ಎಂಟರ ಘಟ್ಟಕ್ಕೆ ಜೊಕೊ ದಾಪುಗಾಲು; ವೋಜ್ನಿಯಾಕಿ ಕೈಹಿಡಿದ ವರುಣ!

ವಿಶ್ವದ ಮಾಜಿ ನಂ.೧ ಆಟಗಾರ ನೊವಾಕ್ ಜೊಕೊವಿಚ್ ಹದಿಮೂರನೇ ಗ್ರಾಂಡ್‌ಸ್ಲಾಮ್‌ಗಾಗಿ ಹೋರಾಟ ಮುಂದುವರಿಸಿ, ಫ್ರೆಂಚ್ ಓಪನ್‌ ಕ್ವಾರ್ಟರ್‌ ಪ್ರವೇಶಿಸಿದ್ದಾರೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಕೆರೋಲಿನ್ ವೋಜ್ನಿಯಾಕಿ ಸೋಲಿನ ಸುಳಿಯಲ್ಲಿ ಸಿಲುಕಿದ್ದು, ಸದ್ಯ, ಆಕೆಯನ್ನು ವರುಣ ಕೈಹಿಡಿದಿದ್ದಾನೆ!

ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಇನ್ನೊಂದು ಪ್ರಶಸ್ತಿ ಎತ್ತಿಹಿಡಿಯುವ ಧಾವಂತದಲ್ಲಿರುವ ನೊವಾಕ್ ಜೊಕೊವಿಚ್, ಎಂಟನೇ ಘಟ್ಟಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ (ಜೂನ್ ೩) ತಡರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ನೊವಾಕ್, ಸ್ಪೇನ್ ಆಟಗಾರ ಫೆರ್ನಾಂಡೊ ವರ್ಡೆಸ್ಕೊ ವಿರುದ್ಧ ೬-೩, ೬-೪, ೬-೨ ನೇರ ಹಾಗೂ ಸುಲಭ ಸೆಟ್‌ಗಳಲ್ಲಿ ಗೆಲುವು ದಾಖಲಿಸಿದರು. ಫಿಲಿಪ್ಪಿ ಚಾಟ್ರಿಯರ್ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಸ್ಪೇನ್ ಆಟಗಾರನ ಎದುರು ಸೊಗಸಾದ ಆಟವಾಡಿದ ಜೊಕೊವಿಚ್, ಫ್ರೆಂಚ್ ಓಪನ್‌ನಲ್ಲಿ ೧೨ನೇ ಬಾರಿಗೆ ಕ್ವಾರ್ಟರ್‌ಫೈನಲ್ ತಲುಪಿದ ಸಾಧನೆ ಮಾಡಿದರು.

ಎಡಗೈ ಆಟಗಾರ ವರ್ಡೆಸ್ಕೊ ಶುರುವಿನಲ್ಲಿ ಪ್ರತಿರೋಧದ ಸುಳಿವು ನೀಡಿದರಾದರೂ, ಪಂದ್ಯ ಸಾಗುತ್ತಾ ಹೋದಂತೆ ನಿತ್ರಾಣರಾದಂತೆ ಕಂಡುಬಂದರು. ಕೆಲವೊಂದು ಆಕರ್ಷಕ ವಿನ್ನರ್‌ಗಳನ್ನು ಸಿಡಿಸಿದ ವರ್ಡೆಸ್ಕೊ, ಜೊಕೊವಿಚ್‌ಗೆ ಪ್ರಬಲ ಸವಾಲಾಗಿ ಪರಿಣಮಿಸುವ ಸಾಧ್ಯತೆಗಳಿತ್ತಾದರೂ, ಇದ್ದಕ್ಕಿದ್ದಂತೆ ಅವರು ಬಳಲಿದಂತೆ ಕಂಡುಬಂದರು. ಇದಕ್ಕೆ ಪ್ರತಿಯಾಗಿ, ಆರಂಭಿಕ ಸೆಟ್‌ನಲ್ಲಿ ಒಮ್ಮೆ ಮಾತ್ರ ಸರ್ವ್ ಕಳೆದುಕೊಂಡ ಜೊಕೊವಿಚ್ ಸುಲಭವಾಗಿಯೇ ಜಯದ ನಗೆಬೀರಿದರು. ಇನ್ನು, ಎರಡು ಮತ್ತು ಮೂರನೇ ಸೆಟ್‌ನಲ್ಲಿಯೂ ಜೊಕೊವಿಚ್ ಮೇಲುಗೈ ಸಾಧಿಸಿದರು. ೨೦೧೬ರಲ್ಲಿ ಫ್ರೆಂಚ್ ಓಪನ್ ಗೆಲ್ಲುವುದರೊಂದಿಗೆ ಎಲ್ಲಾ ಗ್ರಾಂಡ್‌ಸ್ಲಾಮ್ ಜಗತ್ತಿನ ಎಲ್ಲ ಪ್ರಶಸ್ತಿಗಳನ್ನು ಜಯಿಸಿದ ದಾಖಲೆ ಪೂರೈಸಿದ ಜೊಕೊವಿಚ್, ಮುಂದಿನ ಸುತ್ತಿನಲ್ಲಿ ಮಾರ್ಕೊ ಸೆಚಿನಾಟೊ ವಿರುದ್ಧ ಸೆಣಸಲಿದ್ದಾರೆ.

ಗಫಿನ್ ಮಣಿಸಿದ ಮಾರ್ಕೊ

ಪುರುಷರ ಸಿಂಗಲ್ಸ್ ವಿಭಾಗದ ಇನ್ನೊಂದು ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಬೆಲ್ಜಿಯಂನ ಡೇವಿಡ್ ಗಫಿನ್ ಹೋರಾಟಕ್ಕೆ ಇಟಲಿಯ ಮಾರ್ಕೊ ಸೆಚಿನಾಟೊ ತೆರೆ ಎಳೆದರು. ನಾಲ್ಕು ಸೆಟ್‌ಗಳ ಹಣಾಹಣಿಯಲ್ಲಿ ಮಾರ್ಕೊ, ೭-೫, ೪-೬, ೬-೦, ೬-೩ ಸೆಟ್‌ಗಳಲ್ಲಿ ಗೆಲುವು ಪಡೆದು ಮುಂದಿನ ಸುತ್ತಿಗೆ ಧಾವಿಸಿದರು. "ನನ್ನ ಮಟ್ಟಿಗೆ ಇದೊಂದು ಕನಸಿನಂತಿದೆ. ಖಂಡಿತವಾಗಿಯೂ ನನಗೆ ಸಂತಸವಾಗುತ್ತಿದೆ. ನಾನೀಗ ಕ್ವಾರ್ಟರ್‌ಫೈನಲ್‌ನಲ್ಲಿ ಆಡುತ್ತಿದ್ದೇನೆ ಎಂದು ನೆನೆಯುವುದನ್ನೇ ನಂಬಲಾಗುತ್ತಿಲ್ಲ,'' ಎಂದು ಗಫಿನ್ ವಿರುದ್ಧದ ಗೆಲುವಿನ ಬಳಿಕ ಮಾರ್ಕೊ ಸಂತಸ ವ್ಯಕ್ತಪಡಿಸಿದರು.

ಅಂದಹಾಗೆ, ಸೋಮವಾರ (ಜೂನ್ ೪) ನಡೆಯಲಿರುವ ಇನ್ನೊಂದು ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಫ್ಯಾಬಿಯೊ ಫಾಗ್ನಿನಿ ಕ್ರೊವೇಷಿಯಾದ ಮರಿನ್ ಸಿಲಿಕ್ ವಿರುದ್ಧ ಸೆಣಸುತ್ತಿದ್ದಾರೆ. ಒಂದೊಮ್ಮೆ ಫ್ಯಾಬಿಯೋ ಈ ಸಿಲಿಕ್ ವಿರುದ್ಧ ಗೆಲುವು ಸಾಧಿಸಿದ್ದೇ ಆದಲ್ಲಿ, ೧೯೬೮ರ ನಂತರ ಗ್ರಾಂಡ್‌ಸ್ಲಾಮ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಇಬ್ಬರು ಇಟಲಿ ಆಟಗಾರರು ಆಡಿದ ಸಾಧನೆ ಬರೆಯಲಿದ್ದಾರೆ. ಈ ಹಿಂದೆ ೧೯೭೩ರಲ್ಲಿ ಪಾಲೊ ಬೆರ್ಟೊಲುಕಿ ಮತ್ತು ಅಡ್ರಿಯಾನೊ ಪನಟ್ಟಾ ರೊಲ್ಯಾಂಡ್ ಗ್ಯಾರೋಸ್‌ನ ಎಂಟರ ಘಟ್ಟಕ್ಕೆ ಪ್ರವೇಶ ಪಡೆದ ಸಾಧನೆ ಮಾಡಿದ್ದರು.

ಇದನ್ನೂ ಓದಿ : ಫ್ರೆಂಚ್ ಓಪನ್‌ ಟೆನಿಸ್ | ಮತ್ತೆ ಸೆರೆನಾ-ಶರಪೋವಾ ಹಣಾಹಣಿ ಸಂಭವ

ವೋಜ್ನಿಯಾಕಿಗೆ ಅಗ್ನಿಪರೀಕ್ಷೆ

ವರ್ಷದ ಮೊದಲ ಗ್ರಾಂಡ್‌ಸ್ಲಾಮ್ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಕೆರೋಲಿನ್ ವೋಜ್ನಿಯಾಕಿ ಸೋಲಿನ ಸುಳಿಗೆ ಸಿಲುಕಿದ್ದಾರೆ. ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯವು ಮಳೆಯಿಂದಾಗಿ ಸ್ಥಗಿತಗೊಂಡಿದ್ದು, ವೋಜ್ನಿಯಾಕಿ ಪಾಲಿಗೆ ವರವಾಗಿ ಪರಿಣಮಿಸಿತು. ರಷ್ಯನ್ ಆಟಗಾರ್ತಿ ಡರಿಯಾ ಕಸಾಕಿನಾ ವಿರುದ್ಧದ ಹಣಾಹಣಿಯಲ್ಲಿ ವೋಜ್ನಿಯಾಕಿ ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿ ಎರಡನೇ ಸೆಟ್‌ನಲ್ಲಿ ಸಮಬಲ ಸಾಧಿಸಿದ್ದಾಗ ಪಂದ್ಯ ಸ್ಥಗಿತಗೊಂಡಿತು.

ಮಳೆಯಿಂದಾಗಿ ಅರ್ಧಕ್ಕೇ ನಿಂತಿರುವ ಪಂದ್ಯದಲ್ಲಿ ರಷ್ಯನ್ ಆಟಗಾರ್ತಿಯ ವಿರುದ್ಧ ವೋಜ್ನಿಯಾಕಿ ೬-೭ (೫/೭) ಹಾಗೂ ೩-೩ ಅಂತರದಲ್ಲಿದ್ದು, ಫ್ರೆಂಚ್ ಓಪನ್ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಗಳಿಸಲು ಸದ್ಯ ಸಮಬಲದಲ್ಲಿರುವ ಎರಡನೇ ಸೆಟ್ ಅನ್ನು ಗೆಲ್ಲುವುದು ಮಾತ್ರವಲ್ಲ, ಮೂರನೇ ಹಾಗೂ ನಿರ್ಣಾಯಕ ಸೆಟ್‌ ಅನ್ನೂ ಗೆಲ್ಲಬೇಕಾದ ಒತ್ತಡದಲ್ಲಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More