ಏಷ್ಯಾ ಹಾಕಿ | ಮಲೇಷ್ಯಾ ಮಣಿಸಿ ಫೈನಲ್ ತಲುಪಿದ ಭಾರತ ವನಿತಾ ತಂಡ

ಗೋಲ್ಡ್ ಕೋಸ್ಟ್‌ ಕಾಮನ್ವೆಲ್ತ್ ಕೂಟದಲ್ಲಿನ ಅದ್ಭುತ ಲಯದಲ್ಲೇ ಇರುವ ಭಾರತ ವನಿತಾ ಹಾಕಿ ತಂಡ, ಮಲೇಷ್ಯಾ ವಿರುದ್ಧದ ೩-೨ ಗೋಲುಗಳ ಜಯದೊಂದಿಗೆ ಏಷ್ಯಾ ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಿದೆ. ವಂದನಾ, ಗುರ್ಜೀತ್ ಕೌರ್ ಮತ್ತು ಲಾಲ್ರೆಮ್ಸಿಯಾಮಿ ಜಯದ ರೂವಾರಿಯಾದರು

ಪಂದ್ಯದ ಮೊದಲಾರ್ಧದಲ್ಲೇ ೧-೦ ಮುನ್ನಡೆ ಕಾಯ್ದುಕೊಂಡ ಭಾರತ ವನಿತಾ ಹಾಕಿ ತಂಡ, ಮಲೇಷಿಯಾ ಒಡ್ಡಿದ ಕಠಿಣ ಪ್ರತಿರೋಧವನ್ನು ಮೆಟ್ಟಿನಿಂತು ೩-೨ ಗೋಲುಗಳ ಗೆಲುವು ಸಾಧಿಸಿದೆ. ಇದರೊಂದಿಗೆ ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯಾ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಪ್ರಶಸ್ತಿ ಸುತ್ತು ತಲುಪಿತು. ಹಾಲಿ ಚಾಂಪಿಯನ್ ಕೂಡ ಆಗಿರುವ ಭಾರತ ಮಹಿಳಾ ತಂಡದ ಸಾಂಘಿಕ ಹೋರಾಟ ಮಲೇಷಿಯಾ ವಿರುದ್ಧದ ಗೆಲುವಿನಲ್ಲಿ ಬಹುಮುಖ್ಯ ಪಾತ್ರ ವಹಿಸಿತು.

ಟೂರ್ನಿಯ ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ ೪-೧ ಗೋಲುಗಳಿಂದ ವಿಜೃಂಭಿಸಿದ್ದ ಭಾರತ ಹಾಕಿ ತಂಡ, ಬುಧವಾರ (ಮೇ ೧೬) ನಡೆದ ಎರಡನೇ ಪಂದ್ಯದಲ್ಲಿ ಚೀನಾ ವಿರುದ್ಧ ೩-೧ ಗೋಲುಗಳಿಂದ ಜಯಿಸಿತ್ತು. ಇದೀಗ ಮಲೇಷಿಯಾ ಎದುರಿನ ಪಂದ್ಯದಲ್ಲಿಯೂ ಗೆಲುವು ಸಾಧಿಸುವುದರೊಂದಿಗೆ ಹ್ಯಾಟ್ರಿಕ್ ಬಾರಿಸಿದ್ದು, ಸದ್ಯದ ಗುರಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವುದೇ ಆಗಿದೆ. ಮೂರು ಪಂದ್ಯಗಳಲ್ಲಿನ ಈ ವೈಭವದ ಗೆಲುವಿನೊಂದಾಗಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಭಾರತ ವನಿತಾ ತಂಡದ ಫೈನಲ್ ಹಾದಿ ಸುಗಮವಾಯಿತು.

ವಿಜೇತ ತಂಡದ ಪರ ಗುರ್ಜೀತ್ ಕೌರ್ (೧೭ನೇ ನಿ.), ವಂದನಾ ಕಟಾರಿಯಾ (೩೩ನೇ ನಿ.) ಮತ್ತು ಲಾಲ್ರೆಮ್‌ಸಿಯಾಮಿ (೪೦ನೇ ನಿ.) ತಲಾ ಒಂದೊಂದು ಗೋಲು ಬಾರಿಸಿದರೆ, ಮಲೇಷಿಯಾ ಪರ ನುರೇನಿ ರಶೀದ್ (೩೬ನೇ ನಿ.) ಮತ್ತು ಹ್ಯಾನಿಸ್ ಒನ್ (೪೮ನೇ ನಿ.) ತಲಾ ಒಂದೊಂದು ಗೋಲು ಹೊಡೆದರು. ಚೀನಾ ವಿರುದ್ಧದ ಪಂದ್ಯದಲ್ಲಿ ವಂದನಾ ಕಟಾರಿಯಾ ಎರಡು ಗೋಲುಗಳನ್ನು ಬಾರಿಸಿದ್ದರೆಂಬುದು ಗಮನಾರ್ಹ.

ಇದನ್ನೂ ಓದಿ : ಏ‍ಷ್ಯಾ ಚಾಂಪಿಯನ್ಸ್ ಹಾಕಿ | ಚೀನಾ ಹಣಿದ ವಂದನಾ ಕಟಾರಿಯಾ ಡಬಲ್ ಗೋಲು

ಇದೇ ಮಲೇಷ್ಯಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ೬-೦ ಗೋಲುಗಳಿಂದ ವಿಜೃಂಭಿಸಿದ್ದ ಭಾರತ ವನಿತಾ ತಂಡ, ಮೊದಲ ಕ್ವಾರ್ಟರ್‌ಫೈನಲ್‌ನಲ್ಲಿ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆದರೆ, ಎರಡನೇ ಕ್ವಾರ್ಟರ್ ಶುರುವಾದ ಎರಡೇ ನಿಮಿಷಗಳ ಅಂತರದಲ್ಲಿ ಪೆನಾಲ್ಟಿ ತಜ್ಞೆ ಗುರ್ಜೀತ್ ಕೌರ್, ಸಹ ಆಟಗಾರ್ತಿ ಲಿಲಿಮಾ ಮಿಂಜ್ ಅವರ ನೆರವಿನಿಂದ ಮಲೇಷಿಯಾ ಗೋಲ್‌ಕೀಪರ್ ಅವರನ್ನು ವಂಚಿಸಿ ಆಕರ್ಷಕ ಸ್ಟ್ರೈಕ್‌ನೊಂದಿಗೆ ಭಾರತಕ್ಕೆ ಮೊದಲ ಗೋಲು ತಂದಿತ್ತರು.

ಇತ್ತ, ಮಲೇಷ್ಯಾದ ಕೆಲವೊಂದು ಗೋಲು ಹವಣಿಕೆಯನ್ನು ಹತ್ತಿಕ್ಕಿದ ಭಾರತಕ್ಕೆ ಮೂರನೇ ಕ್ವಾರ್ಟರ್‌ನಲ್ಲಿ ಮತ್ತೊಂದು ಗೋಲು ಬಂತು. ಈ ಬಾರಿ ಆಕ್ರಮಣಕಾರಿ ಆಟದೊಂದಿಗೆ ವಂದನಾ ಭಾರತದ ಅಂತರವನ್ನು ೨-೦ಗೆ ವಿಸ್ತರಿಸಿದರು. ತರುವಾಯ ರಶೀದ್ ಗೋಲು ಹೊಡೆದು ಅಂತರವನ್ನು ೧-೨ಕ್ಕೆ ತಗ್ಗಿಸಿದರಾದರೂ, ಕೇವಲ ನಾಲ್ಕು ನಿಮಿಷಗಳ ಅಂತರದಲ್ಲೇ ಲಾಲ್ರೆಮ್‌ಸಿಯಾಮಿ ಬಾರಿಸಿದ ಗೋಲು ಭಾರತಕ್ಕೆ ಮತ್ತೆ ಮುನ್ನಡೆ ತಂದುಕೊಟ್ಟಿತು. ಅಂತಿಮವಾಗಿ ಹ್ಯಾನಿಸ್ ಬಾರಿಸಿದ ಗೋಲು ಮಲೇಷ್ಯಾ ಹೋರಾಟಕ್ಕೆ ಸಾಕ್ಷ್ಯ ಒದಗಿಸಿತಾದರೂ, ಅದೇನೂ ಭಾರತದ ಗೆಲುವಿಗೆ ಧಕ್ಕೆ ತರಲಿಲ್ಲ.

ಡಬ್ಲ್ಯೂಟಿಎ ಫೈನಲ್ಸ್ | ಕ್ವಿಟೋವಾ ವಿರುದ್ಧ ಜಯ ಸಾಧಿಸಿದ ವೋಜ್ನಿಯಾಕಿ
ಫೇವರಿಟ್ ಭಾರತಕ್ಕೆ ವಿಶಾಖಪಟ್ಟಣದಲ್ಲೂ ಕೆರಿಬಿಯನ್ನರನ್ನು ಗೆಲ್ಲುವ ಧಾವಂತ
ವಿಶ್ವ ಕುಸ್ತಿಯಲ್ಲಿ ಎರಡು ಪದಕ ಗೆದ್ದ ಬಜರಂಗ್ ಪುನಿಯಾ ಚಾರಿತ್ರಿಕ ಸಾಧನೆ
Editor’s Pick More