ಇಟಾಲಿಯನ್ ಓಪನ್ | ಎಂಟರ ಘಟ್ಟಕ್ಕೆ ದಾಪುಗಾಲಿಟ್ಟ ಕೆರ್ಬರ್, ಸ್ವಿಟೊಲಿನಾ

ವಿಶ್ವದ ಮಾಜಿ ನಂ.೧ ಆಟಗಾರ್ತಿ ಜರ್ಮನಿಯ ಏಂಜಲಿಕ್ ಕೆರ್ಬರ್ ರೋಮ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಏತನ್ಮಧ್ಯೆ, ಮ್ಯಾಡಿಸನ್ ಕೀಸ್ ಪ್ರೀಕ್ವಾರ್ಟರ್‌ಫೈನಲ್ ಪಂದ್ಯದಿಂದ ಹಿಮ್ಮೆಟ್ಟಿದ್ದರಿಂದ ಸಿಮೋನಾ ಹ್ಯಾಲೆಪ್ ನಂ.೧ ಪಟ್ಟ ಉಳಿಸಿಕೊಳ್ಳುವಲ್ಲಿ ಸಫಲರಾದರು

ಆಕರ್ಷಕ ಪ್ರದರ್ಶನ ಮುಂದುವರಿಸಿರುವ ಜರ್ಮನ್ ಆಟಗಾರ್ತಿ ಏಂಜಲಿಕ್ ಕೆರ್ಬರ್, ಇಟಾಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ಕಾಲಿಟ್ಟಿದ್ದಾರೆ. ಗುರುವಾರ (ಮೇ ೧೭) ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್ ಸೆಣಸಾಟದಲ್ಲಿ ಕೆರ್ಬರ್, ಗ್ರೀಸ್ ದೇಶದ ಮರಿಯಾ ಸಕಾರಿ ವಿರುದ್ಧ ಅಬ್ಬರದ ಆಟವಾಡಿದ ಕೆರ್ಬರ್ ೬-೧, ೬-೧ ಎರಡು ನೇರ ಹಾಗೂ ಸುಲಭ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

ಕೆರ್ಬರ್ ಆಕ್ರಮಣಕಾರಿ ಆಟದ ಮುಂದೆ ನಿಲ್ಲಲಾಗದ ಮರಿಯಾ, ಅತ್ಯಂತ ದಯನೀಯ ಸೋಲುಂಡರು. ಹನ್ನೊಂದನೇ ಶ್ರೇಯಾಂಕಿತ ಆಟಗಾರ್ತಿ ಕೆರ್ಬರ್, ಎರಡೂ ಸೆಟ್‌ಗಳಲ್ಲಿ ಪ್ರಭುತ್ವ ಮೆರೆದರು. ಒಂದು ವಿಧದಲ್ಲಿ ಏಕಪಕ್ಷೀಯವಾಗಿದ್ದ ಈ ಪಂದ್ಯದಲ್ಲಿ ಮರಿಯಾ, ಕೇವಲ ಒಂದೊಂದು ಗೇಮ್‌ಗಳನ್ನಷ್ಟೇ ಗೆಲ್ಲುವಲ್ಲಿ ಶಕ್ತರಾದರು. ಶುಕ್ರವಾರ (ಮೇ ೧೮) ನಡೆಯಲಿರುವ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಕೆರ್ಬರ್, ಉಕ್ರೇನ್ ಆಟಗಾರ್ತಿ ಎಲಿನಾ ಸ್ವಿಟೊಲಿನಾ ವಿರುದ್ಧ ಸೆಣಸಲಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಇನ್ನೊಂದು ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಸ್ವಿಟೊಲಿನಾ, ರಷ್ಯಾದ ಯುವ ಆಟಗಾರ್ತಿ ಡರಿಯಾ ಕಸಾಕಿನಾ ವಿರುದ್ಧ ರೋಚಕ ಗೆಲುವು ಸಾಧಿಸಿದರು. ಮೊದಲ ಸೆಟ್‌ನಲ್ಲಿ ನೀರಸ ಆಟವಾಡಿದ ಸ್ವಿಟೊಲಿನಾ ೦-೬ರಿಂದ ಹಿನ್ನಡೆ ಅನುಭವಿಸಿದರು. ಆದರೆ, ಆನಂತರದಲ್ಲಿ ಆಕ್ರಮಣಕಾರಿ ಆಟದಿಂದ ಡರಿಯಾಗೆ ಸೋಲುಣಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದರು.

ಇದನ್ನೂ ಓದಿ : ಇಟಾಲಿಯನ್ ಓಪನ್ ಟೆನಿಸ್ | ನಡಾಲ್ ಜೊಕೊವಿಚ್ ಪ್ರೀಕ್ವಾರ್ಟರ್‌ಗೆ 

ಹ್ಯಾಲೆಪ್ ಸ್ಥಾನ ಭದ್ರ

ಇನ್ನು, ಇದೇ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಮತ್ತೊಂದು ತೃತೀಯ ಸುತ್ತಿನ ಪಂದ್ಯದಲ್ಲಿ ವಿಶ್ವದ ಅಗ್ರ ಕ್ರಮಾಂಕಿತ ಆಟಗಾರ್ತಿ ಸಿಮೊನಾ ಹ್ಯಾಲೆಪ್ ನಿರಾಯಾಸವಾಗಿ ಎಂಟರ ಘಟ್ಟಕ್ಕೆ ಕಾಲಿಟ್ಟರು. ಅಮೆರಿಕದ ಮ್ಯಾಡಿಸನ್ ಕೀಸ್ ಬಲ ಬೆನ್ನಿನ ಸ್ನಾಯು ಸೆಳೆತಕ್ಕೆ ಸಿಲುಕಿದ್ದರಿಂದ ಪಂದ್ಯದಿಂದ ಹಿಂದೆ ಸರಿದರು. ಹೀಗಾಗಿ, ಹ್ಯಾಲೆಪ್ ನಂ.೧ ಸ್ಥಾನ ಸುಭದ್ರವಾಯಿತು. ಅಂದಹಾಗೆ, ಹ್ಯಾಲೆಪ್ ಅಗ್ರಪಟ್ಟವನ್ನು ಉಳಿಸಿಕೊಳ್ಳಲು ಇಟಾಲಿಯನ್ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಬೇಕಿತ್ತಾದ್ದರಿಂದ, ಮ್ಯಾಡಿಸನ್ ವಿರುದ್ಧದ ಪಂದ್ಯ ಮಹತ್ವವಾಗಿತ್ತು.

ಒಂದೊಮ್ಮೆ ಮ್ಯಾಡಿಸನ್ ಕೀಸ್ ಏನಾದರೂ ಈ ಪಂದ್ಯದಲ್ಲಿ ಆಡಿ ಗೆಲುವು ಸಾಧಿಸಿದ್ದರೆ, ಡೆನ್ಮಾರ್ಕ್ ಆಟಗಾರ್ತಿ ಹಾಗೂ ಈ ಋತುವಿನ ಮೊದಲ ಗ್ರಾಂಡ್‌ಸ್ಲಾಮ್ ವಿಜೇತೆ ಕೆರೋಲಿನ್ ವೋಜ್ನಿಯಾಕಿ ಮತ್ತೆ ನಂ.೧ ಸ್ಥಾನಕ್ಕೆ ಜಿಗಿಯುತ್ತಿದ್ದರು. ಅಂದಹಾಗೆ, ಈ ಮಾಸಾಂತ್ಯದಲ್ಲಿ ಶುರುವಾಗಲಿರುವ ಪ್ರತಿಷ್ಠಿತ ಫ್ರೆಂಚ್ ಓಪನ್ ಪಂದ್ಯಾವಳಿಗೆ ಪ್ರಸಕ್ತ ನಡೆಯುತ್ತಿರುವ ಇಟಾಲಿಯನ್ ಓಪನ್ ಪಂದ್ಯಾವಳಿಯೇ ಅಂತಿಮ ತಾಲೀಮಿನಂತಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More