ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಮುಂದುವರಿದ ಕ್ಲೇ ಕೋರ್ಟ್ ಕಿಂಗ್ ಗೆಲುವಿನ ಯಾನ

ಫ್ರೆಂಚ್ ಓಪನ್‌ನಲ್ಲಿ ಸ್ಪೇನ್‌ನ ನಡಾಲ್ ಜಯದ ಓಟ ಮುಂದುವರಿದಿದೆ. ಸೋಮವಾರ (ಜೂನ್ ೪) ೪ನೇ ಸುತ್ತಿನ ಗೆಲುವಿನೊಂದಿಗೆ ಪ್ಯಾರಿಸ್‌ನಲ್ಲಿ ೧೨ನೇ ಬಾರಿಗೆ ಎಂಟರ ಘಟ್ಟಕ್ಕೆ ಧಾವಿಸಿ ದಾಖಲೆ ಬರೆದರು. ಇತ್ತ, ಮಹಿಳಾ ವಿಭಾಗದಲ್ಲಿ ಹ್ಯಾಲೆಪ್ ಕ್ವಾರ್ಟರ್‌ ತಲುಪಿದರೆ, ವೋಜ್ನಿಯಾಕಿ ಹೊರಬಿದ್ದರು

ವೃತ್ತಿಬದುಕಿನ ಹದಿನೇಳನೇ ಗ್ರಾಂಡ್‌ಸ್ಲಾಮ್ ದಾಖಲೆಯೊಂದಿಗೆ ಪ್ಯಾರಿಸ್‌ನಲ್ಲಿ ೧೧ನೇ ಫ್ರೆಂಚ್ ಓಪನ್ ಪ್ರಶಸ್ತಿ ಕಚ್ಚುವ ಧಾವಂತದಲ್ಲಿರುವ ವಿಶ್ವದ ನಂ ೧ ಆಟಗಾರ ರಾಫೆಲ್ ನಡಾಲ್ ಉದ್ದೇಶಿತ ಗುರಿಸಾಧನೆಯತ್ತ ದಾಪುಗಾಲಿಟ್ಟಿದ್ದಾರೆ. ಫಿಲಿಪ್ಪಿ ಚಾಟ್ರಿಯರ್ ಕೋರ್ಟ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ನಡಾಲ್, ಜರ್ಮನಿಯ ಮ್ಯಾಕ್ಸಿಮಿಲಿಯನ್ ಮಾರ್ಟೆರರ್ ವಿರುದ್ಧ ೬-೩, ೬-೨, ೭-೬ (೭/೪) ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಎಂಟರ ಘಟ್ಟಕ್ಕೆ ಧಾವಿಸಿದರು.

ಎರಡು ಮತ್ತು ಮೂರನೇ ಸೆಟ್‌ನಲ್ಲಿ ವಿಶ್ವದ ೭೦ನೇ ಶ್ರೇಯಾಂಕಿತ ಆಟಗಾರ ಮ್ಯಾಕ್ಸಿಮಿಲಿಯನ್ ಅವರಿಂದ ಸರ್ವ್ ಕಳೆದುಕೊಂಡ ನಡಾಲ್, ಕೊನೆಗೂ ಪುಟಿದೆದ್ದು ಎರಡು ತಾಸು, ಮೂವತ್ತು ನಿಮಿಷಗಳ ಹಣಾಹಣಿಯಲ್ಲಿ ಜಯಶಾಲಿಯಾದರು. ಅಂದಹಾಗೆ, ಈ ಗೆಲುವಿನೊಂದಿಗೆ ಗ್ರಾಂಡ್‌ಸ್ಲಾಮ್ ಚರಿತ್ರೆಯಲ್ಲಿ ಅತಿಹೆಚ್ಚು ಗೆಲುವು ಸಾಧಿಸಿದ ಸಾರ್ವಕಾಲಿಕ ಶ್ರೇಷ್ಠ ಟೆನಿಸಿಗರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದರು. ಮೊದಲೆರಡು ಸ್ಥಾನಗಳನ್ನು ರೋಜರ್ ಫೆಡರರ್ (೩೩೨) ಹಾಗೂ ನೊವಾಕ್ ಜೊಕೊವಿಚ್ (೨೪೪) ಅಲಂಕರಿಸಿದ್ದಾರೆ. ೨೩೪ನೇ ಗ್ರಾಂಡ್‌ಸ್ಲಾಮ್ ಗೆಲುವು ಸಾಧಿಸಿದ ನಡಾಲ್, ಮುಂದಿನ ಸುತ್ತಿನಲ್ಲಿ ಅರ್ಜೆಂಟೀನಾ ಆಟಗಾರ ಡೀಗೊ ಶಿವಾರ್ಟ್ಜ್‌ಮನ್ ವಿರುದ್ಧ ಕಾದಾಡಲಿದ್ದಾರೆ.

೨೨ರ ಹರೆಯದ ಜರ್ಮನ್ ಆಟಗಾರ ಮ್ಯಾಕ್ಸಿಮಿಲಿಯನ್, ಮೊದಲ ಸೆಟ್‌ನಲ್ಲಿಯೇ ನಡಾಲ್ ಸರ್ವೀಸ್ ತುಂಡರಿಸಿ ಪ್ರತಿರೋಧದ ಲಕ್ಷಣ ತೋರಿದರು. ಆದರೆ, ನಡಾಲ್ ಒಂದರ ಹಿಂದೊಂದರಂತೆ ಐದು ಗೇಮ್‌ಗಳ ಗೆಲುವಿನೊಂದಿಗೆ ತಿರುಗಿಬಿದ್ದರು. ಇನ್ನು, ಎರಡನೇ ಸೆಟ್‌ನಲ್ಲಿಯೂ ಮ್ಯಾಕ್ಸಿಮಿಲಿಯನ್ ಸಮಬಲ ಸಾಧಿಸಲು ಯತ್ನಿಸಿದರು. ಆದರೆ, ಅದಕ್ಕೆ ನಡಾಲ್ ಅಸ್ಪದ ಕಲ್ಪಿಸಲಿಲ್ಲ. ಇಷ್ಟಾದರೂ, ಮೂರನೇ ಸೆಟ್ ಮಾತ್ರ ಪ್ರೇಕ್ಷಕರ ಕುತೂಹಲ ಕೆರಳಿಸಿತು. ೩-೧ ಮುನ್ನಡೆ ಪಡೆದ ಮ್ಯಾಕ್ಸಿಮಿಲಿಯನ್, ನಡಾಲ್ ವಿರುದ್ಧ ಈ ಬಾರಿ ಮೇಲುಗೈ ಸಾಧಿಸುವ ಸುಳಿವು ನೀಡಿದರು. ಆದರೆ, ನಿಧಾನಗತಿಯಲ್ಲಿ ನಿಯಂತ್ರಣ ಸಾಧಿಸಿದ ನಡಾಲ್, ನೋಡ ನೋಡುತ್ತಿದ್ದಂತೆ ಸೆಟ್ ಅನ್ನು ಟೈಬ್ರೇಕರ್‌ನಲ್ಲಿ ಸೆಟ್ ಅನ್ನು ವಶಕ್ಕೆ ಪಡೆದರು.

ನಿರ್ಗಮಿಸಿದ ಕೆವಿನ್

ಇನ್ನು, ಪುರುಷರ ಸಿಂಗಲ್ಸ್ ವಿಭಾಗದ ಇನ್ನೊಂದು ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾದ ಆರನೇ ಶ್ರೇಯಾಂಕಿತ ಆಟಗಾರ ಕೆವಿನ್ ಆಂಡರ್ಸನ್ ವೀರೋಚಿತ ಸೋಲಿನೊಂದಿಗೆ ಟೂರ್ನಿಯಿಂದ ನಿರ್ಗಮಿಸಿದರು. ಅರ್ಜೆಂಟೀನಾ ಆಟಗಾರ ಡೀಗೊ ವಿರುದ್ಧ ಪಂದ್ಯದ ಕೊನೇ ಕ್ಷಣದವರೆಗೂ ಸೆಣಸಿದ ಕೆವಿನ್ ಕಡೆಗೂ ಅರ್ಜೆಂಟೀನಾ ಆಟಗಾರನ ವಿರುದ್ಧ ಸೋಲೊಪ್ಪಿಕೊಂಡರು.

ಹೆಚ್ಚೂ ಕಮ್ಮಿ ನಾಲ್ಕು ತಾಸುಗಳವರೆಗೆ ನಡೆದ ಈ ಜಿದ್ದಾಜಿದ್ದಿನ ಕಾದಾಟದಲ್ಲಿ ಕೆವಿನ್ ಆಂಡರ್ಸನ್ ವಿರುದ್ಧ ಡೀಗೊ ೧-೬, ೨-೬, ೭-೫, ೭-೬ (೭/೦), ೬-೨ ಸೆಟ್‌ಗಳಲ್ಲಿ ಜಯ ಪಡೆದರು. ಮೊದಲ ಎರಡೂ ಸೆಟ್‌ಗಳಲ್ಲಿ ಹಿನ್ನಡೆ ಅನುಭವಿಸಿದರೂ, ಆನಂತರದ ಮೂರೂ ಸೆಟ್‌ಗಳಲ್ಲಿ ದಿಟ್ಟ ಹೋರಾಟ ನಡೆಸಿದ ಡೀಗೊ, ನಡಾಲ್ ವಿರುದ್ಧ ಕ್ವಾರ್ಟರ್‌ಫೈನಲ್‌ನಲ್ಲಿ ಸೆಣಸುವ ಅರ್ಹತೆ ಗಿಟ್ಟಿಸಿದರು.

ಹ್ಯಾಲೆಪ್ ಕ್ವಾರ್ಟರ್‌ಗೆ

ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ನಂ ೧ ಆಟಗಾರ್ತಿ ರೊಮೇನಿಯಾದ ಸಿಮೋನಾ ಹ್ಯಾಲೆಪ್ ಕ್ವಾರ್ಟರ್‌ಫೈನಲ್ ತಲುಪಿದರು. ಎಲಿಸಿ ಮೆರ್ಟೆನ್ಸ್ ವಿರುದ್ಧದ ಅಂತಿಮ ಹದಿನಾರರ ಘಟ್ಟದ ಪಂದ್ಯದಲ್ಲಿ ಎಲಿಸಿ ಮೆರ್ಟೆನ್ಸ್ ವಿರುದ್ಧ ಹ್ಯಾಲೆಪ್ ೬-೨, ೬-೧ ನೇರ ಸೆಟ್‌ಗಳಲ್ಲಿ ಗೆಲುವು ಪಡೆದರು. ಎರಡೂ ಸೆಟ್‌ಗಳಲ್ಲಿ ಆಕ್ರಮಣಕಾರಿ ಪ್ರದರ್ಶನ ನೀಡಿದ ಹ್ಯಾಲೆಪ್ ಅಮೋಘ ಗೆಲುವು ಪಡೆದರು. ಚೊಚ್ಚಲ ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಾಗಿ ಹೋರಾಡುತ್ತಿರುವ ಹ್ಯಾಲೆಪ್ ಮುಂದಿನ ಸುತ್ತಿನಲ್ಲಿ ಜರ್ಮನ್ ಆಟಗಾರ್ತಿ ಏಂಜಲಿಕ್ ಕೆರ್ಬರ್ ವಿರುದ್ಧ ಸೆಣಸಲಿದ್ದಾರೆ. ಅಂದಹಾಗೆ, ಸೋಮವಾರ (ಜೂನ್ ೪) ನಡೆದ ಮತ್ತೊಂದು ಪ್ರೀಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕೆರ್ಬರ್, ಕೆರೋಲೈನ್ ಗಾರ್ಸಿಯಾ ವಿರುದ್ಧ ೬-೨, ೬-೩ ಸೆಟ್‌ಗಳಿಂದ ಜಯಿಸಿದರು.

ವೋಜ್ನಿಯಾಕಿ ನಿರ್ಗಮನ

ಇದನ್ನೂ ಓದಿ : ಸೆರೆನಾ- ಶರಪೋವಾ ಕಾದಾಟ ನೋಡುವ ಮೊದಲು ಈ ಸಂಗತಿಗಳು ನಿಮಗೆ ಗೊತ್ತಿರಲಿ

ವರ್ಷದ ಮೊದಲ ಗ್ರಾಂಡ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಗೆಲುವು ಸಾಧಿಸಿದ ಡೆನ್ಮಾರ್ಕ್ ಆಟಗಾರ್ತಿ ಕೆರೋಲಿನ್ ವೋಜ್ನಿಯಾಕಿ ಫ್ರೆಂಚ್ ಓಪನ್ ಪಂದ್ಯಾವಳಿಯಿಂದ ನಿರ್ಗಮಿಸಿದರು. ಭಾನುವಾರ (ಜೂನ್ ೩) ನಡೆದ ಪ್ರೀಕ್ವಾರ್ಟರ್‌ಫೈನಲ್ ಪಂದ್ಯವು ಮಳೆಯಿಂದಾಗಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಸೋಮವಾರ ಮುಂದುವರೆದ ಪಂದ್ಯದಲ್ಲಿ ರಷ್ಯನ್ ಆಟಗಾರ್ತಿ ಡರಿಯಾ ಕಸಾಕಿನಾ ೭-೬ (೭/೫) ಮತ್ತು ೬-೩ ಸೆಟ್‌ಗಳ ಅಂತರದಿಂದ ವೋಜ್ನಿಯಾಕಿ ವಿರುದ್ಧ ಗೆಲುವು ಪಡೆದರು. ಮೊದಲ ಸೆಟ್ ಸೋಲಿನಿಂದ ಕಂಗೆಟ್ಟಿದ್ದ ವೋಜ್ನಿಯಾಕಿ, ಎರಡನೇ ಸೆಟ್‌ನಲ್ಲಿ ೩-೩ ಸಮಬಲ ಸಾಧಿಸಿದ್ದರು. ಆದರೆ, ಅಂತಿಮವಾಗಿ ಸೋಮವಾರ ಮುಂದುವರೆದ ಪಂದ್ಯದಲ್ಲಿ ವೋಜ್ನಿಯಾಕಿ ಸೋಲನ್ನು ಕಸಾಕಿನಾ ಖಚಿತಪಡಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More