ತವರಿನಲ್ಲಿ ಕಡೇ ಆಟಕ್ಕೆ ಸಜ್ಜಾದ ಆರ್‌ಸಿಬಿಗೆ ಸನ್‌ರೈಸರ್ಸ್ ಮಣಿಸುವ ವಿಶ್ವಾಸ

ಹನ್ನೊಂದನೇ ಐಪಿಎಲ್ ಆವೃತ್ತಿಯಲ್ಲಿನ ಪ್ಲೇಆಫ್‌ ಅವಕಾಶ ಆರ್‌ಸಿಬಿ ಪಾಲಿಗೆ ಇನ್ನೂ ಗಗನಕುಸುಮವಾಗಿದೆ. ಇದೇ ಹೊತ್ತಲ್ಲಿ ತವರಿನಲ್ಲಿ ಕಡೇ ಆಟಕ್ಕೆ ಅಣಿಯಾಗಿರುವ ತಂಡ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸುತ್ತಿದ್ದು, ಮಾಡು ಇಲ್ಲವೇ ಮಡಿಗೆ ಕೊಹ್ಲಿ ಪಡೆ ನಿರ್ಧರಿಸಿದೆ

ಪ್ಲೇಆಫ್ ಬಯಕೆಯನ್ನು ಬದಿಗೊತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡೆಲ್ಲಿ ಡೇರ್‌ಡೆವಿಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಒಂದರ ಹಿಂದರೊಂದರಂತೆ ಎರಡು ಗೆಲುವು ದಾಖಲಿಸಿ ಮತ್ತೆ ಪ್ಲೇಆಫ್ ಕನಸು ಕಾಣತೊಡಗಿದೆ. ಈಗಾಗಲೇ ಪ್ಲೇಆಫ್ ಸ್ಥಾನಕ್ಕೆ ಲಗ್ಗೆ ಹಾಕಿರುವ ಹಾಗೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೇನ್ ವಿಲಿಯಮ್ಸನ್ ಸಾರಥ್ಯದ ಸನ್‌ರೈಸರ್ಸ್ ಹೈದರಾಬಾದ್ ಸವಾಲಿಗೆ ಅದು ಸಂಪೂರ್ಣ ಅಣಿಯಾಗಿದೆ. ಗುರುವಾರ (ಮೇ ೧೭) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹಣಾಹಣಿಯು ವಿರಾಟ್ ಕೊಹ್ಲಿ ಸಾರಥ್ಯದ ಆರ್‌ಸಿಬಿ ಪಾಲಿಗೆ ಅಗ್ನಿಪರೀಕ್ಷೆಯಾಗಿದೆ.

ಆಡಿರುವ ಹನ್ನೆರಡು ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ೯ ಗೆಲುವಿನೊಂದಿಗೆ ೧೮ ಅಂಕ ಗಳಿಸಿ ಸುಭದ್ರ ಸ್ಥಿತಿಯಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್, ಇತ್ತ, ೧೨ ಪಂದ್ಯಗಳಲ್ಲಿ ಏಳರಲ್ಲಿ ಸೋತು ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಕೊಹ್ಲಿ ಪಡೆ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಗಂಭೀರವಾಗಿ ಪರಿಗಣಿಸಿದೆ. ಟೂರ್ನಿಯಲ್ಲಿಯೇ ಅತ್ಯಂತ ಅಪಾಯಕಾರಿ ತಂಡವೆನಿಸಿರುವ ಅದರ ವಿರುದ್ಧ ತವರಿನಾಚೆಯ ಪಂದ್ಯದಲ್ಲಿ ಕೊಹ್ಲಿ ಪಡೆ ಸೋಲನುಭವಿಸಿತ್ತು. ಏತನ್ಮಧ್ಯೆ, ಸನ್‌ರೈಸರ್ಸ್ ವಿರುದ್ಧ ಗೆಲುವು ಸಾಧಿಸಿದರೂ, ಆರ್‌ಸಿಬಿಯ ಪ್ಲೇಆಫ್ ಪ್ರವೇಶ ಮಿಕ್ಕ ತಂಡಗಳ ಸೋಲು-ಗೆಲುವಿನ ಲೆಕ್ಕಾಚಾರವನ್ನು ಅವಲಂಬಿಸಿದೆ.

ಅವಲಂಬನೆಯದ್ದೇ ಚಿಂತೆ

ಅಂದಹಾಗೆ, ಆತಿಥೇಯ ಆರ್‌ಸಿಬಿಯ ಬ್ಯಾಟಿಂಗ್ ನಾಯಕ ವಿರಾಟ್ ಕೊಹ್ಲಿ ಹಾಗೂ ದಕ್ಷಿಣ ಆಫ್ರಿಕಾದ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ ಇಬ್ಬರನ್ನಷ್ಟೇ ಬಲವಾಗಿ ನೆಚ್ಚಿಕೊಂಡಿದೆ. ಈ ಇಬ್ಬರ ಮೇಲಿನ ಅವಲಂಬನೆ ತಂಡದ ಬ್ಯಾಟಿಂಗ್‌ ಶಕ್ತಿಯನ್ನೇ ಅಣಕಿಸುವಂತಿದೆ. ಇದಕ್ಕೆ ಪ್ರಮುಖ ಕಾರಣ ಆರ್‌ಸಿಬಿ ಈ ಋತುವಿನಲ್ಲಿ ಕಲೆಹಾಕಿರುವ ರನ್‌ ಪೈಕಿ ಭಾಗಶಃ ಗಳಿಕೆ ಈ ಇಬ್ಬರು ಆಟಗಾರರಿಂದಲೇ ಆಗಿದೆ. ಕೊಹ್ಲಿ ೧೨ ಪಂದ್ಯಗಳಲ್ಲಿ ೫೧೪ ರನ್ ಗಳಿಸಿದ್ದರೆ, ಎಬಿ ಡಿವಿಲಿಯರ್ಸ್ ೩೫೮ ರನ್ ಪೇರಿಸಿದ್ದಾರೆ. ಹೀಗಾಗಿ, ಸನ್‌ರೈಸರ್ಸ್ ವಿರುದ್ಧ ಗೆಲುವು ಸಾಧಿಸಲು ಹಾಗೂ ಟೂರ್ನಿಯ ಕೊನೇ ಪಂದ್ಯದಲ್ಲಿಯೂ ಗೆಲ್ಲಲು ಈ ಇಬ್ಬರಷ್ಟೇ ಅಲ್ಲದೆ, ಕೊರೆ ಆಂಡರ್ಸನ್‌, ಮನ್‌ದೀಪ್ ಸಿಂಗ್‌ರಂಥ ಆಟಗಾರರಿಂದ ಪೂರಕ ಬ್ಯಾಟಿಂಗ್ ಹೊಮ್ಮಬೇಕಿದೆ.

ಇನ್ನು, ಬೌಲಿಂಗ್‌ ವಿಷಯಕ್ಕೆ ಬರುವುದಾದರೆ, ವೇಗಿ ಉಮೇಶ್ ಯಾದವ್ ಆಕರ್ಷಕ ಸ್ಪೆಲ್‌ನಿಂದ ಗಮನ ಸೆಳೆದಿದ್ದಾರೆ. ೧೭ ವಿಕೆಟ್‌ಗಳನ್ನು ಪಡೆದಿರುವ ಅವರು ತಂಡದ ಸ್ಟಾರ್ ಬೌಲರ್ ಆಗಿದ್ದು, ಕೊನೆಯ ಎರಡು ಪಂದ್ಯಗಳಲ್ಲಿಯೂ ಇದೇ ಹೋರಾಟ ನಡೆಸುವ ವಿಶ್ವಾಸದಲ್ಲಿದ್ದಾರೆ. ಅವರೊಂದಿಗೆ, ಟಿಮ್ ಸೌಥೀ, ಮೊಹಮದ್ ಸಿರಾಜ್ ಕೂಡ ಗಮನಾರ್ಹ ಪ್ರದರ್ಶನ ನೀಡಿದ್ದು, ಇನ್ನುಳಿದಂತೆ ಸ್ಪಿನ್ನರ್ ಯಜುವೇಂದ್ರ ಚಾಹಲ್ ಸ್ಪಿನ್ ವಿಭಾಗದಲ್ಲಿ ಪ್ರಭಾವಿಯಾಗಿದ್ದಾರೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದ್ದ ಆರ್‌ಸಿಬಿ ಬೌಲರ್‌ಗಳು ಮಿಂಚು ಹರಿಸಿದ್ದರು. ಉಮೇಶ್ ಯಾದವ್ ಪ್ರಚಂಡ ಬೌಲಿಂಗ್‌ನಿಂದಾಗಿ ಆರ್‌ಸಿಬಿ ೧೦ ವಿಕೆಟ್ ಭರ್ಜರಿ ಗೆಲುವು ಸಾಧಿಸಿತ್ತು.

Thunder from down under in full swing at the nets today. #PlayBold

A post shared by Royal Challengers Bangalore (@royalchallengersbangalore) on

ಇದನ್ನೂ ಓದಿ : ಆರ್‌ಸಿಬಿ ಆಲ್ರೌಂಡ್ ಆಟಕ್ಕೆ ಬೆದರಿದ ಪಂಜಾಬ್‌ಗೆ ೧೦ ವಿಕೆಟ್ ಸೋಲು

ಇತಿಹಾಸದ ಕನವರಿಕೆ

ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ೨೦೧೬ರ ಆವೃತ್ತಿಯಲ್ಲಿ ಆತಿಥೇಯರನ್ನು ಮಣಿಸಿ ಡೇವಿಡ್ ವಾರ್ನರ್ ನೇತೃತ್ವದಲ್ಲಿ ಟ್ರೋಫಿ ಗೆದ್ದಿದ್ದ ಸನ್‌ರೈಸರ್ಸ್ ಹೈದರಾಬಾದ್, ಮತ್ತೊಮ್ಮೆ ಆರ್‌ಸಿಬಿಯನ್ನು ಮಣಿಸುವ ಭರವಸೆಯಲ್ಲಿದೆ. ಮೇಲಾಗಿ, ತವರಿನಲ್ಲಿ ನಡೆದ ಮೊದಲ ಮುಖಾಮುಖಿಯಲ್ಲಿ ಅಲ್ಪ ಮೊತ್ತವನ್ನು ಗಳಿಸಿಯೂ ಗೆಲುವು ಸಾಧಿಸಿದ ವಿಲಿಯಮ್ಸನ್ ಬಳಗ ಆರ್‌ಸಿಬಿ ವಿರುದ್ಧ ಎರಡನೇ ಗೆಲುವು ಸಾಧಿಸುವ ತುಡಿತದಲ್ಲಿದೆ.

ಆರ್‌ಸಿಬಿಗೆ ಹೋಲಿಸಿದರೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಈ ಎರಡೂ ವಿಭಾಗಗಳಲ್ಲಿಯೂ ಸಮತೋಲನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ವಿಭಾಗದಲ್ಲಿ ಶಿಖರ್ ಧವನ್ (೩೬೯) ನಾಯಕ ವಿಲಿಯಮ್ಸನ್ (೫೪೪) ಯೂಸುಫ್ ಪಠಾಣ್ (೧೮೬), ಮನೀಶ್ ಪಾಂಡೆ (೧೮೯) ಮತ್ತು ಶಕೀಬ್ ಅಲ್ ಹಸನ್ ೧೬೬ ರನ್ ಗಳಿಸಿದ್ದಾರೆ.

ಆದರೆ, ಸನ್‌ರೈಸರ್ಸ್ ಬ್ಯಾಟಿಂಗ್‌ಗಿಂತಲೂ ಬೌಲಿಂಗ್‌ನಲ್ಲಿಯೂ ಬಲಾಢ್ಯವಾಗಿದೆ. ವೇಗಿ ಭುವನೇಶ್ವರ್ ಕುಮಾರ್ (೮ ವಿಕೆಟ್) ಸಾರಥ್ಯದ ಸನ್‌ರೈಸರ್ಸ್ ಬೌಲಿಂಗ್ ಅತ್ಯಂತ ಪರಿಣಾಮಕಾರಿಯಾಗಿದೆ. ಸಿದ್ಧಾರ್ಥ್ ಕೌಲ್ (೧೩), ಸಂದೀಪ್ ಶರ್ಮಾ ೮ ವಿಕೆಟ್ ಗಳಿಸಿದ್ದರೆ, ಸ್ಪಿನ್‌ದ್ವಯರಾದ ರಶೀದ್ ಖಾನ್ ಮತ್ತು ಶಕೀಬ್ ಅಲ್ ಹಸನ್ ಕ್ರಮವಾಗಿ ೧೩ ಹಾಗೂ ೧೨ ವಿಕೆಟ್ ಗಳಿಸಿ ಬ್ಯಾಟ್ಸ್‌ಮನ್‌ಗಳಿಗೆ ಕಂಟಕಪ್ರಾಯರಾಗಿದ್ದಾರೆ.

ಸಂಭವನೀಯ ಇಲೆವೆನ್

ಆರ್‌ಸಿಬಿ: ಪಾರ್ಥೀವ್ ಪಟೇಲ್ / ಕ್ವಿಂಟಾನ್ ಡಿ’ಕಾಕ್, ಬ್ರೆಂಡನ್ ಮೆಕಲಮ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಮನ್‌ದೀಪ್ ಸಿಂಗ್, ಕೊರೆ ಆಂಡರ್ಸನ್, ಉಮೇಶ್ ಯಾದವ್, ಟಿಮ್ ಸೌಥೀ, ಮೊಹಮದ್ ಸಿರಾಜ್, ಯಜುವೇಂದ್ರ ಚಾಹಲ್ ಹಾಗೂ ವಾಷಿಂಗ್ಟನ್ ಸುಂದರ್.

ಸನ್‌ರೈಸರ್ಸ್ ಹೈದರಾಬಾದ್: ಅಲೆಕ್ಸ್ ಹೇಲ್ಸ್, ಶಿಖರ್ ಧವನ್, ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಶಕೀಬ್ ಅಲ್ ಹಸನ್, ವೃದ್ಧಿಮಾನ್ ಸಾಹ (ವಿಕೆಟ್‌ಕೀಪರ್), ಭುವನೇಶ್ವರ್ ಕುಮಾರ್, ದೀಪಕ್ ಹೂಡಾ, ಸಿದ್ಧಾರ್ಥ್ ಕೌಲ್, ಸಂದೀಪ್ ಶರ್ಮಾ ಮತ್ತು ರಶೀದ್ ಖಾನ್.

ಪಂದ್ಯ ಆರಂಭ: ರಾತ್ರಿ ೮.೦೦ | ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More