ಸೆರೆನಾ- ಶರಪೋವಾ ಕಾದಾಟ ನೋಡುವ ಮೊದಲು ಈ ಸಂಗತಿಗಳು ನಿಮಗೆ ಗೊತ್ತಿರಲಿ

ರೊಲ್ಯಾಂಡ್ ಗ್ಯಾರೋಸ್‌ ಟೂರ್ನಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಫ್ರೆಂಚ್ ಓಪನ್ ಮತ್ತೊಮ್ಮೆ ವಿಶ್ವ ಟೆನಿಸಿಗರ ಚಿತ್ತ ಸೆಳೆದಿರುವುದು ಸೆರೆನಾ ವಿಲಿಯಮ್ಸ್ ಹಾಗೂ ಶರಪೋವಾ ಕಾದಾಟದ ಕ್ಷಣಕ್ಕಾಗಿ. ಸೋಮವಾರ (ಜೂನ್ ೪) ಸಂಜೆ ನಡೆಯಲಿರುವ ಪ್ರೀಕ್ವಾರ್ಟರ್‌ಗೆ ಟೆನಿಸ್ ಜಗತ್ತೇ ಕೌತುಕದಿಂದ ಕಾಯುತ್ತಿದೆ

ಲಂಡನ್‌ನ ವಿಂಬಲ್ಡನ್ ಕ್ಲಾರ್ಕ್ ರೂಂನಲ್ಲಿ ಸೆರೆನಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಯಾವ ಉಪಶಮನವೂ ಆಕೆಯ ದುಃಖವನ್ನು ಭರಿಸುವಂತಿರಲಿಲ್ಲ. ಉಕ್ಕುಕ್ಕಿ ಬರುತ್ತಿದ್ದ ಕಂಬನಿಯನ್ನು ತಡೆಯಲಾಗದ ಸೆರೆನಾ ಕಡೆಗೂ ತನ್ನನ್ನು ತಾನೇ ಸಂತೈಸಿಕೊಂಡಿದ್ದಳು. ಅದು ೨೦೦೪ರ ವಿಂಬಲ್ಡನ್ ಫೈನಲ್. ಮರಿಯಾ ಶರಪೋವಾಗೆ ಆಗಷ್ಟೇ ಹದಿನಾಲ್ಕರ ವಯಸ್ಸು. ಕೃಷ್ಣಸುಂದರಿ ಸೆರೆನಾ ವಿಲಿಯಮ್ಸ್‌ ಆಗ ೧೯ರ ಏರು ಜವ್ವನೆ. ಟೆನಿಸ್ ಅಂಗಣದಲ್ಲಿ ವೈಭವದ ಉತ್ತುಂಗದಲ್ಲಿದ್ದ ಸೆರೆನಾ, ತನಗಿಂತ ಐದು ವರ್ಷ ಕಿರಿಯಳಾದ ಶರಪೋವಾ ಎದುರು ಸೋತು ದಿಕ್ಕೆಟ್ಟಂತಾಗಿ ತತ್ತರಿಸಿದ್ದರು.

ಸೆರೆನಾ ಮಾತ್ರವಲ್ಲ, ಇಡೀ ಟೆನಿಸ್ ಜಗತ್ತೇ ಬೆಚ್ಚಿಬಿದ್ದಿತ್ತು ಶರಪೋವಾ ಎಂಬ ಹದಿಹರೆಯದ ಆಟಗಾರ್ತಿಯ ಕೆಚ್ಚೆದೆಯ ಆಟಕ್ಕೆ. ಸಂಪೂರ್ಣ ಏಕಪಕ್ಷೀಯವಾಗಿದ್ದ ಆ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸೆರೆನಾ ವಿರುದ್ಧ ೬-೧, ೬-೪ ಸೆಟ್‌ಗಳಲ್ಲಿ ಶರಪೋವಾ ವಿಜೃಂಭಿಸಿ ಚೊಚ್ಚಲ ವಿಂಬಲ್ಡನ್ ಚಾಂಪಿಯನ್ ಆಗಿದ್ದು ಮಾತ್ರವಲ್ಲ, ವೃತ್ತಿಬದುಕಿನ ಮೊಟ್ಟಮೊದಲ ಗ್ರಾಂಡ್‌ಸ್ಲಾಮ್ ಗೆದ್ದು ವಿಶ್ವವನ್ನೇ ಗೆದ್ದ ಸಂಭ್ರಮದಲ್ಲಿ ತೇಲಿದ್ದಳು.

ಅಂದಹಾಗೆ, ಈ ಸೋಲು ಸೆರೆನಾಳನ್ನು ಅದೆಷ್ಟರ ಮಟ್ಟಿಗೆ ಕಂಗೆಡಿಸಿತ್ತು ಮತ್ತು ಆ ಒಂದು ಸೋಲು ಆಕೆಯನ್ನು ಯಾವ ಬಗೆಯಲ್ಲಿ ಬೇಗುದಿಗೆ ತಳ್ಳಿತ್ತು ಎಂಬುದನ್ನು ಸೆರೆನಾಳ ಸುಡುಮಾತುಗಳಲ್ಲೇ ಕೇಳಬೇಕು. "ಐ ವಿಲ್ ನೆವರ್ ಲಾಸ್ ಟು ದಟ್ ಲಿಟಲ್ ಬಿಚ್ ಅಗೇನ್...'' ಎಂದು ಸೆರೆನಾ ತನ್ನೊಬ್ಬ ಸ್ನೇಹಿತೆಯ ಬಳಿ ಹೇಳಿಕೊಂಡದ್ದನ್ನು ತಾನು ಕೇಳಿದ್ದೆ ಎಂದು ಶರಪೋವಾ ಹೇಳಿಕೊಂಡಿದ್ದರು.

೨೦೦೪ರ ವಿಂಬಲ್ಡನ್ ಫೈನಲ್‌ ಪಂದ್ಯದಲ್ಲಿ ಶರಪೋವಾ ಐತಿಹಾಸಿಕ ಗೆಲುವು

ತಾನೆಂತಹ ಛಲಗಾತಿ ಎಂಬುದನ್ನು ಸೆರೆನಾ ತದನಂತರದ ದಿನಗಳಲ್ಲಿ ನಿರೂಪಿಸಿರುವುದನ್ನು ಟೆನಿಸ್ ಚರಿತ್ರೆಯ ಪುಟಗಳೇ ಸಾರಿ ಹೇಳುತ್ತವೆ. ಅದೃಷ್ಟದ ಬಲದಿಂದ ವಿಂಬಲ್ಡನ್‌ನಲ್ಲಿ ಐತಿಹಾಸಿಕ ಗೆಲುವಿನ ನಂತರ ಶರಪೋವಾ ವೃತ್ತಿಬದುಕಿನಲ್ಲಿ ಸೆರೆನಾ ವಿರುದ್ಧ ಕಾದಾಡಿ ಸೋತಿರುವ ಕ್ಷಣಗಳೇ ಹೆಚ್ಚು ಎಂಬುದನ್ನು ಈ ಆಟಗಾರ್ತಿಯರ ವೃತ್ತಿಬದುಕಿನ ಒಟ್ಟಾರೆ ೨೧ ಮುಖಾಮುಖಿಗಳಲ್ಲಿನ ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ.

ಅಂದಹಾಗೆ, ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಸೆರೆನಾ ವಿಶ್ವದ ೪೫೧ನೇ ಶ್ರೇಯಾಂಕಿತೆಯಾಗಿದ್ದರೆ, ಶರಪೋವಾ ೨೮ನೇ ಶ್ರೇಯಾಂಕ ಪಡೆದಿದ್ದಾರೆ. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಮಗುವಿಗೆ ಜನ್ಮ ನೀಡಿದ ನಂತರದಲ್ಲಿ ಸೆರೆನಾ ಆಡುತ್ತಿರುವ ಮೊಟ್ಟಮೊದಲ ಗ್ರಾಂಡ್‌ಸ್ಲಾಮ್ ಟೂರ್ನಿಯ ಪ್ರೀಕ್ವಾರ್ಟರ್‌ಫೈನಲ್ ಪಂದ್ಯವಿದು. ನಿಷೇಧಿತ ಮೆಲ್ಡೋನಿಯಂ ಉದ್ದೀಪನಾ ಮದ್ದು ಸೇವಿಸಿದ ತಪ್ಪಿಗಾಗಿ ಹದಿನೈದು ತಿಂಗಳ ನಿಷೇಧ ಶಿಕ್ಷೆ ಪೂರೈಸಿದ ನಂತರದಲ್ಲಿ ಶರಪೋವಾ ಮೊದಲ ಬಾರಿಗೆ ಕೃಷ್ಣಸುಂದರಿ ವಿರುದ್ಧ ಸೆಣಸುತ್ತಿರುವುದರಿಂದಲೂ ಈ ಪಂದ್ಯ ಮಹತ್ವ ಪಡೆದುಕೊಂಡಿದೆ. ಇನ್ನು, ಈ ಇಬ್ಬರು ಆಟಗಾರ್ತಿಯರು ಕೊನೇ ಬಾರಿಗೆ ಮುಖಾಮುಖಿಯಾಗಿದ್ದುದು ೨೦೧೬ರ ಆಸ್ಟ್ರೇಲಿಯನ್ ಓಪನ್‌ನಲ್ಲಿ. ಎಂಟರ ಘಟ್ಟದ ಆ ಪಂದ್ಯದಲ್ಲಿ ಸೆರೆನಾ, ೬-೪, ೬-೧ ಸೆಟ್‌ಗಳಲ್ಲಿ ಶರಪೋವಾ ಸವಾಲಿಗೆ ತೆರೆಎಳೆದಿದ್ದರು.

2015ರ ಆಸ್ಟ್ರೇಲಿಯಾ ಓಪನ್ ಫೈನಲ್‌ನಲ್ಲಿ ಸೆರೆನಾ ಜಯಭೇರಿ

ಸೆರೆನಾ ಹ್ಯಾಟ್ರಿಕ್!

ಮರಿಯಾ ಶರಪೋವಾ ಮತ್ತು ಸೆರೆನಾ ವಿಲಿಯಮ್ಸ್ ನಡುವಣದ ಒಟ್ಟಾರೆ ಕಾದಾಟದಲ್ಲಿ ನಾಲ್ಕು ಮುಖಾಮುಖಿ ಮಾತ್ರ ಎರಡು ಸೆಟ್‌ಗಳ ಆಚೆಗೆ ಸಾಗಿದೆ. ಈ ನಾಲ್ಕು ಪಂದ್ಯಗಳ ಮೂರು ಸೆಟ್‌ಗಳ ಹಣಾಹಣಿಯಲ್ಲಿಯೂ ಸೆರೆನಾ ಮೂರು ಬಾರಿ ಜಯಭೇರಿ ಬಾರಿಸಿ ಹ್ಯಾಟ್ರಿಕ್ ಸಾಧಕಿ ಎನಿಸಿದ್ದರೆ, ಮರಿಯಾ ಶರಪೋವಾ ಗೆದ್ದಿರುವುದು ಕೇವಲ ಒಂದರಲ್ಲಿ ಮಾತ್ರ.

ವಿಂಬಲ್ಡನ್ ಜಯಿಸಿದ ಅದೇ ೨೦೦೪ರ ಜೆಪಿ ಮಾರ್ಗನ್ ಚೇಸ್ ಓಪನ್‌ ಚಾಂಪಿಯನ್‌ಶಿಪ್‌ನಲ್ಲಿ ಮರಿಯಾ ಶರಪೋವಾ, ಸೆರೆನಾ ವಿರುದ್ಧ ೬-೪, ೨-೬, ೪-೬ ಸೆಟ್‌ಗಳಲ್ಲಿ ಜಯಿಸಿದ್ದರು. ಇದರೊಂದಿಗೆ ಈ ಋತುವಿನಲ್ಲಿ ಸೆರೆನಾ ವಿರುದ್ಧ ಶರಪೋವಾ ಎರಡು ಗೆಲುವು ಸಾಧಿಸಿದ್ದರು. ವೃತ್ತಿಬದುಕಿನಲ್ಲಿ ಸೆರೆನಾ ಎದುರು ಶರಪೋವಾ ಗೆದ್ದಿರುವುದು ಈ ಎರಡು ಪಂದ್ಯಗಳಲ್ಲಷ್ಟೆ. ಕಳೆದೊಂದು ದಶಕದಲ್ಲಿ ಎದುರುಬದುರಾದ ಉಳಿದೆಲ್ಲ ಪಂದ್ಯಗಳಲ್ಲೂ ಸೆರೆನಾ ಆಟದೆದುರು ಶರಪೋವಾ ನಿಲ್ಲಲಾಗಿಲ್ಲ.

ಇದನ್ನೂ ಓದಿ : ನಡಾಲ್ ನಾಲ್ಕನೇ ಸುತ್ತಿಗೆ; ಶರಪೋವಾ ಜೊತೆ ಸೆಣಸಾಟಕ್ಕೆ ಸೆರೆನಾ ಸಜ್ಜು
ಸೋಮವಾರ ನಡೆಯಲಿರುವ ಪ್ರೀಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಶರಪೋವಾ ಫೇವರಿಟ್ ಎಂದು ನನಗನಿಸುತ್ತದೆ. ಏಕೆಂದರೆ, ಕಳೆದೊಂದು ವರ್ಷದಿಂದ ಆಕೆ ಆಡುತ್ತಾ ಬರುತ್ತಿದ್ದಾರೆ. ನಾನಾದರೋ ತಾಯ್ತನದ ನಂತರದಲ್ಲಿ ಆಡುತ್ತಿರುವ ಪ್ರಧಾನ ಟೂರ್ನಿ ಇದು 
ಸೆರೆನಾ ವಿಲಿಯಮ್ಸ್, ವಿಶ್ವದ ಮಾಜಿ ನಂ ೧ ಆಟಗಾರ್ತಿ

೨೦೦೫ರ ಆಸ್ಟ್ರೇಲಿಯಾ ಓಪನ್‌ನಲ್ಲಿ ಸೆರೆನಾ, ೨-೬, ೭-೫, ೮-೬ರಲ್ಲಿ ಗೆಲುವು ಸಾಧಿಸಿದರೆ, ೨೦೦೮ರ ಫ್ಯಾಮಿಲಿ ಸರ್ಕಲ್ ಕಪ್‌ನಲ್ಲಿ ಸೆರೆನಾ, ೭-೫, ೪-೬, ೬-೧ ಸೆಟ್‌ಗಳಲ್ಲಿ ಜಯದ ನಗೆಬೀರಿದ್ದರು. ಇನ್ನು, ೨೦೧೩ರ ಸೋನಿ ಓಪನ್ ಟೆನಿಸ್ ಪಂದ್ಯಾವಳಿಯ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಮೊದಲ ಸೆಟ್‌ನಲ್ಲಿ ೪-೬ ಹಿನ್ನಡೆ ಅನುಭವಿಸಿದ ಸೆರೆನಾ, ಬಳಿಕ ೬-೩, ೬-೦ ಸೆಟ್‌ಗಳಲ್ಲಿ ಶರಪೋವಾ ಕೈಯಿಂದ ಪ್ರಶಸ್ತಿ ಕಸಿದಿದ್ದರು!

ಶರಪೋವಾ-ಸೆರೆನಾ ಒಟ್ಟಾರೆ ಮುಖಾಮುಖಿಯ ಕಿರುನೋಟ

೨೦೦೪ರ ಸೋನಿ ಎರಿಕ್‌ಸನ್ ಓಪನ್: ಸೆರೆನಾ ವಿಲಿಯಮ್ಸ್ - ೬-೪, ೬-೩

೨೦೦೪ರ ವಿಂಬಲ್ಡನ್ ಫೈನಲ್: ಮರಿಯಾ ಶರಪೋವಾ - ೬-೧, ೬-೪

೨೦೦೪ರ ಜೆಪಿ ಮಾರ್ಗನ್ ಚೇಸ್ ಓಪನ್: ಮರಿಯಾ ಶರಪೋವಾ - ೪-೬, ೬-೨, ೬-೪

೨೦೦೫ರ ಆಸ್ಟ್ರೇಲಿಯಾ ಓಪನ್: ಸೆರೆನಾ ವಿಲಿಯಮ್ಸ್ - ೨-೬, ೭-೫, ೮-೬

೨೦೦೭ರ ಆಸ್ಟ್ರೇಲಿಯಾ ಓಪನ್: ಸೆರೆನಾ ವಿಲಿಯಮ್ಸ್ - ೬-೧, ೬-೨

೨೦೦೭ರ ಸೋನಿ ಎರಿಕ್‌ಸನ್ ಓಪನ್: ಸೆರೆನಾ ವಿಲಿಯಮ್ಸ್ - ೬-೧, ೬-೧

೨೦೦೮ರ ಫ್ಯಾಮಿಲಿ ಸರ್ಕಲ್ ಕಪ್: ಸೆರೆನಾ ವಿಲಿಯಮ್ಸ್ - ೭-೫, ೪-೬, ೬-೧

೨೦೧೦ರ ವಿಂಬಲ್ಡನ್ ಚಾಂಪಿಯನ್‌ಶಿಪ್‌: ಸೆರೆನಾ ವಿಲಿಯಮ್ಸ್ - ೭-೬, ೬-೪

೨೦೧೧ರ ಬ್ಯಾಂಕ್ ಆಫ್ ವೆಸ್ಟ್ ಕ್ಲಾಸಿಕ್ ಚಾಂಪಿಯನ್‌ಶಿಪ್ - ಸೆರೆನಾ ವಿಲಿಯಮ್ಸ್ ೬-೧, ೬-೩

೨೦೧೨ರ ಮ್ಯಾಡ್ರಿಡ್ ಓಪನ್ ಕ್ವಾರ್ಟರ್‌ಫೈನಲ್: ಸೆರೆನಾ ವಿಲಿಯಮ್ಸ್ - ೬-೧, ೬-೩

೨೦೧೨ರ ಲಂಡನ್ ಒಲಿಂಪಿಕ್ಸ್ ಫೈನಲ್: ಸೆರೆನಾ ವಿಲಿಯಮ್ಸ್ - ೬-೦, ೬-೧

೨೦೧೨ರ ಬಿಎನ್‌ಪಿ ಪರಿಬಾಸ್ ಚಾಂಪಿಯನ್‌ಶಿಪ್: ಸೆರೆನಾ ವಿಲಿಯಮ್ಸ್ - ೬-೪, ೬-೩

೨೦೧೩ರ ಸೋನಿ ಓಪನ್ ಫೈನಲ್: ಸೆರೆನಾ ವಿಲಿಯಮ್ಸ್ - ೪-೬, ೬-೩, ೬-೦

೨೦೧೩ ಮ್ಯಾಡ್ರಿಡ್ ಓಪನ್ ಚಾಂಪಿಯನ್‌ಶಿಪ್ ಫೈನಲ್: ಸೆರೆನಾ ವಿಲಿಯಮ್ಸ್ - ೬-೧, ೬-೪

೨೦೧೩ರ ರೋಲ್ಯಾಂಡ್ ಗ್ಯಾರೋಸ್ ಫೈನಲ್: ಸೆರೆನಾ ವಿಲಿಯಮ್ಸ್ - ೬-೪, ೬-೪

೨೦೧೪ರ ಬ್ರಿಸ್ಬೇನ್ ಇಂಟರ್‌ನ್ಯಾಷನಲ್ ಸೆಮಿಫೈನಲ್: ಸೆರೆನಾ ವಿಲಿಯಮ್ಸ್ - ೬-೨, ೭-೬

೨೦೧೪ರ ಸೋನಿ ಓಪನ್ ಚಾಂಪಿಯನ್‌ಶಿಪ್ ಸೆಮಿಫೈನಲ್: ಸೆರೆನಾ ವಿಲಿಯಮ್ಸ್ - ೬-೪, ೬-೩

೨೦೧೫ರ ಆಸ್ಟ್ರೇಲಿಯಾ ಓಪನ್ ಫೈನಲ್: ಸೆರೆನಾ ವಿಲಿಯಮ್ಸ್ - ೬-೩, ೭-೬

೨೦೧೫ರ ವಿಂಬಲ್ಡನ್ ಸೆಮಿಫೈನಲ್: ಸೆರೆನಾ ವಿಲಿಯಮ್ಸ್ - ೬-೨, ೬-೪

೨೦೧೬ರ ಆಸ್ಟ್ರೇಲಿಯಾ ಓಪನ್ ಕ್ವಾರ್ಟರ್‌ಫೈನಲ್: ಸೆರೆನಾ ವಿಲಿಯಮ್ಸ್ - ೬-೪, ೬-೧

೨೦೧೮ರ ರೊಲ್ಯಾಂಡ್ ಗ್ಯಾರೋಸ್ ಪ್ರೀಕ್ವಾರ್ಟರ್‌ಫೈನಲ್: ?

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More