ಎಬಿಡಿ-ಕೊಹ್ಲಿ ಜೊತೆಯಾಟದ ಸೊಬಗಿನಲ್ಲಿ ಆರ್‌ಸಿಬಿ ಆಸೆ ಇನ್ನೂ ಜೀವಂತ

ಹನ್ನೊಂದನೇ ಐಪಿಎಲ್ ಆವೃತ್ತಿಯ ಪ್ಲೇಆಫ್ ಕನಸನ್ನು ಜೀವಂತವಾಗಿಡುವಲ್ಲಿ ನಾಯಕ ವಿರಾಟ್ ಕೊಹ್ಲಿ (೭೦) ಮತ್ತು ಎಬಿ ಡಿವಿಲಿಯರ್ಸ್ (೭೨*) ಯಶಸ್ವಿಯಾದರು. ಆರ್‌ಸಿಬಿಯ ಇಬ್ಬರು ಸ್ಟಾರ್ ಆಟಗಾರರ ಕೈಗೆ ಸಿಕ್ಕಿ ನಲುಗಿದ ಡೆಲ್ಲಿ, ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿತು 

ನೀರಿನಲ್ಲಿ ಮುಳುಗುತ್ತಿದ್ದವನಿಗೆ ಹುಲ್ಲುಕಡ್ಡಿಯ ಆಸರೆಯೂ ಜೀವದ ಒರತೆಯಾಗಿ ಕಾಣಿಸಿಕೊಳ್ಳುತ್ತದೆ. ಅಂಥದ್ದೇ ಅನುಭವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತೇಲಾಡಿತು. ಶನಿವಾರ (ಮೇ ೧೨) ನವದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಈ ಋತುವಿನ ೪೫ನೇ ಐಪಿಎಲ್ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ೫ ವಿಕೆಟ್ ಗೆಲುವು ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪ್ರಸಕ್ತ ಟೂರ್ನಿಯಲ್ಲಿನ ತನ್ನ ಹೋರಾಟವನ್ನು ಜೀವಂತವಾಗಿಟ್ಟುಕೊಂಡಿತು.

ಗೆಲ್ಲಲು ೧೮೨ ರನ್ ಗುರಿ ಪಡೆದಿದ್ದ ಆರ್‌ಸಿಬಿ, ಆರಂಭಿಕರಿಬ್ಬರ ವೈಫಲ್ಯದ ಮಧ್ಯೆಯೂ ನಾಯಕ ವಿರಾಟ್ ಕೊಹ್ಲಿ (೭೦: ೪೦ ಎಸೆತ, ೭ ಬೌಂಡರಿ, ೩ ಸಿಕ್ಸರ್) ಹಾಗೂ ಎಬಿ ಡಿವಿಲಿಯರ್ಸ್ (೭೨: ೩೭ ಎಸೆತ, ೪ ಬೌಂಡರಿ, ೬ ಸಿಕ್ಸರ್) ಮೂರನೇ ವಿಕೆಟ್‌ಗೆ ನೀಡಿದ ಶತಕದ ಜತೆಯಾಟದಿಂದ ಡೆಲ್ಲಿ ಡೇರ್‌ಡೆವಿಲ್ಸ್ ಸತತ ಆರನೇ ಬಾರಿಗೆ ಪ್ಲೇಆಫ್ ಸ್ಥಾನ ಏರಲಾಗದೆ ಟೂರ್ನಿಯಿಂದ ನಿರ್ಗಮಿಸುವಂತಾಯಿತು.

ಆರಂಭಿಕರ ವೈಫಲ್ಯ: ಜಯದ ಗುರಿ ಬೆನ್ನುಹತ್ತಿದ ಆರ್‌ಸಿಬಿಗೆ ಆರಂಭದಲ್ಲೇ ಆಘಾತ ಕಾದಿತ್ತು. ಪಾರ್ಥೀವ್ ಪಟೇಲ್ (೬) ಸಂದೀಪ್ ಲಾಮಿಚಾನೆ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದು ಕ್ರೀಸ್ ತೊರೆದರೆ, ಇಂಗ್ಲೆಂಡ್ ಆಟಗಾರ ಮೊಯೀನ್ ಅಲಿ (೧) ಟ್ರೆಂಟ್ ಬೌಲ್ಟ್ ಬೌಲಿಂಗ್‌ನಲ್ಲಿ ಪೃಥ್ವಿ ಶಾಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಮೂರು ಓವರ್‌ಗಳಲ್ಲೇ ಕೇವಲ ೧೮ ರನ್‌ಗಳಿಗೆ ೨ ವಿಕೆಟ್ ಕಳೆದುಕೊಂಡ ಆರ್‌ಸಿಬಿ ಒತ್ತಡಕ್ಕೆ ಒಳಗಾಯಿತು.

ಶತಕದ ಜೊತೆಯಾಟ: ಆದರೆ, ಈ ಹಂತದಲ್ಲಿ ಜತೆಯಾದ ನಾಯಕ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್, ಸೊಗಸಾದ ಬ್ಯಾಟಿಂಗ್‌ನೊಂದಿಗೆ ಪಂದ್ಯದ ದಿಕ್ಕನ್ನು ಬದಲಿಸಿದರು. ಈ ಪಂದ್ಯವನ್ನೂ ಕೈಚೆಲ್ಲಿದರೆ ಉಳಿಗಾಲವಿಲ್ಲ ಎಂಬುದನ್ನು ಮನಗಂಡಿದ್ದ ಈ ಜೋಡಿ ಮೂರನೇ ವಿಕೆಟ್‌ಗೆ ಮಹತ್ವದ ಜತೆಯಾಟವಾಡಿತು. ಸೊಗಸಾದ ಬ್ಯಾಟಿಂಗ್‌ನೊಂದಿಗೆ ಮುಂದೆ ಸಾಗುತ್ತಿದ್ದ ಈ ಜೋಡಿಯನ್ನು ಅಮಿತ್ ಮಿಶ್ರಾ ಹದಿನಾಲ್ಕನೇ ಓವರ್‌ನಲ್ಲಿ ಬೇರ್ಪಡಿಸಿದರು. ಈ ಓವರ್‌ನ ಎರಡನೇ ಎಸೆತದಲ್ಲಿ ಕೊಹ್ಲಿ ಫ್ಲಿಕ್ ಮಾಡಿದ ಚೆಂಡನ್ನು ರಿಷಭ್ ಪಂತ್ ಕ್ಯಾಚ್ ಪಡೆಯುವುದರೊಂದಿಗೆ ಆರ್‌ಸಿಬಿ ನಾಯಕನನ್ನು ಕ್ರೀಸ್ ತೊರೆಯುವಂತೆ ಮಾಡಿದರು.

ಡಿವಿಲಿಯರ್ಸ್ ಜಯದ ಸಿಕ್ಸರ್: ಕೊಹ್ಲಿ ನಿರ್ಗಮನದ ನಂತರದಲ್ಲಿ ಡೇರ್‌ಡೆವಿಲ್ಸ್ ತನ್ನ ಹೋರಾಟವನ್ನು ಒಂದಷ್ಟು ಬಿಗಿಯಾಗಿಸಿತು. ಅದರಲ್ಲೂ ಮನ್‌ದೀಪ್ ಸಿಂಗ್ (೧೩) ಮತ್ತು ಸರ್ಫರಾಜ್ ಖಾನ್ (೧೧) ವಿಕೆಟ್ ಪತನ ಕಂಡಾಗಲಂತೂ ಆತಿಥೇಯರು ಗುಟುಕು ಆಸೆ ಇರಿಸಿಕೊಂಡರು. ಇಷ್ಟಾದರೂ, ಕ್ರೀಸ್‌ಗೆ ಕಚ್ಚಿನಿಂತಿದ್ದ ಎಬಿಡಿ, ಡೆವಿಲ್ಸ್ ಪಾಳೆಯದಲ್ಲಿನ ಚಡಪಡಿಕೆಯನ್ನು ತೀವ್ರಗೊಳಿಸಿದ್ದರು. ಅದಕ್ಕೆ ತಕ್ಕಂತೆ ೧೯ನೇ ಓವರ್‌ನ ಕೊನೆಯ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಅವರು ಆರ್‌ಸಿಬಿಗೆ ಮಹತ್ವಪೂರ್ಣ ಗೆಲುವು ತಂದಿತ್ತು ಸಹ ಆಟಗಾರ ಕಾಲಿನ್ ಡಿ ಗ್ರಾಂಡಮ್‌ (೩) ಜತೆಗೆ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಅಂದಹಾಗೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇದೇ ಡೆವಿಲ್ಸ್ ವಿರುದ್ಧದ ಮೊದಲ ಮುಖಾಮುಖಿಯಲ್ಲೂ ಎಬಿಡಿ ಅಜೇಯ ೯೦ ರನ್‌ಗಳೊಂದಿಗೆ ಮಿಂಚಿದ್ದರು!

ಇದನ್ನೂ ಓದಿ : ವಿರುಷ್ಕಾ ಮೊಗದಲ್ಲಿ ಕಡೆಗೂ ನಲಿದಾಡಿತು ಆರ್‌ಸಿಬಿ ಗೆಲುವಿನ ಲಾಸ್ಯ! 

ಚಾಹಲ್ ಮಿಂಚು: ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಡೇರ್‌ಡೆವಿಲ್ಸ್ ೨೦ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೧೮೧ ರನ್ ಕಲೆಹಾಕಿತು. ಡೆಲ್ಲಿ ಕೂಡ ಆರಂಭಿಕರಾದ ಪೃಥ್ವಿ ಶಾ (೨) ಮತ್ತು ಜೇಸನ್ ರಾಯ್ (೧೨) ಅವರನ್ನು ಬಲುಬೇಗ ಕಳೆದುಕೊಂಡಿತು. ಮೊದಲ ಓವರ್‌ನ ಕೊನೆ ಎಸೆತದಲ್ಲಿ ಪೃಥ್ವಿ ಶಾ ಅವರನ್ನು ಬೌಲ್ಡ್ ಮಾಡಿದ ಚಾಹಲ್, ಮೂರನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಜೇಸನ್ ರಾಯ್ ಅವರನ್ನು ಬೌಲ್ಡ್ ಮಾಡಿ ಪೆವಿಲಿಯನ್‌ಗೆ ಅಟ್ಟಿದರು.

ರಿಷಭ್ ಪಂತ್ ಅರ್ಧಶತಕ: ೧೬ ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿದ ದೆಹಲಿಗೆ ಮತ್ತೆ ನಾಯಕ ಶ್ರೇಯಸ್ ಅಯ್ಯರ್ (೩೨: ೩೫ ಎಸೆತ, ೩ ಬೌಂಡರಿ), ರಿಷಭ್ ಪಂತ್ (೬೧: ೩೪ ಎಸೆತ, ೫ ಬೌಂಡರಿ, ೪ ಸಿಕ್ಸರ್) ದಿಕ್ಕಾದರು. ಆರ್‌ಸಿಬಿ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ನಿಧಾನಗತಿಯಲ್ಲಿ ರನ್ ಪೇರಿಸುತ್ತಾ ಸಾಗಿತು. ಈ ಮಧ್ಯೆ ಹದಿಮೂರನೇ ಓವರ್‌ನ ಕೊನೇ ಎಸೆತದಲ್ಲಿ ವೇಗಿ ಮೊಹಮದ್ ಸಿರಾಜ್ ಬೌಲಿಂಗ್‌ನಲ್ಲಿ ಬಿರುಸಿನ ಹೊಡೆತಕ್ಕೆ ಕೈಹಾಕಿದ ಶ್ರೇಯಸ್ ಅಯ್ಯರ್, ಕೊಹ್ಲಿಗೆ ಕ್ಯಾಚಿತ್ತು ಕ್ರೀಸ್ ತೊರೆದರು.

ಮತ್ತದೇ ಬೌಲಿಂಗ್ ವೈಫಲ್ಯ: ಅಯ್ಯರ್ ನಿರ್ಗಮನದ ನಂತರದಲ್ಲಿ ಡೆಲ್ಲಿ ಇನ್ನಿಂಗ್ಸ್‌ ಅನ್ನು ಸಾಧ್ಯವಾದಷ್ಟು ನಿಯಂತ್ರಿಸಬಹುದಾಗಿದ್ದ ಆರ್‌ಸಿಬಿ ಬೌಲರ್‌ಗಳು ಮತ್ತದೇ ಡೆತ್ ಓವರ್‌ನಲ್ಲಿನ ಕಳಪೆ ಬೌಲಿಂಗ್‌ನಿಂದ ಇನ್ನೊಂದಷ್ಟು ರನ್‌ಗಳನ್ನು ಧಾರೆಎರೆದರು. ಮುಖ್ಯವಾಗಿ, ಸ್ಫೋಟಕ ಅರ್ಧಶತಕ ಸಿಡಿಸಿ ಇನ್ನಷ್ಟು ಆರ್ಭಟಿಸಲು ಮುಂದಾಗಿದ್ದ ರಿಷಭ್ ಪಂತ್ ಮೊಯೀನ್ ಅಲಿ ಬೌಲಿಂಗ್‌ನಲ್ಲಿ ಎಬಿಡಿಗೆ ಕ್ಯಾಚಿತ್ತು ಕ್ರೀಸ್ ತೊರೆದ ನಂತರದಲ್ಲಿ ಆರ್‌ಸಿಬಿ ಬೌಲರ್‌ಗಳಲ್ಲಿ ವ್ಯಾಪಕ ನಿಷ್ಕ್ರಿಯತೆ ಕಂಡುಬಂತು. ಇದರ ಲಾಭ ಪಡೆದ ವಿಜಯ್ ಶಂಕರ್ (೨೧: ೨೦ ಎಸೆತ, ೨ ಬೌಂಡರಿ) ಹಾಗೂ ಅಭಿಷೇಕ್ ಶರ್ಮಾ (೪೬: ೧೯ ಎಸೆತ, ೩ ಬೌಂಡರಿ, ೪ ಸಿಕ್ಸರ್) ಕೊನೆಯ ೨೯ ಎಸೆತಗಳಲ್ಲಿ ೫ನೇ ವಿಕೆಟ್‌ಗೆ ಮುರಿಯದ ೬೧ ರನ್ ಕಲೆಹಾಕಿ ತಂಡದ ಮೊತ್ತವನ್ನು ಸವಾಲಿನದ್ದಾಗಿಸಿದರು.

ಸಂಕ್ಷಿಪ್ತ ಸ್ಕೋರ್

ಡೆಲ್ಲಿ ಡೇರ್‌ಡೆವಿಲ್ಸ್: ೨೦ ಓವರ್‌ಗಳಲ್ಲಿ ೧೮೧/೪ (ರಿಷಭ್ ಪಂತ್ ೬೧, ಅಭಿಷೇಕ್ ಶರ್ಮಾ ೪೬*; ಯಜುವೇಂದ್ರ ಚಾಹಲ್ ೨೮ಕ್ಕೆ ೨) ರಾಯಲ್ ಚಾಲೆಂಜರ್ಸ್ ಬೆಂಗಳೂರು: ೧೯ ಓವರ್‌ಗಳಲ್ಲಿ ೧೮೭/೫ (ವಿರಾಟ್ ಕೊಹ್ಲಿ ೭೦, ಎಬಿ ಡಿವಿಲಿಯರ್ಸ್ ೭೨*; ಟ್ರೆಂಟ್ ಬೌಲ್ಟ್ ೩೦ಕ್ಕೆ ೨) ಫಲಿತಾಂಶ: ಆರ್‌ಸಿಬಿಗೆ ೫ ವಿಕೆಟ್ ಗೆಲುವು ಪಂದ್ಯಶ್ರೇಷ್ಠ: ಎಬಿ ಡಿವಿಲಿಯರ್ಸ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More