ಕುಲದೀಪ್ ಯಾದವ್ ಸ್ಪಿನ್ ಸುಳಿಗೆ ಸಿಕ್ಕ ರಾಯಲ್ಸ್‌ ಮಣಿಸಿದ ಕೆಕೆಆರ್

ಮಣಿಕಟ್ಟಿನ ಮಾಂತ್ರಿಕ ಚೈನಾ ಮನ್ ಕುಲದೀಪ್ ಯಾದವ್ (೨೦ಕ್ಕೆ ೪) ಚಮತ್ಕಾರಿ ಬೌಲಿಂಗ್ ದಾಳಿಗೆ ಸಿಲುಕಿದ ರಾಜಸ್ಥಾನ ರಾಯಲ್ಸ್ ನಿರ್ಣಾಯಕ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಎದುರು ೬ ವಿಕೆಟ್ ಸೋಲು ಕಂಡಿತು. ಇತ್ತ, ಕೆಕೆಆರ್ ಪ್ಲೇಆಫ್ ಸ್ಥಾನದ ತನ್ನ ಹೋರಾಟವನ್ನು ಜೀವಂತವಾಗಿಟ್ಟಿತು 

ಜೋಸ್ ಬಟ್ಲರ್ ಏಕಾಂಗಿ ಹೋರಾಟದಲ್ಲಿ ಕಳೆದ ಕೆಲವು ಮಹತ್ವಪೂರ್ಣ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪ್ಲೇಆಫ್ ಸ್ಥಾನಕ್ಕಾಗಿ ದಿಟ್ಟ ಪೈಪೋಟಿ ನಡೆಸುತ್ತಿದ್ದ ರಾಜಸ್ಥಾನ ರಾಯಲ್ಸ್, ಮತ್ತೊಂದು ನಿರ್ಣಾಯಕ ಹಾಗೂ ಮಹತ್ವಪೂರ್ಣ ಪಂದ್ಯದಲ್ಲಿ ವೈಫಲ್ಯ ಅನುಭವಿಸಿತು. ಮಂಗಳವಾರ (ಮೇ ೧೫) ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಈ ಋತುವಿನ ೪೯ನೇ ಐಪಿಎಲ್ ಪಂದ್ಯದಲ್ಲಿ ಗೆಲ್ಲಲು ರಾಯಲ್ಸ್ ನೀಡಿದ್ದ ೧೪೩ ರನ್ ಗುರಿಯನ್ನು ಇನ್ನೂ ೨೧ ಎಸೆತಗಳು ಬಾಕಿ ಇರುವಂತೆಯೇ ಮುಟ್ಟಿದ ಕೋಲ್ಕತಾ ನೈಟ್ ರೈಡರ್ಸ್ ಜಯದ ನಗೆಬೀರಿತು.

ಕನ್ನಡಿಗ ಕೆ ಕೃಷ್ಣಪ್ಪ ನಿರ್ವಹಿಸಿದ ಮೊದಲ ಓವರ್‌ನಲ್ಲೇ ವಿಂಡೀಸ್ ಆಲ್ರೌಂಡರ್ ಸುನೀಲ್ ನರೇನ್ ೨ ಬೌಂಡರಿ, ೨ ಸಿಕ್ಸರ್ ಸೇರಿದ ೨೧ ರನ್ ಚಚ್ಚಿ, ತಂಡದ ಗೆಲುವನ್ನು ಆದಷ್ಟು ಶೀಘ್ರಗತಿಯಲ್ಲಿ ಮುಗಿಸಲು ಯತ್ನಿಸಿದರು. ಆದರೆ, ಮರು ಓವರ್‌ನಲ್ಲಿ ದಾಳಿಗಿಳಿದ ಬೆನ್ ಸ್ಟೋಕ್ಸ್ (೧೫ಕ್ಕೆ ೩), ನರೇನ್ ಅಬ್ಬರಕ್ಕೆ ತೆರೆಎಳೆದರಲ್ಲದೆ, ಬಳಿಕ ಬಂದ ರಾಬಿನ್ ಉತ್ತಪ್ಪ (೪) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದಂತೆ ಮಾಡಿದರು. ಕೆಕೆಆರ್ ರನ್‌ಗತಿಗೆ ಕಡಿವಾಣ ಹಾಕಲು ಬೆನ್ ಸ್ಟೋಕ್ಸ್ ಪ್ರಯತ್ನಿಸಿದ್ದು, ಒಂದು ಹಂತದಲ್ಲಿ ಫಲ ಕೊಟ್ಟಂತೆ ಕಾಣಿತು. ೬೯ ರನ್‌ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡ ಕೆಕೆಆರ್ ಕೊನೆಯ ೭೦ ಎಸೆತಗಳಲ್ಲಿ ೭೪ ರನ್ ಗಳಿಸಬೇಕಾದ ಒತ್ತಡಕ್ಕೂ ಸಿಲುಕಿತು.

ಆದರೆ, ಆರಂಭಿಕ ಕ್ರಿಸ್ ಲಿನ್ ಕ್ರೀಸ್‌ಗೆ ಕಚ್ಚಿನಿಂತರಲ್ಲದೆ ನಾಯಕ ದಿನೇಶ್ ಕಾರ್ತಿಕ್ ತಂಡ ಮತ್ತೆ ಎಡವದಂತೆ ನೋಡಿಕೊಂಡರು. ೪೨ ಎಸೆತಗಳಲ್ಲಿ ಕ್ರಿಸ್ ಲಿನ್ ೪೫ ರನ್ ಗಳಿಸಿ ಅಜೇಯರಾದರೆ, ದಿನೇಶ್ ಕಾರ್ತಿಕ್ ೩೧ ಎಸೆತಗಳಲ್ಲಿ ೪೧ ರನ್‌ಗಳೊಂದಿಗೆ ಅಜೇಯರಾಗುಳಿದರು.

ಇದನ್ನೂ ಓದಿ : ಆರ್‌ಸಿಬಿ ಆಲ್ರೌಂಡ್ ಆಟಕ್ಕೆ ಬೆದರಿದ ಪಂಜಾಬ್‌ಗೆ ೧೦ ವಿಕೆಟ್ ಸೋಲು

ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್, ಕುಲದೀಪ್ ಯಾದವ್ ಸ್ಪಿನ್ ಸುಳಿಗೆ ಸಿಲುಕಿ ಕೇವಲ ೧೪೨ ರನ್‌ಗಳಿಗೆ ಆಲೌಟ್ ಆಯಿತು. ವಾಸ್ತವವಾಗಿ ರಾಯಲ್ಸ್ ಆರಂಭ ಅತ್ಯಾಕರ್ಷವಾಗಿಯೇ ಇತ್ತು. ಮೊದಲ ನಾಲ್ಕು ಓವರ್‌ಗಳಲ್ಲೇ ವಿಕೆಟ್ ನಷ್ಟವಿಲ್ಲದೆ ೫೯ ರನ್ ಗಳಿಸಿದ್ದ ರಾಯಲ್ಸ್, ಬೃಹತ್ ಮೊತ್ತ ಪೇರಿಸಬಹುದಾದ ಅವಕಾಶವನ್ನೂ ಸೃಷ್ಟಿಸಿಕೊಂಡಿತ್ತು. ಆರಂಭಿಕರಾದ ರಾಹುಲ್ ತ್ರಿಪಾಠಿ (೨೭: ೧೫ ಎಸೆತ, ೪ ಬೌಂಡರಿ, ೧ ಸಿಕ್ಸರ್) ಹಾಗೂ ಜೋಸ್ ಬಟ್ಲರ್ (೩೯: ೨೨ ಎಸೆತ, ೫ ಬೌಂಡರಿ, ೨ ಸಿಕ್ಸರ್) ತಂಡದ ಇನ್ನಿಂಗ್ಸ್‌ಗೆ ಸ್ಫೋಟಕ ಸ್ಪರ್ಶ ನೀಡಿದರು. ಮೊದಲ ೨೦ ಎಸೆತಗಳಲ್ಲಿ ಈ ಇಬ್ಬರೂ ಜತೆಗೂಡಿ ೫೦ ರನ್ ಕಲೆಹಾಕಿದರು. ಈ ಐವತ್ತು ರನ್‌ಗಳು ಐದು ಬೌಂಡರಿ ಹಾಗೂ ಆರು ಸಿಕ್ಸರ್‌ಗಳಿಂದ ಕೂಡಿತ್ತು.

ಆದರೆ, ಆನಂತರದಲ್ಲಿ ಈ ಇಬ್ಬರೂ ನಿರ್ಗಮಿಸಿದ ಬಳಿಕ ನಾಟಕೀಯ ಕುಸಿತ ಕಂಡ ರಾಯಲ್ಸ್, ಮಧ್ಯಮ ಓವರ್‌ಗಳಲ್ಲಿ ಕೇವಲ ೩೧ ರನ್‌ಗಳಿಗೆ ೬ ವಿಕೆಟ್ ಬಲಿಗೊಟ್ಟು ಅಲ್ಪ ಮೊತ್ತಕ್ಕೆ ಕುಸಿಯುವಂತಾಯಿತು. ಐದನೇ ಓವರ್‌ನ ಐದನೇ ಎಸೆತದಲ್ಲಿ ಆಂಡ್ರೆ ರಸೆಲ್ (೧೩ಕ್ಕೆ ೨) ರಾಹುಲ್ ತ್ರಿಪಾಠಿಯನ್ನು ಕ್ರೀಸ್ ತೊರೆವಂತೆ ಮಾಡಿದರೆ, ೧೦ನೇ ಓವರ್‌ನ ಎರಡನೇ ಎಸೆತದಲ್ಲಿ ಬಟ್ಲರ್ ವಿಕೆಟ್ ಕಳೆದುಕೊಂಡರು. ಇದು ರಾಯಲ್ಸ್ ಇನ್ನಿಂಗ್ಸ್‌ಗೆ ಬಲವಾದ ಪೆಟ್ಟು ನೀಡಿತು.

ಎಲ್ಲಕ್ಕಿಂತ ಮಿಗಿಲಾಗಿ, ಮಧ್ಯಮ ಕ್ರಮಾಂಕಿತ ಆಟಗಾರರಂತೂ ಅತ್ಯಂತ ನಿಷ್ಕ್ರಿಯ ಆಟವಾಡಿ ತಂಡದ ಮೊತ್ತ ತಳಕಚ್ಚುವಂತೆ ಮಾಡಿದರು. ಎಂಟನೇ ಕ್ರಮಾಂಕದಲ್ಲಿ ಆಡಿದ ವೇಗಿ ಜೈದೇವ್ ಉನದ್ಕಟ್ ೧೮ ಎಸೆತಗಳಲ್ಲಿ ೩ ಬೌಂಡರಿ, ೧ ಸಿಕ್ಸರ್ ಸೇರಿದ ೨೬ ರನ್‌ಗಳನ್ನು ಗಳಿಸಿ ತಂಡದ ಇನ್ನಿಂಗ್ಸ್‌ಗೆ ಕೊಂಚ ಶಕ್ತಿ ತುಂಬಿದರು. ೧೯ನೇ ಓವರ್‌ನ ಕೊನೇ ಎಸೆತದಲ್ಲಿ ಕನ್ನಡಿಗ ಪ್ರಸಿದ್ಧ ಕೃಷ್ಣ ಅವರನ್ನು ಬೌಲ್ಡ್ ಮಾಡುತ್ತಿದ್ದಂತೆ ರಾಯಲ್ಸ್ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಆಲೌಟ್ ಆಯಿತು. ಅಂದಹಾಗೆ, ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ ಓವರ್‌ಗಳಲ್ಲಿ ೪೩ ರನ್ ನೀಡಿದ್ದ ಕುಲದೀಪ್ ಯಾದವ್, ಈ ಬಾರಿ ಋತುವಿನ ಶ್ರೇಷ್ಠ ಸ್ಪೆಲ್‌ನೊಂದಿಗೆ ಗಮನ ಸೆಳೆದರು.

ಗಾಯದ ಸೆಳವಿನಿಂದಾಗಿ ಪಿಯುಷ್ ಚಾವ್ಲಾ ಅಲಭ್ಯತೆಯಲ್ಲಿ ಜವಾಬ್ದಾರಿಯುತ ಪ್ರದರ್ಶನ ನೀಡಿದ ಕುಲದೀಪ್ ಯಾದವ್, ಅಪಾಯಕಾರಿ ಆಟಗಾರ ಜೋಸ್ ಬಟ್ಲರ್ ಸೇರಿದಂತೆ, ನಾಯಕ ಅಜಿಂಕ್ಯ ರಹಾನೆ (೧೧), ಬೆನ್ ಸ್ಟೋಕ್ಸ್ (೧೧) ಹಾಗೂ ಸ್ಟುವರ್ಟ್ ಬಿನ್ನಿ (೧) ವಿಕೆಟ್ ಎಗರಿಸಿ ಮಿಂಚಿದರು.

ಸಂಕ್ಷಿಪ್ತ ಸ್ಕೋರ್

ರಾಜಸ್ಥಾನ ರಾಯಲ್ಸ್: ೧೯ ಓವರ್‌ಗಳಲ್ಲಿ ೧೪೨/೧೦ (ಜೋಸ್ ಬಟ್ಲರ್ ೩೯; ಕುಲದೀಪ್ ಯಾದವ್ ೨೦ಕ್ಕೆ ೪); ಕೋಲ್ಕತಾ ನೈಟ್ ರೈಡರ್ಸ್: ೧೮ ಓವರ್‌ಗಳಲ್ಲಿ ೧೪೫/೪ (ಕ್ರಿಸ್ ಲಿನ್ ೪೫* ದಿನೇಶ್ ಕಾರ್ತಿಕ್ ೪೧*; ಬೆನ್ ಸ್ಟೋಕ್ಸ್ ೧೫ಕ್ಕೆ ೩); ಫಲಿತಾಂಶ: ಕೆಕೆಆರ್‌ಗೆ ೬ ವಿಕೆಟ್ ಗೆಲುವು; ಪಂದ್ಯಶ್ರೇಷ್ಠ: ಕುಲದೀಪ್ ಯಾದವ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More