ಮ್ಯಾಡ್ರಿಡ್‌ನಲ್ಲೂ ಮುಗ್ಗರಿಸಿದ ನೊವಾಕ್ ಜೊಕೊವಿಚ್ ನಿರ್ಗಮನ

ವಿಶ್ವದ ಮಾಜಿ ನಂ ೧ ಆಟಗಾರ, ಸರ್ಬಿಯಾದ ನೊವಾಕ್ ಜೊಕೊವಿಚ್ ಮ್ಯಾಡ್ರಿಡ್ ಓಪನ್ ಟೆನಿಸ್ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ. ಬುಧವಾರ (ಮೇ ೯) ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಜೊಕೊವಿಚ್ ಎದುರು ಇಂಗ್ಲೆಂಡ್‌ನ ಕೈಲ್ ಎಡ್ಮುಂಡ್ ಜಯಶಾಲಿಯಾದರು

ಯುವ ಆಟಗಾರ ಹಾಗೂ ಬ್ರಿಟನ್‌ನ ನಂ ೧ ಟೆನಿಸಿಗ ತೋರಿದ ದಿಟ್ಟ ಆಟವನ್ನು ಮೆಟ್ಟಿನಿಲ್ಲಲಾಗದ ನೊವಾಕ್ ಜೊಕೊವಿಚ್, ಈ ಋತುವಿನಲ್ಲಿ ಮತ್ತೊಂದು ಪ್ರಮುಖ ಪಂದ್ಯಾವಳಿಯಲ್ಲಿ ನಿರಾಸೆ ಅನುಭವಿಸಿದರು. ಎರಡು ಬಾರಿ ಮ್ಯಾಡ್ರಿಡ್ ಓಪನ್ ಚಾಂಪಿಯನ್ ಆಗಿದ್ದ ೩೦ರ ಹರೆಯದ ಜೊಕೊವಿಚ್ ವಿರುದ್ಧ ಮನೋಜ್ಞ ಆಟವಾಡಿದ ಎಡ್ಮುಂಡ್, ೬-೩, ೨-೬, ೬-೩ ಸೆಟ್‌ಗಳಲ್ಲಿ ಗೆಲುವು ಪಡೆದು ಪ್ರಿಕ್ವಾರ್ಟರ್‌ಫೈನಲ್ ತಲುಪಿದರಲ್ಲದೆ, ವೃತ್ತಿಬದುಕಿನಲ್ಲೇ ಬಹುದೊಡ್ಡ ಗೆಲುವಿನ ದಾಖಲೆ ಬರೆದರು.

ಹನ್ನೆರಡು ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳ ಒಡೆಯ ಜೊಕೊವಿಚ್ ಈ ಋತುವಿನಲ್ಲಿ ಅನುಭವಿಸಿದ ಮತ್ತೊಂದು ಮಹತ್ವದ ಹಿನ್ನಡೆಯಿದು. ಮಾರ್ಟಿನ್ ಕ್ಲಿಜಾನ್, ಡೊಮಿನಿಕ್ ಥೀಮ್ ಹಾಗೂ ಟೊರೊ ಡೇನಿಯಲ್ ಎದುರು ಈ ಸಾಲಿನಲ್ಲಿ ಕೊನೆಯ ಸೆಟ್‌ನಲ್ಲಿ ಸೋಲನುಭವಿಸಿದ ಜೊಕೊವಿಚ್, ಇದೀಗ ಎಡ್ಮುಂಡ್ ವಿರುದ್ಧವೂ ಆಘಾತಕಾರಿ ಸೋಲನುಭವಿಸಿದರು. ಇದೇ ಎಡ್ಮುಂಡ್ ವಿರುದ್ಧದ ಈ ಹಿಂದಿನ ಮೂರು ಮುಖಾಮುಖಿಯಲ್ಲಿ ಒಂದೇ ಒಂದು ಸೆಟ್‌ ಅನ್ನೂ ಬಿಟ್ಟುಕೊಡದೆ ಜಯಭೇರಿ ಬಾರಿಸಿದ್ದ ಜೊಕೊವಿಚ್, ಈ ಬಾರಿ ಮಾತ್ರ ಚಕಾರವೆತ್ತದೆ ಶರಣಾದರು.

ಆರಂಭದ ಎರಡು ಸೆಟ್‌ಗಳಲ್ಲಿ ಇಬ್ಬರೂ ಸಮಬಲ ಸಾಧಿಸಿದ ನಂತರ ನಿರ್ಣಾಯಕವಾಗಿದ್ದ ಮೂರನೇ ಸೆಟ್‌ನಲ್ಲಿ ಸರ್ಬಿಯಾ ಆಟಗಾರ ಎರಡು ಡಬಲ್ ಫಾಲ್ಟ್‌ಗಳೊಂದಿಗೆ ಸ್ವಪ್ರಮಾದವೆಸಗಿದರು. ಇದರ ಲಾಭ ಪಡೆದ ೨೩ರ ಹರೆಯದ ಎಡ್ಮುಂಡ್, ಫೋರ್‌ಹ್ಯಾಂಡ್ ವಿನ್ನರ್‌ನೊಂದಿಗೆ ಜೊಕೊವಿಚ್‌ ವಿರುದ್ಧ ಗೆದ್ದು ಕೇಕೆಹಾಕಿದರು. ವಿಶ್ವದ ೧೨ನೇ ಶ್ರೇಯಾಂಕಿತ ಆಟಗಾರ ಜೊಕೊವಿಚ್, ಆಕರ್ಷಕ ಆಟವಾಡಿದರಾದರೂ, ಅಮಿತೋತ್ಸಾಹದಿಂದ ಕೂಡಿದ್ದ ಎಡ್ಮುಂಡ್ ಅವರನ್ನು ಹಿಂದಿಕ್ಕಿಲು ವಿಫಲವಾದರು. ಅಂತಿಮವಾಗಿ ಒಂದು ತಾಸು, ೪೨ ನಿಮಿಷಗಳ ಹಣಾಹಣಿಯಲ್ಲಿ ಜೊಕೊವಿಚ್ ಸೋಲಿನೊಂದಿಗೆ ಟೂರ್ನಿಯಿಂದ ನಿರ್ಗಮಿಸಿದರು.

ಗಫಿನ್ ಜತೆ ಸೆಣೆಸಾಟ: ಪುರುಷರ ಸಿಂಗಲ್ಸ್ ವಿಭಾಗದ ಪ್ರಿಕ್ವಾರ್ಟರ್‌ಫೈನಲ್ ತಲುಪಿರುವ ಎಡ್ಮುಂಡ್, ಇದೀಗ ಮುಂದಿನ ಸುತ್ತಿನಲ್ಲಿ ಬೆಲ್ಜಿಯನ್ ಆಟಗಾರ ಡೇವಿಡ್ ಗಫಿನ್ ವಿರುದ್ಧ ಸೆಣಸಲಿದ್ದಾರೆ. ಬುಧವಾರ (ಮೇ ೯) ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ದ್ವಿತೀಯ ಸುತ್ತಿನ ಪಂದ್ಯದಲ್ಲಿ ಗಫಿನ್ ಹಾಲೆಂಡ್ ಆಟಗಾರ ರಾಬಿನ್ ಹಾಸಿ ಎದುರು ೭-೫, ೬-೩ ನೇರ ಸೆಟ್‌ಗಳಲ್ಲಿ ಗೆಲುವು ಪಡೆದರು.

ಇದನ್ನೂ ಓದಿ : ಇಟಾಲಿಯನ್ ಓಪನ್‌ನಿಂದಲೂ ಹಿಂದೆ ಸರಿದ ಸೆರೆನಾ, ಫ್ರೆಂಚ್ ಓಪನ್‌ಗೆ ಅನುಮಾನ

ವೋಜ್ನಿಯಾಕಿಗೆ ಆಘಾತ

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಡೆನ್ಮಾರ್ಕ್ ಆಟಗಾರ್ತಿ ಕೆರೋಲಿನ್ ವೋಜ್ನಿಯಾಕಿ ಆಘಾತ ಅನುಭವಿಸಿದರು. ಈ ಋತುವಿನ ಮೊಟ್ಟಮೊದಲ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ವೋಜ್ನಿಯಾಕಿ ಡಚ್ ಆಟಗಾರ್ತಿ ಕಿಕಿ ಬೆರ್ಟೆನ್ಸ್ ವಿರುದ್ಧ ಎರಡು ನೇರ ಸೆಟ್‌ಗಳಲ್ಲಿ ಸೋಲಪ್ಪಿದರು. ಅತ್ಯಂತ ಆಕ್ರಮಣಕಾರಿ ಆಟವಾಡಿದ ಬೆರ್ಟೆನ್ಸ್, ವಿಶ್ವದ ಮಾಜಿ ನಂ ೧ ಆಟಗಾರ್ತಿಯ ಎದುರು ೬-೨, ೬-೨ ಸೆಟ್‌ಗಳಲ್ಲಿ ಗೆಲುವು ಪಡೆದು ಮುಂದಿನ ಸುತ್ತಿಗೆ ಅರ್ಹತೆ ಪಡೆದರು.

ಇದೇ ಮಹಿಳೆಯರ ವಿಭಾಗದ ಮತ್ತೊಂದು ಅಂತಿಮ ಹದಿನಾರರ ಘಟ್ಟದ ಪಂದ್ಯದಲ್ಲಿ ಅಮೆರಿಕ ಆಟಗಾರ್ತಿ ಸ್ಲೊವಾನಿ ಸ್ಟೀಫನ್ಸ್ ಜೆಕ್ ಆಟಗಾರ್ತಿ ಕೆರೊಲಿನಾ ಪ್ಲಿಸ್ಕೋವಾ ವಿರುದ್ಧ ೬-೨, ೬-೩ ನೇರ ಸೆಟ್‌ಗಳಲ್ಲಿ ಗೆಲುವು ಪಡೆದರು. ಶುರುವಿನಿಂದಲೇ ಆಕ್ರಮಣಕಾರಿ ಆಟವಾಡಿದ ಸ್ಟೀಫನ್ಸ್ ವಿರುದ್ಧ ಪ್ಲಿಸ್ಕೋವಾ ಚೇತರಿಸಿಕೊಳ್ಳಲೇ ಇಲ್ಲ. ಇತ್ತ ಪ್ರಚಂಡ ಆಟ ಮುಂದುವರೆಸಿದ ಸ್ಟೀಫನ್ಸ್ ಪ್ಲಿಸ್ಕೋವಾ ಎದುರು ಅದೇ ಆಕ್ರಮಣಕಾರಿ ಆಟದೊಂದಿಗೆ ಮುಂದಿನ ಸುತ್ತಿಗೆ ಅರ್ಹತೆ ಪಡೆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More