ಇಟಾಲಿಯನ್ ಓಪನ್ ಟೆನಿಸ್ | ನಡಾಲ್ ಜೊಕೊವಿಚ್ ಪ್ರೀಕ್ವಾರ್ಟರ್‌ಗೆ 

ಇಟಾಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ವಿಶ್ವದ ಇಬ್ಬರು ಮಾಜಿ ನಂ ೧ ಆಟಗಾರರಾದ ರಾಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಚ್ ಹದಿನಾರರ ಘಟ್ಟಕ್ಕೆ ಕಾಲಿಟ್ಟಿದ್ದಾರೆ. ಇನ್ನು, ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮರಿಯಾ ಶರಪೋವಾ, ಮುಗುರುಜಾ ಪ್ರೀಕ್ವಾರ್ಟರ್‌ಫೈನಲ್ ತಲುಪಿದ್ದಾರೆ

ಹನ್ನೊಂದನೇ ಫ್ರೆಂಚ್ ಓಪನ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸ್ಪೇನ್ ಆಟಗಾರ ರಾಫೆಲ್ ನಡಾಲ್, ಇಟಾಲಿಯನ್ ಓಪನ್‌ನಲ್ಲಿ ಅಂತಿಮ ಹದಿನಾರರ ಘಟ್ಟ ತಲುಪಿದ್ದಾರೆ. ಅವರಂತೆಯೇ ಗಾಯದ ಸಮಸ್ಯೆಯನ್ನು ಮೆಟ್ಟಿನಿಲ್ಲಲು ತಿಣುಕುತ್ತಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ ಕೂಡ ಪ್ರೀಕ್ವಾರ್ಟ್‌ಫೈನಲ್ ತಲುಪಿದ್ದು, ಋತುವಿನಲ್ಲಿ ಮೊದಲ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಕ್ಲೇ ಕೋರ್ಟ್ ಕಿಂಗ್ ನಡಾಲ್ ಬುಧವಾರ (ಮೇ ೧೬) ನಡೆದ ಪುರುಷರ ಸಿಂಗಲ್ಸ್ ವಿಭಾಗದ ದ್ವಿತೀಯ ಸುತ್ತಿನಲ್ಲಿ ನಡಾಲ್, ಬೋಸ್ನಿಯಾದ ಡಾಮಿರ್ ಜುಮ್ಹುರ್ ವಿರುದ್ಧ ೬-೧, ೬-೦ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಮತ್ತೊಂದು ದ್ವಿತೀಯ ಸುತ್ತಿನ ಹಣಾಹಣಿಯಲ್ಲಿ ಜಾರ್ಜಿಯಾದ ನಿಕೊಲಾಸ್ ಬಸಿಲಾಶ್ವಿಲಿ ವಿರುದ್ಧ ೬-೪, ೬-೨ ಎರಡು ನೇರ ಸೆಟ್‌ಗಳಲ್ಲಿ ಜಯಶಾಲಿಯಾದರು.

೩೧ರ ಹರೆಯದ ನಡಾಲ್, ಈ ಋತುವಿನಲ್ಲಿ ಈಗಾಗಲೇ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮಾಂಟೆ ಕಾರ್ಲೊ ಹಾಗೂ ಬಾರ್ಸಿಲೋನಾ ಟೆನಿಸ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆದ ನಡಾಲ್, ಇವೆರಡರಲ್ಲೂ ವೃತ್ತಿಬದುಕಿನ ೧೧ನೇ ಪ್ರಶಸ್ತಿ ಗಳಿಸಿದರು. ಹದಿನಾರು ಗ್ರಾಂಡ್‌ಸ್ಲಾಮ್ ಪ್ರಶಸ್ತಿ ವಿಜೇತ ಇದೀಗ ಮುಂದಿನ ಸುತ್ತಿನಲ್ಲಿ ಕೆನಡಾದ ಯುವ ಆಟಗಾರ ಡೆನಿಸ್ ಶಪೊವಲೊವ್ ವಿರುದ್ಧ ೭-೬ (೭/೩), ೬-೭ (೫/೭), ೬-೩ ಸೆಟ್‌ಗಳಿಂದ ಗೆಲುವು ಸಾಧಿಸಿದರು.

ಇದನ್ನೂ ಓದಿ : ಮೆಕೆನ್ರೊ ದಾಖಲೆ ಮುರಿದ ನಡಾಲ್; ಮ್ಯಾಡ್ರಿಡ್ ಓಪನ್‌ನಿಂದ ಶರಪೋವಾ ಔಟ್

ಶರಪೋವಾ ಮುನ್ನಡೆ

ಇತ್ತ, ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಐದು ಗ್ರಾಂಡ್‌ಸ್ಲಾಮ್ ಪ್ರಶಸ್ತಿ ವಿಜೇತೆ ಮರಿಯಾ ಶರಪೋವಾ ಜಯದ ಓಟ ಮುಂದುವರೆಸಿದರು. ದ್ವಿತೀಯ ಸುತ್ತಿನ ಪಂದ್ಯದಲ್ಲಿ ಡೊಮಿನಿಕಾ ಸಿಬುಲ್ಕೋವಾ ವಿರುದ್ಧದ ಮೂರು ಸೆಟ್‌ಗಳ ರೋಚಕ ಕಾದಾಟದಲ್ಲಿ ಶರಪೋವಾ ೩-೬, ೬-೪, ೬-೨ ಸೆಟ್‌ಗಳಲ್ಲಿ ಗೆಲುವು ಪಡೆದು ಮುಂದಿನ ಸುತ್ತಿಗೆ ನಡೆದರು. “ಈ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ಖುಷಿಕೊಟ್ಟಿದೆ. ಸಿಬುಲ್ಕೋವಾ ಶ್ರೇಷ್ಠ ಆಟಗಾರ್ತಿಯರಲ್ಲಿ ಒಬ್ಬರು. ಅವರ ವಿರುದ್ಧ ಜಯ ಪಡೆಯಲೇಬೇಕೆಂದು ನಿರ್ಧರಿಸಿದ್ದೆ. ಯೋಜನೆಯಂತೆ ಗೆಲುವು ಪಡೆದದ್ದು ಸಂತಸ ತಂದಿದೆ,’’ ಎಂದು ಪಂದ್ಯದ ಬಳಿಕ ಶರಪೋವಾ ತಿಳಿಸಿದರು.

ವೋಜ್ನಿಯಾಕಿ ಗೆಲುವು: ಇನ್ನು, ಮಹಿಳೆಯರ ಸಿಂಗಲ್ಸ್ ವಿಭಾಗದ ಇನ್ನೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಕೆರೋಲಿನ್ ವೋಜ್ನಿಯಾಕಿ ಬೆಲ್ಜಿಯಂನ ಅಲಿಸನ್ ವಾನ್ ವಿರುದ್ಧ ೬-೧, ೬-೪ ನೇರ ಸೆಟ್‌ಗಳಲ್ಲಿ ಗೆಲುವು ಪಡೆದರು. ಕಳೆದ ವರ್ಷ ಇಲ್ಲಿ ರನ್ನರ್‌ಅಪ್ ಆಗಿದ್ದ ವೋಜ್ನಿಯಾಕಿ ಮುಂದಿನ ಸುತ್ತಿನಲ್ಲಿ ಲಾಟ್ವಿಯಾದ ಅನಸ್ತಾಸಿಯಾ ಸೆವಾಸ್ಟೋವಾ ವಿರುದ್ಧ ಕಾದಾಡಲಿದ್ದಾರೆ. ಅಂದಹಾಗೆ, ರೊಮೇನಿಯಾ ಆಟಗಾರ್ತಿ ಸಿಮೋನಾ ಹ್ಯಾಲೆಪ್ ಒಂದೊಮ್ಮೆ ಈ ಪಂದ್ಯಾವಳಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಲು ವಿಫಲವಾದರೆ, ವೋಜ್ನಿಯಾಕಿ ಮತ್ತೆ ವಿಶ್ವದ ನಂ ೧ ಮಹಿಳಾ ಟೆನಿಸ್ ಆಟಗಾರ್ತಿ ಎನಿಸಲಿದ್ದಾರೆ.

ಮುಗುರುಜಾಗೆ ಪ್ರಯಾಸದ ಗೆಲುವು: ಇತ್ತ, ಸ್ಪೇನ್ ಆಟಗಾರ್ತಿ ಗಾರ್ಬೈನ್ ಮುಗುರುಜಾ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಕಠಿಣ ಹೋರಾಟದೊಂದಿಗೆ ಪ್ರಯಾಸದ ಜಯ ಸಾಧಿಸಿದರು. ಆಸ್ಟ್ರೇಲಿಯಾದ ಡರಿಯಾ ಗಬ್ರಿಲೋವಾ ಎದುರಿನ ಪಂದ್ಯದಲ್ಲಿ ೭-೫, ೨-೬, ೬-೭ (೬/೮) ಸೆಟ್‌ಗಳಲ್ಲಿ ಜಯ ಸಾಧಿಸಿ ಮುಂದಿನ ಸುತ್ತಿಗೆ ಧಾವಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More