ಇಟಾಲಿಯನ್ ಓಪನ್‌ | ಮೊದಲ ಸುತ್ತಲ್ಲೇ ಮುಗ್ಗರಿಸಿದ ಸ್ವಿಸ್ ಆಟಗಾರ ವಾವ್ರಿಂಕಾ

ಈ ಮಾಸಾಂತ್ಯದಲ್ಲಿ ಶುರುವಾಗಲಿರುವ ಪ್ರತಿಷ್ಠಿತ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಗೂ ಮುಂಚಿನ ಗಟ್ಟಿ ಅಂಕಣದ ಕಡೆಯ ಟೂರ್ನಿಯಾದ ಇಟಾಲಿಯನ್ ಓಪನ್‌ನ ಮೊದಲ ಸುತ್ತಲ್ಲೇ ವಾವ್ರಿಂಕಾ ಮುಗ್ಗರಿಸಿದ್ದಾರೆ. ಅಮೆರಿಕದ ಸ್ಟೀವ್ ಜಾನ್ಸನ್ ಎದುರು ಅವರು ಸೋಲುಂಡರು

ಗಾಯದ ಸಮಸ್ಯೆಯಿಂದಾಗಿ ಕೆಲವೊಂದು ಮಹತ್ವಪೂರ್ಣ ಪಂದ್ಯಾವಳಿಯಿಂದ ವಂಚಿತರಾಗಿದ್ದ ಸ್ವಿಸ್ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕಾ, ಇಟಾಲಿಯನ್ ಓಪನ್‌ನ ಆರಂಭಿಕ ಸುತ್ತಿನಲ್ಲೇ ನಿರಾಸೆ ಅನುಭವಿಸಿದ್ದಾರೆ. ಭಾನುವಾರ (ಮೇ ೧೩) ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ ಮಾಜಿ ಮೂರನೇ ಶ್ರೇಯಾಂಕಿತ ಆಟಗಾರ ವಾವ್ರಿಂಕಾ, ಅಮೆರಿಕದ ಸ್ಟೀವ್ ಜಾನ್ಸನ್ ವಿರುದ್ಧ ೪-೬, ೪-೬ ಎರಡು ನೇರ ಹಾಗೂ ಸುಲಭ ಸೆಟ್‌ಗಳಲ್ಲಿ ಮಣಿದರು.

ಮೊಣಕಾಲು ನೋವಿನಿಂದಾಗಿ ಫೆಬ್ರವರಿ ನಂತರ ಇದೇ ಮೊದಲ ಬಾರಿಗೆ ಟೆನಿಸ್ ಅಂಗಣಕ್ಕೆ ಮರಳಿದ್ದ ವಾವ್ರಿಂಕಾ, ಆಟದ ಲಯವನ್ನೇ ಮರೆತಂತಿದ್ದರು. ೩೦ ಅನಗತ್ಯ ತಪ್ಪು ಹೊಡೆತಗಳಿಂದ ಕಳಪೆ ಆಟವಾಡಿದರು. ಮೂರು ಬಾರಿಯ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ವಾವ್ರಿಂಕಾ ಆಟದಲ್ಲಿನ ವೈಫಲ್ಯವನ್ನು ಲಾಭವಾಗಿಸಿಕೊಂಡ ವಿಶ್ವದ ೫೫ನೇ ಶ್ರೇಯಾಂಕಿತ ಆಟಗಾರ ಸ್ಟೀವ್ ಜಾನ್ಸನ್ ಸುಲಭ ಗೆಲುವು ದಾಖಲಿಸಿದರು. ಒಂದು ತಾಸು, ೨೧ ನಿಮಿಷಗಳಿದ್ದ ಪಂದ್ಯದಲ್ಲಿ ವಾವ್ರಿಂಕಾ ನೀರಸ ಆಟಕ್ಕೆ ಬೆಲೆ ತೆರಬೇಕಾಯಿತು.

“ಇಂದಿನ ಪಂದ್ಯದಲ್ಲಿ ನಾನು ಸೋಲನುಭವಿಸಲು ಪ್ರಮುಖ ಕಾರಣ ನನ್ನಲ್ಲಿದ್ದ ಅನ್ಯಮನಸ್ಕತೆ. ಮುಂದಿನ ದಿನಗಳಲ್ಲಿ ನಾನು ನನ್ನ ಸಹಜ ಆಟದೊಂದಿಗೆ ಫಾರ್ಮ್‌ಗೆ ಮರಳುವ ವಿಶ್ವಾಸವಿದೆ,’’ ಎಂದು ಪಂದ್ಯದ ಬಳಿಕ ೩೩ರ ಹರೆಯದ ವಾವ್ರಿಂಕಾ ತಿಳಿಸಿದರು. ಅಂದಹಾಗೆ, ಕಳೆದ ವರ್ಷ ವಿಂಬಲ್ಡನ್ ಫೈನಲ್ ಪ್ರವೇಶಿಸಿದ್ದ ವಾವ್ರಿಂಕಾ, ಫ್ರೆಂಚ್ ಓಪನ್ ಅನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಇದನ್ನೂ ಓದಿ : ಮ್ಯಾಡ್ರಿಡ್‌ ಓಪನ್ | ಹ್ಯಾಟ್ರಿಕ್ ಮೋಡಿ ಮಾಡಿದ ಪೆಟ್ರಾ ಕ್ವಿಟೋವಾ

ಫೆಬ್ರವರಿಯಲ್ಲಿ ಸೋಫಿಯಾ ಓಪನ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪಿದ್ದ ವಾವ್ರಿಂಕಾ, ರಾಟರ್‌ಡ್ಯಾಂ ಹಾಗೂ ಮಾರ್ಸಿಲೆ ಪಂದ್ಯಾವಳಿಯಲ್ಲಿ ಆರಂಭಿಕ ಸುತ್ತಿನಲ್ಲೇ ಸೋಲನುಭವಿಸಿದ್ದರು. ಹೀಗಾಗಿ, ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಲು ರೋಮ್‌ನಲ್ಲಿ ಸೂಕ್ತ ತಯಾರಿ ನಡೆಸಲು ಉದ್ದೇಶಿಸಿದ್ದ ವಾವ್ರಿಂಕಾ ಯೋಜನೆ ಈಗ ತಲೆಕೆಳಗಾಗಿದೆ. “ನನ್ನ ಮೊಣಕಾಲು ನೋವು ಈಗ ಅಷ್ಟೇನೂ ಬಾಧಿಸುತ್ತಿಲ್ಲ. ಆದರೆ, ನನ್ನ ಫಿಟ್‌ನೆಸ್ ಬಗ್ಗೆ ಹೆಚ್ಚು ಗಮನ ವಹಿಸಬೇಕಿದೆ. ಇಂದಿನ ಪಂದ್ಯದಲ್ಲಿ ನಾನು ಸೋಲನುಭವಿಸಿದ್ದರೂ, ಮುಂಬರುವ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ,’’ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More