ಆರ್‌ಸಿಬಿ ಆಲ್ರೌಂಡ್ ಆಟಕ್ಕೆ ಬೆದರಿದ ಪಂಜಾಬ್‌ಗೆ ೧೦ ವಿಕೆಟ್ ಸೋಲು

ಉಮೇಶ್ ಯಾದವ್ (೨೩ಕ್ಕೆ ೩) ದಾಳಿಯ ಬಳಿಕ ನಾಯಕ ವಿರಾಟ್ ಕೊಹ್ಲಿ (೪೮*) ಮತ್ತು ಪಾರ್ಥೀವ್ ಪಟೇಲ್ (೪೦*) ಅಜೇಯ ಆಟಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ಬೆದರಿಹೋಯಿತು. ೨೦೦೧೬ರ ಬಳಿಕ ಮೊದಲ ಬಾರಿಗೆ ಬ್ಯಾಕ್ ಟು ಬ್ಯಾಕ್ ಜಯ ಕಂಡ ಆರ್‌ಸಿಬಿ ಇದೀಗ ತವರಿನತ್ತ ಮುಖ ಮಾಡಿದೆ

ಅತ್ಯಂತ ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಆಲ್ರೌಂಡ್ ಆಟದಿಂದ ಪುಟಿದೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ೧೦ ವಿಕೆಟ್‌ಗಳ ಅಮೋಘ ಗೆಲುವು ದಾಖಲಿಸಿತು. ಮಾತ್ರವಲ್ಲ, ಉಳಿದಿರುವ ಇನ್ನೆರಡು ಪ್ಲೇಆಫ್ ಸ್ಥಾನಕ್ಕಾಗಿನ ಹೋರಾಟವನ್ನು ಇನ್ನಷ್ಟು ಕಡಿದಾಗಿಸಿತು. ಪಂಜಾಬ್ ವಿರುದ್ಧದ ಮಹತ್ವಪೂರ್ಣ ಗೆಲುವಿನೊಂದಿಗೆ ನೆಟ್ ರನ್‌ರೇಟ್‌ನಲ್ಲೂ (-೦.೨೬೧ರಿಂದ ೦.೨೧೮) ಮುನ್ನಡೆ ಸಾಧಿಸಿದ ಬೆಂಗಳೂರು, ಉಳಿದಿರುವ ಕೊನೆಯ ಎರಡು ಪಂದ್ಯಗಳಲ್ಲೂ ಇಂಥದ್ದೇ ಗೆಲುವಿನೊಂದಿಗೆ ಪ್ಲೇಆಫ್‌ಗೇರಲು ಕಾರ್ಯತಂತ್ರ ಯೋಜಿಸಿದೆ.

ಇನ್ನು, ಈ ಗೆಲುವಿನೊಂದಿಗೆ ಆರ್‌ಸಿಬಿ ೧೦ ಪಾಯಿಂಟ್ಸ್‌ಗಳೊಂದಿಗೆ ಏಳನೇ ಸ್ಥಾನದಲ್ಲಿ ಉಳಿದಿದ್ದರೆ, ಕಿಂಗ್ಸ್ ಇಲೆವೆನ್ ಪಂಜಾಬ್ ಸತತ ಮೂರನೇ ಸೋಲಿನೊಂದಿಗೆ ೧೨ ಪಾಯಿಂಟ್ಸ್ ಕಲೆಹಾಕಿ ಐದನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಿಂಗ್ಸ್ ಕಾದಾಡಲಿದ್ದರೆ, ಆರ್‌ಸಿಬಿ ಮನೆಯಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ.

ಇಂದೋರ್‌ನ ಹೋಳ್ಕರ್ ಮೈದಾನದಲ್ಲಿ ಸೋಮವಾರ (ಮೇ ೧೪) ನಡೆದ ಈ ಋತುವಿನ ೪೮ನೇ ಐಪಿಎಲ್ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಶಿಸ್ತುಬದ್ಧ ಹಾಗೂ ಪರಿಣಾಮಕಾರಿ ಬೌಲಿಂಗ್ ದಾಳಿಯಿಂದ ಕಿಂಗ್ಸ್ ಪಡೆಯನ್ನು ಕೇವಲ ೧೫.೧ ಓವರ್‌ಗಳಲ್ಲಿ ೮೮ ರನ್‌ಗಳಿಗೆ ಕಟ್ಟಿಹಾಕಿತು. ಹೀಗಾಗಿ, ಗೆಲ್ಲಲು ಕೇವಲ ೮೯ ರನ್ ಗುರಿ ಪಡೆದ ಆರ್‌ಸಿಬಿ, ೮.೧ ಓವರ್‌ಗಳಲ್ಲೇ ವಿಕೆಟ್ ನಷ್ಟವಿಲ್ಲದೆ ೯೨ ರನ್‌ಗಳೊಂದಿಗೆ ಜಯದ ಕೇಕೆ ಹಾಕಿತು. ಕೊಹ್ಲಿ ನಾಲ್ಕು ಬೌಂಡರಿ, ಎರಡು ಸಿಕ್ಸರ್‌ಗಳೊಂದಿಗೆ ವಿಜೃಂಭಿಸಿದರೆ, ಮತ್ತೊಂದು ಬದಿಯಲ್ಲಿ ಪಾರ್ಥೀವ್ ಪಟೇಲ್ ಏಳು ಬೌಂಡರಿಗಳೊಂದಿಗೆ ಅಜೇಯರಾಗುಳಿದರು.

ಇದನ್ನೂ ಓದಿ : ಎಬಿಡಿ-ಕೊಹ್ಲಿ ಜೊತೆಯಾಟದ ಸೊಬಗಿನಲ್ಲಿ ಆರ್‌ಸಿಬಿ ಆಸೆ ಇನ್ನೂ ಜೀವಂತ

ಸಂಘಟಿತ ದಾಳಿ

ಟೂರ್ನಿರ್ಯಲ್ಲಿನ ತನ್ನ ಹೋರಾಟವನ್ನು ಜೀವಂತವಾಗಿಡಲು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದ್ದ ಆರ್‌ಸಿಬಿ, ಟಾಸ್‌ನೊಂದಿಗೇ ಸರಿದಿಸೆಯಲ್ಲಿ ಹೆಜ್ಜೆ ಇಟ್ಟಿತು. ಎಲ್ಲದಕ್ಕಿಂತ ಮಿಗಿಲಾಗಿ ವೇಗಿ ಉಮೇಶ್ ಯಾದವ್ ಶುರುವಿನಲ್ಲೇ ಕಿಂಗ್ಸ್ ಕಾಲೆಳೆದು ಆತಿಥೇಯರನ್ನು ಸಂಕಷ್ಟಕ್ಕೆ ಈಡುಮಾಡಿದರು. ಅವರೊಂದಿಗೆ ಯಜುವೇಂದ್ರ ಚಾಹಲ್ (೧/೬), ಕಾಲಿನ್ ಡಿ ಗ್ರಾಂಡಮ್ (೧/೮), ಮೊಯೀನ್ ಅಲಿ (೧/೧೩) ಮತ್ತು ಮೊಹಮದ್ ಸಿರಾಜ್ (೧/೧೭) ಆಕರ್ಷಕ ಬೌಲಿಂಗ್‌ನಿಂದ ಕಿಂಗ್ಸ್ ಮೇಲೇಳದಂತೆ ಮಾಡಿದರು.

ದಿಗ್ಗಜರ ವೈಫಲ್ಯ: ಕಿಂಗ್ಸ್ ಪಂಜಾಬ್ ಶುರುವಿನಿಂದಲೇ ಎಡವಿತು. ಮೊದಲಿಗೆ, ಪವರ್‌ಪ್ಲೇ ಅವಧಿ ಮುಗಿಯುವ ಮುನ್ನವೇ ಕೆ ಎಲ್ ರಾಹುಲ್ (೨೧) ಹಾಗೂ ಕ್ರಿಸ್ ಗೇಲ್ (೧೮) ವಿಕೆಟ್ ಎಗರಿಸಿದ ಉಮೇಶ್ ಯಾದವ್, ಕಿಂಗ್ಸ್ ಇಲೆವೆನ್ ಪಂಜಾಬ್‌ನ ಜಂಘಾಬಲವನ್ನೇ ಉಡುಗಿಹೋಗುವಂತೆ ಮಾಡಿದರು. ಉಮೇಶ್ ಯಾದವ್ ಶಾರ್ಟ್ ಬಾಲ್ ಎಸೆತದಲ್ಲಿ ರಾಹುಲ್ ಬಾರಿಸಿದ ಚೆಂಡನ್ನು ಡೀಪ್ ಸ್ಕಯರ್ ಲೆಗ್‌ನಲ್ಲಿದ್ದ ಗ್ರಾಂಡಮ್ ಕ್ಯಾಚ್ ಪಡೆದರೆ, ಗೇಲ್ ಕೂಡ ಇದೇ ರೀತಿಯಲ್ಲಿ ಮೊಹಮದ್ ಸಿರಾಜ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದರು.

ತಂಡದ ಪರ ಗರಿಷ್ಠ ಸ್ಕೋರ್‌ಧಾರಿ ಎನಿಸಿದ್ದು ಆಸೀಸ್ ಆಟಗಾರ ಏರಾನ್ ಫಿಂಚ್ (೨೬) ಮಾತ್ರವೇ. ೬.೫ ಓವರ್‌ಗಳಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡ ಕಿಂಗ್ಸ್ ಇಲೆವೆನ್ ಪಂಜಾಬ್ ಕೇವಲ ೫೦ ರನ್‌ಗಳನ್ನಷ್ಟೇ ಕಲೆಹಾಕಿತು. ಆನಂತರದಲ್ಲಿ ಅದು ಕಲೆಹಾಕಿದ್ದು ಕೇವಲ ೩೩ ರನ್‌ಗಳನ್ನಷ್ಟೆ! ಅಷ್ಟರಮಟ್ಟಿಗೆ ಆರ್‌ಸಿಬಿ ಬೌಲಿಂಗ್ ಮತ್ತು ಕ್ಷೇತ್ರರಕ್ಷಣೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿತು.

ಸಂಕ್ಷಿಪ್ತ ಸ್ಕೋರ್

ಕಿಂಗ್ಸ್ ಇಲೆವೆನ್ ಪಂಜಾಬ್: ೧೫.೧ ಓವರ್‌ಗಳಲ್ಲಿ ೮೮/೧೦ (ಏರಾನ್ ಫಿಂಚ್ ೨೬; ಉಮೇಶ್ ಯಾದವ್ ೨೩ಕ್ಕೆ ೩) ರಾಯಲ್ ಚಾಲೆಂಜರ್ಸ್ ಬೆಂಗಳೂರು: ೮.೧ ಓವರ್‌ಗಳಲ್ಲಿ ೯೨/೦ (ವಿರಾಟ್ ಕೊಹ್ಲಿ ೪೮*, ಪಾರ್ಥೀವ್ ಪಟೇಲ್ ೪೪*) ಫಲಿತಾಂಶ: ಆರ್‌ಸಿಬಿಗೆ ೧೦ ವಿಕೆಟ್ ಗೆಲುವು ಪಂದ್ಯಶ್ರೇಷ್ಠ: ಉಮೇಶ್ ಯಾದವ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More