ಚಾಲೆಂಜರ್ಸ್ ಆಸೆಗೆ ಮತ್ತಷ್ಟು ನೀರೆರೆದ ಸೂಪರ್‌ಮ್ಯಾನ್ ಎಬಿಡಿ ಮನಮೋಹಕ ಆಟ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪ್ಲೇಆಫ್ ಆಸೆಗೆ ಎಬಿ ಡಿವಿಲಿಯರ್ಸ್ ಇನ್ನಷ್ಟು ನೀರೆರೆದರು. ಸಿಡಿಲಬ್ಬರದ ಬ್ಯಾಟಿಂಗ್ ಜತೆಗೆ ಫೀಲ್ಡಿಂಗ್‌ನಲ್ಲೂ ಸೂಪರ್‌ಮ್ಯಾನ್‌ನಂಥ ಚತುರತೆ ತೋರಿದ ಎಬಿಡಿ ಸನ್‌ರೈಸರ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ೧೪ ರನ್ ಜಯ ತಂದರು

ಈ ಋತುವಿನ ಐಪಿಎಲ್‌ನಲ್ಲಿ ತವರಿನಲ್ಲಿ ಕಟ್ಟಕಡೆಯ ಪಂದ್ಯವಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ತನ್ನ ಅಪಾರ ಅಭಿಮಾನಿಗಳನ್ನು ನಿರಾಸೆಗೊಳಿಸಲಿಲ್ಲ. ಮಾಡು ಇಲ್ಲವೇ ಮಡಿ ಎಂಬಂತಿದ್ದ ಮಹತ್ವಪೂರ್ಣ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ೧೪ ರನ್‌ಗಳಿಂದ ಮಣಿಸಿದ ಆರ್‌ಸಿಬಿ, ತವರಿನ ಅಭಿಯಾನವನ್ನು ಜಯದೊಂದಿಗೆ ಮುಗಿಸಿತು.

'ಈ ಬಾರಿ ಕಪ್ ನಮ್ದೇ' ಎಂಬ ಉದ್ಘೋಷವು ಉಡುಗಿಹೋಗುತ್ತಿದೆ ಎಂಬ ಸ್ಥಿತಿಯಲ್ಲಿದ್ದ ಆರ್‌ಸಿಬಿ ಪುಟಿದೇಳಿದ ಪರಿ ಸ್ವತಃ ಆರ್‌ಸಿಬಿ ಅಭಿಮಾನಿಗಳಲ್ಲೇ ವಿಸ್ಮಯ ತರಿಸಿದೆ. ತಂಡದ ಹೋರಾಟವನ್ನು ಜೀವಂತವಾಗಿಡುವಲ್ಲಿ ನಾಯಕ ವಿರಾಟ್ ಕೊಹ್ಲಿಯ ಸ್ಫೂರ್ತಿಯುತ ನಾಯಕತ್ವದ ಜತೆಗೆ ಎಬಿಡಿಯಂಥ ಸ್ಫೋಟಕ ಆಟಗಾರನ ಕೊಡುಗೆಯನ್ನು ಮರೆಯುವ ಹಾಗಿಲ್ಲ.

ಅಂದಹಾಗೆ, ಆರ್‌ಸಿಬಿ ನೀಡಿದ್ದ ಸವಾಲಿನ ಗುರಿಯಾದ ೨೧೯ ರನ್‌ಗಳಿಗೆ ಉತ್ತರವಾಗಿ ಸನ್‌ರೈಸರ್ಸ್ ಹೈದರಾಬಾದ್ ದಿಟ್ಟ ಪ್ರತಿರೋಧದ ಮಧ್ಯೆಯೂ ೨೦೪ ರನ್‌ಗಳಿಗೆ ಹೋರಾಟ ಮುಗಿಸಿತು. ನಾಯಕ ಕೇನ್ ವಿಲಿಯಮ್ಸನ್ (೮೧: ೪೨ ಎಸೆತ, ೭ ಬೌಂಡರಿ, ೫ ಸಿಕ್ಸರ್) ಹಾಗೂ ಕನ್ನಡಿಗ ಮನೀಶ್ ಪಾಂಡೆ (ಅಜೇಯ ೬೨: ೩೮ ಎಸೆತ, ೭ ಬೌಂಡರಿ, ೨ ಸಿಕ್ಸರ್) ಮೂರನೇ ವಿಕೆಟ್‌ಗೆ ಕಲೆಹಾಕಿದ ೧೩೫ ರನ್‌ಗಳ ಅದ್ಭುತ ಜತೆಯಾಟವೂ ಸನ್‌ರೈಸರ್ಸ್ ಕೈ ಹಿಡಿಯಲಿಲ್ಲ.

ಕೊನೆಯ ಓವರ್‌ನಲ್ಲಿ ೨೦ ರನ್ ಬೇಕಿದ್ದಾಗ ಅತೀವ ಒತ್ತಡಕ್ಕೆ ಸಿಲುಕಿದ ಸನ್‌ರೈಸರ್ಸ್ ಹೈದರಾಬಾದ್, ಪವಾಡದ ನಿರೀಕ್ಷೆಯಲ್ಲಿತ್ತು. ಆದರೆ, ಮೊಹಮದ್ ಸಿರಾಜ್ ಬೌಲಿಂಗ್‌ನ ಮೊದಲ ಎಸೆತವನ್ನೇ ವಿಲಿಯಮ್ಸನ್ ಸಿಕ್ಸರ್‌ಗೆ ಎತ್ತಿದ ಚೆಂಡು ಡೀಪ್ ಫೈನ್‌ ಲೆಗ್‌ನಲ್ಲಿ ನಿಂತಿದ್ದ ಕಾಲಿನ್ ಡಿ ಗ್ರಾಂಡಮ್‌ ಕೈಗೆ ಸಿಲುಕಿಕೊಳ್ಳುತ್ತಿದ್ದಂತೆ ಸನ್‌ರೈಸರ್ಸ್ ಜಯದ ಆಸೆಯನ್ನು ಕೈಚೆಲ್ಲಬೇಕಾಯಿತು. ಇನ್ನುಳಿದ ಐದು ಎಸೆತಗಳು ನಾಟಕೀಯತೆಯಿಂದ ಕೂಡಿತ್ತು. ಮನೀಶ್ ಪಾಂಡೆ ಒಂದೆರಡು ಎಸೆತಗಳಲ್ಲಿ ರನ್ ಗಳಿಸಲು ಸಾಧ್ಯವಾಗದೆ ಹೋದರಲ್ಲದೆ, ವಿರಾಟ್ ಕೊಹ್ಲಿ ಸುಲಭ ಕ್ಯಾಚ್‌ ಒಂದನ್ನು ಕೈಚೆಲ್ಲಿದರು. ಇದೆಲ್ಲದರ ಮಧ್ಯೆ ಕೊನೆಯ ಎಸೆತದಲ್ಲಿ ೧೬ ರನ್ ಪೇರಿಸುವ ಅಸಾಧ್ಯದ ಸಂದರ್ಭದಲ್ಲಿ ಸನ್‌ರೈಸರ್ಸ್ ಗಳಿಸಿದ್ದು ಕೇವಲ ಒಂದು ರನ್ ಅಷ್ಟೆ!

ಸನ್‌ರೈಸರ್ಸ್ ವಿರುದ್ಧದ ಈ ಗೆಲುವಿನೊಂದಿಗೆ ಆರ್‌ಸಿಬಿ ೧೩ ಪಂದ್ಯಗಳಲ್ಲಿ ೧೨ ಪಾಯಿಂಟ್ಸ್ ಗಳಿಸಿ ಐದನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಈಗಾಗಲೇ ಪ್ಲೆಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿರುವ ಸನ್‌ರೈಸರ್ಸ್ ಹೈದರಾಬಾದ್ ಮೊದಲ ಸ್ಥಾನದಲ್ಲೇ ಉಳಿದುಕೊಂಡಿದೆ. ಏತನ್ಮಧ್ಯೆ, ಶನಿವಾರ (ಮೇ ೨೦) ಜೈಪುರದಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯ ಆರ್‌ಸಿಬಿಗೆ ಮತ್ತೊಂದು ಸುತ್ತಿನ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಈ ಪಂದ್ಯದಲ್ಲಿ ಭಾರೀ ಅಂತರದಿಂದ ಗೆದ್ದದ್ದೇ ಆದಲ್ಲಿ, ಈಗಿರುವ ನೆಟ್ ರನ್‌ರೇಟ್ (+೦.೨೬೪) ಅನ್ನು ಉತ್ತಮಪಡಿಸಿಕೊಂಡು ಪ್ಲೇಆಫ್ ತಲುಪಬಹುದಾಗಿದೆ.

ಇದನ್ನೂ ಓದಿ : ಮುಂಬೈ ಇಂಡಿಯನ್ಸ್‌ಗೆ ರೋಚಕ ಗೆಲುವು ತಂದುಕೊಟ್ಟ ಬುಮ್ರಾ ದಾಳಿ

ಕಳಪೆ ಫೀಲ್ಡಿಂಗ್

ಅಂದಹಾಗೆ, ಸವಾಲಿನ ಮೊತ್ತವನ್ನು ಕಲೆಹಾಕಿದ್ದೇವೆ ಎಂಬ ಉಡಾಫೆಯಲ್ಲಿ ಆರ್‌ಸಿಬಿ ಫೀಲ್ಡಿಂಗ್ ಅತ್ಯಂತ ಕೆಟ್ಟದ್ದಾಗಿತ್ತು. ಕೆಲವೊಂದು ಕ್ಯಾಚ್‌ಗಳನ್ನು ಕೈಚೆಲ್ಲಿದ್ದೂ ಅಲ್ಲದೆ, ಕ್ಷೇತ್ರರಕ್ಷಣೆಯಲ್ಲೂ ಆಲಸಿತನ ಹಾಗೂ ನಿಷ್ಕ್ರಿಯತೆ ಮೆರೆದ ಅದು ಈ ಪಂದ್ಯವನ್ನೂ ಕೈಚೆಲ್ಲುವ ಸ್ಥಿತಿಯಲ್ಲಿತ್ತು. ವಿಲಿಯಮ್ಸನ್ ಹಾಗೂ ಮನೀಶ್ ಪಾಂಡೆಯ ಪ್ರಭಾವಿ ಆಟ ಅಂಥದ್ದೊಂದು ಭೀತಿಯನ್ನು ಆರ್‌ಸಿಬಿ ಪಾಳೆಯದಲ್ಲಿ ಉಂಟುಮಾಡಿತ್ತು. ಮೇಲಾಗಿ, ಆರಂಭಿಕ ಅಲೆಕ್ಸ್ ಹೇಲ್ಸ್ ಅಂತೂ ಶುರುವಿನಲ್ಲೇ ಅಬ್ಬರಿಸಿದ್ದರು. ಆದರೆ, ಅವರ ಆರ್ಭಟವನ್ನು ಎಬಿ ಡಿವಿಲಿಯರ್ಸ್, ಸೂಪರ್‌ಮ್ಯಾನ್ ಕ್ಯಾಚ್‌ನೊಂದಿಗೆ ತಡೆದು ತಂಡದ ಫೀಲ್ಡಿಂಗ್ ವೈಫಲ್ಯವನ್ನು ಮೆಟ್ಟಿನಿಂತರು.

ಸವಾಲಿನ ಮೊತ್ತ

ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಹಿನ್ನಡೆಯ ಮಧ್ಯೆಯೂ ಎಬಿ ಡಿವಿಲಿಯರ್ಸ್ (೬೯: ೩೯ ಎಸೆತ, ೧೨ ಬೌಂಡರಿ, ೧ ಸಿಕ್ಸರ್) ಮತ್ತು ಮೊಯೀನ್ ಅಲಿ (೬೫: ೩೪ ಎಸೆತ, ೨ ಬೌಂಡರಿ, ೬ ಸಿಕ್ಸರ್) ನೀಡಿದ ಸ್ಫೋಟಕ ಬ್ಯಾಟಿಂಗ್‌ನಿಂದ ೨೦ ಓವರ್‌ಗಳಲ್ಲಿ ೬ ವಿಕೆಟ್‌ಗೆ ೨೧೮ ರನ್ ಕಲೆಹಾಕಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಪಾರ್ಥೀವ್ ಪಟೇಲ್ (೧) ಮತ್ತು ನಾಯಕ ವಿರಾಟ್ ಕೊಹ್ಲಿ (೧೨) ತ್ವರಿತಗತಿಯಲ್ಲಿ ಕ್ರೀಸ್ ತೊರೆದಾಗ ತಂಡದ ಮೊತ್ತ ೫ ಓವರ್‌ಗಳಲ್ಲಿ ೩೮ ರನ್‌ಗಳಷ್ಟೆ.

ಎಬಿಡಿ-ಅಲಿ ಅಬ್ಬರ

ಈ ಹಂತದಲ್ಲಿ ಜತೆಯಾದ ಎಬಿ ಡಿವಿಲಿಯರ್ಸ್ ಮತ್ತು ಮೊಯೀನ್ ಅಲಿ ಆರ್‌ಸಿಬಿ ಇನ್ನಿಂಗ್ಸ್‌ಗೆ ಬಿರುಸು ನೀಡಿದರು. ಸನ್‌ರೈಸರ್ಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಅಮೋಘ ಜತೆಯಾಟದಿಂದ ತಂಡದ ಮೊತ್ತ ೨೦೦ರ ಗಡಿ ದಾಟಲು ಅದ್ಭುತ ವೇದಿಕೆ ಹಾಕಿಕೊಟ್ಟಿತು. ಅದರಲ್ಲೂ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿಸಿದ ಅವಕಾಶವನ್ನು ಅದ್ಭುತವಾಗಿ ಸಮರ್ಥಿಸಿಕೊಂಡ ಮೊಯೀನ್ ಅಲಿ, ಸಕಾಲದಲ್ಲಿ ಸಾಮರ್ಥ್ಯ ಮೆರೆದದ್ದು ಗಮನಾರ್ಹವೆನಿಸಿಕೊಂಡಿತು. ಈ ಅಪಾಯಕಾರಿ ಜತೆಯಾಟವನ್ನು ೧೫ನೇ ಓವರ್‌ನಲ್ಲಿ ಸನ್‌ರೈಸರ್ಸ್ ಬೇರ್ಪಡಿಸಿತು. ಆಫ್ಘನ್ ಸ್ಪಿನ್ನರ್ ರಶೀದ್ ಖಾನ್ (೨೭ಕ್ಕೆ ೩) ಬೌಲಿಂಗ್‌ನಲ್ಲಿ ಬಿರುಸಿನ ಹೊಡೆತಕ್ಕೆ ಯತ್ನಿಸಿದ ಎಬಿಡಿ, ಶಿಖರ್ ಧವನ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದರು. ಇತ್ತ, ಇದೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮೊಯೀನ್ ಅಲಿ, ಗೋಸ್ವಾಮಿಗೆ ಕ್ಯಾಚೀಯುತ್ತಿದ್ದಂತೆ ಆರ್‌ಸಿಬಿಯ ಶರವೇಗದ ರನ್‌ಗತಿಗೆ ಭಾರೀ ಪೆಟ್ಟುನೀಡಿತು.

ಆದರೆ, ಎಬಿಡಿ ನಿರ್ಗಮನದ ನಂತರ ಆಡಲಿಳಿದಿದ್ದ ಕಾಲಿನ್ ಡಿ ಗ್ರಾಂಡಮ್ (೪೦: ೧೭ ಎಸೆತ, ೧ ಬೌಂಡರಿ, ೪ ಸಿಕ್ಸರ್) ಮತ್ತು ಸರ್ಫರಾಜ್ ಖಾನ್ (ಅಜೇಯ ೨೨: ೮ ಎಸೆತ, ೩ ಬೌಂಡರಿ, ೧ ಸಿಕ್ಸರ್) ಬಿಡುಬೀಸಿನ ಬ್ಯಾಟಿಂಗ್‌ನಿಂದ ಆರ್‌ಸಿಬಿ ಸವಾಲಿನ ಮೊತ್ತ ಕಲೆಹಾಕಿತು.

ಸಂಕ್ಷಿಪ್ತ ಸ್ಕೋರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: ೨೦ ಓವರ್‌ಗಳಲ್ಲಿ ೨೧೮/೬ (ಎಬಿಡಿ ೬೯, ಮೊಯೀನ್ ಅಲಿ ೬೫, ಕಾಲಿನ್ ಡಿ ಗ್ರಾಂಡಮ್ ೪೦; ರಶೀದ್ ಖಾನ್ ೨೭ಕ್ಕೆ ೩; ಸಿದ್ಧಾರ್ಥ್ ಕೌಲ್ ೪೪ಕ್ಕೆ ೨); ಸನ್‌ರೈಸರ್ಸ್ ಹೈದರಾಬಾದ್: ೨೦ ಓವರ್‌ಗಳಲ್ಲಿ ೨೦೪/೩ (ಕೇನ್ ವಿಲಿಯಮ್ಸನ್ ೮೧, ಮನೀಶ್ ಪಾಂಡೆ ೬೨*; ಮೊಯೀನ್ ಅಲಿ ೨೧ಕ್ಕೆ ೧); ಫಲಿತಾಂಶ: ಆರ್‌ಸಿಬಿಗೆ ೧೪ ರನ್ ಗೆಲುವು; ಪಂದ್ಯಶ್ರೇಷ್ಠ: ಎಬಿ ಡಿವಿಲಿಯರ್ಸ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More