ಐಸಿಸಿ ಸ್ವತಂತ್ರ ಅಧ್ಯಕ್ಷಗಾದಿಗೆ ಮತ್ತೆ ಆಯ್ಕೆಯಾದ ಶಶಾಂಕ್ ಮನೋಹರ್

ಬಿಸಿಸಿಐ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್ ಮತ್ತೊಂದು ಅವಧಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸ್ವತಂತ್ರ ಅಧ್ಯಕ್ಷರಾಗಿ ಮಂಗಳವಾರ (ಮೇ ೧೫) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ೨೦೧೬ರಲ್ಲಿ ಮೊದಲ ಬಾರಿಗೆ ಐಸಿಸಿ ಸ್ವತಂತ್ರ ಅಧ್ಯಕ್ಷರಾಗಿ ಶಶಾಂಕ್ ನೇಮಕವಾಗಿದ್ದರು

ಕಳೆದ ಎರಡು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಳಿತ ಚುಕ್ಕಾಣಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಹಲವಾರು ಮಹತ್ವಪೂರ್ಣ ಸುಧಾರಣೆಯನ್ನು ತಂದ ಶಶಾಂಕ್‌ ನಿರೀಕ್ಷೆಯಂತೆಯೇ ಎರಡನೇ ಬಾರಿಯೂ ಈ ಘನ ಹುದ್ದೆಯಲ್ಲೇ ಮುಂದುವರಿದಿದ್ದಾರೆ. ಸ್ವತಂತ್ರ ಅಧ್ಯಕ್ಷಗಾದಿಗೆ ಸಲ್ಲಿಕೆಯಾಗಿದ್ದ ಏಕೈಕ ಉಮೇದುವಾರಿಕೆ ಅವರದ್ದೇ ಆಗಿದ್ದರಿಂದ ಶಶಾಂಕ್ ಅವಿರೋಧವಾಗಿ ಆಯ್ಕೆಯಾದರು. ಐಸಿಸಿಯ ಅಧಿಕೃತ ಪ್ರಕಟಣೆಯಲ್ಲಿ ಮುಂದಿನ ಎರಡು ವರ್ಷಗಳವರೆಗೆ ಶಶಾಂಕ್ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂದು ಹೇಳಲಾಗಿದೆ.

೨೦೧೬ರಲ್ಲಿ ಸ್ವತಂತ್ರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಮನೋಹರ್, ಆಡಳಿತ ಸ್ವರೂಪದಲ್ಲಿ ಹಲವಾರು ಮಾರ್ಪಾಡು ಮಾಡಿದ್ದರು. ಪ್ರಮುಖವಾಗಿ, ಐಸಿಸಿಯ ಮೊದಲ ಸ್ವತಂತ್ರ ಮಹಿಳಾ ನಿರ್ದೇಶಕಿಯಾಗಿ ಭಾರತ ಮೂಲದ ಇಂದ್ರಾ ನೂಯಿ ಆಯ್ಕೆಯಾಗಲೂ ಶಶಾಂಕ್ ಆಡಳಿತಾತ್ಮಕ ನೆಲೆಯಲ್ಲಿ ಕೈಗೊಂಡ ನಿರ್ಧಾರವೇ ಕಾರಣವಾಗಿತ್ತು. ಇನ್ನು, ಜಾಗತಿಕವಾಗಿ ಕ್ರಿಕೆಟ್ ಅನ್ನು ಇನ್ನಷ್ಟು ಪಸರಿಸಲು ಹೆಚ್ಚಿನ ರಾಷ್ಟ್ರಗಳಿಗೆ ಅವಕಾಶದ ಬಾಗಿಲು ತೆರೆದದ್ದು ಕೂಡ ಗಮನಾರ್ಹ ನಿರ್ಣಯಗಳಲ್ಲೊಂದು.

“ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಸ್ವತಂತ್ರ ಅಧ್ಯಕ್ಷನಾಗಿ ಎರಡನೇ ಬಾರಿಗೆ ಆಯ್ಕೆಯಾಗಿರುವುದು ಗೌರವದ ಸಂಗತಿ. ಐಸಿಸಿಯಲ್ಲಿನ ನನ್ನ ಸಹೋದ್ಯೋಗಿಗಳ ಬೆಂಬಲ, ಸಹಕಾರ ಹಾಗೂ ಪ್ರೋತ್ಸಾಹದ ಫಲ ಇದಾಗಿದ್ದು, ಅವರಿಗೆ ನಾನು ಆಭಾರಿಯಾಗಿದ್ದೇನೆ. ೨೦೧೬ರಲ್ಲಿ ಮೊದಲ ಬಾರಿಗೆ ನಾನು ಆಯ್ಕೆಯಾದಾಗ ಕ್ರಿಕೆಟ್ ಬೆಳವಣಿಗೆಗಾಗಿ ನೀಡಿದ ವಚನವನ್ನು ಸಾಧ್ಯವಾದಷ್ಟೂ ಈಡೇರಿಸಿದ್ದೇನೆ ಎಂದು ಹೇಳಬಯಸುತ್ತೇನೆ,’’ ಎಂದು ಎರಡನೇ ಅವಧಿಗೆ ಆಯ್ಕೆಯಾದ ಬಳಿಕ ಶಶಾಂಕ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಮೊದಲ ಮಹಿಳಾ ನಿರ್ದೇಶಕಿಯಾಗಿ ಇಂದ್ರಾ ನೂಯಿ

"ಮುಂದಿನ ಎರಡು ವರ್ಷಗಳ ಅವಧಿಯಲ್ಲೂ ಸದಸ್ಯ ರಾಷ್ಟ್ರಗಳೊಂದಿಗೆ ವಿಶ್ವದ ಇನ್ನಷ್ಟು ಜನತೆ ಕ್ರಿಕೆಟ್ ಅನ್ನು ಆಸ್ವಾದಿಸುವಂತೆ ಮಾಡಲು ಹೊಸ ಕಾರ್ಯಸೂಚಿ ಹಾಗೂ ಕಾರ್ಯತಂತ್ರಗಳನ್ನು ಹೆಣೆಯಲಾಗುವುದು. ಕ್ರಿಕೆಟ್ ಈಗಾಗಲೇ ಸಾಕಷ್ಟು ಆರೋಗ್ಯಕರವಾಗಿದ್ದು, ನಾವು ಕೇವಲ ಮಾರ್ಗದರ್ಶಿಗಳಷ್ಟೇ ಆಗಿದ್ದೇವೆ. ಕ್ರಿಕೆಟ್‌ನ ಘನತೆ ಹಾಗೂ ಅದರ ಜನಪ್ರಿಯತೆಯನ್ನು ಕಾಯ್ದುಕೊಳ್ಳುವುದು ನಮ್ಮ ಮುಂದಿನ ಕೆಲಸ,’’ ಎಂತಲೂ ಮನೋಹರ್ ತಿಳಿಸಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More