ಮ್ಯಾಡ್ರಿಡ್‌ ಓಪನ್ | ಹ್ಯಾಟ್ರಿಕ್ ಮೋಡಿ ಮಾಡಿದ ಪೆಟ್ರಾ ಕ್ವಿಟೋವಾ

ಅತೀವ ರೋಚಕತೆಯಿಂದ ಕೂಡಿದ್ದ ಹಣಾಹಣಿಯಲ್ಲಿ ಪ್ರಚಂಡ ಪ್ರದರ್ಶನ ನೀಡಿದ ಜೆಕ್ ಆಟಗಾರ್ತಿ ಪೆಟ್ರಾ ಕ್ವಿಟೋವಾ, ಮ್ಯಾಡ್ರಿಡ್ ಓಪನ್‌ನಲ್ಲಿ ಚಾಂಪಿಯನ್ ಆದರು. ಪ್ರಶಸ್ತಿ ಸುತ್ತಿನ ಸೆಣಸಿನಲ್ಲಿ ಪ್ರಬಲ ಪೈಪೋಟಿ ಒಡ್ಡಿದ ಡಚ್ ಆಟಗಾರ್ತಿ ಕಿಕಿ ಬೆರ್ಟೆನ್ಸ್ ವಿರುದ್ಧ ಕ್ವಿಟೋವಾ ೨-೧ರಿಂದ ಜಯಿಸಿದರು

ಮಾಜಿ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ಅನುಭವದ ಮುಂದೆ ಅನನುಭವಿ ಹಾಗೂ ಶ್ರೇಯಾಂಕ ರಹಿತ ಆಟಗಾರ್ತಿ ಕಿಕಿ ಬೆರ್ಟೆನ್ಸ್ ಆಟ ಸಾಗಲಿಲ್ಲ. ಆದಾಗ್ಯೂ ಟೂರ್ನಿಯಾದ್ಯಂತ ಗಮನಾರ್ಹ ಪ್ರದರ್ಶನ ನೀಡುವುದರೊಂದಿಗೆ ಫೈನಲ್‌ವರೆಗೆ ಧಾವಿಸಿ ಬಂದಿದ್ದ ಈ ಹಾಲೆಂಡ್ ಆಟಗಾರ್ತಿ, ಶನಿವಾರ (ಮೇ ೧೨) ತಡರಾತ್ರಿ ನಡೆದ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಹಿನ್ನಡೆ ಅನುಭವಿಸಿದರು.

ರೋಚಕತೆಯಿಂದ ಕೂಡಿದ್ದ ಮೂರು ಸೆಟ್‌ಗಳ ಕಾದಾಟದಲ್ಲಿ ಕ್ವಿಟೋವಾ, ೭-೬ (೮-೬), ೪-೬, ೬-೩ ಸೆಟ್‌ಗಳಿಂದ ಜಯಶಾಲಿಯಾದರಲ್ಲದೆ, ಮ್ಯಾಡ್ರಿಡ್‌ನಲ್ಲಿ ಹ್ಯಾಟ್ರಿಕ್ ಬಾರಿಸಿದ ಮೊಟ್ಟಮೊದಲ ಆಟಗಾರ್ತಿ ಎನಿಸಿದರು.ಎರಡು ತಾಸು, ೫೨ ನಿಮಿಷಗಳ ಸುದೀರ್ಘ ಅವಧಿಯವರೆಗೆ ನಡೆದ ಕಾದಾಟದಲ್ಲಿ ವಿಶ್ವದ ೧೦ನೇ ಶ್ರೇಯಾಂಕಿತೆ ಪೆಟ್ರಾ ಕ್ವಿಟೋವಾ, ಮೊದಲ ಸೆಟ್ ಅನ್ನು ಟೈಬ್ರೇಕರ್‌ನಲ್ಲಿ ಜಯಿಸಿ ಮುನ್ನಡೆ ಕಂಡರು.

ಇಡೀ ಪಂದ್ಯದ ರೋಚಕತೆ ಆರಂಭಿಕ ಸೆಟ್‌ನಲ್ಲಿಯೇ ಬಿಂಬಿತವಾಯಿತು. ಅದಕ್ಕೆ ಸರಿಯಾಗಿ, ಈ ಸೆಟ್ ೭೫ ನಿಮಿಷಗಳ ಕಾಲ ನಡೆಯಿತು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಸೆಟ್‌ನ ಅಂತಿಮ ಹಂತದಲ್ಲಿ ಬೆರ್ಟೆನ್ಸ್ ಬಾರಿಸಿದ ಚೆಂಡು ನೆಟ್‌ಗೆ ತಗಲುತ್ತಿದ್ದಂತೆ ಮೂರನೇ ಸೆಟ್ ಪಾಯಿಂಟ್ಸ್ ಗಳಿಸಿದ ಪೆಟ್ರೋವಾ ೧-೦ ಮುನ್ನಡೆ ಕಂಡರು.ಮೊದಲ ಸೆಟ್‌ನಲ್ಲಿ ಅನುಭವಿಸಿದ ಹಿನ್ನಡೆಯಿಂದಾಗಿ ಡಚ್ ಆಟಗಾರ್ತಿ ಎರಡನೇ ಸೆಟ್‌ನಲ್ಲಿ ಪ್ರಬಲವಾಗಿ ತಿರುಗಿಬಿದ್ದರು. ನೋಡ ನೋಡುತ್ತಿದ್ದಂತೆಯೇ ಎರಡನೇ ಸೆಟ್ ಅನ್ನು ಗೆದ್ದು ಅಂತರವನ್ನು ೧-೧ರಿಂದ ಸಮಗೊಳಿಸಿದ ಬೆರ್ಟೆನ್ಸ್ ಪಂದ್ಯವನ್ನು ನಿರ್ಣಾಯಕ ಘಟ್ಟಕ್ಕೆ ಕೊಂಡೊಯ್ದರು.

ಇದನ್ನೂ ಓದಿ : ನಡಾಲ್ ಕ್ಲೇ ಕೋರ್ಟ್ ಜಯದ ಅಭಿಯಾನಕ್ಕೆ ತೆರೆ ಎಳೆದ ಡಾಮಿನಿಕ್

ಇನ್ನು, ಮಾಡು ಇಲ್ಲವೇ ಮಡಿ ಎಂಬಂತಿದ್ದ ಮೂರನೇ ಸೆಟ್‌ನಲ್ಲಿ ಎಚ್ಚರಿಕೆ ವಹಿಸಿದ ಕ್ವಿಟೋವಾ, ಆರಂಭಿಕ ಹಂತದಲ್ಲಿ ಹಿನ್ನಡೆಯ ಹೊರತಾಗಿಯೂ, ಒಡನೆಯೇ ೪-೨ ಮುನ್ನಡೆ ಸಾಧಿಸಿದರು. ಈ ಹಂತದಲ್ಲಿ ಬೆರ್ಟೆನ್ಸ್ ಒಂದು ಗೇಮ್ ಗೆದ್ದು ಅಂತರವನ್ನು ತುಸು ತಗ್ಗಿಸಿದರಾದರೂ, ನಂತರದ ಸರ್ವೀಸ್‌ ಗೇಮ್‌ನಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ್ದು ಕ್ವಿಟೋವಾ ವೃತ್ತಿಬದುಕಿನಲ್ಲಿ ೨೪ನೇ ಡಬ್ಲ್ಯೂಟಿಎ ಪ್ರಶಸ್ತಿಯನ್ನು ಗೆಲ್ಲಲು ನೆರವಾಯಿತು.

2011 ಮತ್ತು ೨೦೧೧೫ರಲ್ಲಿ ಮ್ಯಾಡ್ರಿಡ್ ಓಪನ್ ಜಯಿಸಿದ್ದ ೨೮ರ ಹರೆಯದ ಪೆಟ್ರಾ ಕ್ವಿಟೋವಾ, ಮೂರನೇ ಬಾರಿಗೆ ಪ್ರಶಸ್ತಿ ಜಯಿಸಿ ಹ್ಯಾಟ್ರಿಕ್ ಸಾಧನೆ ಮೆರೆದರು. ಇತ್ತ, ವಿಶ್ವದ ಎರಡನೇ ಶ್ರೇಯಾಂಕಿತೆ ಕೆರೋಲಿನ್ ವೋಜ್ನಿಯಾಕಿ ಹಾಗೂ ಐದು ಗ್ರಾಂಡ್‌ಸ್ಲಾಮ್ ಪ್ರಶಸ್ತಿ ವಿಜೇತೆ ಮರಿಯಾ ಶರಪೋವಾ ವಿರುದ್ಧ ಗೆದ್ದು ಫೈನಲ್ ತಲುಪಿದ್ದ ಕಿಕಿ ಬೆರ್ಟೆನ್ಸ್ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತರಾದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More