ಭೂಕಂಪನದ ಜೊತೆ ವಿಶ್ವವನ್ನೇ ಬೆಚ್ಚಿಬೀಳಿಸಿದ ‘ಬ್ಯಾಟಲ್ ಆಫ್ ಸ್ಯಾಂಟಿಯಾಗೊ’

ಚಿಲಿಯಲ್ಲಿ ನಡೆದ ೧೯೬೨ರ ೭ನೇ ವಿಶ್ವಕಪ್‌ ಆರಂಭಕ್ಕೂ ಮುನ್ನವೇ ಅಲುಗಾಡಿತ್ತು ಭೂಮಿ. ರಿಕ್ಟರ್ ಮಾಪನದಲ್ಲಿ ಬಹು ತೀವ್ರತೆಯಿಂದ ಕೂಡಿದ್ದ ೯.೫ರಷ್ಟು ಕಂಪನ ಭೂರಮೆಯನ್ನು ಅದುರಿಸಿತ್ತು. ಇಷ್ಟಾದರೂ, ಫಿಫಾ ಮುತುವರ್ಜಿಯಲ್ಲಿ ನಡೆದ ಟೂರ್ನಿಯಲ್ಲಿ ಬ್ರೆಜಿಲ್ ಮತ್ತೆ ಚಾಂಪಿಯನ್ ಆಯಿತು

ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ವಿವಾದಗ್ರಸ್ತ ಟೂರ್ನಿಯಾಗಿ ಚಿಲಿ ಟೂರ್ನಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಮೊಟ್ಟಮೊದಲ ಬಾರಿಗೆ ಕ್ರೀಡಾ ಮೈದಾನದಲ್ಲೇ ಆಟಗಾರರ ನಡುವೆ ಹಿಂಸಾಚಾರ ನಡೆದದ್ದು ಕೂಡ ಈ ವಿಶ್ವಕಪ್‌ನ ಕಪ್ಪುಚುಕ್ಕೆಯಾಯಿತು. ಚಿಲಿ ಹಾಗೂ ಇಟಲಿ ನಡುವಣದ ಮೊದಲ ಸುತ್ತಿನ ಪಂದ್ಯದಲ್ಲೇ ಇದು ಸ್ಫೋಟಿಸಿತು. ಇದು 'ಬ್ಯಾಟಲ್ ಆಫ್ ಸ್ಯಾಂಟಿಯಾಗೊ' ಎಂದೇ ಕುಖ್ಯಾತಿ ಪಡೆಯಿತು! ಸ್ನೇಹ-ಶಾಂತಿಯ ಸೇತುವಾಗಿದ್ದ ಕ್ರೀಡಾ ಮೈದಾನದಲ್ಲಿ ಆಟಗಾರರ ಬಡಿದಾಟ ಫಿಫಾ ವಿಶ್ವಕಪ್‌ಗೆ ಅಪಖ್ಯಾತಿ ತಂದಿತಲ್ಲದೆ, ಈ ದುರ್ವರ್ತನೆಗಾಗಿ ಜಗತ್ತೇ ಬೆಚ್ಚಿಬಿದ್ದಿತು.

ಅಂದಹಾಗೆ, ಈ ಹಿಂಸಾಚಾರದ ಪಂದ್ಯದಲ್ಲಿ ಚಿಲಿ ೨-೦ ಗೋಲುಗಳಿಂದ ಇಟಲಿಯನ್ನು ಹಣಿದಿತ್ತು. ಇನ್ನು, ಇಟಲಿ ಮತ್ತು ಜರ್ಮನಿ ನಡುವಣದ ಪಂದ್ಯ ಕೂಡ ಹಿಂಸಾಚಾರದಿಂದ ಕೂಡಿತ್ತು. "ಟೂರ್ನಿಯು ನೆತ್ತರು ಸುರಿಸುತ್ತಿರುವ ಬಾತ್ ಟಬ್‌ನಂತೆ ಪರಿವರ್ತಿತವಾಗುತ್ತಿದೆ'' ಎಂದು ಬ್ರಿಟನ್‌ನ ದೈನಿಕ ‘ಡೈಲಿ ಎಕ್ಸ್‌ಪ್ರೆಸ್’ ವರದಿ ಮಾಡಿತಲ್ಲದೆ, ಜರ್ಮನಿ ಮತ್ತು ಇಟಲಿ ನಡುವಣದ ಪಂದ್ಯವನ್ನು 'ಕುಸ್ತಿ ಮತ್ತು ಯುದ್ಧ' ಎಂದೇ ವ್ಯಾಖ್ಯಾನಿಸಿತು.

ಪಂದ್ಯ ಶುರುವಾದ ೧೨ ಸೆಕೆಂಡುಗಳಲ್ಲಿಯೇ ಮೊದಲ ಅಹಿತಕರ ಘಟನೆ ನಡೆಯಿತು. ಇಟಲಿ ಆಟಗಾರ ಜಿಯಾರ್ಜಿಯೊ ಫೆರ್ರಿನಿ ಹೊನೊರಿನೊ ಲಾಂಡಾಗೆ ಡಿಕ್ಕಿ ಹೊಡೆದು ಗಾಯಗೊಳಿಸಿದರು, ಮೈದಾನ ತೊರೆಯುವಂತೆ ಹೇಳಿದಾಗ ನಿರಾಕರಿಸಿದರು. ಅಂತಿಮವಾಗಿ ಪೊಲೀಸರು ಅವರನ್ನು ಬಲವಂತವಾಗಿ ಹೊರಹೊಯ್ದಿದ್ದರು.

ಇತ್ತ, ಚಿಲಿ ಆಟಗಾರ ಲಿಯೊನೆಲ್ ಸ್ಯಾಂಚೆಜ್, ಇಟಲಿಯ ಮರಿಯೊ ಡೇವಿಡ್‌ಗೆ ಪಂಚ್ ಮಾಡಿದ್ದು ಕೂಡ ಕ್ರೀಡಾ ಸೌಹಾರ್ದತೆಗೆ ಧಕ್ಕೆ ತಂದಿತು. ಪಟ್ಟು ಬಿಡದ ಡೇವಿಸ್ ಕೂಡ ಸ್ಯಾಂಚೆಜ್‌ಗೆ ಡಿಚ್ಚಿ ಹೊಡೆಯಲು ಹೋದರಾದರೂ, ಸ್ಯಾಂಚೆಜ್ ಅವರ ದಾಳಿಯನ್ನು ತಪ್ಪಿಸಿಕೊಂಡರು. ಆ ಬಳಿಕ ಅವರನ್ನೂ ಮೈದಾನದಿಂದ ಹೊರಗೆ ಕಳಿಸಲಾಯಿತು. ಪಂದ್ಯ ಮುಗಿಯುವವರೆಗೂ ಇದೇ ವೈಷಮ್ಯದ ಕಾದಾಟ ನಾಚಿಕೆಗೇಡಿನ ಸಂಗತಿಯಾಯಿತು.

ಬ್ರೆಜಿಲ್ ಚಾಂಪಿಯನ್

ಇಷ್ಟೆಲ್ಲ ಅವಾಂತರಗಳ ಮಧ್ಯೆಯೂ ೧೬ ತಂಡಗಳು ಭಾಗವಹಿಸಿದ್ದ ಈ ವಿಶ್ವಕಪ್‌ನಲ್ಲಿ ಒಂದರ ಹಿಂದೊಂದರಂತೆ ಎರಡು ವಿಶ್ವಕಪ್‌ಗಳನ್ನು ಗೆದ್ದ ಬ್ರೆಜಿಲ್‌ನ ಬೊಂಬಾಟ್ ಆಟಕ್ಕೆ ವಿಶ್ವವೇ ತಲೆದೂಗಿತ್ತು. ಸ್ಟಾರ್ ಆಟಗಾರ ಪೀಲೆ ಪಂದ್ಯಾವಳಿಯ ಬಹುತೇಕ ಪಂದ್ಯಗಳಿಗೆ ಗಾಯದ ನಿಮಿತ್ತ ಅಲಭ್ಯವಾಗಿದ್ದರು. ಇಷ್ಟಾದರೂ ಹಾಲಿ ಚಾಂಪಿಯನ್ ಬ್ರೆಜಿಲ್ ಫೈನಲ್ ತಲುಪಿತ್ತಲ್ಲದೆ, ಪ್ರಶಸ್ತಿ ಸುತ್ತಿನಲ್ಲಿ ೩-೧ ಗೋಲುಗಳಿಂದ ಜೆಕೊಸ್ಲೊವಾಕಿಯಾ ವಿರುದ್ಧ ಜಯ ಸಾಧಿಸಿ ಎರಡನೇ ಬಾರಿಗೆ ಟ್ರೋಫಿ ಗೆದ್ದ ಉರುಗ್ವೆ, ಇಟಲಿ ಜತೆಗೆ ಗುರುತಿಸಿಕೊಂಡಿತು.

ಇನ್ನು, ಈ ಪಂದ್ಯಾವಳಿಯಲ್ಲಿ ಆರು ಮಂದಿ ಆಟಗಾರರು ತಲಾ ನಾಲ್ಕು ಗೋಲುಗಳನ್ನು ಬಾರಿಸಿ ಶ್ರೇಷ್ಠ ಸಾಧನೆ ಮೆರೆದವರೆನಿಸಿಕೊಂಡರು. ವಿಜೇತ ತಂಡದ ಪರ ಅಮರಿಲ್ಡೊ (೧೭ನೇ ನಿ.), ಜಿಲ್ಟೊ (೬೯ನೇ ನಿ.) ಮತ್ತು ವಾವಾ (೭೮ನೇ ನಿ.) ತಲಾ ಒಂದೊಂದು ಗೋಲು ಬಾರಿಸಿದರೆ, ಜೆಕೊಸ್ಲೊವಾಕಿಯಾ ಪರ ಮಸೊಪುಸ್ಟ್ ೧೫ನೇ ನಿಮಿಷದಲ್ಲಿ ಏಕಾಂಗಿ ಗೋಲು ಬಾರಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More