ಮ್ಯಾಡ್ರಿಡ್ ಓಪನ್ ಟೆನಿಸ್ | ಕ್ವಾರ್ಟರ್‌ಫೈನಲ್‌ಗೆ ಸಿಮೋನಾ ಹ್ಯಾಲೆಪ್

ವಿಶ್ವದ ನಂ.೧ ಮಹಿಳಾ ಟೆನಿಸ್ ಆಟಗಾರ್ತಿ ರೊಮೇನಿಯಾದ ಸಿಮೋನಾ ಹ್ಯಾಲೆಪ್, ಮ್ಯಾಡ್ರಿಡ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಅಂತಿಮ ಎಂಟರ ಘಟ್ಟಕ್ಕೆ ತಲುಪಿದರು. ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಅವರು ಜೆಕ್ ಆಟಗಾರ್ತಿ ಕ್ರಿಸ್ಟಿನಾ ಪ್ಲಿಸ್ಕೋವಾ ವಿರುದ್ಧ ೬-೧, ೬-೪ ನೇರ ಸೆಟ್‌ಗಳಲ್ಲಿ ಜಯಿಸಿದರು

ಆಕ್ರಮಣಕಾರಿ ಆಟವಾಡಿದ ರೊಮೇನಿಯಾ ಆಟಗಾರ್ತಿ ಸಿಮೋನಾ ಹ್ಯಾಲೆಪ್ ಮ್ಯಾಡ್ರಿಡ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಜಯದ ಅಭಿಯಾನ ಮುಂದುವರಿಸಿದ್ದಾರೆ. ಬುಧವಾರ (ಮೇ ೯) ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಹ್ಯಾಲೆಪ್, ಕ್ರಿಸ್ಟಿನಾ ಪ್ಲಿಸ್ಕೋವಾ ವಿರುದ್ಧ ೬-೧, ೬-೪ ಎರಡು ನೇರ ಹಾಗೂ ಸುಲಭ ಸೆಟ್‌ಗಳ ಗೆಲುವಿನೊಂದಿಗೆ ಅಂತಿಮ ಎಂಟರ ಘಟ್ಟಕ್ಕೆ ನಿರಾಯಾಸ ಪ್ರವೇಶ ಪಡೆದರು.

ಮೊನಾಲೊ ಸಂಟಾನ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಿಮೋನಾ ಮತ್ತೊಮ್ಮೆ ಏಕಪಕ್ಷೀಯ ಆಟದೊಂದಿಗೆ ಜಯಭೇರಿ ಬಾರಿಸಿದರು. ಮೊದಲ ಸೆಟ್‌ನಲ್ಲಂತೂ ಅವರ ಪ್ರಚಂಡ ಆಟದೆದುರು ಕ್ರಿಸ್ಟಿನಾ ಕಳಾಹೀನರಾದರು. ಕೇವಲ ಒಂದೇ ಒಂದು ಗೇಮ್ ಮಾತ್ರ ಬಿಟ್ಟುಕೊಟ್ಟ ಹ್ಯಾಲೆಪ್‌, ಹೆಚ್ಚು ಸಮಯ ತೆಗೆದುಕೊಳ್ಳದೆ ಕೇವಲ ೨೯ ನಿಮಿಷಗಳಲ್ಲೇ ಗೆಲುವು ಸಾಧಿಸಿ ೧-೦ ಮುನ್ನಡೆ ಪಡೆದರು. ಆದರೆ, ಎರಡನೇ ಸೆಟ್‌ನಲ್ಲಿ ಕ್ರಿಸ್ಟಿನಾ ಪ್ರಬಲ ಪೈಪೋಟಿ ನೀಡಿದರು. ಒಂದಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಈ ಸೆಟ್‌ನಲ್ಲಿ ಎಚ್ಚರಿಕೆ ವಹಿಸಿದ ಹ್ಯಾಲೆಪ್, ಪಂದ್ಯ ಮೂರನೇ ಸೆಟ್‌ಗೆ ಹೋಗಲು ಬಿಡದೆ ಜಯಶಾಲಿಯಾದರು.

ಅಂದಹಾಗೆ, ಟೂರ್ನಿಯ ಮೊದಲ ಸುತ್ತಿನಲ್ಲಿ ರಷ್ಯನ್ ಆಟಗಾರ್ತಿ ಎಕ್ತರೀನಾ ಮಕರೋವಾ ವಿರುದ್ಧ ೬-೧, ೬-೦ ಸೆಟ್‌ಗಳಲ್ಲಿ ಗೆಲುವು ಪಡೆದಿದ್ದ ಹ್ಯಾಲೆಪ್, ದ್ವಿತೀಯ ಸುತ್ತಿನಲ್ಲಿ ಬೆಲ್ಜಿಯಂನ ಎಲಿಸಿ ಮರ್ಟೆನ್ಸ್ ವಿರುದ್ಧ ೬-೦, ೬-೩ ನೇರ ಸೆಟ್‌ಗಳಲ್ಲಿ ವಿಜೃಂಭಿಸಿದ್ದರು. ಇದೀಗ ಮೂರನೇ ಸುತ್ತಿನಲ್ಲಿಯೇ ನೇರ ಸೆಟ್‌ಗಳ ಗೆಲುವಿನೊಂದಿಗೆ ಮುನ್ನಡೆದಿರುವ ಹ್ಯಾಲೆಪ್, ಪ್ರಶಸ್ತಿ ಪಡೆಯುವ ಭರವಸೆಯಲ್ಲಿದ್ದಾರೆ. ಮುಂದಿನ ಸುತ್ತಿನಲ್ಲಿ ಅವರು ಕಿಕಿ ಬರ್ಟೆನ್ಸ್ ಇಲ್ಲವೇ ಈ ಋತುವಿನ ಮೊದಲ ಗ್ರಾಂಡ್‌ಸ್ಲಾಮ್ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಕೆರೊಲಿನಾ ವೋಜ್ನಿಯಾಕಿ ವಿರುದ್ಧ ಸೆಣಸಲಿದ್ದಾರೆ.

ಇದನ್ನೂ ಓದಿ : ಮ್ಯಾಡ್ರಿಡ್ ಓಪನ್: ಪ್ರೀಕ್ವಾರ್ಟರ್‌ಫೈನಲ್‌ ತಲುಪಿದ ಮರಿಯಾ ಶರಪೋವಾ

ಕೊಂಟಾ ಹೋರಾಟಕ್ಕೆ ತೆರೆ: ಇತ್ತ, ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಬ್ರಿಟನ್‌ನ ಯುವ ಆಟಗಾರ್ತಿ ಜೊಹಾನ್ನ ಕೊಂಟಾ ಹೋರಾಟಕ್ಕೆ ತೆರೆಬಿದ್ದಿದೆ. ಅಮೆರಿಕ ಆಟಗಾರ್ತಿ ಬಿ ಪೆರಾ ವಿರುದ್ಧದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಕೊಂಟಾ, ೪-೬, ೩-೬ ನೇರ ಸೆಟ್‌ಗಳಲ್ಲಿ ಪರಾಭವಗೊಂಡು ಟೂರ್ನಿಯಿಂದ ಹೊರಬಿದ್ದರು. ಏತನ್ಮಧ್ಯೆ, ಸ್ಪೇನ್ ಆಟಗಾರ್ತಿ ಹಾಗೂ ವಿಶ್ವದ ಮಾಜಿ ನಂ ೧ ಆಟಗಾರ್ತಿ ಗಾರ್ಬೈನ್ ಮುಗುರುಜಾ ಪ್ರೀಕ್ವಾರ್ಟರ್‌ಫೈನಲ್ ತಲುಪಿದರು.

ಮಂಗಳವಾರ (ಮೇ ೮) ತಡರಾತ್ರಿ ನಡೆದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಮುಗುರುಜಾ ೨-೬, ೬-೪, ೬-೧ ಸೆಟ್‌ಗಳಲ್ಲಿ ಕ್ರೊವೇಷಿಯಾ ಆಟಗಾರ್ತಿ ಡೊನ್ನಾ ವೆಕಿಕ್ ವಿರುದ್ಧ ಗೆಲುವು ಪಡೆದರು. ಮೊದಲ ಸೆಟ್‌ನಲ್ಲಿ ಅನುಭವಿಸಿದ ಸೋಲಿನ ನಂತರ ತಿರುಗಿಬಿದ್ದ ಮುಗುರುಜಾ ಎರಡೂ ಸೆಟ್‌ಗಳಲ್ಲಿ ಆಕ್ರಮಣಕಾರಿ ಆಟವಾಡಿ ವೆಕಿಕ್ ಹೋರಾಟಕ್ಕೆ ತೆರೆ ಎಳೆದರು. ಮುಂದಿನ ಸುತ್ತಿನಲ್ಲಿ ಅವರು, ರಷ್ಯಾದ ಡರಿಯಾ ಕಸಾಕಿನಾ ವಿರುದ್ಧ ಸೆಣಸಲಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More