ಕೆ ಎಲ್ ರಾಹುಲ್ ಇನ್ನಿಂಗ್ಸ್‌ಗೆ ಪಾಕ್ ಆ್ಯಂಕರ್ ಜೈನಾಬ್ ಅಬ್ಬಾಸ್ ಫಿದಾ

ಪಾಕಿಸ್ತಾನದ ಪ್ರಸಿದ್ಧ ಕ್ರೀಡಾ ಆ್ಯಂಕರ್ ಜೈನಾಬ್ ಅಬ್ಬಾಸ್ ಕನ್ನಡಿಗ ಕೆ ಎಲ್ ರಾಹುಲ್ ಮನೋಜ್ಞ ಇನ್ನಿಂಗ್ಸ್‌ಗೆ ಮನಸೋತಿದ್ದಾರೆ. ಮಂಗಳವಾರ (ಮೇ ೮) ಜೈಪುರದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿನ ರಾಹುಲ್ (೯೫*) ಬ್ಯಾಟಿಂಗ್‌ ಅನ್ನು ಜೈನಾಬ್ ಕೊಂಡಾಡಿದ್ದಾರೆ

ಇನ್ನಿಂಗ್ಸ್‌ನ ಕೊನೇ ಎಸೆತದವರೆಗೂ ತಂಡದ ಗೆಲುವಿಗಾಗಿ ಹೋರಾಟ ನಡೆಸಿದ ಕೆ ಎಲ್ ರಾಹುಲ್ ಅಜೇಯ ಆಟ ಕಿಂಗ್ಸ್ ಇಲೆವೆನ್‌ ಪಂಜಾಬ್‌ಗೆ ಗೆಲುವು ತಂದುಕೊಡಲಿಲ್ಲವಾದರೂ, ಅವರ ಪ್ರತಿರೋಧದ ಆಟ ಕ್ರಿಕೆಟ್‌ಪ್ರಿಯರನ್ನು ಮುದಗೊಳಿಸಿತು. ರಾಹುಲ್ ಆಟಕ್ಕೆ ಮನಸೋತವರ ಪೈಕಿ ಪಾಕಿಸ್ತಾನದ ಕ್ರೀಡಾ ಆ್ಯಂಕರ್ ಜೈನಾಬ್ ಅಬ್ಬಾಸ್ ಕೂಡ ಒಬ್ಬರು. ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ, “ರಾಹುಲ್ ಇನ್ನಿಂಗ್ಸ್ ಅತ್ಯಂತ ಮನಮೋಹಕವಾಗಿತ್ತು,” ಎಂದು ರಾಹುಲ್‌ ಅವರನ್ನು ಅಬ್ಬಾಸ್ ಕೊಂಡಾಡಿದ್ದಾರೆ.

೧೫೯ ರನ್ ಜಯದ ಗುರಿ ಪಡೆದಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್, ರಾಯಲ್ಸ್ ಬೌಲರ್‌ಗಳ ನಿರಂತರ ದಾಳಿಯಿಂದ ನಿಯಮಿತವಾಗಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಕೊನೇ ಎಸೆತದವರೆಗೂ ತಂಡಕ್ಕೆ ಗೆಲುವು ತಂದುಕೊಡಬೇಕೆಂದು ಹೋರಾಡಿದ ರಾಹುಲ್, ೭೦ ಎಸೆತಗಳಲ್ಲಿ ೧೧ ಬೌಂಡರಿ, ೨ ಸಿಕ್ಸರ್ ಸೇರಿದ ಅಜೇಯ ೯೫ ರನ್ ಗಳಿಸಿದರು. ಆದರೆ, ಅವರ ಈ ಹೋರಾಟಕ್ಕೆ ಫಲ ಸಿಕ್ಕಲಿಲ್ಲ. ಅವರ ಪ್ರತಿರೋಧಾತ್ಮಕ ಆಟದ ಮಧ್ಯೆಯೂ ಕಿಂಗ್ಸ್ ಇಲೆವೆನ್ ೧೫ ರನ್ ಸೋಲನುಭವಿಸಿತ್ತು. “ಅತ್ಯುತ್ತಮ ಟೈಮಿಂಗ್, ಪ್ರಭಾವಶಾಲಿಯಾದ ಬ್ಯಾಟಿಂಗ್ ಅನ್ನು ನೋಡುವುದೇ ಮಹದಾನದಂದ,’’ ಎಂದು ಜೈನಾಬ್ ರಾಹುಲ್ ಆಟವನ್ನು ಶ್ಲಾಘಿಸಿದ್ದಾರೆ.

ಏತನ್ಮಧ್ಯೆ, ಈ ಅಜೇಯ ಇನ್ನಿಂಗ್ಸ್‌ನಿಂದ ರಾಹುಲ್ ಆರೆಂಜ್ ಕ್ಯಾಪ್‌ಧಾರಿಯಾಗಿಯೂ ಹೊರಹೊಮ್ಮಿದರು. ೧೦ ಇನ್ನಿಂಗ್ಸ್‌ಗಳಿಂದ ೪೭೧ ರನ್ ಕಲೆಹಾಕಿರುವ ರಾಹುಲ್, ಪ್ರಸಕ್ತ ಐಪಿಎಲ್‌ನಲ್ಲಿ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಚೆನ್ನೈನ ಅಂಬಟಿ ರಾಯುಡು (೪೨೩) ಅವರನ್ನು ಹಿಂದಿಕ್ಕಿದ್ದಾರೆ. ೫೮.೮೮ರ ಸರಾಸರಿಯಲ್ಲಿ ೧೫೬.೪೮ ಸ್ಟ್ರೈಕ್ ರೇಟ್‌ನಲ್ಲಿ ರಾಹುಲ್ ಗರಿಷ್ಠ ರನ್ ಗಳಿಸಿ ಅಗ್ರಸ್ಥಾನಕ್ಕೆ ಜಿಗಿದಿದ್ದಾರೆ. ಅಂದಹಾಗೆ, ಇದೇ ರಾಜಸ್ಥಾನ ರಾಯಲ್ಸ್ ವಿರುದ್ಧ ಮೇ ೬ರಂದು ನಡೆದ ಪಂದ್ಯದಲ್ಲಿಯೂ ಕೇವಲ ೫೪ ಎಸೆತಗಳಲ್ಲಿ ಅಜೇಯ ೮೪ ರನ್ ಗಳಿಸಿದ್ದ ರಾಹುಲ್, ಕಿಂಗ್ಸ್‌ಗೆ ಗೆಲುವು ತಂದುಕೊಟ್ಟಿದ್ದರು. ಆದರೆ, ಎರಡನೇ ಯತ್ನದಲ್ಲಿ ಮಾತ್ರ ಅವರ ಅಭೂತಪೂರ್ವ ಆಟ ತಂಡಕ್ಕೆ ಗೆಲುವು ತಂದುಕೊಡಲಿಲ್ಲ.

ಇದನ್ನೂ ಓದಿ : ಕನ್ನಡಿಗ ಕೆ ಆಲ್ ರಾಹುಲ್ ರೌರವ ಆಟಕ್ಕೆ ಯೂನಿವರ್ಸಲ್ ಬಾಸ್ ದಿಲ್ ಖುಷ್!

ಪ್ರಸ್ತುತ ಐಪಿಎಲ್ ಪಂದ್ಯಾವಳಿಯಲ್ಲಿ ತಾನಾಡಿದ ಮೊದಲ ಪಂದ್ಯದಲ್ಲೇ ರಾಹುಲ್ ಅಬ್ಬರದ ಬ್ಯಾಟಿಂಗ್‌ನಿಂದ ಮಿಂಚು ಹರಿಸಿದ್ದರು. ಏ.೮ರಂದು ನಡೆದ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ ೧೪ ಎಸೆತಗಳಲ್ಲೇ ರಾಹುಲ್ ಭರ್ಜರಿ ಅರ್ಧಶತಕ ಬಾರಿಸಿದ್ದರು. ಇದರೊಂದಿಗೆ ಐಪಿಎಲ್‌ನಲ್ಲಿ ಶರವೇಗದಲ್ಲಿ ಅರ್ಧಶತಕ ಬಾರಿಸಿದ್ದ ಸುನೀಲ್ ನರೇನ್ ಹಾಗೂ ಯೂಸುಫ್ ಪಠಾಣ್ ಅವರ ದಾಖಲೆಯನ್ನು ಹಿಮ್ಮೆಟ್ಟಿಸಿದ್ದರು. ನರೇನ್ ಹಾಗೂ ಪಠಾಣ್ ೧೫ ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More