ಇಂಟರ್‌ಕಾಂಟಿನೆಂಟಲ್ ಕಪ್‌ | ಕೀನ್ಯಾ ಕಾಲೆಳೆಯಲು ಅಣಿಯಾದ ಛೆಟ್ರಿ ಪಡೆ

ಚೈನೀಸ್ ತೈಪೆಯ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ೫-೦ ಗೋಲುಗಳ ಪ್ರಭುತ್ವಕಾರಿ ಗೆಲುವು ಪಡೆದ ಭಾರತ ಫುಟ್ಬಾಲ್ ತಂಡ, ಇದೀಗ ಇಂಟರ್‌ಕಾಂಟಿನೆಂಟಲ್ ಕಪ್‌ನ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಕೀನ್ಯಾ ಮಣಿಸಿ ಸತತ ಎರಡನೇ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ

ಮುಂಬೈ ಫುಟ್ಬಾಲ್ ಅರೇನಾದಲ್ಲಿ ಸೋಮವಾರ (ಜೂನ್ ೪) ನಡೆಯಲಿರುವ ಪಂದ್ಯ ಸುನೀಲ್ ಛೆಟ್ರಿ ಪಡೆಗೆ ಮಹತ್ವಪೂರ್ಣವಾಗಿದೆ. ಕಳೆದ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ ಏಕಪಕ್ಷೀಯ ಪ್ರದರ್ಶನ ನೀಡಿದ್ದ ಭಾರತ ತಂಡ, ಕೀನ್ಯಾ ವಿರುದ್ಧವೂ ಜಯ ಸಾಧಿಸುವ ಛಲ ತೊಟ್ಟಿದೆ. ತವರು ಅಭಿಮಾನಿಗಳ ಸಮ್ಮುಖದಲ್ಲಿ ಛೆಟ್ರಿ ಬಳಗ ಮತ್ತೊಮ್ಮೆ ವಿಜೃಂಭಿಸುವ ಭರವಸೆಯಲ್ಲಿದೆ.

ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲಿನೊಂದಿಗೆ ಭಾರತಕ್ಕೆ ಅಮೋಘ ಗೆಲುವು ತಂದುಕೊಟ್ಟಿದ್ದ ಸುನೀಲ್ ಛೆಟ್ರಿ, ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ೧೦೦ನೇ ಪಂದ್ಯವನ್ನಾಡುತ್ತಿದ್ದು, ಈ ಪಂದ್ಯವನ್ನು ಗೆದ್ದು ವೃತ್ತಿಬದುಕಿನ ಶತಕದಾಟದಲ್ಲಿ ಸಾರ್ಥಕತೆ ಮೆರೆಯುವ ಗುರಿ ಹೊತ್ತಿದ್ದಾರೆ. ಅಂದಹಾಗೆ, ಛೆಟ್ರಿ ಜತೆಗೆ ಅನುಭವಿ ಆಟಗಾರ ಉದಾಂತ ಸಿಂಗ್, ಅನಿರುದ್ಧ್ ಥಾಪಾ ಹಾಗೂ ಪ್ರಣಯ್ ಹಲ್ದಾರ್ ಅಮೋಘ ಫಾರ್ಮ್‌ನಲ್ಲಿರುವುದು ಕೀನ್ಯಾ ಮಣಿಸುವ ಭಾರತದ ಆಸೆಗೆ ಬಲ ತುಂಬಿದೆ. ಚೈನೀಸ್ ತೈಪೆಯ ವಿರುದ್ಧ ಇವರು ತಲಾ ಒಂದೊಂದು ಗೋಲು ದಾಖಲಿಸಿ ಆತಿಥೇಯರ ಅಬ್ಬರದ ಗೆಲುವಿಗೆ ನೆರವಾಗಿದ್ದರು.

ವಿಶ್ವ ಫಿಫಾ ಶ್ರೇಯಾಂಕ ಪಟ್ಟಿಯಲ್ಲಿ ೯೭ನೇ ಸ್ಥಾನದಲ್ಲಿರುವ ಭಾರತ ಮುಂದಿನ ವರ್ಷ ನಡೆಯಲಿರುವ ಏಷ್ಯಾ ಕಪ್ ಗೆಲ್ಲಲು ಈ ಟೂರ್ನಿಯಲ್ಲಿ ಚಾಂಪಿಯನ್ ಆಗುವ ಸಂಕಲ್ಪ ತೊಟ್ಟಿದೆ. ಡಿಫೆನ್ಸ್ ವಿಭಾಗದಲ್ಲಿ ಪ್ರೀತಮ್ ಕೊಟಾಲ್, ಸಲಾಮ್ ರಂಜನ್ ಸಿಂಗ್, ಸಂದೇಶ್ ಜಿಂಗಾನ್ ಹಾಗೂ ನಾರಾಯಣ ದಾಸ್ ಮುಂತಾದವರು ಕೀನ್ಯಾದ ಮುಂಪಡೆ ಆಟಗಾರರನ್ನು ನಿಯಂತ್ರಿಸಲು ಸಕಲ ಯೋಜನೆಯೊಂದಿಗೆ ಸಜ್ಜಾಗಿದ್ದಾರೆ.

ಇವರೆಲ್ಲರ ಜತೆಗೆ ಜೆಜೆ ಲಾಲ್‌ಪೆಕ್ಲುವಾ, ಬಲವಂತ್ ಸಿಂಗ್ ಹಾಗೂ ಅಲೆನ್ ಡಿಯೋರಿ ಮೇಲೂ ಮಹತ್ವದ ಹೊಣೆಗಾರಿಕೆ ಇದ್ದು, ಭಾರತದ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದಾರೆ. ಇನ್ನು, ಪ್ರವಾಸಿ ತಂಡ ಕೀನ್ಯಾ ಕೂಡಾ ಪ್ರತಿಭಾನ್ವಿತ ಆಟಗಾರರಿಂದ ಕೂಡಿದೆ. ಚೈನೀಸ್ ತೈಪೆಯ ವಿರುದ್ಧ ಭಾರತ ಆಡಿದ ವೈಖರಿಯನ್ನು ಕಂಡಿರುವ ಅದು, ಸತತ ಎರಡನೇ ಗೆಲುವಿನ ಮೇಲೆ ಕಣ್ಣಿಟ್ಟಿರುವ ಆತಿಥೇಯರನ್ನು ಕಟ್ಟಿಹಾಕುವ ಕಾರ್ಯತಂತ್ರ ಹೆಣೆದಿದೆ.

ಛೆಟ್ರಿ ಐತಿಹಾಸಿಕ ಸಾಧನೆ

ಅಂದಹಾಗೆ, ಚೈನೀಸ್ ತೈಪೆಯ ವಿರುದ್ಧದ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ೯೯ನೇ ಪಂದ್ಯವಾಡಿ ಶತಕದ ಹೊಸ್ತಿಲಲ್ಲಿದ್ದ ಭಾರತ ತಂಡದ ನಾಯಕ ಸುನೀಲ್ ಛೆಟ್ರಿ ಕೀನ್ಯಾ ವಿರುದ್ಧದ ಪಂದ್ಯದೊಂದಿಗೆ ಶತಕದ ಸಂಭ್ರಮದಲ್ಲಿದ್ದಾರೆ. ಸದ್ಯ, ಇಲ್ಲೀವರೆಗಿನ ಪಂದ್ಯಗಳಲ್ಲಿ ೫೯ ಗೋಲುಗಳನ್ನು ಬಾರಿಸಿರುವ ಛೆಟ್ರಿ, ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಅತ್ಯಧಿಕ ಗೋಲು ಗಳಿಸಿದ ಸಾರ್ವಕಾಲಿಕ ಗೋಲ್‌ಧಾರಿಗಳ ಪಟ್ಟಿಯಲ್ಲಿ ಮೂರನೇಯವರೆನಿಸಿದ್ದಾರೆ. ಪೋರ್ಚುಗಲ್‌ ತಂಡದ ನಾಯಕ ಹಾಗೂ ರಿಯಲ್ ಮ್ಯಾಡ್ರಿಡ್‌ನ ಸ್ಟಾರ್ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ (೮೧) ಮೊದಲ ಸ್ಥಾನದಲ್ಲಿದ್ದರೆ, ಅರ್ಜೆಂಟೀನಾ ನಾಯಕ ಹಾಗೂ ಬಾರ್ಸಿಲೋನಾದ ಲಯೋನೆಲ್ ಮೆಸ್ಸಿ ೬೪ ಗೋಲುಗಳನ್ನು ದಾಖಲಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ : ಛೆಟ್ರಿ ಹ್ಯಾಟ್ರಿಕ್ ಗೋಲಿನಲ್ಲಿ ತೈಪೆ ವಿರುದ್ಧ ಭರ್ಜರಿ ಗೆಲುವು ಕಂಡ ಇಂಡಿಯಾ

ಛೆಟ್ರಿಗೆ ಸಾಥ್ ನೀಡಿದ ಕೊಹ್ಲಿ

ಭಾರತ ಫುಟ್ಬಾಲ್ ತಂಡವನ್ನು ಬೆಂಬಲಿಸಲು ಅಭಿಮಾನಿಗಳು ಖುದ್ದು ಕ್ರೀಡಾಂಗಣಕ್ಕೆ ಬಂದು ಪಂದ್ಯ ವೀಕ್ಷಿಸಬೇಕೆಂದು ಮನವಿ ಮಾಡಿಕೊಂಡಿರುವ ಸುನಿಲ್ ಛೆಟ್ರಿ ಅವರ ದನಿಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಾಥ್ ನೀಡಿದ್ದಾರೆ. "ಕ್ರೀಡಾಭಿಮಾನಿಗಳು ಮೈದಾನದಲ್ಲಿ ಪಂದ್ಯ ಸವಿದು ತಂಡವನ್ನು ಪ್ರೋತ್ಸಾಹಿಸಬೇಕು,'' ಎಂಬ ವಿಡಿಯೊ ತುಣುಕನ್ನು ಛೆಟ್ರಿ ಸಾಮಾಜಿಕ ಜಾಲತಾಣ ಟ್ವಿಟರ್‌ನ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

"ಭಾರತ ಕ್ರೀಡಾ ರಾಷ್ಟ್ರವಾಗಬೇಕಾದರೆ ಎಲ್ಲ ಕ್ರೀಡೆಗಳಿಗೂ ಸಮಾನ ಪ್ರೋತ್ಸಾಹ ಹಾಗೂ ಬೆಂಬಲ ಅಗತ್ಯವಿದೆ. ನನ್ನ ಆತ್ಮೀಯ ಗೆಳೆಯ ಹಾಗೂ ಭಾರತ ಫುಟ್ಬಾಲ್ ತಂಡದ ನಾಯಕ ಕೆಲವು ನಿಮಿಷಗಳ ಹಿಂದಷ್ಟೇ ವಿಡಿಯೋ ಸಂದೇಶದಲ್ಲಿ ಮಾಡಿರುವ ಮನವಿಗೆ ಕ್ರೀಡಾಭಿಮಾನಿಗಳು ಓಗೊಡಬೇಕಿದೆ,'' ಎಂದು ಕೊಹ್ಲಿ ಮನವಿ ಮಾಡಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More