ಫಿಫಾ ಫ್ಲಾಶ್‌ಬ್ಯಾಕ್ | ಅನನುಭವಿ ಜರ್ಮನಿಯೂ ವಿಶ್ವಕಪ್‌ ಗೆದ್ದು ಬೀಗಿತ್ತು!

ಆರನೇ ವಿಶ್ವಕಪ್ ಪಂದ್ಯಾವಳಿಯ ಬಳಿಕ ನಡೆದ ೧೯೫೪ರ ಆವೃತ್ತಿಯು ವಿಶೇಷ ಕಾರಣಕ್ಕೆ ಸದ್ದು ಮಾಡಿತು. ಅದೇನೆಂದರೆ, ದೂರದರ್ಶನದಲ್ಲಿ ಪ್ರಸಾರ ಕಂಡ ಮೊಟ್ಟಮೊದಲ ವಿಶ್ವಕಪ್ ಫುಟ್ಬಾಲ್ ಆವೃತ್ತಿ ಇದೆನ್ನುವುದು. ಸುರಸುಂದರ ಸ್ವಿಸ್ ನೆಲದಲ್ಲಿ ಅನನುಭವಿ ಜರ್ಮನಿ ವಿಶ್ವ ಚಾಂಪಿಯನ್ನಾಗಿ ಮೆರೆದಾಡಿತು

೧೯೫೪ರ ಜೂನ್ ೧೬ರಿಂದ ಜುಲೈ ೪ರವರೆಗೆ ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ಐದನೇ ಆವೃತ್ತಿಯ ವಿಶ್ವಕಪ್‌ ಹಲವಾರು ವಿಷಯಗಳಿಗೆ ಮೊದಲಾದದ್ದು ಕೂಡ ಗಮನಾರ್ಹ. ಪ್ರತಿ ಪಂದ್ಯದಲ್ಲಿ ದಾಖಲಾದ ಗೋಲಿನ ಸರಾಸರಿ ಹಾಗೂ ಒಟ್ಟಾರೆ ಟೂರ್ನಿಯಲ್ಲಿ ದಾಖಲಾದ ಗೋಲಿನ ಪ್ರಮಾಣದಿಂದಲೂ ಸ್ವಿಟ್ಜರ್ಲೆಂಡ್‌ನಲ್ಲಿನ ವಿಶ್ವಕಪ್ ದಾಖಲೆ ಬರೆಯಿತು.

೧೯ ದಿನಗಳ ಕಾಲ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ಒಟ್ಟು ೧೬ ತಂಡಗಳು ಭಾಗವಹಿಸಿದ್ದವು. ರಷ್ಯಾ ಭಾಗವಹಿಸಿರಲಿಲ್ಲ. ಇದಕ್ಕೆ ಕಾರಣ, ಕಳೆದ ಆವೃತ್ತಿಯಲ್ಲಿ ನೀಡಿದ ಹೀನಾಯ ಪ್ರದರ್ಶನ. ಆದರೆ, ಸ್ಕಾಟ್ಲೆಂಡ್ ಈ ಆವೃತ್ತಿಯಲ್ಲಿ ಆಡುವುದರೊಂದಿಗೆ ವಿಶ್ವಕಪ್‌ಗೆ ಪದಾರ್ಪಣೆ ಮಾಡಿತು.

ಕಳೆದ ನಾಲ್ಕೂ ವಿಶ್ವಕಪ್‌ಗಳ ಫೈನಲ್‌ಗಿಂತಲೂ ಈ ಬಾರಿಯ ವಿಶ್ವಕಪ್ ಫೈನಲ್ ಅತ್ಯಂತ ಸೋಜಿಗ ಮೂಡಿಸಿತ್ತು. ಕಾರಣ, ಆಗೇನೂ ಪಶ್ಚಿಮ ಜರ್ಮನಿ ಫುಟ್ಬಾಲ್‌ನಲ್ಲಿ ವೃತ್ತಿಪರ ಲೀಗ್‌ಗಳಿರಲಿಲ್ಲ. ರಿಯಲ್ ಮ್ಯಾಡ್ರಿಡ್, ಬಾರ್ಸಿಲೋನಾದಂಥ ಸ್ಪೇನ್‌ನ ಫುಟ್ಬಾಲ್ ಲೀಗ್‌ಗಳು ಆಗಲೂ ತನ್ನ ಪ್ರಭುತ್ವ ಸಾಧಿಸಿದ್ದವು. ಇತ್ತ, ಆಗಿನ ಎಲ್ಲ ಕಮ್ಯುನಿಸ್ಟ್ ರಾಷ್ಟ್ರಗಳಂತೆ ಹಂಗೇರಿ ಅತ್ಯಂತ ಶಿಸ್ತುಬದ್ಧ ಹಾಗೂ ವೃತ್ತಿಪರ ಫುಟ್ಬಾಲ್ ಆಡುತ್ತಿತ್ತು. ಇಷ್ಟಾದರೂ, ಹವ್ಯಾಸಿ ಆಟಗಾರರನ್ನೇ ಕಣಕ್ಕಿಳಿಸಿ ವಿಶ್ವ ಚಾಂಪಿಯನ್ ಆದದ್ದು ಜರ್ಮನ್ ಕ್ರೀಡಾ ಇತಿಹಾಸದಲ್ಲಿ ಅವಿಸ್ಮರಣೀಯ ಸಾಧನೆಯಾಗಿ ಚರಿತ್ರೆ ಬರೆಯಿತು.

ಅಂದಹಾಗೆ, ಹಂತದಲ್ಲಿ ಇದೇ ಹಂಗೇರಿ ವಿರುದ್ಧ ೩-೮ ಗೋಲುಗಳಿಂದ ಜರ್ಮನಿ ಸೋತು ಸೊರಗಿದ ನಂತರವೂ ಫೈನಲ್‌ನಲ್ಲಿ ಅದರ ವಿರುದ್ಧವೇ ಗೆದ್ದು ಬೀಗಿದ್ದು ಕೂಡ ಫಿಫಾ ವಿಶ್ವಕಪ್‌ನಲ್ಲಿ ಮೊಟ್ಟಮೊದಲ ನಿದರ್ಶನವೆನಿಸಿಕೊಂಡಿತು. ಆನಂತರದಲ್ಲಿ ಅಂದರೆ, ೧೯೭೪ರಲ್ಲಿ ಇದೇ ಪಶ್ಚಿಮ ಜರ್ಮನಿ, ೧೯೭೮ರಲ್ಲಿ ಅರ್ಜೆಂಟೀನಾ ಹಾಗೂ ೨೦೧೦ರಲ್ಲಿ ಸ್ಪೇನ್ ಗುಂಪು ಹಂತದಲ್ಲಿ ಸೋತ ನಂತರವೂ ಫೈನಲ್‌ನಲ್ಲಿ ಐತಿಹಾಸಿಕ ಗೆಲುವಿನ ದಾಖಲೆ ಬರೆದಿದ್ದವು.

ರೋಚಕತೆಯ ಆಗರ

ಮೊದಲೇ ಹೇಳಿದಂತೆ ಐದನೇ ವಿಶ್ವಕಪ್ ಟೂರ್ನಿಯ ಫೈನಲ್ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದ ರೋಚಕ ತಿರುವು ಪಡೆಯಿತು. ಈ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಪಶ್ಚಿಮ ಜರ್ಮನಿ ೩-೨ ಗೋಲುಗಳಿಂದ ಹಂಗೇರಿ ವಿರುದ್ಧ ಜಯ ಸಾಧಿಸಿತು. ಜಿನುಗುತ್ತಿದ್ದ ಮಳೆಯಲ್ಲಿ ೬೨ ಸಹಸ್ರ ಪ್ರೇಕ್ಷಕರಿಗಿಂತಲೂ ಹೆಚ್ಚು ಕಿಕ್ಕಿರಿದಿದ್ದ ಬೆರ್ನಿಯ ವಾಂಕ್‌ಡಾರ್ಫ್ ಕ್ರೀಡಾಂಗಣದಲ್ಲಿ ಜರ್ಮನ್ನರು ಅದ್ಭುತ ಚಮತ್ಕಾರವನ್ನೇ ಸೃಷ್ಟಿಸಿ ಕಪ್ ಗೆದ್ದರು.

ಪಂದ್ಯದ ಶುರುವಿನಲ್ಲೇ ಹಂಗೇರಿ ಜರ್ಮನ್ನರಿಗೆ ಆಘಾತ ನೀಡಿತು. ಆರನೇ ನಿಮಿಷದಲ್ಲಿ ಪುಸ್ಕಾಸ್ ಗೋಲು ಬಾರಿಸಿದರೆ, ಇದಾದ ಎರಡು ನಿಮಿಷಗಳ ಅಂತರದಲ್ಲೇ ಸಿಬಾರ್ ಗೋಲು ದಾಖಲಿಸಿ ಹಂಗೇರಿಗೆ ೨-೦ ಮುನ್ನಡೆ ತಂದುಕೊಟ್ಟರು. ಇತ್ತ, ಜರ್ಮನಿಯ ಪರ ೧೦ನೇ ನಿಮಿಷದಲ್ಲಿ ಮೊರ್ಲಾಕ್ ಗೋಲು ಹೊಡೆದರೆ, ೧೮ನೇ ನಿಮಿಷದಲ್ಲಿ ಹೆಲ್ಮಟ್ ರಾಹ್ನ್ ಗೋಲು ಬಾರಿಸಿ ದ್ವಿತೀಯಾರ್ಧಕ್ಕೂ ಮುನ್ನ ೨-೨ ಅಂತರ ಕಾಯ್ದುಕೊಳ್ಳಲು ನೆರವಾದರು. ವಿರಾಮದ ನಂತರ ನಡೆದ ಸುದೀರ್ಘ ಕಾದಾಟದಲ್ಲಿ ಇದೇ ಹೆಲ್ಮಟ್ ೮೪ನೇ ನಿಮಿಷದಲ್ಲಿ ಜರ್ಮನಿಗೆ ಐತಿಹಾಸಿಕ ಗೆಲುವಿನ ಗೋಲು ದೊರಕಿಸಿಕೊಟ್ಟರು.

ಐದನೇ ವಿಶ್ವಕಪ್‌ನಲ್ಲಿ ೧೧ ಗೋಲು ಬಾರಿಸಿ ವಿಶ್ವದಾಖಲೆ ಬರೆದ ಸ್ಯಾಂಡರ್ ಕೊಚ್ಸಿಸ್

ಇನ್ನು, ಈ ಟೂರ್ನಿಯಲ್ಲಿ ವಿವಿಧ ರಾಷ್ಟ್ರಗಳ ೬೩ ಆಟಗಾರರು ೧೪೦ ಗೋಲು ಬಾರಿಸಿದರು. ಈ ಪೈಕಿ, ನಾಲ್ಕು ಗೋಲುಗಳು ಸ್ವ-ಗೋಲುಗಳಾಗಿದ್ದವು. ಇನ್ನುಳಿದಂತೆ ಹಂಗೇರಿಯ ಸ್ಟ್ರೈಕರ್ ಸ್ಯಾಂಡ್ರೊ ಕೊಚ್ಸಿಸ್ ಒಟ್ಟು ೧೧ ಗೋಲು ಬಾರಿಸುವುದರೊಂದಿಗೆ ಅದುವರೆಗಿನ ವಿಶ್ವಕಪ್ ಪಂದ್ಯಾವಳಿಗಳಲ್ಲಿ ವೈಯಕ್ತಿಕ ಗೋಲುಧಾರಿಗಳ ಸಾಧನೆಯನ್ನು ಹಿಂದಿಕ್ಕಿ ಹೊಸ ವಿಶ್ವದಾಖಲೆ ಬರೆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More