ವನಿತಾ ಕ್ರಿಕೆಟ್ | ಹರ್ಮನ್ ಆಲ್ರೌಂಡ್ ಆಟ ವ್ಯರ್ಥ, ಬಾಂಗ್ಲಾ ಏಷ್ಯಾ ಚಾಂಪಿಯನ್

ಸತತ ಏಳನೇ ಬಾರಿಗೆ ಏಷ್ಯಾ ಕಪ್ ಎತ್ತಿಹಿಡಿಯಬೇಕೆಂಬ ಭಾರತ ತಂಡದ ಕನಸು ಕಮರಿತು. ಲೀಗ್ ಹಂತದಲ್ಲಿ ಇದೇ ಬಾಂಗ್ಲಾದೇಶ ವಿರುದ್ಧ ಸೋತಿದ್ದ ಇಂಡಿಯಾ, ರೋಚಕತೆಯಿಂದ ಕೂಡಿದ್ದ ಫೈನಲ್‌ನಲ್ಲೂ ಮುಗ್ಗರಿಸಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ ಆಲ್ರೌಂಡ್ ಆಟ ವ್ಯರ್ಥವೆನಿಸಿತು

ಕೊನೆಯ ಓವರ್‌ನಲ್ಲಿ ಬಾಂಗ್ಲಾದೇಶಕ್ಕೆ ಬೇಕಿದ್ದುದು ಕೇವಲ ೯ ರನ್ ಮಾತ್ರ. ಆದರೆ, ಈ ನಿರ್ಣಾಯಕ ಓವರ್‌ನಲ್ಲಿ ಸ್ವತಃ ಬೌಲಿಂಗ್‌ಗಿಳಿದ ನಾಯಕಿ ಹರ್ಮನ್‌ಪ್ರೀತ್ ಕೌರ್ ಎರಡು ವಿಕೆಟ್ ಎಗರಿಸಿ ಪಂದ್ಯಕ್ಕೆ ರೋಚಕ ತಿರುವು ತಂದರಾದರೂ, ಕೊನೇ ಎಸೆತದಲ್ಲಿ ಜಹನಾರ ಆಲಂ ತಂಡಕ್ಕೆ ಬೇಕಿದ್ದ ಎರಡು ರನ್‌ಗಳನ್ನು ತಂದುಕೊಡುವುದರೊಂದಿಗೆ ಬಾಂಗ್ಲಾ ವನಿತಾ ತಂಡದ ಐತಿಹಾಸಿಕ ಏಷ್ಯಾ ಕಪ್ ಕನಸನ್ನು ನನಸಾಗಿಸಿದರು.

ಬೌಲಿಂಗ್‌ನಲ್ಲಿ ಎರಡು ವಿಕೆಟ್ ಎಗರಿಸಿದ್ದ ರುಮಾನ ಅಹಮದ್, ಕೊನೆಯ ಓವರ್‌ನಲ್ಲಿ ರನೌಟ್ ಆಗಿ ಕ್ರೀಸ್ ತೊರೆದರೂ, ೨೨ ಎಸೆತಗಳಲ್ಲಿ ಒಂದು ಬೌಂಡರಿ ಸೇರಿದ ೨೩ ರನ್‌ ಗಳಿಸಿ ತಂಡದ ಚಾರಿತ್ರಿಕ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು. ಅಂದಹಾಗೆ, ಈಕೆ ಬಾರಿಸಿದ ಏಕೈಕ ಬೌಂಡರಿ ಕೊನೆಯ ಓವರ್‌ನಲ್ಲಿ ಬಂದದ್ದೆಂಬುದು ಕೂಡ ಪಂದ್ಯದ ಚಿತ್ರಣವನ್ನು ಬದಲಿಸಿತು.

ಕೌಲಾಲಂಪುರದ ಕಿನಾರ ಅಕಾಡೆಮಿ ಓವಲ್‌ನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಬಾಂಗ್ಲಾದೇಶ ತನ್ನೆಲ್ಲ ಪ್ರತಿಭೆಯನ್ನೂ ಧಾರೆ ಎರೆದು ಆರು ಬಾರಿಯ ಏಷ್ಯಾ ಚಾಂಪಿಯನ್ ಭಾರತ ತಂಡವನ್ನು ಮಣಿಸಿತು. ಗೆಲ್ಲಲು ಭಾರತ ನೀಡಿದ್ದ ೧೧೩ ರನ್ ಸಾಮಾನ್ಯ ಗುರಿಯನ್ನು ಬಾಂಗ್ಲಾದೇಶ ಕೊನೆಯ ಎಸೆತದಲ್ಲಿ ಪೂರೈಸಿ ಮೂರು ವಿಕೆಟ್ ಗೆಲುವು ಪಡೆಯಿತು.

ಇದನ್ನೂ ಓದಿ : ವನಿತೆಯರ ಕ್ರಿಕೆಟ್ | ಪಾಕ್ ಮಣಿಸಿ ಏಷ್ಯಾಕಪ್ ಟಿ೨೦ ಫೈನಲ್ ತಲುಪಿದ ಭಾರತ

ಆರಂಭಿಕರಾದ ಶಮೀಮಾ ಸುಲ್ತಾನ (೧೬), ಆಯಷಾ ರೆಹಮಾನ್ (೧೭) ಮೊದಲ ವಿಕೆಟ್‌ಗೆ ೩೫ ರನ್ ಕಲೆಹಾಕಿದರೆ, ಮೂರನೇ ಕ್ರಮಾಂಕಿತೆ ಫರ್ಘಾನ ಹಕ್ ೧೧ ರನ್‌ಗೆ ವಿಕೆಟ್ ಒಪ್ಪಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ನೈಗರ್ ಸುಲ್ತಾನ (೨೭: ೨೪ ಎಸೆತ, ೪ ಬೌಂಡರಿ) ಮತ್ತು ರುಮಾನ ಅಹಮದ್ (೨೩) ಎಚ್ಚರಿಕೆಯಿಂದ ಕಟ್ಟಿದ ಇನ್ನಿಂಗ್ಸ್‌ ಬಾಂಗ್ಲಾ ಕೈಹಿಡಿಯಿತು. ಭಾರತದ ಪರ ಪೂನಮ್ ಯಾದವ್ (೯ಕ್ಕೆ ೪) ಜೀವಮಾನ ಶ್ರೇಷ್ಠ ಬೌಲಿಂಗ್ ಪ್ರದರ್ಶನವೂ ಭಾರತಕ್ಕೆ ಗೆಲುವು ತಂದುಕೊಡಲಿಲ್ಲ.

ಭಾರತದ ಕಳಪೆ ಬ್ಯಾಟಿಂಗ್

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ವನಿತಾ ತಂಡ ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿತು. ಬಾಂಗ್ಲಾದೇಶ ವನಿತಾ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್‌ನಿಂದಾಗಿ ನಿಗದಿತ ೨೦ ಓವರ್‌ಗಳಲ್ಲಿ ೯ ವಿಕೆಟ್ ನಷ್ಟಕ್ಕೆ ೧೧೨ ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದು ಬಾಂಗ್ಲಾದೇಶದ ಆತ್ಮವಿಶ್ವಾಸವನ್ನು ಹೆಚ್ಚಿಸಿತೆಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಶುರುವಿನಿಂದಲೇ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತ ಸಾಗಿದ ಭಾರತದ ಇನ್ನಿಂಗ್ಸ್ ೧೦೦ರ ಗಡಿ ದಾಟುವುದೂ ದುಸ್ತರವೆನ್ನುವಾಗ ಹರ್ಮನ್‌ಪ್ರೀತ್ ಕೌರ್ (೫೬: ೪೨ ಎಸೆತ, ೭ ಬೌಂಡರಿ) ಆಕರ್ಷಕ ಅರ್ಧಶತಕದ ನೆರವಿನಿಂದ ಚೇತರಿಸಿಕೊಂಡಿತು. ಮುಂಚೂಣಿಯ ಸ್ಟಾರ್ ಆಟಗಾರ್ತಿಯರಾದ ಮಿಥಾಲಿ ರಾಜ್ (೧೧), ಸ್ಮೃತಿ ಮಂದಾನ (ರನೌಟ್ ೭) ಮತ್ತು ದೀಪ್ತಿ ಶರ್ಮಾ (೪) ಕ್ಷುಲ್ಲಕವಾಗಿ ವಿಕೆಟ್ ಕೈಚೆಲ್ಲಿ ತಂಡದ ಇನ್ನಿಂಗ್ಸ್‌ಗೆ ಬಲವಾದ ಪ್ರಹಾರ ನೀಡಿದರು.

ಕೇವಲ ೩೨ ರನ್‌ಗಳಿಗೆ ೪ ವಿಕೆಟ್‌ ಕಳೆದುಕೊಂಡ ಭಾರತಕ್ಕೆ ಹರ್ಮನ್ ಪ್ರೀತ್ ಏಕಾಂಗಿ ಪ್ರತಿರೋಧದ ಆಟ ಕೈಹಿಡಿಯಿತು. ಇನ್ನಿಂಗ್ಸ್‌ನ ಕೊನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದ ಹರ್ಮನ್‌ಪ್ರೀತ್ ಕೌರ್ ತಂಡದ ಮೊತ್ತವನ್ನು ೧೧೦ರ ಗಡಿ ದಾಟಿಸಿದರು. ಅತ್ಯಂತ ಶಿಸ್ತುಬದ್ಧ ಬೌಲಿಂಗ್ ದಾಳಿ ನಡೆಸಿದ ಬಾಂಗ್ಲಾ ಪರ ಖದೀಜಾ ತುಲ್ ಕುಬ್ರಾ ೨೩ಕ್ಕೆ ೨ ವಿಕೆಟ್ ಗಳಿಸಿದರೆ, ರುಮಾನ ಅಹಮದ್ ೨೨ಕ್ಕೆ ೨ ಮತ್ತು ನಾಯಕಿ ಸಲ್ಮಾ ಖಾತುನ್ ೨೪ಕ್ಕೆ ೧ ಮತ್ತು ಜಹನಾರ ಆಲಮ್ ೨೩ಕ್ಕೆ ೧ ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್

ಭಾರತ ವನಿತಾ ತಂಡ: ೨೦ ಓವರ್‌ಗಳಲ್ಲಿ ೧೧೨/೯ (ಹರ್ಮನ್‌ಪ್ರೀತ್ ಕೌರ್ ೫೬; ರುಮಾನ ಅಹ್ಮದ್ ೨೨ಕ್ಕೆ ೨) ಬಾಂಗ್ಲಾದೇಶ ವನಿತಾ ತಂಡ: ೨೦ ಓವರ್‌ಗಳಲ್ಲಿ ೧೧೩/೭ (ನಿಗರ್ ಸುಲ್ತಾನ ೨೭, ರುಮಾನ ಅಹಮದ್ ೨೩; ಪೂನಮ್ ಯಾದವ್ ೯ಕ್ಕೆ ೪, ಹರ್ಮನ್‌ಪ್ರೀತ್ ೧೯ಕ್ಕೆ ೨) ಫಲಿತಾಂಶ: ಬಾಂಗ್ಲಾದೇಶ ವನಿತಾ ತಂಡಕ್ಕೆ ೩ ವಿಕೆಟ್ ಗೆಲುವು ಪಂದ್ಯಶ್ರೇಷ್ಠೆ: ರುಮಾನ ಅಹಮದ್ ಸರಣಿಶ್ರೇಷ್ಠೆ: ಹರ್ಮನ್‌ಪ್ರೀತ್ ಕೌರ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More