ಮುಗ್ಗರಿಸಿದ ಮುಗುರುಜಾ, ಕೀಸ್; ಸ್ಟೀಫನ್ಸ್- ಸಿಮೋನಾ ಫೈನಲ್ ಹಣಾಹಣಿ

ಫ್ರೆಂಚ್ ಓಪನ್‌ ಟೆನಿಸ್ ಪಂದ್ಯಾವಳಿಯಲ್ಲಿ ಮಾಜಿ ಚಾಂಪಿಯನ್ ಗಾರ್ಬೈನ್ ಮುಗುರುಜಾ ಸವಾಲಿಗೆ ತೆರೆಬಿದ್ದಿದೆ. ಇತ್ತ, ಆಲ್ ಅಮೆರಿಕನ್ ಕಾದಾಟದಲ್ಲಿ ಮ್ಯಾಡಿಸನ್ ಕೀಸ್ ವಿರುದ್ಧ ಗೆದ್ದ ಸ್ಟೀಫನ್ಸ್ ಇದೀಗ ಶನಿವಾರ (ಜೂ.೯) ನಡೆಯಲಿರುವ ಪ್ರಶಸ್ತಿ ಸುತ್ತಿನಲ್ಲಿ ಸಿಮೋನಾ ಹ್ಯಾಲೆಪ್ ವಿರುದ್ಧ ಸೆಣಸಲಿದ್ದಾರೆ

ಚೊಚ್ಚಲ ಗ್ರಾಂಡ್‌ಸ್ಲಾಮ್ ಗೆಲ್ಲುವ ರೊಮೇನಿಯಾ ಆಟಗಾರ್ತಿ ಸಿಮೋನಾ ಹ್ಯಾಲೆಪ್ ಬಯಕೆ ಮತ್ತೊಮ್ಮೆ ಗರಿಗೆದರಿದೆ. ಮೂರನೇ ಶ್ರೇಯಾಂಕಿತೆ ಸ್ಪೇನ್‌ನ ಗಾರ್ಬೈನ್ ಮುಗುರುಜಾ ವಿರುದ್ಧ ಗುರುವಾರ (ಜೂನ್ ೭) ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಕಾದಾಟದಲ್ಲಿ ಹ್ಯಾಲೆಪ್, ೬-೧, ೬-೪ ಎರಡು ನೇರ ಹಾಗೂ ಸುಲಭ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೆ ಕಾಲಿರಿಸಿದರು. ಇದೇ ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ೨೦೧೪, ೨೦೧೭ರಲ್ಲಿಯೂ ಫೈನಲ್ ತಲುಪಿದ್ದ ಹ್ಯಾಲೆಪ್ ನಿರಾಸೆ ಅನುಭವಿಸಿ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತರಾಗಿದ್ದರು. ಹೀಗಾಗಿ, ಇದು ಆಕೆಯ ಪಾಲಿಗೆ ಮೂರನೇ ರೊಲ್ಯಾಂಡ್ ಗ್ಯಾರೋಸ್ ಫೈನಲ್.

ಇನ್ನು, ಇದೇ ಋತುವಿನ ಆಸ್ಟ್ರೇಲಿಯಾ ಓಪನ್ ಫೈನಲ್‌ನಲ್ಲಿಯೂ ಆಕೆ ರನ್ನರ್‌ಅಪ್ ಸ್ಥಾನಕ್ಕೆ ಕುಸಿದಿದ್ದರು. ವೃತ್ತಿಬದುಕಿನಲ್ಲಿ ಮೂರು ಬಾರಿ ಗ್ರಾಂಡ್‌ಸ್ಲಾಮ್ ಪ್ರಶಸ್ತಿ ತಪ್ಪಿಸಿಕೊಂಡಿರುವ ಹ್ಯಾಲೆಪ್, ಈ ಬಾರಿ ಆ ಸವಾಲನ್ನು ಮೆಟ್ಟಿನಿಲ್ಲುವ ಸಂಕಲ್ಪ ತೊಟ್ಟಿದ್ದಾರೆ. ಅಮೆರಿಕದ ಸ್ಲೊವಾನಿ ಸ್ಟೀಫನ್ಸ್ ವಿರುದ್ಧದ ಪಂದ್ಯವನ್ನು ಆಕೆ ಗಂಭೀರವಾಗಿ ಪರಿಗಣಿಸಿದ್ದಾರೆ.

ರೊಮೇನಿಯಾ ಆಟಗಾರ್ತಿ ಹ್ಯಾಲೆಪ್ ರೊಲ್ಯಾಂಡ್ ಗ್ಯಾರೋಸ್‌ಗೆ ವಿಶ್ವದ ಅಗ್ರಶ್ರೇಯಾಂಕಿತೆಯಾಗಿ ಕಾಲಿರಿಸಿದ್ದರು. ಟೂರ್ನಿಯಾದ್ಯಂತ ಆಕ್ರಮಣಕಾರಿ ಆಟದೊಂದಿಗೆ ಜಯದ ಓಟ ಮುಂದುವರಿಸಿರುವ ಅವರು, ಇದೀಗ ವೃತ್ತಿಬದುಕಿನ ಚೊಚ್ಚಲ ಗ್ರಾಂಡ್‌ಸ್ಲಾಮ್ ಪ್ರಶಸ್ತಿ ಎತ್ತಿಹಿಡಿಯಲು ಇನ್ನೊಂದು ಹೆಜ್ಜೆಯನ್ನಷ್ಟೇ ಕ್ರಮಿಸಬೇಕಿದೆ. "ನಾನಾಡಿದ ಪಂದ್ಯಗಳಲ್ಲೆಲ್ಲ ಬಹುಶಃ ಗಟ್ಟಿ ಅಂಕಣದ ಟೂರ್ನಿಯ ಪಂದ್ಯಗಳೇ ಶ್ರೇಷ್ಠ ಎಂದೆನಿಸುತ್ತದೆ. ಪ್ರತಿದಿನವೂ ಉತ್ತಮವಾಗಿ ಆಡುತ್ತಿರುವುದು ನನಗೆ ಖುಷಿಕೊಟ್ಟಿದೆ,'' ಎಂದು ಹ್ಯಾಲೆಪ್ ಪ್ರತಿಕ್ರಿಯಿಸಿದ್ದಾರೆ.

ಅಂದಹಾಗೆ, ಸೆಮಿಫೈನಲ್‌ಗೂ ಮುಂಚಿನ ಪಂದ್ಯದಲ್ಲಿ ಮುಗುರುಜಾ, ಐದು ಗ್ರಾಂಡ್‌ಸ್ಲಾಮ್ ವಿಜೇತೆ ಮರಿಯಾ ಶರಪೋವಾ ವಿರುದ್ಧ ಸುಲಭ ಗೆಲುವು ಸಾಧಿಸಿದಂತೆ ಹ್ಯಾಲೆಪ್ ಸೆಮಿ ಹಾದಿ ಸುಗಮವಾಗಿರಲಿಲ್ಲ. ಜರ್ಮನಿಯ ಏಂಜಲಿಕ್ ಕೆರ್ಬರ್ ವಿರುದ್ಧದ ಮೂರು ಸೆಟ್‌ಗಳ ಕಾದಾಟ ಹ್ಯಾಲೆಪ್ ಅವರನ್ನು ಸಾಕಷ್ಟು ಬಳಲಿಸಿತ್ತು. ಮೇಲಾಗಿ, ಮುಗುರುಜಾಗಿಂತ ಒಂದು ತಾಸು ಹೆಚ್ಚಿಗೇ ಕೋರ್ಟ್‌ನಲ್ಲಿ ಹ್ಯಾಲೆಪ್ ಬೆವರು ಬಸಿದಿದ್ದರು. ಆದರೆ, ಸೆಮಿಫೈನಲ್‌ನಲ್ಲಿ ಮುಗುರುಜಾ ಎದುರು ಹ್ಯಾಲೆಪ್ ಅಬ್ಬರದ ಆಟವಾಡಿದರು. ಮೊದಲ ಸೆಟ್‌ನಲ್ಲಿ ೫-೦ ಮುನ್ನಡೆಯೊಂದಿಗೆ ವಿಜೃಂಭಿಸಿದ ಹ್ಯಾಲೆಪ್, ಕೇವಲ ೩೬ ನಿಮಿಷಗಳಲ್ಲೇ ಸೆಟ್ ಜಯಿಸಿದರು.

ಆದರೆ, ೨೪ರ ಹರೆಯದ ಮುಗುರುಜಾ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಲು ಯತ್ನಿಸಿ ೩-೧ ಮುನ್ನಡೆ ಕಂಡರು. ಮೊದಲ ಬಾರಿಗೆ ಸರ್ವ್ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದ ಮುಗುರುಜಾ, ಮೇಲುಗೈ ಸಾಧಿಸಿದಂತೆ ಕಂಡುಬಂದರು. ಆದರೆ, ಆನಂತರದಲ್ಲಿ ಆಕೆಯ ಸರ್ವ್ ಮುರಿದ ಹ್ಯಾಲೆಪ್, ಅಂತರವನ್ನು ೪-೪ಕ್ಕೆ ತಂದರಲ್ಲದೆ, ಅಂತಿಮವಾಗಿ ೨೦೧೬ರ ಫ್ರೆಂಚ್ ಓಪನ್ ಚಾಂಪಿಯನ್ ಮುಗುರುಜಾ ಹೋರಾಟಕ್ಕೆ ತೆರೆ ಎಳೆದು ಫೈನಲ್‌ ದಾರಿ ತುಳಿದರು.

ಸ್ಟೀಫನ್ಸ್ ಬೆಸ್ಟ್!

ಇದನ್ನೂ ಓದಿ : ಫ್ರೆಂಚ್ ಓಪನ್ | ರಾಫೆಲ್ ನಡಾಲ್, ಡೆಲ್ ಪೊಟ್ರೊ ಸೆಮಿಫೈನಲ್‌ಗೆ ದಾಪುಗಾಲು

ಇನ್ನು, ಮತ್ತೊಂದು ಸೆಮಿಫೈನಲ್‌ನಲ್ಲಿ ಇಬ್ಬರು ಅಮೆರಿಕನ್ ಆಟಗಾರ್ತಿಯರಲ್ಲಿ ಸ್ಟೀಫನ್ಸ್, ಮ್ಯಾಡಿಸನ್ ಕೀಸ್ ವಿರುದ್ಧ ಬೆಸ್ಟ್ ಎನಿಸಿದರು. ಕಳೆದ ಸಾಲಿನ ಯುಎಸ್ ಓಪನ್‌ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದ ಈ ಜೋಡಿ ಮತ್ತೊಮ್ಮೆ ಎದುರುಬದುರಾಗಿತ್ತು. ಸ್ಟೀಫನ್ಸ್ ವಿರುದ್ಧ ಆಗ ಸೋಲನುಭವಿಸಿದ್ದ ಮ್ಯಾಡಿಸನ್, ಈ ಬಾರಿ ಆಕೆಯನ್ನು ಮಣಿಸುವ ವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದರಾದರೂ, ಸ್ಟೀಫನ್ಸ್ ಪ್ರಬಲ ಆಟದಿಂದಾಗಿ ಆಕೆಗೆ ಗೆಲುವು ದಕ್ಕಲಿಲ್ಲ..

ಹತ್ತನೇ ಶ್ರೇಯಾಂಕಿತೆ ಸ್ಟೀಫನ್ಸ್, ಮೂರನೇ ಗೇಮ್‌ನಲ್ಲಿಯೇ ಕೀಸ್ ಸರ್ವ್ ಮುರಿದು ಹಿಡಿತ ಸಾಧಿಸಿದರು. ಇನ್ನು, ಮ್ಯಾಡಿಸನ್ ಬಾರಿಸಿದ ಫೋರ್‌ಹ್ಯಾಂಡ್ ಶಾಟ್ ನೆಟ್‌ಗೆ ತಾಕುತ್ತಲೇ ಸ್ಟೀಫನ್ಸ್ ಮೊದಲ ಸೆಟ್ ಅನ್ನು ಗೆದ್ದು ೧-೦ ಮುನ್ನಡೆ ಪಡೆದರಲ್ಲದೆ, ಕೀಸ್ ಮೇಲೆ ಒತ್ತಡ ಹೇರಿದರು. ಇನ್ನು, ಎರಡನೇ ಸೆಟ್‌ನಲ್ಲಿಯೂ ಕೀಸ್ ಎಚ್ಚೆತ್ತುಕೊಳ್ಳದೆ ಸ್ವಪ್ರಮಾದದಿಂದ ಪಂದ್ಯವನ್ನು ಕೈಚೆಲ್ಲಿದರು.

ಮೊದಲ ಸರ್ವೀಸ್ ಗೇಮ್‌ನಲ್ಲಿಯೇ ಕೀಸ್ ಎಡವಿದರು. ಆದರೆ, ೧೩ನೇ ಶ್ರೇಯಾಂಕಿತೆ ಕೀಸ್ ಮೊದಲ ಬಾರಿಗೆ ಸ್ಟೀಫನ್ಸ್ ಸರ್ವ್ ಮುರಿಯುವಲ್ಲಿ ಯಶಸ್ವಿಯಾದರು. ಅಷ್ಟರಲ್ಲಾಗಲೇ ೫-೨ ಮುನ್ನಡೆ ಕಂಡಿದ್ದ ಸ್ಟೀಫನ್ಸ್ ಗೆಲುವಿನಿಂದ ಬಹುದೂರ ಉಳಿದಿರಲಿಲ್ಲ. ಏತನ್ಮಧ್ಯೆ, ಭಾರಿ ಒತ್ತಡಕ್ಕೆ ಸಿಲುಕಿದ್ದ ಕೀಸ್ ೪೧ ಬಾರಿ ಅನಗತ್ಯ ಹೊಡೆತಗಳಿಂದ ಬೆಲೆ ತೆತ್ತರು. ಇತ್ತ, ಆಕರ್ಷಕ ಬ್ಯಾಕ್‌ಹ್ಯಾಂಡ್ ಶಾಟ್‌ ಅನ್ನು ಗುರಿ ಮುಟ್ಟಿಸಿದ ಸ್ಟೀಫನ್ಸ್, ೪-೬, ೪-೬ ಸೆಟ್‌ಗಳಿಂದ ಗೆಲುವಿನ ಗುರಿ ಮುಟ್ಟಿ, ಮುಷ್ಠಿ ಬಿಗಿಹಿಡಿದು ಜಯದ ಸಂಭ್ರಮ ಸವಿದರು.

ಏಷ್ಯನ್ ಚಾಂಪಿಯನ್ಸ್ ಟ್ರೋಫಿ | ಓಮನ್ ವಿರುದ್ಧ ಸುಲಭ ಗೆಲುವಿನ ನಿರೀಕ್ಷೆ
ಡೆನ್ಮಾರ್ಕ್ ಓಪನ್ | ಲಿನ್ ಡಾನ್ ಪರೀಕ್ಷೆಗೆ ಸಜ್ಜಾದ ಕಿಡಾಂಬಿ ಶ್ರೀಕಾಂತ್
ಭಾರತದ ಸರ್ವಾಧಿಕ ವಿಕೆಟ್‌ಧಾರಿ ಅನಿಲ್ ಕುಂಬ್ಳೆಗೆ ನಲವತ್ತೆಂಟರ ಸಂಭ್ರಮ!
Editor’s Pick More