ಕ್ರೌರ್ಯವನ್ನೂ ತಣ್ಣಗಾಗಿಸಿದ ವಿಶ್ವಕಪ್‌ನಲ್ಲಿ ಮಿಂಚಿದ ಅರ್ಜೆಂಟೀನಾ

ಮತ್ತೊಮ್ಮೆ ತವರಿನ ತಂಡ ವಿಶ್ವಕಪ್ ಚಾಂಪಿಯನ್ ಆದದ್ದಕ್ಕೆ ಅರ್ಜೆಂಟೀನಾ ಸಾಕ್ಷಿಯಾಯಿತು. ಅಂದಹಾಗೆ, ಅರ್ಜೆಂಟೀನಾದಲ್ಲಿ ನಡೆದ ಮೊಟ್ಟಮೊದಲ ವಿಶ್ವಕಪ್ ಕೂಡ ಇದಾಗಿತ್ತು. ಪ್ರಶಸ್ತಿ ಸುತ್ತಿನಲ್ಲಿ ಹಾಲೆಂಡ್ ೧-೩ ಗೋಲುಗಳ ಅಂತರದಿಂದ ಮತ್ತೊಮ್ಮೆ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು

ಜೂನ್ ೧ರಿಂದ ೨೫ರವರೆಗೆ ಹದಿನಾರು ತಂಡಗಳ ನಡುವೆ ನಡೆದ ಹನ್ನೊಂದನೇ ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಇರಾನ್ ಹಾಗೂ ಟ್ಯುನಿಷಿಯಾ ತಂಡಗಳು ವಿಶ್ವಕಪ್‌ನಲ್ಲಿ ಆಡಿದವು. ಗುಂಪು ಹಂತದಲ್ಲಿಯೇ ಮಿಂಚಿನ ಆಟವಾಡಿದ ಟ್ಯುನಿಷಿಯಾ ೩-೧ ಗೋಲುಗಳಿಂದ ಮೆಕ್ಸಿಕೋ ತಂಡವನ್ನು ಹಣಿದು ವಿಶ್ವಕಪ್ ಫುಟ್ಬಾಲ್ ಇತಿಹಾಸದಲ್ಲಿ ಗೆಲುವು ಸಾಧಿಸಿದ ಮೊಟ್ಟಮೊದಲ ಆಫ್ರಿಕಾ ತಂಡವೆಂದು ಕರೆಸಿಕೊಂಡಿತು. ಬರೋಬ್ಬರಿ ೫೦ ವರ್ಷಗಳ ಹಿಂದೆ ನಡೆದ ಫಿಫಾ ಉದ್ಘಾಟನಾ ವಿಶ್ವಕಪ್‌ನಲ್ಲಿ ಉರುಗ್ವೆ ಎದುರು ನಿರಾಸೆ ಅನುಭವಿಸಿದ್ದ ಅರ್ಜೆಂಟೀನಾ ಅರ್ಧ ಶತಮಾನದ ಬಳಿಕ ಮೊದಲ ವಿಶ್ವಕಪ್‌ಗೆ ಮುತ್ತಿಕ್ಕಿತು!

ಮೊಟ್ಟಮೊದಲ ವಿಶ್ವಕಪ್‌ನಲ್ಲಿ ಪಾಲ್ಗೊಂಡು ಫೈನಲ್ ತಲುಪಿದರೂ ಗೆಲುವು ಸಾಧಿಸಲು ವಿಫಲವಾದ ಅರ್ಜೆಂಟೀನಾ, ಮತ್ತೊಮ್ಮೆ ವಿಶ್ವಕಪ್ ಗೆಲುವಿಗಾಗಿ ಬರೋಬ್ಬರಿ ಅರ್ಧ ಶತಮಾನ ಕನವರಿಸಿತ್ತು. ಆದರೆ, ಈ ಬಾರಿ ಅರ್ಜೆಂಟೀನಾದಲ್ಲಿ ನಡೆಯಲಿದ್ದ ವಿಶ್ವಕಪ್‌ಗೆ ಎಲ್ಲಿ ಅಪಾಯ ಕಾದಿದೆಯೋ ಎಂಬ ಭೀತಿಗೆ ಸಿಲುಕಿತ್ತು ಫಿಫಾ. ಅದಕ್ಕೆ ಕಾರಣ ಕೂಡ ಇತ್ತು. ಜನರಲ್ ಜಾರ್ಜ್ ರಾಫೇಲ್ ವಿಡೆಲ್ಲಾ ಎಂಬ ಸರ್ವಾಧಿಕಾರಿಯ ಸೇನಾ ಮುಖ್ಯಸ್ಥನ ಕೈಗೆ ಸಿಲುಕಿದ್ದ ದೇಶ ಆತನ ಕ್ರೌರ್ಯಕ್ಕೆ ಸಿಕ್ಕಿ ನಲುಗಿತ್ತು.

ಪಾತಕಿ ಮೂಡಿಸಿದ್ದ ಆತಂಕ

೧೯೭೬ರಲ್ಲಿ ಅಧ್ಯಕ್ಷ ಇಸಾಬೆಲ್ ಮಾರ್ಟಿನೆಜ್ ಅವರಿಂದ ಅಧಿಕಾರ ಕಸಿದುಕೊಂಡು ದೇಶದ ಆಡಳಿತ ಚುಕ್ಕಾಣಿ ಹಿಡಿದ ಈತ, ಸಾವಿರಾರು ಜನರನ್ನು ಕೊಂದ ಪಾತಕಿ. ಈತನ ಕ್ರೌರ್ಯಕ್ಕೆ ಸಿಕ್ಕಿ ಜೀವ ಕಳೆದುಕೊಂಡವರ ಪೈಕಿ ವಿಶ್ವಕಪ್ ಸಂಘಟನಾ ಸಮಿತಿ ಅಧ್ಯಕ್ಷರೂ ಆಗಿದ್ದ ಓಮರ್ ಆಕ್ಟಿಸ್ ಕೂಡ ಒಬ್ಬರು. ಗೆರಿಲ್ಲಾ ಪಡೆಯಿಂದ ಇವರನ್ನು ಹತ್ಯೆಗೈಯಲಾಗಿತ್ತು.

ವಿಡೆಲಾ ನಡೆಸುತ್ತಿದ್ದ ಕ್ರೌರ್ಯವು ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಯಾವುದೇ ಕಾರಣಕ್ಕೂ ಅರ್ಜೆಂಟೀನಾದಲ್ಲಿ ವಿಶ್ವಕಪ್ ಆಡಲಾಗದು ಎಂದು ಹಾಲೆಂಡ್ ನೇತೃತ್ವದಲ್ಲಿ ಹಲವಾರು ರಾಷ್ಟ್ರಗಳು ಬಹಿಷ್ಕಾರದ ಬೆದರಿಕೆ ಒಡ್ಡಿದವು. ವಿಶ್ವಕಪ್ ಕೈತಪ್ಪಿ ಎಲ್ಲಿ ಜನ ದಂಗೆ ಎದ್ದಾರು ಎಂಬ ದಿಗಿಲಿಗೆ ಬಿದ್ದ ವಿಡೆಲಾ, ಕೊನೆಗೂ ರಾಜತಾಂತ್ರಿಕ ಚಾಣಾಕ್ಷತೆ ಮೆರೆದು, ಪಂದ್ಯಾವಳಿಯ ವೇಳೆ ಯಾವುದೇ ರಕ್ತಪಾತ ಆಗದೆಂಬ ವಚನ ನೀಡುವುದರೊಂದಿಗೆ ವಿಶ್ವಕಪ್ ಬಹಿಷ್ಕರಿಸುವ ಮಾತಿಗೆ ತೆರೆಬಿದ್ದಿತ್ತು.

ಅರ್ಜೆಂಟೀನಾ ಅದೃಷ್ಟ

ಈ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ವಿಶ್ವ ಚಾಂಪಿಯನ್ ಆದ ಬಗೆಯೂ ವಿಸ್ಮಯಕಾರಿ ಎನಿಸಿಕೊಂಡಿತು. ಪಂದ್ಯಾವಳಿಯಲ್ಲಿ ಅದು ಐದು ಪಂದ್ಯದಲ್ಲಿ ಗೆಲುವು ಸಾಧಿಸಿತಾದರೂ, ಮೊದಲೆರಡು ಸುತ್ತಿನಲ್ಲಿ ಯಾವುದೇ ಜಯ ದಾಖಲಿಸಲು ಅದು ವಿಫಲವಾಯಿತು. ಮೊದಲ ಸುತ್ತಿನಲ್ಲಿ ಇಟಲಿ ಎದುರು ೦-೧ ಗೋಲಿನಿಂದ ಸೋಲನುಭವಿಸಿದ ಅರ್ಜೆಂಟೀನಾ, ಎರಡನೇ ಸುತ್ತಿನಲ್ಲಿ ಬ್ರೆಜಿಲ್ ವಿರುದ್ಧ ೦-೦ ಶೂನ್ಯ ಸಾಧನೆ ಮಾಡಿತ್ತು. ಆದರೂ ವಿಶ್ವ ಚಾಂಪಿಯನ್ ಆಗಿ ಮೆರೆದದ್ದು ವಿಸ್ಮಯವೆನಿಸಿತು. ಮುಂದಿನ ನಾಲ್ಕು ವರ್ಷಗಳ ಬಳಿಕ ಇಟಲಿ ಕೂಡ ಮೊದಲ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಲು ವಿಫಲವಾದರೂ, ವಿಶ್ವ ಚಾಂಪಿಯನ್ ಆಗಲು ಅರ್ಜೆಂಟೀನಾ ಮುನ್ನುಡಿ ಹಾಕಿದ ಘಟನೆಗೆ ಈ ವಿಶ್ವಕಪ್ ಸಾಕ್ಷಿಯಾಯಿತು.

ಇದನ್ನೂ ಓದಿ : ಫಿಫಾ ಫ್ಲಾಶ್‌ಬ್ಯಾಕ್ | ಎರಡನೇ ವಿಶ್ವಕಪ್‌ಗೆ ಸರ್ವಾಧಿಕಾರಿಯ ಸೋಂಕು!

ಹಾಲೆಂಡ್‌ಗೆ ಮತ್ತೆ ನಿರಾಸೆ

ಅರ್ಜೆಂಟೀನಾ ರಾಜಧಾನಿ ಬ್ಯೂನಿಸ್ ಐರಿಸ್‌ನ ಇಸ್ಟಾಡಿಯೊ ಮಾನುಮೆಂಟಲ್ ಮೈದಾನದಲ್ಲಿ ನಡೆದ ಪ್ರಶಸ್ತಿ ಸುತ್ತಿನಲ್ಲಿ ಅರ್ಜೆಂಟೀನಾ ೭೧, ೪೮೩ ಸಹಸ್ರ ಜನಸ್ತೋಮದ ನಡುವೆ ಹಾಲೆಂಡ್ ಅನ್ನು ೩-೧ ಗೋಲುಗಳಿಂದ ಮಣಿಸಿತು. ಈ ಪಂದ್ಯಾವಳಿಯಲ್ಲಿ ೬ ಗೋಲುಗಳನ್ನು ಬಾರಿಸಿ ಗೋಲ್ಡನ್ ಬೂಟ್ ಗೌರವಕ್ಕೆ ಪಾತ್ರರಾದ ಆತಿಥೇಯ ತಂಡದ ಸ್ಟ್ರೈಕರ್ ಮರಿಯೋ ಕೆಂಪೆಸ್ ಮೊದಲಿಗೆ ಗೋಲಿನ ಖಾತೆ ತೆರೆದರು. ೩೮ನೇ ನಿಮಿಷದಲ್ಲಿ ಅವರು ಗೋಲು ಬಾರಿಸಿದರೆ, ದ್ವಿತೀಯಾರ್ಧದಲ್ಲಿ ೮೨ನೇ ನಿಮಿಷದಲ್ಲಿ ನಾನ್ನಿಂಗಾ ಸಮಬಲ ಸಾಧಿಸಿದರು. ೧-೧ ಗೋಲುಗಳಿಂದ ಸಮಬಲ ಕಂಡ ಪಂದ್ಯದ ಫಲಿತಾಂಶಕ್ಕಾಗಿ ನೀಡಿದ ಹೆಚ್ಚುವರಿ ಸಮಯದಲ್ಲಿ ಇದೇ ಕೆಂಪೆಸ್ ೧೦೫ನೇ ನಿಮಿಷದಲ್ಲಿ ಮತ್ತೊಂದು ಗೋಲು ಹೊಡೆದರೆ, ಬೆರ್ಟೋನಿ ೧೧೫ನೇ ನಿಮಿಷದಲ್ಲಿ ಗೋಲು ಬಾರಿಸಿ ಹಾಲೆಂಡ್‌ಗೆ ಸೋಲುಣಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More