ಇಟಾಲಿಯನ್ ಓಪನ್‌ನಿಂದಲೂ ಹಿಂದೆ ಸರಿದ ಸೆರೆನಾ, ಫ್ರೆಂಚ್ ಓಪನ್‌ಗೆ ಅನುಮಾನ

ವಿಶ್ವದ ಮಾಜಿ ನಂ.೧ ಆಟಗಾರ್ತಿ ಸೆರೆನಾ ವಿಲಿಯಮ್ಸ್, ಮುಂದಿನ ವಾರ ಶುರುವಾಗಲಿರುವ ಇಟಾಲಿಯನ್ ಓಪನ್‌ನಿಂದ ಹಿಂದೆ ಸರಿದಿದ್ದಾರೆ. ಅವರ ಈ ನಿರ್ಧಾರದಿಂದ ಇದೇ ಮಾಸಾಂತ್ಯದಲ್ಲಿ ಶುರುವಾಗಲಿರುವ ವರ್ಷದ ಎರಡನೇ ಗ್ರಾಂಡ್‌ಸ್ಲಾಮ್ ಟೂರ್ನಿ ಫ್ರೆಂಚ್ ಓಪನ್‌ನಲ್ಲಿ ಆಡುವುದೇ ಅನುಮಾನವಾಗಿದೆ

ಈ ಋತುವಿನ ಮೊದಲ ಗ್ರಾಂಡ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್‌ನಿಂದ ಹಿಂದೆ ಸರಿದಿದ್ದ ಸೆರೆನಾ, ಋತುವಿನ ಮಿಕ್ಕ ಮೂರೂ ಗ್ರಾಂಡ್‌ಸ್ಲಾಮ್ ಪಂದ್ಯಾವಳಿಯಲ್ಲಿ ಆಡುವುದು ಅನುಮಾನ ಎಂದು ಈ ಮೊದಲು ಹೇಳಲಾಗಿತ್ತು. ಈ ಮಾತು ಬಹುಶಃ ನಿಜವಾಗಬಹುದು ಎಂಬಂತೆ ರೋಮ್ ಓಪನ್ ಪಂದ್ಯಾವಳಿಯಿಂದಲೂ ಕೃಷ್ಣ ಸುಂದರಿ ಹಿಂದೆ ಸರಿದಿದ್ದಾರೆ. ಅಂದಹಾಗೆ ಇಟಾಲಿಯನ್ ಓಪನ್ ಪಂದ್ಯಾವಳಿಯು ಇದೇ ತಿಂಗಳು ೧೪ರಿಂದ ೨೦ರವರೆಗೆ ಜರುಗಲಿದೆ. ಅಂತೆಯೇ, ವರ್ಷದ ಎರಡನೇ ಗ್ರಾಂಡ್‌ಸ್ಲಾಮ್ ಪಂದ್ಯಾವಳಿಯಾದ ರೊಲ್ಯಾಂಡ್ ಗ್ಯಾರೋಸ್ ಟೂರ್ನಿಯು ಮೇ ೨೭ರಿಂದ ಶುರುವಾಗಲಿದೆ.

ಇಟಾಲಿಯನ್ ಓಪನ್‌ನಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಪ್ರಶಸ್ತಿ ಜಯಿಸಿದ್ದ ೩೬ರ ಹರೆಯದ, ೨೩ ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳ ಒಡತಿ ಸೆರೆನಾ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತನ್ನ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಮತ್ತೆ ದೈಹಿಕವಾಗಿ ಪೂರ್ಣ ಪ್ರಮಾಣದ ಕ್ಷಮತೆ ಸಾಧಿಸದ ಹೊರತು ಟೆನಿಸ್ ಕೋರ್ಟ್‌ಗೆ ಇಳಿಯಲು ಬಯಸದ ಅವರು, ಇದೇ ಮಾರ್ಚ್‌ನಲ್ಲಿ ಟೆನಿಸ್ ಕೋರ್ಟ್‌ಗೆ ಕಾಲಿಡುವ ಗುರಿಯನ್ನೂ ಇರಿಸಿಕೊಂಡಿದ್ದರು.

“ರೋಮ್‌ನಲ್ಲಿ ನಾಲ್ಕು ಬಾರಿ ಚಾಂಪಿಯನ್ ಆಗಿದ್ದ ಸೆರೆನಾ ವಿಲಿಯಮ್ಸ್ ಈ ಬಾರಿ ಪಂದ್ಯಾವಳಿಯಲ್ಲಿ ಆಡುತ್ತಿಲ್ಲ ಎಂದು ಹೇಳಲು ನಮಗೆ ವಿಷಾದವಾಗುತ್ತಿದೆ. ಸಹಜವಾಗಿಯೇ, ಮತ್ತೊಮ್ಮೆ ರೋಮನ್‌ನ ಕೆಂಪು ಮಣ್ಣಿನ ಗಟ್ಟಿ ಅಂಕಣದಲ್ಲಿ ಸೆರೆನಾ ಆಡುವುದನ್ನು ನೋಡಲು ನಾವು ತುಡಿಯುವಂತಾಗಿದೆ. ಬಹುಶಃ ಇದು ೨೦೧೯ರಲ್ಲಿ ಈಡೇರಬಹುದು,’’ ಎಂದು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಇಟಾಲಿಯನ್ ಓಪನ್ ಸಂಘಟಕರು ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ವಿಂಬಲ್ಡನ್ ಸೇರಿದಂತೆ ಮಿಕ್ಕ ಮೂರೂ ಗ್ರಾಂಡ್‌ಸ್ಲಾಮ್‌ಗೂ ಸೆರೆನಾ ಅಲಭ್ಯ?

ಅದರಂತೆ, ಮಾರ್ಚ್‌ನಲ್ಲಿ ನಡೆದ ಇಂಡಿಯನ್‌ ವೆಲ್ಸ್ ಪಂದ್ಯಾವಳಿಯಲ್ಲಿ ಆಡಿದ್ದ ಸೆರೆನಾ, ಪ್ರಶಸ್ತಿ ಗೆಲ್ಲಲೇನೂ ಯಶಸ್ವಿಯಾಗಿರಲಿಲ್ಲ. ಆನಂತರದಲ್ಲಿನ ಮಿಯಾಮಿ ಓಪನ್‌ನಲ್ಲಿ ಮೊದಲ ಸುತ್ತಿನಲ್ಲಿ ಜಪಾನ್ ಆಟಗಾರ್ತಿ ನವೊಮಿ ಒಸಾಕ ಎದುರು ಸೋಲನುಭವಿಸಿದ ಬಳಿಕ ಸೆರೆನಾ ಮತ್ತೆ ಟೆನಿಸ್ ಅಂಗಣದಲ್ಲಿ ಕಾಣಿಸಿಕೊಂಡಿರಲಲ್ಲ. ಹೀಗಾಗಿ, ಫ್ರೆಂಚ್ ಓಪನ್‌ ಆರಂಭವಾಗುವ ಮುಂಚಿನ ಕೊನೇ ಗಟ್ಟಿ ಅಂಕಣದ ಪಂದ್ಯಾವಳಿಯಾಗಿರುವ ರೋಮ್ ಓಪನ್‌ನಲ್ಲಾದರೂ ಸೆರೆನಾ ಆಡಲಿದ್ದಾರೆ ಎಂಬ ಆಕೆಯ ಅಭಿಮಾನಿಗಳು ಹಾಗೂ ಸಂಘಟಕರಿಗೆ ತೀವ್ರ ನಿರಾಸೆಯಾದಂತಾಗಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More