ಮುಂಬೈ ಇಂಡಿಯನ್ಸ್‌ಗೆ ರೋಚಕ ಗೆಲುವು ತಂದುಕೊಟ್ಟ ಬುಮ್ರಾ ದಾಳಿ

ತಂಡವನ್ನು ಜಯದ ಹಾದಿಗೆ ತಂದುನಿಲ್ಲಿಸಿದ್ದು ಹೀಗೆ ವ್ಯರ್ಥವಾಗುತ್ತದೆ ಎಂದು ಅಂದುಕೊಂಡಿರಲಿಲ್ಲ ಕೆ ಎಲ್ ರಾಹುಲ್. ಮುಂಬೈ ಗೆಲುವು ಸಾಧಿಸುತ್ತಿದ್ದಂತೆ ಡಗ್‌ಔಟ್‌ನಲ್ಲಿ ಕುಳಿತಿದ್ದ ಅವರು, ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ಹತಾಶೆ ವ್ಯಕ್ತಪಡಿಸಿದ್ದು ಕಿಂಗ್ಸ್‌ನ ದಯನೀಯ ಸ್ಥಿತಿಗೆ ಕನ್ನಡಿ ಹಿಡಿಯಿತು

ಕನ್ನಡಿಗ ಕೆ ಎಲ್ ರಾಹುಲ್ (94: 60 ಎಸೆತ, ೧೦ ಬೌಂಡರಿ, ೩ ಸಿಕ್ಸರ್) ಮತ್ತು ಏರಾನ್ ಫಿಂಚ್ (೪೬: ೩೫ ಎಸೆತ, ೩ ಬೌಂಡರಿ, ೧ ಸಿಕ್ಸರ್) ಅತ್ಯಂತ ಆಸ್ಥೆ ಹಾಗೂ ಜವಾಬ್ದಾರಿಯುತವಾಗಿ ಕಟ್ಟಿದ್ದ ಇನ್ನಿಂಗ್ಸ್ ಅಲ್ಲದೆ, ವೇಗಿ ಆಂಡ್ರ್ಯೂ ಟೈ (೧೬ಕ್ಕೆ ೪) ನಡೆಸಿದ ಪ್ರಭಾವಿ ದಾಳಿಯೂ ಜಸ್ಪ್ರೀತ್ ಬುಮ್ರಾ (೧೫ಕ್ಕೆ ೩) ಎಂಬ ಬಿರುಗಾಳಿಯಲ್ಲಿ ಕೊಚ್ಚಿಹೋಯಿತು!

ಬುಧವಾರ (ಮೇ ೧೬) ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಈ ಋತುವಿನ ೫೦ನೇ ಐಪಿಎಲ್ ಪಂದ್ಯದಲ್ಲಿ ಗೆಲುವು ಸಾಧಿಸಲು ೧೮೭ ರನ್ ಗುರಿ ಪಡೆದಿದ್ದ ಕಿಂಗ್ಸ್ ಇಲೆವೆನ್, ಕೇವಲ ೩ ರನ್‌ಗಳಿಂದ ಸೋತು ತಲ್ಲಣಿಸಿತು. ಎರಡನೇ ವಿಕೆಟ್‌ಗೆ ೧೧೧ ರನ್ ಭರ್ಜರಿ ಜೊತೆಯಾಟವಾಡಿ ಮುಂಬೈಗೆ ಮುಳುವಾಗಿ ಪರಿಣಮಿಸುತ್ತಿದ್ದ ಕೆ ಎಲ್ ರಾಹುಲ್ ಮತ್ತು ಏರಾನ್ ಫಿಂಚ್ ವಿಕೆಟ್‌ಗಳನ್ನು ಎಗರಿಸಿದ ಬುಮ್ರಾ, ಇಡೀ ಪಂದ್ಯಕ್ಕೆ ವಿಚಿತ್ರ ತಿರುವು ತಂದುಕೊಟ್ಟರು. ಪ್ಲೇಆಫ್ ತಲುಪಲು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಹಾಲಿ ಚಾಂಪಿಯನ್ ಮುಂಬೈ, ಪಂದ್ಯದ ಕೊನೆಯ ಎರಡು ಓವರ್‌ಗಳಲ್ಲಿ ಪುಟಿದೆದ್ದು ನಿಂತು ವಿಸ್ಮಯಕಾರಿ ಗೆಲುವು ಕಂಡಿತು.

ಈ ಗೆಲುವಿನಿಂದಾಗಿ ರೋಹಿತ್ ಶರ್ಮಾ ಪಡೆ ೧೩ ಪಂದ್ಯಗಳಲ್ಲಿ ೧೨ ಪಾಯಿಂಟ್ಸ್ ಕಲೆಹಾಕಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿಯಿತು. ಇದರಿಂದಾಗಿ ಅಂಕಪಟ್ಟಿಯಲ್ಲಿರುವ ಮೂರು ತಂಡಗಳ ಪ್ಲೇಆಫ್ ಹೋರಾಟ ಇನ್ನಷ್ಟು ತಿಕ್ಕಾಟಕ್ಕೆ ಸಿಲುಕಿದಂತಾಗಿದೆ. ಆ ಪೈಕಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವೂ ಒಂದೆನ್ನುವುದು ಗಮನಾರ್ಹ.

ರಾಹುಲ್-ಫಿಂಚ್ ಮನೋಜ್ಞ ಆಟ

ಮುಂಬೈ ನೀಡಿದ ಸ್ಪರ್ಧಾತ್ಮಕ ಮೊತ್ತವನ್ನು ಬೇಧಿಸುವ ಹಾದಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಶುರುವಿನಲ್ಲಿ ಎಡವಿತಾದರೂ, ರಾಹುಲ್ ಹಾಗೂ ಫಿಂಚ್ ಜೊತೆಯಾಟದಲ್ಲಿ ದಿಟ್ಟ ಹೆಜ್ಜೆ ಇಟ್ಟಿತು. ಸ್ಫೋಟಕ ಆಟಗಾರ ಕ್ರಿಸ್ ಗೇಲ್ (೧೮: ೧೧ ಎಸೆತ, ೨ ಬೌಂಡರಿ, ೧ ಸಿಕ್ಸರ್) ವೇಗಿ ಮೆಕ್ಲನಘನ್ ಬೌಲಿಂಗ್‌ನಲ್ಲಿ ಬೆನ್ ಕಟಿಂಗ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ನಂತರದಲ್ಲಿ ಜೊತೆಯಾದ ರಾಹುಲ್-ಫಿಂಚ್, ಮುಂಬೈ ಬೌಲರ್‌ಗಳನ್ನು ಇನ್ನಿಲ್ಲದಂತೆ ದಂಡಿಸಿದರು.

ಪ್ರಸಕ್ತ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಕೆಲ ಕಾಲ ಸ್ಥಿರ ಪ್ರದರ್ಶನ ನೀಡಿದ ಫಿಂಚ್, ರಾಹುಲ್‌ಗೆ ಉತ್ತಮ ಬೆಂಬಲ ನೀಡಿದರು. ಈ ಜೋಡಿಯನ್ನು ಬೇರ್ಪಡಿಸಲು ಸಾಧ್ಯವಾಗದೆ ರೋಹಿತ್ ಶರ್ಮಾ ಮಾತ್ರವಲ್ಲ, ಇಡೀ ಮುಂಬೈ ಮೊಗವೇ ಕಪ್ಪಿಟ್ಟುಹೋಗಿತ್ತು. ತಂಡಕ್ಕೆ ಸುನಾಯಾಸ ಗೆಲುವು ತಂದುಕೊಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದ ಈ ಜೋಡಿಯನ್ನು ಬುಮ್ರಾ ತನ್ನ ಎರಡನೇ ಸ್ಪೆಲ್‌ನಲ್ಲಿ ಬೇರ್ಪಡಿಸುತ್ತಿದ್ದಂತೆ ಮುಂಬೈ ಮೊಗದಲ್ಲಿನ ಕರಿನೆರಳು ಮಾಯವಾಗಿ ಜಯದ ನಗು ಲಾಸ್ಯವಾಡತೊಡಗಿತು.

೧೭ನೇ ಓವರ್‌ನ ಮೊದಲ ಎಸೆತದಲ್ಲಿ ಫಿಂಚ್, ಹಾರ್ದಿಕ್ ಪಾಂಡ್ಯಗೆ ಕ್ಯಾಚಿತ್ತು ಕ್ರೀಸ್ ತೊರೆದರೆ, ಅದೇ ಓವರ್‌ನ ಐದನೇ ಎಸೆತದಲ್ಲಿ ಫಿಂಚ್ ನಂತರದಲ್ಲಿ ಆಡಲಿಳಿದ ಮಾರ್ಕುಸ್ ಸ್ಟಾಯ್ನಿಸ್ (೧) ವಿಕೆಟ್ ಎಗರಿಸಿದ ಬುಮ್ರಾ, ಕಿಂಗ್ಸ್ ಪಾಳೆಯದಲ್ಲಿ ಭೀತಿ ತರಿಸಿದರು. ಈ ಇಬ್ಬರೂ ಕ್ರೀಸ್ ತೊರೆದರೂ, ರಾಹುಲ್ ಉಳಿದುಕೊಂಡಿದ್ದರಿಂದ ಮುಂಬೈ ಮನೆಯಲ್ಲಿ ಇನ್ನೂ ದುಗುಡ ಮಡುಗಟ್ಟಿತ್ತು. ಆದರೆ, ೧೯ನೇ ಓವರ್‌ನಲ್ಲಿ ಮತ್ತೆ ದಾಳಿಗಿಳಿದ ಬುಮ್ರಾ, ರಾಹುಲ್ ವಿಕೆಟ್ ಎಗರಿಸುತ್ತಿದ್ದಂತೆ ಮುಂಬೈ ನಿಟ್ಟುಸಿರುಬಿಟ್ಟಿತು. ರಾಹುಲ್ ನಿರ್ಗಮನದ ನಂತರದಲ್ಲಿ ಕ್ರೀಸ್‌ಗಿಳಿದ ಯುವರಾಜ್ ಸಿಂಗ್ ಎದುರಿಸಿದ ಮೂರು ಎಸೆತಗಳಲ್ಲಿ ಕೇವಲ ೧ ರನ್‌ ಗಳಿಸಿ ಕ್ರೀಸ್ ತೊರೆದು ಮತ್ತೊಮ್ಮೆ ಹೊಣೆಗಾರಿಕೆ ಮರೆತು ಕ್ರೀಸ್‌ನತ್ತ ಹೆಜ್ಜೆ ಹಾಕಿದರು.

ಮೆಕ್ಲನಘನ್ ಬೌಲಿಂಗ್‌ನಲ್ಲಿ ಯುವಿ, ಲೆವಿಸ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದರು. ಅಂತಿಮವಾಗಿ ಅಕ್ಷರ್ ಪಟೇಲ್ (೧೦) ಮತ್ತು ಮನೋಜ್ ತಿವಾರಿ ೪ ರನ್ ಗಳಿಸಿ ಅಜೇಯರಾಗುಳಿದರು. ವಾಸ್ತವವಾಗಿ, ಈ ಋತುವಿನಲ್ಲಿ ಜಸ್ಪ್ರೀತ್ ಬುಮ್ರಾ ಅಷ್ಟೇನೂ ಪರಿಣಾಮಕಾರಿ ದಾಳಿಯಿಂದ ಗಮನ ಸೆಳೆದಿರಲಿಲ್ಲ. ಮುಖ್ಯವಾಗಿ, ಡೆತ್ ಓವರ್‌ನಲ್ಲಿ ಅವರು ಎಡವಿದ್ದರು ಕೂಡ. ತಂಡ ಎರಡು ಬಾರಿ ಸೋಲು ಕಾಣಲು ಸ್ವತಃ ಬುಮ್ರಾ ಕಾರಣರಾಗಿದ್ದರು. ಆದರೆ, ಈ ಬಾರಿ ಮಾತ್ರ ಅವರಿಂದ ಆ ಪ್ರಮಾದವಾಗಲಿಲ್ಲ.

ಟೈ ದಾಳಿಗೆ ಬೆಚ್ಚಿದ ಮುಂಬೈ

ಪಂದ್ಯಾವಳಿಯಲ್ಲಿ ತನ್ನ ಅಸ್ತಿತ್ವ ಕಾಪಾಡಿಕೊಳ್ಳಲು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆಲುವು ಸಾಧಿಸಲೇಬೇಕಾದ ಒತ್ತಡದಲ್ಲಿದ್ದ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್‌ಗೆ ಇಳಿಯಿತಾದರೂ, ಅಸ್ಥಿರ ಇನ್ನಿಂಗ್ಸ್‌ನಿಂದ ಕಂಗೆಟ್ಟಿತು. ವೇಗಿ ಆಂಡ್ರ್ಯೂ ಟೈ ಮುಂಬೈಗೆ ಆರಂಭದಲ್ಲೇ ಹೊಡೆತ ನೀಡಿದರು. ಎಂದಿನ ಸ್ಫೋಟಕ ಆಟದ ಸುಳಿವು ನೀಡಿದ ಸೂರ್ಯಕುಮಾರ್ ಯಾದವ್ (೨೭: ೧೫ ಎಸೆತ, ೩ ಬೌಂಡರಿ, ೨ ಸಿಕ್ಸರ್) ಹಾಗೂ ಲೆವಿನ್ ಎವಿಸ್ (೯) ವಿಕೆಟ್ ಎಗರಿಸಿದ ಟೈ, ವಿಕೆಟ್‌ಕೀಪರ್ ಇಶಾನ್ ಕಿಶಾನ್ (೨೦: ೧೨ ಎಸೆತ, ೧ ಬೌಂಡರಿ, ೨ ಸಿಕ್ಸರ್) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದಂತೆ ಮಾಡಿದರು.

ಕೇವಲ ೫೯ ರನ್‌ಗಳಿಗೆ ೩ ವಿಕೆಟ್ ಕಳೆದುಕೊಂಡ ಮುಂಬೈ ಇಂಡಿಯನ್ಸ್ ಮತ್ತೂ ತೊಂದರೆ ಸಿಲುಕಿದ್ದು ನಾಯಕ ರೋಹಿತ್ ಶರ್ಮಾ (೬) ರಜಪೂತ್ ಬೌಲಿಂಗ್‌ನಲ್ಲಿ ಯುವರಾಜ್ ಸಿಂಗ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದಾಗ.

ಪೊಲಾರ್ಡ್-ಕೃನಾಲ್ ಆಸರೆ

ಈ ಹಂತದಲ್ಲಿ ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್‌ಗೆ ಜೀವ ತುಂಬಿದ್ದು ಮಧ್ಯಮ ಕ್ರಮಾಂಕದಲ್ಲಿ ಕೃನಾಲ್ ಪಾಂಡ್ಯ (೩೨: ೨೩ ಎಸೆತ, ೧ ಬೌಂಡರಿ, ೨ ಸಿಕ್ಸರ್) ಹಾಗೂ ಕೀರನ್ ಪೊಲಾರ್ಡ್ (೫೦: ೨೩ ಎಸೆತ, ೫ ಬೌಂಡರಿ, ೩ ಸಿಕ್ಸರ್) ಅದ್ಭುತ ಜೊತೆಯಾಟ. ಈ ಜೋಡಿಯ ಜವಾಬ್ದಾರಿಯುತ ಆಟದಿಂದಾಗಿ ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೮೬ ರನ್ ಜಮೆಯಾಯಿತು. ಈ ಹಿಂದಿನ ೮ ಪಂದ್ಯಗಳಲ್ಲಿ ಕೇವಲ ೮೩ ರನ್ ಗಳಿಸಿದ್ದ ಪೊಲಾರ್ಡ್, ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಫಾರ್ಮ್‌ಗೆ ಮರಳಿದ್ದು ಮುಂಬೈ ಇಂಡಿಯನ್ಸ್‌ಗೆ ವರವಾಯಿತು.

೩೬ ಎಸೆತಗಳಲ್ಲಿ ಕೃನಾಲ್ ಜೊತೆ ೫ನೇ ವಿಕೆಟ್‌ಗೆ ೬೫ ರನ್ ಚಚ್ಚಿದ ಪೊಲಾರ್ಡ್, ಅಶ್ವಿನ್ ನಿರ್ವಹಿಸಿದ ೧೬ನೇ ಓವರ್‌ನಲ್ಲಿ ಮತ್ತೊಂದು ಸಿಕ್ಸರ್‌ ಬಾರಿಸಲು ಹೋಗಿ ಏರಾನ್ ಫಿಂಚ್‌ಗೆ ಕ್ಯಾಚಿತ್ತರು. ಒಂದೊಮ್ಮೆ ಅವರೇನಾದರೂ ಕ್ರೀಸ್‌ನಲ್ಲಿ ಕೊನೆವರೆಗೂ ನಿಂತಿದ್ದರೆ ಮುಂಬೈ ೨೦೦ ರನ್ ಗಡಿ ದಾಟುತ್ತಿದ್ದುದರಲ್ಲಿ ಯಾವುದೇ ಅನುಮಾನವಿರಲಿಲ್ಲ.

ಸಂಕ್ಷಿಪ್ತ ಸ್ಕೋರ್

ಮುಂಬೈ ಇಂಡಿಯನ್ಸ್: ೨೦ ಓವರ್‌ಗಳಲ್ಲಿ ೧೮೬/೮ (ಕೀರನ್ ಪೊಲಾರ್ಡ್ ೫೦, ಕೃನಾಲ್ ಪಾಂಡ್ಯ ೩೨; ಆಂಡ್ರ್ಯೂ ಟೈ ೧೬ಕ್ಕೆ ೪, ಆರ್ ಅಶ್ವಿನ್ ೧೮ಕ್ಕೆ ೨) ಕಿಂಗ್ಸ್ ಇಲೆವೆನ್ ಪಂಜಾಬ್: ೨೦ ಓವರ್‌ಗಳಲ್ಲಿ ೧೮೩/೫ (ಕೆ ಎಲ್ ರಾಹುಲ್ ೯೪, ಏರಾನ್ ಫಿಂಚ್ ೪೬; ಜಸ್ಪ್ರೀತ್ ಬುಮ್ರಾ ೧೫ಕ್ಕೆ ೩, ಮಿಚೆಲ್ ಮೆಕ್ಲನಘನ್ ೩೭ಕ್ಕೆ ೨) ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ ೩ ರನ್ ಗೆಲುವು ಪಂದ್ಯಶ್ರೇಷ್ಠ: ಜಸ್ಪ್ರೀತ್ ಬುಮ್ರಾ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More