ಫುಟ್ಬಾಲ್ ನಾಡು ಸಾಂಬಾದಲ್ಲಿ ಪೀಲೆ ಚಿಮ್ಮಿಸಿದ ಮೊದಲ ವಿಶ್ವಕಪ್ ಲಾಸ್ಯ

ಐದು ವಿಶ್ವಕಪ್ ಗೆಲುವಿನೊಂದಿಗೆ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅಧಿಪತ್ಯ ಸ್ಥಾಪಿಸಿರುವ ಸಾಂಬಾ ನಾಡು ಬ್ರೆಜಿಲ್‌ನಲ್ಲಿ ಮೊದಲ ಬಾರಿಗೆ ವಿಶ್ವಕಪ್ ನಸು ಲಾಸ್ಯವಾಡಿದ್ದು ೧೯೫೮ರ ಆರನೇ ಆವೃತ್ತಿಯಲ್ಲಿ. ಪೀಲೆಯ ಮಿಂಚಿನ ಆಟದಿಂದ ಸ್ವೀಡನ್ ವಿರುದ್ಧ ೫-೨ ಗೋಲುಗಳ ಗೆಲುವು ಸಾಧ್ಯವಾಯಿತು

ಜೂನ್ ೮ರಿಂದ ೨೯ರವರೆಗೆ ಒಟ್ಟು ೨೨ ದಿನಗಳ ಸ್ವೀಡನ್‌ನಲ್ಲಿ ನಡೆದ ಈ ಬಾರಿಯ ವಿಶ್ವಕಪ್‌ ಕೂಡ ಹಲವಾರು ವೈಶಿಷ್ಟ್ಯತೆಗಳಿಂದ ಕೂಡಿತ್ತು. ಹದಿನಾರು ತಂಡಗಳು ಭಾಗವಹಿಸಿದ್ದ ಈ ಟೂರ್ನಿಯಲ್ಲಿ ಮುಖ್ಯವಾಗಿ, ಬ್ರಿಟನ್‌ ಒಂದರಿಂದಲೇ ನಾಲ್ಕು ತಂಡಗಳು ಅಂತಿಮ ಸುತ್ತಿಗೆ ಅರ್ಹತೆ ಗಿಟ್ಟಿಸಿದ್ದು. ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್ ಹಾಗೂ ಐರ್ಲೆಂಡ್ ಈ ಸಾಧನೆ ಮಾಡಿದ್ದು ಗಮನ ಸೆಳೆಯಿತು.

ಇನ್ನು, ತಾಯ್ನಾಡಿನ ಖಂಡದಾಚೆಗೆ ವಿಶ್ವಕಪ್ ಗೆದ್ದ ಮೊದಲ ತಂಡವೆಂಬ ಹೆಗ್ಗಳಿಕೆ ಬ್ರೆಜಿಲ್‌ನದ್ದಾಯಿತು. ಬ್ರೆಜಿಲ್‌ನ ಈ ಸಾಧನೆ ಬಳಿಕ ಅರ್ಜೆಂಟೀನಾ (೧೯೮೬), ಸ್ಪೇನ್ (೨೦೧೦) ಮತ್ತು ಜರ್ಮನಿ ೨೦೧೪ರಲ್ಲಿ ತವರಿನಾಚೆ ವಿಶ್ವಕಪ್ ಗೆದ್ದ ತಂಡಗಳೆನಿಸಿದವು. ಇದೇ ವೇಳೆ ವಿಶ್ವ ಫುಟ್ಬಾಲ್‌ಗೆ ಪೀಲೆ ಎಂಬ ಅಸಾಮಾನ್ಯ ಹಾಗೂ ಅಪ್ರತಿಮ ಆಟಗಾರನ ಅದ್ಭುತ ಪರಿಚಯ ಮಾಡಿಕೊಟ್ಟದ್ದು ಕೂಡಾ ಈ ವಿಶ್ವಕಪ್‌ನ ಹೆಗ್ಗಳಿಕೆ. ಮೊದಲ ವಿಶ್ವಕಪ್‌ನಲ್ಲಿ ಆಡಿದಾಗ ಪೀಲೆಗೆ ಕೇವಲ ಹದಿನೇಳರ ಹರೆಯ.

ಇಟಲಿಗೆ ಬಿದ್ದ ದುಃಸ್ವಪ್ನ!

ಅಂದಹಾಗೆ, ಈ ಪಂದ್ಯಾವಳಿಗೆ ಅರ್ಹತೆ ಪಡೆಯಲು ವಿಫಲವಾದ ಎರಡು ಬಾರಿಯ ಚಾಂಪಿಯನ್ ಇಟಲಿ ತಂಡ ದೇಶದ ಅಸಂಖ್ಯಾತ ಫುಟ್ಬಾಲ್ ಪ್ರೇಮಿಗಳನ್ನು ತಿವಿತಕ್ಕೆ ಒಳಪಡಿಸಿತ್ತು. ೧೯೩೦ರ ಮೊದಲ ವಿಶ್ವಕಪ್‌ನಲ್ಲಿ ಇಟಲಿ ಆಡಲಿಲ್ಲವಾದರೂ, ಆಗ ಅರ್ಹತಾ ಸುತ್ತಿನ ನಂತರ ಪ್ರಧಾನ ಘಟ್ಟಕ್ಕೆ ತಲುಪಬೇಕಾದ ಜರೂರೇನಿರಲಿಲ್ಲ. ಕೇವಲ ಇಟಲಿ ಮಾತ್ರವಲ್ಲ, ಎರಡು ಬಾರಿಯ ಚಾಂಪಿಯನ್ ಹಾಗೂ ೧೯೫೪ರಲ್ಲಿ ಸೆಮಿಫೈನಲ್ ತಲುಪಿದ್ದ ಉರುಗ್ವೆ ಕೂಡಾ ಈ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಲಿಲ್ಲ. ಅಂತೆಯೇ, ಸ್ಪೇನ್ ಮತ್ತು ಬೆಲ್ಜಿಯಂಗೂ ಏಳನೇ ಆವೃತ್ತಿಯಲ್ಲಿ ಆಡುವ ಅದೃಷ್ಟ ಸಿಗಲಿಲ್ಲ.

ಪೀಲೆ ಎಂಬ ಅಸಾಮಾನ್ಯನ ಉದಯ

ಏಳನೇ ವಿಶ್ವಕಪ್‌ ಫೈನಲ್‌ನಲ್ಲಿ ಘಟಿಸಿದ ಹಲವಾರು ಹೊಸತರದ ದಾಖಲೆಗಳು ೨೦೧೪ರವರೆಗೂ ಅಚ್ಚಳಿಯದೆ ಉಳಿದಿತ್ತು. ಪ್ರಮುಖವಾಗಿ ಹದಿನೇಳರ ನವೋಲ್ಲಾಸಿ ಪೀಲೆ ಎಂಬ ಅದ್ಭುತ ಕಾಲ್ಚೆಂಡಿನ ಚೋರ ಜಗತ್ತನ್ನೇ ತನ್ನತ ತಿರುಗಿಸಿಕೊಂಡ.
ವಿಶ್ವಕಪ್‌ ಆಡಿದ ಅತ್ಯಂತ ಕಿರಿಯ ಆಟಗಾರನೆಂಬ ಅಭಿದಾನಕ್ಕೆ ಪಾತ್ರವಾದ ಪೀಲೆ, ಫೈನಲ್‌ನಲ್ಲಿಯೂ ಮಿಂಚು ಹರಿಸಿ ತನ್ನ ನಾಡಿಗೆ ಮೊದಲ ವಿಶ್ವಕಪ್ ಗೆದ್ದುಕೊಟ್ಟಿದ್ದ. ಇಡೀ ಟೂರ್ನಿಯಲ್ಲಿ ಆರು ಗೋಲುಗಳನ್ನು ದಾಖಲಿಸಿದ್ದ ಪೀಲೆಯ ಕಾಲ್ಚಳಕಕ್ಕೆ ವಿಶ್ವ ಫುಟ್ಬಾಲ್ ತಜ್ಞರು ಬೆಚ್ಚಿಬಿದ್ದಿದ್ದರು. ಘಟಾನುಘಟಿ ಆಟಗಾರರ ನಡುವೆ ಹದಿನೇಳರ ಹದಿಹರೆಯದ ಯುವಕನ ಪಾದಚಲನೆ, ಚೆಂಡಿನ ಮೇಲೆ ಆತನ ನಿಯಂತ್ರಣ ಬೆರಗು ಮೂಡಿಸಿತು.

ಇದನ್ನೂ ಓದಿ : ಫಿಫಾ ಫ್ಲಾಶ್‌ಬ್ಯಾಕ್ | ಗೆಲ್ಲಿ ಇಲ್ಲವೇ ಮಡಿಯಿರಿ ಎಂದಿದ್ದನೇ ಮುಸಲೋನಿ?

ಫೈನಲ್‌ ವಿಶೇಷಗಳು

ಇನ್ನು, ಈ ವಿಶ್ವಕಪ್‌ನ ಫೈನಲ್‌ ಹಲವಾರು ದಾಖಲೆಗಳ ಆಗರವಾಗಿತ್ತು. ವಿಜೇತ ತಂಡ ಗಳಿಸಿದ ಐದು ಗೋಲುಗಳು ಮತ್ತು ಪ್ರಶಸ್ತಿ ಸುತ್ತಿನಲ್ಲಿ ದಾಖಲಾದ ಒಟ್ಟು ಏಳು ಗೋಲುಗಳು ವಿಶ್ವಕಪ್ ಫೈನಲ್‌ನಲ್ಲೇ ಗರಿಷ್ಠ ಎನಿಸಿದವು. ಅಂತೆಯೇ, ವಿಶ್ವಕಪ್ ಫೈನಲ್‌ನಲ್ಲಿ ಇದೇ ಮೊದಲ ಬಾರಿಗೆ ಯೂರೋಪ್ ಮತ್ತು ದಕ್ಷಿಣ ಅಮೆರಿಕದ ರಾಷ್ಟ್ರಗಳು ಸೆಣಸಿದವು. ಇನ್ನು, ಟೂರ್ನಿಯಲ್ಲಿ ಫ್ರಾನ್ಸ್‌ನ ಸ್ಟ್ರೈಕರ್ ಜಸ್ಟಿನ್ ಫಾಂಟೈನ್ ೧೩ ಗೋಲುಗಳನ್ನು ಹೊಡೆದು ವಿಶ್ವಕಪ್‌ನಲ್ಲಿ ಅದುವರೆಗೆ ದಾಖಲಾಗಿದ್ದ ಅತಿಹೆಚ್ಚು ಗೋಲುಗಳ ಸರದಾರ ಸ್ಯಾಂಡರ್ ಕೊಚ್ಚಿಸ್ (೧೧ ಗೋಲುಗಳು) ಸಾಧನೆಯನ್ನು ಹಿಂದಿಕ್ಕಿದರು.

ಸೊಲ್ನಾದ ರಾಸುಂಡಾ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯಕ್ಕೆ ೪೯,೭೩೭ ಪ್ರೇಕ್ಷಕರು ಖುದ್ದು ಸಾಕ್ಷಿಯಾದರು. ಶುರುವಿಗೆ ಗೋಲಿನ ಖಾತೆ ತೆರೆದದ್ದೇ ಸ್ವೀಡನ್. ನಾಲ್ಕನೇ ನಿಮಿಷದಲ್ಲಿ ಲಿಡೊಲ್ಮ್ ಗೋಲು ಹೊಡೆದು ಮುನ್ನಡೆ ತಂದರು. ಇದರೊಂದಿಗೆ ಸಿಮೋನ್ಸನ್ (೮೦ನೇ ನಿ.) ಸ್ವೀಡನ್‌ಗೆ ಮತ್ತೊಂದು ಗೋಲು ತಂದುಕೊಟ್ಟರಷ್ಟೆ. ಆದರೆ, ಬ್ರೆಜಿಲ್‌ ಪರ ವಾವಾ (೯ ಮತ್ತು ೩೨ನೇ ನಿ.), ಪೀಲೆ (೫೫ ಮತ್ತು ೯೦ನೇ ನಿ.)  ತಲಾ ಎರಡೆರಡು ಗೋಲು ಬಾರಿಸಿದರೆ, ಜಾಗಲ್ಲೊ ೬೮ನೇ ನಿಮಿಷದಲ್ಲಿ ಗೋಲು ಹೊಡೆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More