ವಿಕ್ಟೋರಿಯಾ ಅಜರೆಂಕಾ ಮಣಿಸಿ ದ್ವಿತೀಯ ಸುತ್ತಿಗೆ ನಡೆದ ನೊವೊಮಿ ಒಸಾಕ

ಜಪಾನ್‌ನ ಉದಯೋನ್ಮುಖ ಆಟಗಾರ್ತಿ ನೊವೊಮಿ ಒಸಾಕ ಇಟಾಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ದ್ವಿತೀಯ ಸುತ್ತಿಗೆ ಧಾವಿಸಿದ್ದಾರೆ. ವಿಶ್ವದ ಮಾಜಿ ನಂ.೧ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ವಿರುದ್ಧ ೬-೦, ೬-೩ ಎರಡು ನೇರ ಸೆಟ್‌ಗಳಲ್ಲಿ ಒಸಾಕ ಜಯಭೇರಿ ಬಾರಿಸಿ ಮುನ್ನಡೆ ಸಾಧಿಸಿದರು

ಅತ್ಯಂತ ಆಕ್ರಮಣಕಾರಿ ಆಟವಾಡಿದ ಒಸಾಕ, ಬೆಲಾರಸ್ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ಎದುರು ಪ್ರಚಂಡ ಜಯ ಸಾಧಿಸಿದರು. ಈ ಗೆಲುವಿನೊಂದಿಗೆ, ಈ ಮಾಸಾಂತ್ಯದಲ್ಲಿ ನಡೆಯಲಿರುವ ವರ್ಷದ ಎರಡನೇ ಗ್ರಾಂಡ್‌ಸ್ಲಾಮ್ ಟೂರ್ನಿಯಾದ ಪ್ರತಿಷ್ಠಿತ ಫ್ರೆಂಚ್ ಓಪನ್‌ನಲ್ಲಿ ನೊವೊಮಿ ಮಿಕ್ಕ ಸ್ಪರ್ಧಿಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಳ್ಳುವುದನ್ನು ಖಚಿತಪಡಿಸಿದ್ದಾರೆ.

ಕೇವಲ ಒಂದು ತಾಸು, ಹದಿಮೂರು ನಿಮಿಷಗಳ ಹಣಾಹಣಿಯಲ್ಲಿ ಒಸಾಕ ವೈಭವದ ಆಟದೆದುರು ಅಜರೆಂಕಾ ಸಂಪೂರ್ಣ ಮಂಕಾದರು. ೨೦ರ ಹರೆಯದ ಒಸಾಕ, ತನ್ನ ಶಕ್ತಿಶಾಲಿ ಫೊರ್‌ಹ್ಯಾಂಡ್ ಶಾಟ್‌ಗಳಿಂದ ರೋಮ್‌ನಲ್ಲಿ ಮಿಂಚು ಹರಿಸಿದರು. ಗಟ್ಟಿ ಅಂಕಣದ ಟೂರ್ನಿಯಲ್ಲಿಯೂ ತಾನು ಪ್ರಭಾವಶಾಲಿ ಹೋರಾಟ ನಡೆಸಬಲ್ಲೆ ಎಂಬುದನ್ನು ಈ ಜಪಾನ್ ಆಟಗಾರ್ತಿ ಸ್ಪಷ್ಟಪಡಿಸಿದರು.

ಮೊದಲ ಸೆಟ್‌ನಲ್ಲಂತೂ ಕೇವಲ ಒಂದೇ ಒಂದು ಗೇಮ್ ಅನ್ನೂ ಬಿಟ್ಟುಕೊಡದೆ ಆಕ್ರಮಣಕಾರಿ ಆಟದೊಂದಿಗೆ ಅಜರೆಂಕಾ ವಿರುದ್ಧ ೧-೦ ಮುನ್ನಡೆ ಪಡೆದುಕೊಂಡ ಒಸಾಕ, ಎರಡನೇ ಸೆಟ್‌ನಲ್ಲಿಯೂ ಹೆಚ್ಚೇನು ಪ್ರಯಾಸಪಡದೆ ಜಯಶಾಲಿಯಾದರು. ಪಂದ್ಯದಲ್ಲಿ ಪುಟಿದೇಳಲು ಯತ್ನಿಸಿದ ಅಜರೆಂಕಾ, ಕೊನೆಗೂ ಒಸಾಕ ಆಟದೆದುರು ಮಂಕಾದರು. ಅಂದಹಾಗೆ, ಒಸಾಕ ಸೆಣಸಲಿರುವ ಮುಂದಿನ ಸುತ್ತು ಕಠಿಣಕಾರಿಯಾಗಿರಲಿದೆ ಎಂಬುುದನ್ನು ಖಚಿತಪಡಿಸಿದೆ. ವಿಶ್ವದ ನಂ.೧ ಆಟಗಾರ್ತಿ ರೊಮೇನಿಯಾದ ಸಿಮೋನಾ ಹ್ಯಾಲೆಪ್ ವಿರುದ್ಧ ಆಕೆ ಸೆಣಸಲಿದ್ದಾರೆ.

ಇದನ್ನೂ ಓದಿ : ಆರ್‌ಸಿಬಿ ಆಲ್ರೌಂಡ್ ಆಟಕ್ಕೆ ಬೆದರಿದ ಪಂಜಾಬ್‌ಗೆ ೧೦ ವಿಕೆಟ್ ಸೋಲು

ನಿಶಿಕೊರಿ, ಜೊಕೊವಿಚ್ ಮುನ್ನಡೆ

ಇತ್ತ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಜಪಾನ್‌ನ ಯುವ ಆಟಗಾರ ಕೀ ನಿಶಿಕೊರಿ ಹಾಗೂ ವಿಶ್ವದ ಮಾಜಿ ನಂ.೧ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಮುನ್ನಡೆ ಸಾಧಿಸಿದ್ದಾರೆ. ಮೊದಲ ಸುತ್ತಿನಲ್ಲಿ ಸ್ಪೇನ್ ಆಟಗಾರ ಫೆಲಿಸಿಯಾನೊ ಲೋಪೆಜ್ ವಿರುದ್ಧ ೭-೬ (೭-೫), ೬-೪ ಸೆಟ್‌ಗ ಳಲ್ಲಿ ನಿಶಿಕೊರಿ ಗೆಲುವು ಪಡೆದರು. ಅತ್ಯಂತ ರೋಚಕತೆಯಿಂದ ಕೂಡಿದ್ದ ಮೊದಲ ಸೆಟ್‌ನಲ್ಲಿ ನಿಶಿಕೊರಿ ಟೈಬ್ರೇಕ್‌ನಲ್ಲಿ ಗೆಲುವು ಪಡೆದರೆ, ಎರಡನೇ ಸೆಟ್‌ನಲ್ಲಿ ಪ್ರಭುತ್ವ ಸಾಧಿಸಿದರು. ಕಳೆದ ವಾರವಷ್ಟೇ ನಡೆದ ಮ್ಯಾಡ್ರಿಡ್ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ನೊವಾಕ್ ಜೊಕೊವಿಚ್ ವಿರುದ್ಧ ಸೋತಿದ್ದ ನಿಶಿಕೊರಿ, ಇದೀಗ ಮುಂದಿನ ಸುತ್ತಿನಲ್ಲಿ ಗ್ರಿಗೋರ್ ಡಿಮಿಟ್ರೊವ್ ವಿರುದ್ಧ ಸೆಣಸಲಿದ್ದಾರೆ.

ಇನ್ನು, ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಮೊದಲ ಸುತ್ತಿನ ಪಂದ್ಯದಲ್ಲಿ ಜೊಕೊವಿಚ್ ಗೆಲುವಿನ ನಗೆಬೀರಿದರು. 12 ಗ್ರಾಂಡ್ ಸ್ಲಾಲ್ ಪ್ರಶಸ್ತಿ ವಿಜೇತ ಜೊಕೊವಿಚ್, ಉಕ್ರೇನ್ ಆಟಗಾರ ಅಲೆಕ್ಸಾಂಡರ್ ಡೊಲ್ಗೊಪೊಲೊವ್ ವಿರುದ್ಧ ೬-೧, ೬-೩ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಮ್ಯಾಡ್ರಿಡ್ ಓಪನ್ ಟೆನಿಸ್ ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ ೩೦ರ ಹರೆಯದ ಜೊಕೊವಿಚ್, ಕೈಲ್ ಎಡ್ಮುಂಡ್ ವಿರುದ್ಧ ಸೋಲನುಭವಿಸಿ ಆಘಾತ ಅನುಭವಿಸಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More