ಏ‍ಷ್ಯಾ ಚಾಂಪಿಯನ್ಸ್ ಹಾಕಿ | ಚೀನಾ ಹಣಿದ ವಂದನಾ ಕಟಾರಿಯಾ ಡಬಲ್ ಗೋಲು

ಶ್ರೇಯಾಂಕದಲ್ಲಿ ತನಗಿಂತ ಮೇಲಿರುವ ಚೀನಾ ತಂಡವನ್ನು ಮಣಿಸಿದ ಭಾರತ ವನಿತಾ ತಂಡ ಏಷ್ಯಾ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ವಂದನಾ ಕಟಾರಿಯಾ (೪ ಮತ್ತು ೧೧ನೇ ನಿ.) ದಾಖಲಿಸಿದ ಎರಡು ಗೋಲುಗಳು ಭಾರತದ ಗೆಲುವಿನಲ್ಲಿ ನಿರ್ಣಾಯಕವೆನಿಸಿದವು 

ದಕ್ಷಿಣ ಕೊರಿಯಾದ ಡಾಂಘೆ ಸಿಟಿಯಲ್ಲಿ ನಡೆಯುತ್ತಿರುವ ಏಷ್ಯಾ ಚಾಂಪಿಯನ್ಸ್ ಟ್ರೋಫಿ ವನಿತಾ ಹಾಕಿ ಪಂದ್ಯಾವಳಿಯಲ್ಲಿ ಭಾರತ ವನಿತಾ ತಂಡದ ಮನಮೋಹಕ ಪ್ರದರ್ಶನ ಮುಂದುವರೆದಿದೆ. ಭಾನುವಾರ (ಮೇ ೧೩) ನಡೆದಿದ್ದ ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ ೪-೧ ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಭಾರತ ವನಿತಾ ತಂಡ, ಬುಧವಾರ (ಮೇ ೧೬) ನಡೆದ ತನ್ನ ಎರಡನೇ ಪಂದ್ಯದಲ್ಲಿಯೂ ಪರಿಣಾಮಕಾರಿ ಆಟವಾಡಿ ಬಲಿಷ್ಠ ಚೀನಾ ತಂಡವನ್ನು ೩-೧ ಗೋಲುಗಳಿಂದ ಹಣಿಯಿತು.

ವಿಜೇತ ತಂಡದ ಪರ ವಂದನಾ ಕಟಾರಿಯಾ ಎರಡು ಮಹತ್ವದ ಗೋಲುಗಳನ್ನು ದಾಖಲಿಸಿದರೆ, ಗುರ್ಜೀತ್ ಕೌರ್ ಪೆನಾಲ್ಟಿ ಕಾರ್ನರ್ ಅವಕಾಶದಡಿ ಭಾರತಕ್ಕೆ ಮೂರನೇ ಗೋಲು ತಂದುಕೊಟ್ಟರು. ಇತ್ತ, ಸೋತ ಚೀನಾ ತಂಡದ ಪರ ಪಂದ್ಯದ ಹದಿನೈದನೇ ನಿಮಿಷದಲ್ಲಿ ಗೆನ್ ಡ್ಯಾನ್ ಗೋಲು ಬಾರಿಸಿದರು. ಅಂದಹಾಗೆ, ೧೦ನೇ ಶ್ರೇಯಾಂಕಿತ ಭಾರತ ಮಹಿಳಾ ತಂಡ, ಎಂಟನೇ ಶ್ರೇಯಾಂಕಿತ ಚೀನಾ ವನಿತಾ ತಂಡವನ್ನು ಮಣಿಸಿ ಪಂದ್ಯಾವಳಿಯಲ್ಲಿ ತನ್ನ ಬಲಾಢ್ಯತೆಯನ್ನು ನಿರೂಪಿಸಿತು. ಇದೀಗ ಗುರುವಾರ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಮಲೇಷಿಯಾವನ್ನು ಭಾರತ ವನಿತಾ ತಂಡ ಎದುರಿಸಲಿದೆ.

ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ೨೧ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಆಕರ್ಷಕ ಪ್ರದರ್ಶನ ನೀಡಿದ್ದ ಭಾರತ ವನಿತಾ ತಂಡ, ಅದೇ ಲಯವನ್ನು ಕಾಯ್ದುಕೊಂಡಿರುವುದು ಈ ಪಂದ್ಯಾವಳಿ ಸ್ಫುಟಪಡಿಸಿದೆ. ಏತನ್ಮಧ್ಯೆ, ಇದೇ ಕಾಮನ್ವೆಲ್ತ್ ಕೂಟದಲ್ಲಿ ಪುರುಷರ ತಂಡ ವೈಫಲ್ಯ ಅನುಭವಿಸಿದ್ದರಿಂದ ಹಾಕಿ ಇಂಡಿಯಾ ಎರಡೂ ವಿಭಾಗದ ತರಬೇತುದಾರರನ್ನು ಅದಲುಬದಲು ಮಾಡಿತ್ತು. ಅದರಂತೆ, ಹರೇಂದ್ರ ಸಿಂಗ್ ಪುರುಷರ ತಂಡದ ತರಬೇತುದಾರ ಸ್ಥಾನಕ್ಕೆ ಬಂದರೆ, ಹಾಲೆಂಡ್‌ ಮೂಲದ ಸೊಯೆರ್ಡ್ ಮರಿನೇ ಈ ಹಿಂದಿನಂತೆ ಮಹಿಳಾ ತಂಡದ ಕೋಚ್ ಸ್ಥಾನಕ್ಕೆ ಹಿಂದಿರುಗಿದ್ದರು.

ಇದನ್ನೂ ಓದಿ : ರಾಷ್ಟ್ರೀಯ ಹಾಕಿ ತಂಡದ ತರಬೇತುದಾರರ ಸ್ಥಾನ ಅದಲು-ಬದಲು!

ಅಂದಹಾಗೆ, ಭಾರತ ಮತ್ತು ಚೀನಾ ವನಿತಾ ತಂಡದ ಪಂದ್ಯದಲ್ಲಿ ಭಾರತ ಆರಂಭದಲ್ಲೇ ಮುನ್ನಡೆ ಪಡೆಯಿತು. ಪಂದ್ಯ ಶುರುವಾದ ನಾಲ್ಕನೇ ನಿಮಿಷದಲ್ಲಿ ವಂದನಾ ಕಟಾರಿಯಾ ಗೋಲು ಹೊಡೆದು ೧-೦ ಮುನ್ನಡೆ ತಂದುಕೊಟ್ಟದ್ದಲ್ಲದೆ, ಇನ್ನಾರು ನಿಮಿಷಗಳ ಅಂತರದಲ್ಲಿ ಮತ್ತೊಂದು ಗೋಲು ದೊರಕಿಸಿಕೊಟ್ಟರು. ೨-೦ ಮುನ್ನಡೆ ಪಡೆದ ಭಾರತದ ಎದುರು ಪ್ರಬಲ ಪೈಪೋಟಿ ನಡೆಸಿದ ಚೀನಾ ಪರ ವೆನ್ ಡ್ಯಾನ್ ಗೋಲು ಬಾರಿಸಿ ಅಂತರವನ್ನು ತಗ್ಗಿಸಿದರು. ಮೊದಲ ಕ್ವಾರ್ಟರ್‌ನಲ್ಲೇ ದಾಖಲಾದ ಈ ನಾಲ್ಕು ಗೋಲುಗಳ ನಂತರ ತದನಂತರದ ಮೂರೂ ಕ್ವಾರ್ಟರ್‌ನಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More