ಜೆರ್ಸಿ ಬದಲಿಸಿ ಕ್ರೀಡಾ ಸ್ಫೂರ್ತಿ ಮೆರೆದ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ

ಈ ಋತುವಿನ ಅತ್ಯಂತ ರೋಚಕ ಪಂದ್ಯಗಳಲ್ಲಿ ಒಂದಾದ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣದ ಪಂದ್ಯವು ಕ್ರೀಡಾಸ್ಫೂರ್ತಿಯಿಂದ ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಕನ್ನಡಿಗ ರಾಹುಲ್ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇದರ ರೂವಾರಿಗಳು

ಐಪಿಎಲ್ ಮಾತ್ರವೇ ಅಲ್ಲ, ಟೀಂ ಇಂಡಿಯಾದಲ್ಲಿಯೂ ಸ್ನೇಹ-ಸಲುಗೆಯಿಂದಿರುವ ಯುವ ಆಟಗಾರರಾದ ಕೆ ಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಹನ್ನೊಂದನೇ ಐಪಿಎಲ್ ಆವೃತ್ತಿಯಲ್ಲಿ ಇಬ್ಬರೂ ಪ್ರತ್ಯೇಕ ತಂಡಗಳಲ್ಲಿ ಆಡುತ್ತಿರುವುದು ಗೊತ್ತಿರುವ ಸಂಗತಿಯೇ. ಮೇಲಾಗಿ, ಇಬ್ಬರೂ ಆಲ್ರೌಂಡ್ ಆಟದೊಂದಿಗೆ ತಂತಮ್ಮ ತಂಡಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಕೂಡ ಅಷ್ಟೇ ಸೋಜಿಗ ಕೂಡ.

ಕಿಂಗ್ಸ್ ಇಲೆವೆನ್ ಪಂಜಾಬ್‌ ಪರ ಗರಿಷ್ಠ ರನ್ ಗಳಿಸಿರುವ ಕೆ ಎಲ್ ರಾಹುಲ್, ವಿಕೆಟ್‌ ಕೀಪಿಂಗ್‌ನಲ್ಲಿಯೂ ತಂಡಕ್ಕೆ ಆಧಾರಸ್ತಂಭವಾಗಿದ್ದಾರೆ. ಅಂತೆಯೇ, ಮುಂಬೈ ಇಂಡಿಯನ್ಸ್‌ನ ಪ್ರಮುಖ ಆಟಗಾರ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಆಕರ್ಷಕ ಆಟವಾಡುತ್ತಿದ್ದಾರೆ. ಬುಧವಾರ (ಮೇ ೧೬) ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಈ ಋತುವಿನ ೫೦ನೇ ಐಪಿಎಲ್ ಪಂದ್ಯದಲ್ಲಿ ಕೇವಲ ೩ ರನ್ ಅಂತರದಿಂದ ಕಿಂಗ್ಸ್ ಸೋಲನುಭವಿಸಿತ್ತು.

ತಂಡದ ಪರ ಕೇವಲ ೬೦ ಎಸೆತಗಳಲ್ಲಿ ೯೪ ರನ್ ಚಚ್ಚಿದ್ದ ಕೆ ಎಲ್ ರಾಹುಲ್ ಆಟಕ್ಕೆ ಎಲ್ಲರೂ ಬೆರಗಾಗಿದ್ದರು. ರಾಹುಲ್ ಪ್ರಚಂಡ ಇನ್ನಿಂಗ್ಸ್‌ನ ಹೊರತಾಗಿಯೂ ತಂಡ ಕೂದಲೆಳೆಯ ಅಂತರದಲ್ಲಿ ಪಂದ್ಯ ಕೈಚೆಲ್ಲಿದ್ದರಿಂದ ಸ್ವತಃ ರಾಹುಲ್ ಪೆಚ್ಚಾಗಿದ್ದರು. ಆದರೆ, ಸೋಲಿನ ಬೇಗುದಿ ಕೊಂಚ ತಣ್ಣಗಾದ ನಂತರ ಮೈದಾನದಲ್ಲಿ ಅಪರೂಪದ ಘಟನೆಗೆ ಅವರು ಸಾಕ್ಷಿಯಾದರು. ಗೆಳೆಯ ಹಾರ್ದಿಕ್ ಪಾಂಡ್ಯ ನೀಡಿದ ಜೆರ್ಸಿಯನ್ನು ಧರಿಸಿ ತನ್ನ ಜೆರ್ಸಿಯನ್ನು ಅವರಿಗೆ ನೀಡಿದ ರಾಹುಲ್ ಕ್ರೀಡಾಸ್ಫೂರ್ತಿಗೆ ಸಾಕ್ಷಿಯಾದರು.

ಇದನ್ನೂ ಓದಿ : ಮುಂಬೈ ಇಂಡಿಯನ್ಸ್‌ಗೆ ರೋಚಕ ಗೆಲುವು ತಂದುಕೊಟ್ಟ ಬುಮ್ರಾ ದಾಳಿ

ಅಪರೂಪದ ಪ್ರಸಂಗ

ಕ್ರೀಡಾಲೋಕದಲ್ಲಿ ಸಾಮಾನ್ಯವಾಗಿ ಫುಟ್ಬಾಲ್ ಆಟಗಾರರಷ್ಟೇ ಜೆರ್ಸಿ ಅದಲುಬದಲು ಮಾಡಿಕೊಳ್ಳುವ ಬಗ್ಗೆ ಹಲವಾರು ಬಾರಿ ವರದಿಯಾಗಿದೆ. ಆದರೆ ಕ್ರಿಕೆಟ್‌ನಲ್ಲಿ, ಅದರಲ್ಲೂ ಐಪಿಎಲ್‌ನಲ್ಲಿ ಇಂಥದ್ದೊಂದು ಸಂಪ್ರದಾಯಕ್ಕೆ ನಾಂದಿ ಹಾಡಿದ್ದು ರಾಹುಲ್ ಮತ್ತು ಪಾಂಡ್ಯ. ಹೀಗಾಗಿ, ಇದೊಂದು ಅಪರೂಪದ ಪ್ರಸಂಗ ಎನಿಸಿಕೊಂಡಿತು. ವಾಂಖೆಡೆ ಮೈದಾನದಲ್ಲಿದ್ದ ಜನತೆ ಇದನ್ನು ಕಣ್ಣಾರೆ ಕಂಡು ಇಬ್ಬರು ಆಟಗಾರರ ಕ್ರೀಡಾಸ್ಫೂರ್ತಿಯನ್ನು ಮನಸಾರೆ ಅಭಿನಂದಿಸಿದರು.

ಅಂದಹಾಗೆ, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್‌ನ ಪ್ಲೇಆಫ್ ಬಯಕೆ ಇನ್ನಷ್ಟು ಗರಿಗೆದರಿದಂತಾಗಿದೆ. ೧೩ ಪಂದ್ಯಗಳಿಂದ ಒಟ್ಟು ೧೨ ಪಾಯಿಂಟ್ಸ್ ಗಳಿಸಿರುವ ಅದು ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದರೆ, ಪಂಜಾಬ್ ಕೂಡ ಇಷ್ಟೇ ಪಂದ್ಯಗಳಿಂದ ೧೨ ಪಾಯಿಂಟ್ಸ್ ಕಲೆಹಾಕಿದೆ. ಹೀಗಾಗಿ, ಪ್ಲೇಆಫ್ ಸ್ಥಾನಕ್ಕಾಗಿನ ಪೈಪೋಟಿ ತಿಕ್ಕಾಟದಿಂದ ಕೂಡಿದೆ. ಅಂದಹಾಗೆ, ಮುಂಬೈನ ಈ ಮಹತ್ವಪೂರ್ಣ ಗೆಲುವಿನಲ್ಲಿ ಜಸ್ಪ್ರೀತ್ ಬುಮ್ರಾ (೧೫ಕ್ಕೆ ೩) ಸ್ಫೋಟಕ ದಾಳಿ ನಿರ್ಣಾಯಕ ಪಾತ್ರ ವಹಿಸಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More