ಇಂಟರ್‌ಕಾಂಟಿನೆಂಟಲ್ ಕಪ್ | ಭಾರತದ ಹ್ಯಾಟ್ರಿಕ್ ಕನಸು ಕಿವುಚಿದ ಕಿವೀಸ್

ಇಂಟರ್‌ಕಾಂಟಿನೆಂಟಲ್ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾರತ ಮೊದಲ ಸೋಲನುಭವಿಸಿದೆ. ನ್ಯೂಜಿಲೆಂಡ್‌ನ ಬಲವನ್ನು ಹಗುರವಾಗಿ ಪರಿಗಣಿಸಿದ್ದರ ಫಲ ಇದೆಂಬುದು ಸುನಿಲ್ ಛೆಟ್ರಿ ಪಡೆಯ ಅರಿವಿಗೆ ಬಂದಿದ್ದು, ಭಾನುವಾರ (ಜೂ.೧೦) ನಡೆಯಲಿರುವ ಫೈನಲ್‌ನಲ್ಲಿ ಎಚ್ಚರ ವಹಿಸಬೇಕಿದೆ

ಮುಂಬೈ ಅರೇನಾದಲ್ಲಿ ಮತ್ತೊಂದು ಮನಮೋಹಕ ಗೆಲುವಿನೊಂದಿಗೆ ಹ್ಯಾಟ್ರಿಕ್ ಕನಸಿನಲ್ಲಿದ್ದ ಆತಿಥೇಯರನ್ನು ಕಿವೀಸ್ ಬಹುವಾಗಿ ಕಾಡಿತು. ತವರು ಅಭಿಮಾನಿಗಳ ಭರಪೂರ ಬೆಂಬಲದ ಹೊರತಾಗಿಯೂ ಭಾರತ ತಂಡ, ಕಿವೀಸ್‌ನ  ಸವಾಲನ್ನು ಹತ್ತಿಕ್ಕಲಾಗದೆ ೧-೨ ಗೋಲುಗಳ ಅಂತರದಿಂದ ಸೋಲನುಭವಿಸಿತು. ಮೊದಲೆರಡು ಪಂದ್ಯಗಳಲ್ಲಿನ ವೈಭವದ ಗೆಲುವಿನಿಂದ ಫೈನಲ್ ತಲುಪಿರುವ ಭಾರತಕ್ಕೆ ಈ ಸೋಲು ಅಷ್ಟೇನೂ ಹೊಡೆತ ನೀಡದಿದ್ದರೂ, ಪ್ರಶಸ್ತಿ ಸುತ್ತಿಗೆ ಎಚ್ಚರಿಕೆ ವಹಿಸಬೇಕೆಂಬುದನ್ನಂತೂ ಸಾರಿಹೇಳಿತು.

ಈ ಬಾರಿಯೂ ಭಾರತ ತಾನೇ ಮೊದಲ ಗೋಲು ದಾಖಲಿಸುವುದರೊಂದಿಗೆ ಹ್ಯಾಟ್ರಿಕ್ ಗೆಲುವಿಗೆ ಮುನ್ನುಡಿ ಬರೆಯಲು ಯತ್ನಿಸಿದಾದರೂ, ಅದು ಸಾಧ್ಯವಾಗಲಿಲ್ಲ. ಅಮರೀಂದರ್ ಹಾಗೂ ಆಶಿಕ್ ಕಾರುಣ್ಯನ್ ಚಾಣಾಕ್ಷ ಆಟದಿಂದ ಚೆಂಡು ಕಿವೀಸ್ ಗೋಲುಪೆಟ್ಟಿಗೆಯ ಸಮೀಪ ಸಾಗಿದಾಗ ಅದನ್ನು ಗುರಿ ತಲುಪಿಸಲು ಛೆಟ್ರಿ ನಡೆಸಿದ ಯತ್ನ ಕೈಕೊಟ್ಟಿತು. ಮತ್ತೊಂದು ವಿಧದಲ್ಲಿ ಅವರ ಗೋಲಿನ ಹವಣಿಕೆಯನ್ನು ಕಿವೀಸ್‌ನ ರಕ್ಷಣಾ ಪಡೆ ಅತ್ಯಂತ ಯಶಸ್ವಿಯಾಗಿ ಹತ್ತಿಕ್ಕಿತು.

ಇನ್ನು, ಪಂದ್ಯದ ೧೪ನೇ ನಿಮಿಷದಲ್ಲಿ ಜಾಯ್ ಇಂಗಮ್ ತಮ್ಮ ಬಲವನ್ನೆಲ್ಲಾ ಬಿಟ್ಟು ಕಿಕ್ ಮಾಡಿದ ಚೆಂಡು ಗೋಲು ಪೆಟ್ಟಿಗೆಯ ಮೇಲಿನಿಂದಾಚೆಗೆ ಚಿಮ್ಮಿ ನ್ಯೂಜಿಲೆಂಡ್‌ನ ಗೋಲು ಗಳಿಕೆಯ ಅವಕಾಶವೂ ಫಲಿಸಲಿಲ್ಲ. ಆನಂತರದಲ್ಲಿ ನ್ಯೂಜಿಲೆಂಡ್‌ ತಂಡದ ಆಕ್ರಮಣಕಾರಿ ಆಟದೆದುರು ಛೆಟ್ರಿ ಬಳಗ ಸಂಪೂರ್ಣ ಮಂಕಾಯಿತು. ಇದೇ ವೇಳೆ ೨೬ನೇ ನಿಮಿಷದಲ್ಲಿ ಭಾರತ ಗೋಲು ಗಳಿಸುವ ಸದವಕಾಶ ಸೃಷ್ಟಿಸಿಕೊಂಡಿತಾದರೂ, ಕಿವೀಸ್ ಗೋಲಿ ಅದಕ್ಕೆ ಆಸ್ಪದ ಕಲ್ಪಿಸಲಿಲ್ಲ.

ಇಷ್ಟೆಲ್ಲ ಹಗ್ಗ-ಜಗ್ಗಾಟದ ಮಧ್ಯೆ ಪ್ರಥಮಾರ್ಧದ ಅವಧಿ ಮುಗಿಲು ಕೆಲವೇ ನಿಮಿಷಗಳಿವೆ ಎನ್ನುವಾಗ ಅಂದರೆ ೪೫ನೇ ನಿಮಿಷದಲ್ಲಿ ಆಶಿಕ್ ಮತ್ತು ಬಲ್ವಂತ್ ಸಿಂಗ್ ಜಂಟಿ ಕಾರ್ಯಾಚರಣೆಯಲ್ಲಿ ಭಾರತಕ್ಕೆ ಮತ್ತೊಂದು ಗೋಲಿನ ಅವಕಾಶ ಸಿಕ್ಕಿತು. ಈ ಅವಕಾಶವನ್ನು ಛೆಟ್ರಿ ಸದುಪಯೋಗಿಸಿಕೊಂಡು ಭಾರತಕ್ಕೆ ಮುನ್ನಡೆ ತಂದುಕೊಡಲು ನಡೆಸಿದ ಯತ್ನ ವೈಡ್ ಆಯಿತು. ಹೀಗಾಗಿ ಇತ್ತಂಡಗಳೂ ಪ್ರಥಮಾರ್ಧದಲ್ಲಿ ಗೋಲು ದಾಖಲಿಸಲು ವಿಫಲವಾಗಿ ವಿರಾಮದ ನಂತರದ ಹಣಾಹಣಿಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಬೇಕಾಯಿತು.

ಇದನ್ನೂ ಓದಿ : ಸಾಂಬಾ ನೆಲದಲ್ಲಿ ವಿಶ್ವಕಪ್ ಆಡುವ ಫಿಫಾ ಆಹ್ವಾನವನ್ನು ಭಾರತ ತಿರಸ್ಕರಿಸಿತೇಕೆ?

ಮತ್ತೆ ಚೆಟ್ರಿ ಮಿಂಚು

ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದ ಕಿವೀಸ್‌ನ ಪೈಪೋಟಿಯಲ್ಲಿ ಭಾರತದ ಗೋಲು ಗಳಿಕೆ ಅಷ್ಟೇನೂ ಸುಲಭದ್ದಾಗಿರಲಿಲ್ಲ. ಇಷ್ಟಾದರೂ, ದ್ವಿತೀಯಾರ್ಧದಲ್ಲಿ ತನ್ನ ಹೋರಾಟವನ್ನು ಇನ್ನಷ್ಟು ಮೊನಚುಗೊಳಿಸಿದ ಭಾರತ ಯೋಜನಾಬದ್ಧವಾಗಿ ತಾನೇ ಮೊದಲ ಗೋಲು ಹೊಡೆದು ಸಂಭ್ರಮಿಸಿತು. ಆಶಿಕ್, ಬಲ್ವಂತ್ ಮತ್ತು ರಾವ್ಲಿನ್ ಬೋರ್ಜಸ್ ಬದಲಿಗೆ ಜೆಜೆ ಲಾಲ್‌ಪೆಕ್ಲುವಾ, ನರ್ಜರೆ ಮತ್ತು ಪ್ರಣಯ್ ಅವರನ್ನು ಭಾರತದ ಕೋಚ್ ಕಣಕ್ಕಿಳಿಸಿದ್ದು ಫಲ ಕೊಟ್ಟಿತು. ವಿರಾಮದ ನಂತರದ ಎರಡೇ ನಿಮಿಷಗಳ ಅಂತರದಲ್ಲೇ ಛೆಟ್ರಿ ಗೋಲೊಂದನ್ನು ಹೊಡೆದು ಮೈದಾನದಲ್ಲಿದ್ದ ಅಭಿಮಾನಿಗಳನ್ನು ರಂಜಿಸಿದರು.

ಆದರೆ, ಭಾರತದ ಈ ಗೋಲಿಗೆ ಪ್ರತಿಗೋಲು ಹೊಡೆದ ಕಿವೀಸ್ ಅದೂ ಒಂದು ನಿಮಿಷ ಅಂತರದಲ್ಲೇ ಪ್ರತಿರೋಧ ಒಡ್ಡಿದ್ದು ಭಾರತದ ಸಂಭ್ರಮವನ್ನು ಹೆಚ್ಚು ಹೊತ್ತು ಹಿಡಿದಿಡಲಿಲ್ಲ. ಆಂಡ್ರೆ ಸಿ ಜಾಂಗ್ ಭಾರತದ ಗೋಲಿಯನ್ನು ವಂಚಿಸಿ ಸುಲಭ ಗೋಲು ಬಾರಿಸಿ ೧-೧ ಗೋಲಿನ ಸಮಾಂತರ ಸಾಧಿಸಿದರು.

ಇನ್ನು, ಪಂದ್ಯ ಮುಗಿಯಲು ಕೆಲವೇ ನಿಮಿಷಗಳಿವೆ ಎನ್ನುವಾಗ ಅಂದರೆ, ೮೬ನೇ ನಿಮಿಷದಲ್ಲಿ ಭಾರತದ ರಕ್ಷಣಾ ವ್ಯೂಹದೊಳಗೆ ಮಿಂಚಿನಿಂತೆ ನುಗ್ಗಿಬಂದ ಮೋಸೆಸ್ ಡೈಯರ್ ಕಿವೀಸ್‌ನ ಎರಡನೇ ಗೋಲು ದಾಖಲಿಸಿದರು. ಆನಂತರದಲ್ಲಿ ಭಾರತದ ಗೋಲು ಗಳಿಕೆ ಸಾಧ್ಯವಾಗದೆ ಕಿವೀಸ್ ಜಯದ ನಗೆಬೀರಿತು.

ಕೀನ್ಯಾಗೆ ಫೈನಲ್ ಗುರಿ

ಭಾರತ ವಿರುದ್ಧ ನಡೆಯಲಿರುವ ಫೈನಲ್ ಪಂದ್ಯಕ್ಕಾಗಿ ಕೀನ್ಯಾ ಅರ್ಹತೆ ಗಿಟ್ಟಿಸಲು ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಮುಂದಾಗಿದೆ. ಶುಕ್ರವಾರ (ಜೂನ್ ೮) ಇದೇ ಮುಂಬೈ ಅರೇನಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ ಕೀನ್ಯಾ ಕಣಕ್ಕಿಳಿಯಲಿದೆ. ಅಂದಹಾಗೆ, ಈ ನಿರ್ಣಾಯಕ ಪಂದ್ಯದಲ್ಲಿ ತೈಪೆ ವಿರುದ್ಧ ಕೇವಲ ಗೆಲುವಷ್ಟೇ ಅಲ್ಲ, ಹೆಚ್ಚು ಗೋಲುಗಳ ಅಂತರದಿಂದ ಗೆದ್ದರೆ ಅದರ ಫೈನಲ್ ಹಾದಿ ಸುಗಮವಾಗಲಿದೆ. ಅದಕ್ಕಾಗಿ, ಎರಡೂ ಪಂದ್ಯಗಳಲ್ಲಿ ಸೋತು ಸುಣ್ಣವಾಗಿರುವ ತೈಪೆಯನ್ನು ಕೀನ್ಯಾ ಗಂಭೀರವಾಗಿ ಪರಿಗಣಿಸಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More