ಇಟಾಲಿಯನ್ ಓಪನ್‌ನಲ್ಲಿ ಶುಭಾರಂಭ ಮಾಡಿದ ಶರಪೋವಾ, ಕೆರ್ಬರ್

ವಿಶ್ವದ ಮಾಜಿ ನಂ ೧ ಆಟಗಾರ್ತಿಯರಾದ ಮರಿಯಾ ಶರಪೋವಾ ಮತ್ತು ಏಂಜಲಿಕ್ ಕೆರ್ಬರ್ ಇಟಾಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದ್ದಾರೆ. ನಾಲ್ಕನೇ ಇಟಾಲಿಯನ್ ಓಪನ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಶರಪೋವಾ ಮೊದಲ ಸುತ್ತಲ್ಲಿ ಪ್ರಯಾಸದ ಜಯ ಕಂಡರು

ಈಗಾಗಲೇ ಮೂರು ಬಾರಿ ರೋಮ್‌ನಲ್ಲಿ ಚಾಂಪಿಯನ್ ಆಗಿರುವ ರಷ್ಯನ್ ಆಟಗಾರ್ತಿ ಮರಿಯಾ ಶರಪೋವಾ, ಇಟಾಲಿಯನ್ ಓಪನ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಮಂಗಳವಾರ (ಮೇ ೧೫) ತಡರಾತ್ರಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರ್ತಿ ಆಶ್ಲೆ ಬಾರ್ಟಿ ವಿರುದ್ಧದ ಮೂರು ಸೆಟ್‌ಗಳ ರೋಚಕ ಕಾದಾಟದಲ್ಲಿ ಶರಪೋವಾ, ೭-೫, ೩-೬, ೬-೨ ಸೆಟ್‌ಗಳಿಂದ ಗೆಲುವು ಸಾಧಿಸಿ ದ್ವಿತೀಯ ಸುತ್ತಿಗೆ ಧಾವಿಸಿದರು.

ಕಳೆದ ವಾರ ಮ್ಯಾಡ್ರಿಡ್ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದ ಶರಪೋವಾ, ನಿಷೇಧಿತ ಉದ್ದೀಪನಾ ಮದ್ದು ಸೇವನೆ ಬಳಿಕ ಮೊಟ್ಟಮೊದಲ ಬಾರಿಗೆ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶಿಸಿದ ಸಾಧನೆ ಮಾಡಿದ್ದರು. ಆದರೆ, ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದ್ದ ಶರಪೋವಾ, ಇದೀಗ ರೋಮ್‌ನಲ್ಲಿ ಪ್ರಶಸ್ತಿ ಅರಸುತ್ತಿದ್ದಾರೆ. ಅಂದಹಾಗೆ, ೨೦೧೧, ೨೦೧೨ ಹಾಗೂ ೨೦೧೫ರಲ್ಲಿ ಶರಪೋವಾ ಇಟಾಲಿಯನ್ ಓಪನ್ ಚಾಂಪಿಯನ್ ಆಗಿದ್ದರು. ಎರಡನೇ ಸುತ್ತಿನಲ್ಲಿ ಅವರು ಸ್ಲೊವೇಕಿಯಾದ ಡೊಮಿನಿಕಾ ಸಿಬುಲ್ಕೋವಾ ವಿರುದ್ಧ ಶರಪೋವಾ ಕಾದಾಡಲಿದ್ದಾರೆ.

ಇತ್ತ, ಮಹಿಳೆಯರ ಸಿಂಗಲ್ಸ್ ವಿಭಾಗದ ಮತ್ತೊಂದು ಪ್ರಾಥಮಿಕ ಸುತ್ತಿನ ಪಂದ್ಯದಲ್ಲಿ ೧೧ನೇ ಶ್ರೇಯಾಂಕಿತೆ, ಜರ್ಮನಿಯ ಕೆರ್ಬರ್ ಕಜಕ್‌ಸ್ತಾನದ ಅರ್ಹತಾ ಆಟಗಾರ್ತಿ ಜರಿನಾ ಡಿಯಾಸ್ ವಿರುದ್ಧ ೬-೨, ೭-೬ (೮-೬) ಸೆಟ್‌ಗಳಿಂದ ಗೆಲುವು ಸಾಧಿಸಿ ದ್ವಿತೀಯ ಸುತ್ತಿಗೆ ನಡೆದರು. ಶರಪೋವಾ ಹೇಗೆ ಪ್ರಯಾಸದ ಗೆಲುವು ಕಂಡರೋ, ಅದೇ ರೀತಿ ಕೆರ್ಬರ್ ಕೂಡ ಗೆಲುವು ಸಾಧಿಸಲು ಸಾಕಷ್ಟು ಬೆವರು ಹರಿಸಬೇಕಾಯಿತು.

ಇದನ್ನೂ ಓದಿ : ಮ್ಯಾಡ್ರಿಡ್‌ ಓಪನ್ | ಹ್ಯಾಟ್ರಿಕ್ ಮೋಡಿ ಮಾಡಿದ ಪೆಟ್ರಾ ಕ್ವಿಟೋವಾ

ಏತನ್ಮಧ್ಯೆ, ಮಹಿಳೆಯರ ವಿಭಾಗದ ಮಿಕ್ಕ ಪಂದ್ಯಗಳಲ್ಲಿ ೧೪ನೇ ಶ್ರೇಯಾಂಕಿತೆ ಡರಿಯಾ ಕಸಾಕಿನಾ ಆಸ್ಟ್ರೇಲಿಯಾದ ಅಜಾ ಟಾಮ್ಲಿಜಾನೊವಿಕ್ ವಿರುದ್ಧ ೬-೦, ೬-೪ ಎರಡು ನೇರ ಸೆಟ್‌ಗಳಲ್ಲಿ ಗೆಲುವು ಪಡೆದರೆ, ಇಟಲಿಯ ಸಾರಾ ಎರ್ರಾನಿ ವಿರುದ್ಧ ಕಠಿಣ ಹೋರಾಟ ನಡೆಸಿದ ಟಿಮಿಯಾ ಬಾಬೊಸ್ ೬-೩, ೭-೬ (೮-೬) ಸೆಟ್‌ಗಳಿಂದ ಗೆಲುವು ಸಾಧಿಸಿ ದ್ವಿತೀಯ ಸುತ್ತಿಗೆ ಧಾವಿಸಿದರು.

ಅಂತೆಯೇ ಮತ್ತೊಂದು ಮೊದಲ ಸುತ್ತಿನ ಪಂದ್ಯದಲ್ಲಿ ಗ್ರೀಕ್‌ನ ಯುವ ಟೆನಿಸ್ ತಾರೆ ಮರಿಯಾ ಸಕ್ಕಾರಿ ಹಾಲೆಂಡ್‌ ಆಟಗಾರ್ತಿ ಕಿಕಿ ಬೆರ್ಟೆನ್ಸ್ ವಿರುದ್ಧ ೬-೨, ೪-೬, ೬-೩ ಸೆಟ್‌ಗಳಿಂದ ಜಯಿಸಿದರು. ಮ್ಯಾಡ್ರಿಡ್ ಓಪನ್‌ನಲ್ಲಿ ರನ್ನರ್ ಆಗಿದ್ದ ಬೆರ್ಟೆನ್ಸ್, ದಿಟ್ಟ ಪೈಪೋಟಿ ಒಡ್ಡಿದರಾದರೂ, ನಿರ್ಣಾಯಕವಾಗಿದ್ದ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More