರನ್‌ ಗತಿ ಕ್ಷೀಣಿಸಿತು. ಸಂಜು ಸ್ಯಾಮ್ಸನ್ (೨೨), ಬೆನ್ ಸ್ಟೋಕ್ಸ್ (೧೪) ಮತ್ತು ಸ್ಟುವರ್ಟ್ ಬಿನ್ನಿ (೧೧ ರನೌಟ್) ಅಸ್ಥಿರ ಬ್ಯಾಟಿಂಗ್‌ನಿಂದ ಕೈಚೆಲ್ಲಿದರು. ಇತ್ತ, ಹದಿನೇಳನೇ ಓವರ್‌ನ ಎರಡನೇ ಎಸೆತದಲ್ಲಿ ಜೋಸ್ ಬಟ್ಲರ್ ಸ್ಟಂಪೌಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಆಫ್ಘನ್ ಸ್ಪಿನ್ನರ್ ಮುಜೀಬ್ ರೆಹಮಾನ್ (೨೧ಕ್ಕೆ ೨) ಬೌಲಿಂಗ್‌ನಲ್ಲಿ ಬಟ್ಲರ್ ಅವರನ್ನು ರಾಹುಲ್ ಪೆವಿಲಿಯನ್‌ಗೆ ಕಳುಹಿಸಿದರು.

ಸಂಕ್ಷಿಪ್ತ ಸ್ಕೋರ್

ರಾಜಸ್ಥಾನ ರಾಯಲ್ಸ್: ೨೦ ಓವರ್‌ಗಳಲ್ಲಿ ೧೫೮/೮ (ಜೋಸ್ ಬಟ್ಲರ್ ೮೨; ಆಂಡ್ರೈ ಟೈ ೩೪ಕ್ಕೆ ೪); ಕಿಂಗ್ಸ್ ಇಲೆವೆನ್ ಪಂಜಾಬ್: ೨೦ ಓವರ್‌ಗಳಲ್ಲಿ ೧೪೩/೭ (ಕೆ ಎಲ್ ರಾಹುಲ್ ೯೫; ಕೆ ಗೌತಮ್ ೧೨ಕ್ಕೆ ೨); ಫಲಿತಾಂಶ: ರಾಜಸ್ಥಾನ ರಾಯಲ್ಸ್‌ಗೆ ೧೫ ರನ್ ಗೆಲುವು; ಪಂದ್ಯಶ್ರೇಷ್ಠ: ಜೋಸ್ ಬಟ್ಲರ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More