ಇಟಾಲಿಯನ್ ಓಪನ್ | ಕ್ವಾರ್ಟರ್‌ಫೈನಲ್ ತಲುಪಿದ ಜೊಕೊವಿಚ್, ನಡಾಲ್

ಇಟಾಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಇಬ್ಬರು ಮಾಜಿ ಅಗ್ರ ಕ್ರಮಾಂಕಿತ ಆಟಗಾರರಾದ ರಾಫೆಲ್ ನಡಾಲ್ ಹಾಗೂ ನೊವಾಕ್ ಜೊಕೊವಿಚ್ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಪ್ರಸಕ್ತ ಋತುವಿನಲ್ಲಿ ಮೊದಲ ಬಾರಿಗೆ ಎಂಟರ ಘಟ್ಟ ಪ್ರವೇಶಿಸಿರುವ ನೊವಾಕ್ ನಿಟ್ಟುಸಿರುಬಿಟ್ಟಿದ್ದಾರೆ

ಸರ್ಬಿಯಾ ಆಟಗಾರ ನೊವಾಕ್ ಜೊಕೊವಿಚ್ ಐದನೇ ಇಟಾಲಿಯನ್ ಪ್ರಶಸ್ತಿಗಾಗಿ ಹೋರಾಡುತ್ತಿದ್ದರೆ, ಸ್ಪೇನ್ ಆಟಗಾರ ರಾಫೆಲ್ ನಡಾಲ್ ಎಂಟನೇ ರೋಮ್ ಪ್ರಶಸ್ತಿಗಾಗಿ ಸೆಣಸುತ್ತಿದ್ದು, ಇಬ್ಬರ ಪೈಕಿ ಯಾರು ಪ್ರಶಸ್ತಿ ಗೆದ್ದು ಫ್ರೆಂಚ್ ಓಪನ್‌ಗೆ ಧಾವಿಸುತ್ತಾರೆ ಎಂಬುದು ಕೌತುಕ ಕೆರಳಿಸಿದೆ. ಗುರುವಾರ (ಮೇ ೧೭) ತಡರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ತೃತೀಯ ಸುತ್ತಿನ ಪಂದ್ಯದಲ್ಲಿ ೧೨ ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳ ಒಡೆಯ ಜೊಕೊವಿಚ್, ಸ್ಪೇನ್ ಆಟಗಾರ ಆಲ್ವೆರ್ಟ್ ರಾಮೊಸ್-ವಿನೊಲಾಸ್ ವಿರುದ್ಧ ೬-೧, ೭-೫ ಎರಡು ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

೧೧ನೇ ಶ್ರೇಯಾಂಕಿತ ಆಟಗಾರ ಜೊಕೊವಿಚ್, ಮೊಣಕೈ ಶಸ್ತ್ರಚಿಕಿತ್ಸೆಯಿಂದ ಈಗಷ್ಟೇ ಚೇತರಿಕೆ ಕಂಡಿದ್ದರೂ, ಈ ಋತುವಿನಲ್ಲಿ ಇಲ್ಲೀವರೆಗೆ ನಡೆದಿರುವ ಯಾವುದೇ ಪಂದ್ಯಾವಳಿಯಲ್ಲೂ ಪೂರ್ಣ ಪ್ರಮಾಣದಲ್ಲಿ ಸ್ಥಿರ ಆಟವಾಡಿರಲಿಲ್ಲ. ಹೀಗಾಗಿ ಇದೇ ಮೊದಲ ಬಾರಿಗೆ ಕ್ವಾರ್ಟರ್‌ಫೈನಲ್ ತಲುಪಿರುವ ಜೊಕೊವಿಚ್, ಇದೀಗ ಮುಂದಿನ ಸುತ್ತಿನಲ್ಲಿ ಜಪಾನ್ ಆಟಗಾರ ಕೀ ನಿಶಿಕೊರಿ ವಿರುದ್ಧ ಕಾದಾಡಲಿದ್ದಾರೆ. ಅಂದಹಾಗೆ, ನಿಶಿಕೊರಿ ವಿರುದ್ಧ ಜೊಕೊವಿಚ್ ಮ್ಯಾಡ್ರಿಡ್ ಓಪನ್‌ ಮೊದಲ ಸುತ್ತಿನಲ್ಲಿ ಮಣಿಸಿದ್ದರಾದರೂ, ದ್ವಿತೀಯ ಸುತ್ತಿನಲ್ಲಿ ಬ್ರಿಟನ್ ಆಟಗಾರ ಕೈಲ್ ಎಡ್ಮುಂಡ್ ವಿರುದ್ಧ ಮಣಿದಿದ್ದರು.

“ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಗಳಿಸಿರುವುದು ನನಗೆ ಖುಷಿ ತರಿಸಿದೆ. ಕಳೆದೊಂದು ವರ್ಷದಲ್ಲಿ ಮಹತ್ವದ ಪಂದ್ಯಾವಳಿಯಲ್ಲಿ ಎಂಟರ ಘಟ್ಟ ತಲುಪಿರಲಿಲ್ಲ. ರೋಮ್‌ನಲ್ಲಿ ಆಡುವುದು ನನ್ನ ಪಾಲಿಗಂತೂ ಪ್ರತೀ ಬಾರಿಯೂ ಐತಿಹಾಸಿಕ ಕ್ಷಣವೇ ಆಗಿರುತ್ತದೆ,’’ ಎಂದು ವಿನೊಲಾಸ್ ವಿರುದ್ಧ ಗೆಲುವು ಸಾಧಿಸಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ನಿಶಿಕೊರಿ ತಿಳಿಸಿದರು. ರೋಮ್‌ನಲ್ಲಿ ಎಂಟು ಬಾರಿ ಫೈನಲ್ ತಲುಪಿರುವ ಜೊಕೊವಿಚ್, ಜಪಾನ್ ಆಟಗಾರನ ಸವಾಲನ್ನು ಮತ್ತೊಮ್ಮೆ ಮೆಟ್ಟಿನಿಲ್ಲುವ ಗುರಿ ಹೊತ್ತಿದ್ದಾರೆ.

ಇದನ್ನೂ ಓದಿ : ನಿಶಿಕೊರಿ ಮಣಿಸಿ ೧೧ನೇ ಮಾಂಟೆ ಕಾರ್ಲೊ ಪ್ರಶಸ್ತಿ ಕಚ್ಚಿದ ರಾಫೆಲ್ ನಡಾಲ್!

ಇನ್ನು ಇತ್ತೀಚೆಗಷ್ಟೇ ನಂ ೧ ಸ್ಥಾನವನ್ನು ಮತ್ತೊಮ್ಮೆ ರೋಜರ್ ಫೆಡರರ್‌ಗೆ ಬಿಟ್ಟುಕೊಟ್ಟ ರಾಫೆಲ್ ನಡಾಲ್, ಕೆನಡಾ ಆಟಗಾರ ಡೆನಿಸ್ ಶಪಾವಲೊವ್ ವಿರುದ್ಧ ೬-೪, ೬-೧ ನೇರ ಸೆಟ್‌ಗಳಲ್ಲಿ ಜಯ ಪಡೆದರು. ೧೯ರ ಹರೆಯದ ಡೆನಿಸ್, ಕಳೆದ ವರ್ಷ ಮಾಂಟ್ರಿಯಲ್ ಟೆನಿಸ್ ಪಂದ್ಯಾವಳಿಯಲ್ಲಿ ಇದೇ ನಡಾಲ್‌ಗೆ ಆಘಾತಕಾರಿ ಸೋಲುಣಿಸಿದ್ದರು. ಎರಡೂ ಸೆಟ್‌ಗಳಲ್ಲಿ ಆಕ್ರಮಣಕಾರಿ ಆಟವಾಡಿದ ನಡಾಲ್, ಈ ಬಾರಿ ಡೆನಿಸ್‌ಗೆ ಆಘಾತ ನೀಡಿದರು. ಅಂದಹಾಗೆ, ಈ ಪಂದ್ಯಾವಳಿಯಲ್ಲಿ ನಡಾಲ್ ಚಾಂಪಿಯನ್ ಆದರೆ, ಮತ್ತೊಮ್ಮೆ ಅವರು ವಿಶ್ವದ ನಂ ೧ ಪಟ್ಟವನ್ನು ಅಲಂಕರಿಸಲಿದ್ದು, ಮುಂದಿನ ಸುತ್ತಿನಲ್ಲಿ ಅವರು ಸ್ಥಳೀಯ ಆಟಗಾರ ಫ್ಯಾಬಿಯೊ ಫಾಗ್ನಿನಿ ವಿರುದ್ಧ ಕಾದಾಡಲಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More