ಮರಡೋನಾ ಪದಾರ್ಪಣೆಯಲ್ಲಿ ಬ್ರೆಜಿಲ್ ಬಳಿಕ ಇಟಲಿಗೂ ಹ್ಯಾಟ್ರಿಕ್ ಭಾಗ್ಯ

ರಿಯಲ್ ಮ್ಯಾಡ್ರಿಡ್ ಹಾಗೂ ಬಾರ್ಸಿಲೋನಾ ಎಫ್‌ಸಿಯಂಥ ವಿಶ್ವಶ್ರೇಷ್ಠ ಫುಟ್ಬಾಲ್ ಕ್ಲಬ್‌ಗಳ ಆವಾಸ ಸ್ಥಾನವಾಗಿರುವ ಸ್ಪೇನ್ ೧೯೮೨ರ ೧೨ನೇ ವಿಶ್ವಕಪ್‌ಗೆ ಆತಿಥ್ಯ ಹೊತ್ತಿತ್ತು. ಮತ್ತೊಮ್ಮೆ ಫೈನಲ್ ತಲುಪಿದ್ದ ಪಶ್ಚಿಮ ಜರ್ಮನಿಯನ್ನು ೩-೧ ಗೋಲುಗಳಿಂದ ಮಣಿಸಿದ ಇಟಲಿ ವಿಶ್ವ ಚಾಂಪಿಯನ್ ಎನಿಸಿಕೊಂಡಿತು

೧೯೩೪, ೧೯೩೮ರಲ್ಲಿ ಒಂದರ ಹಿಂದೊಂದರಂತೆ ಎರಡು ವಿಶ್ವಕಪ್ ಗೆದ್ದಿದ್ದ ಇಟಲಿಯನ್ನರು ಬ್ರೆಜಿಲ್‌ನಂತೆ ಮೂರನೇ ಬಾರಿ ವಿಶ್ವಕಪ್ ಜಯಿಸಿದರು. ಇನ್ನು, ಈ ಪಂದ್ಯಾವಳಿಯ ವಿಶೇಷಗಳಲ್ಲಿ ಬಹುಮುಖ್ಯವಾದದ್ದು,  ಇದೇ ಮೊದಲ ಬಾರಿಗೆ ಫೈನಲ್ ಹಂತವನ್ನು ಹದಿನಾರು ತಂಡಗಳಿಂದ ೨೪ ತಂಡಗಳಿಗೆ ವಿಸ್ತರಿಸಿದ್ದು. ಪರಿಣಾಮ, ಆಲ್ಜೀರಿಯಾ, ಕುವೈತ್, ಹೊಂಡುರಾಸ್, ನ್ಯೂಜಿಲೆಂಡ್ ಮತ್ತು ಕ್ಯಾಮರಾನ್ ತಂಡಗಳು ವಿಶ್ವಕಪ್ ಪಂದ್ಯಾವಳಿಗೆ ಪದಾರ್ಪಣೆ ಮಾಡುವಂತಾಯಿತು.

ವಿಶ್ವಕಪ್‌ ತಂಡಗಳನ್ನು ವಿಸ್ತರಿಸುವ ಪ್ರಸ್ತಾಪವನ್ನು ೧೯೭೦ರಲ್ಲಿಯೇ ಅಂದಿನ ಫಿಫಾ ಅಧ್ಯಕ್ಷ ಸರ್ ಸ್ಟ್ಯಾನ್ಲಿ ರೌಸ್ ಮುಂದಿಟ್ಟಿದ್ದರು. ಅಂತಿಮವಾಗಿ, ಅದು ಈ ಪಂದ್ಯಾವಳಿಯಲ್ಲಿ ಅನುಷ್ಠಾನಕ್ಕೆ ಬಂದಿತು. ಅಂದಹಾಗೆ, ೧೯೭೪ ಮತ್ತು ೧೯೭೮ರಲ್ಲಿ ಸತತ ಎರಡು ಬಾರಿ ರನ್ನರ್ ಆಗಿದ್ದ ಹಾಲೆಂಡ್ ಈ ಟೂರ್ನಿಗೆ ಅರ್ಹತೆ ಗಳಿಸಲು ವಿಫಲವಾಯಿತು. ೧೯೮೬ರ ಆವೃತ್ತಿಯಿಂದಲೂ ವಂಚಿತವಾದ ಅದು, ಮತ್ತೆ ವಿಶ್ವಕಪ್ ಕೂಟಕ್ಕೆ ಮರಳಿದ್ದು ೧೯೯೦ರಲ್ಲಿ.

ಯೂರೋಪ್‌ಗೆ ಮರಳಿದ ಈ ವಿಶ್ವಕಪ್‌ನಲ್ಲಿ ದಕ್ಷಿಣ ಅಮೆರಿಕನ್ನರೇ ಟೂರ್ನಿಗೂ ಮುನ್ನ ಫೇವರಿಟ್ ಪಟ್ಟ ತೊಟ್ಟಿದ್ದರು. ಇತ್ತ, ಝಿಕೊ, ಸಾಕ್ರಟೆಸ್, ಸೆರೆಜೊ ಮತ್ತು ಫಾಲ್ಕಾವೊ ಅವರಿದ್ದ ಬ್ರೆಜಿಲ್ ತಂಡ ೧೯೭೦ರ ತಂಡಕ್ಕಿಂತಲೂ ಬಲಿಷ್ಠ ಎಂದು ವ್ಯಾಖ್ಯಾನಿಸಲ್ಪಟ್ಟಿತ್ತು. ೨೧ರ ಹರೆಯದ ಡೀಗೊ ಮರಡೋನಾ ಪದಾರ್ಪಣೆಗೈದ ವಿಶ್ವಕಪ್ ಇದು.

ವಾಸ್ತವವಾಗಿ ಈ ಹಿಂದಿನ ಆವೃತ್ತಿಯಲ್ಲೇ ಅವರು ಕಣಕ್ಕಿಳಿಯಬೇಕಿತ್ತಾದರೂ, ಅರ್ಜೆಂಟೀನಾ ಕೋಚ್ ತಳೆದ ದಿಟ್ಟ ನಿಲುವಿನಿಂದ ಸಾಕಾರಗೊಂಡಿರಲಿಲ್ಲ. ಒಂದು ವೇಳೆ, ೧೯೭೮ರ ವಿಶ್ವಕಪ್‌ನಲ್ಲಿ ಡೀಗೋ ಆಡಿದ್ದರೆ, ಪೀಲೆ ಅವರಂತೆ ಹದಿನೇಳನೇ ವಯಸ್ಸಿನಲ್ಲೇ ಅವರು ಕೂಡ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಹಾಗಾಗುತ್ತಿತ್ತು. ಇಷ್ಟಾದರೂ, ಯೂರೋಪ್ ತಂಡಗಳೇ ಇದ್ದ ಸೆಮಿಫೈನಲ್‌ನಲ್ಲಿ ಯೂರೋಪಿಯನ್ನರೇ ಮಿಂಚಿದ್ದು ಕೂಡ ಈ ಪಂದ್ಯಾವಳಿಯ ವಿಶೇಷ.

ಇತಿಹಾಸ ಬರೆದ ಹಂಗೇರಿ

ಮೂರನೇ ಗುಂಪಿನ ಮೊದಲ ಸುತ್ತಿನಲ್ಲಿ ಹಂಗೇರಿ ತಂಡವನ್ನು ೧೦-೧ ಗೋಲುಗಳಿಂದ ಗೆದ್ದ ಇಐ ಸಾಲ್ವೆಡಾರ್ ವಿಶ್ವಕಪ್‌ನಲ್ಲಿ ಅತಿಹೆಚ್ಚು ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದ ಮೊದಲ ರಾಷ್ಟ್ರ ಎಂಬ ಇತಿಹಾಸ ಬರೆಯಿತು. ಈ ಪಂದ್ಯಾವಳಿಯ ಮತ್ತೊಂದು ವಿಶೇಷವೆಂದರೆ, ಚಾಂಪಿಯನ್ ಆದ ಇಟಲಿ ಮೊದಲ ಸುತ್ತಿನ ಯಾವುದೇ ಪಂದ್ಯದಲ್ಲಿಯೂ ಗೆಲುವು ಸಾಧಿಸದೆ ಮುಂದಿನ ಸುತ್ತಿಗೆ ಅರ್ಹತೆ ಗಳಿಸಿದ್ದು. ಮಾತ್ರವಲ್ಲ, ತಾನಾಡಿದ ಏಳು ಪಂದ್ಯಗಳ ಪೈಕಿ ಕೇವಲ ಏಳು ಗೋಲು ಗಳಿಸುವುದರೊಂದಿಗೆ ವಿಶ್ವಕಪ್ ಗೆದ್ದ ಸಾಧನೆ ಮಾಡಿದ್ದು ಕೂಡ ಸೋಜಿಗವೆನಿಸಿತು.

ಫೈನಲ್ ಕೌತುಕ

೧೯೭೦ರ ಆವೃತ್ತಿಯಲ್ಲಿ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಿದ್ದ ಪಶ್ಚಿಮ ಜರ್ಮನಿ ಮತ್ತು ಇಟಲಿ ಪಾಲಿಗೆ ಈ ವಿಶ್ವಕಪ್ ಫೈನಲ್ ರೀ-ಮ್ಯಾಚ್ ಆಗಿತ್ತು. ಮ್ಯಾಡ್ರಿಡ್‌ನ ಸ್ಯಾಂಟಿಯಾಗೊ ಬೆರ್ನಾಬ್ಯು ಕ್ರೀಡಾಂಗಣದಲ್ಲಿ ನಡೆದ ಪಂದ್ಯ ವೀಕ್ಷಣೆಗೆ ೯೦,೦೦೦ ಪ್ರೇಕ್ಷಕರು ಕಿಕ್ಕಿರಿದಿದ್ದರು. ಪ್ರಥಮಾರ್ಧ ಯಾವುದೇ ಗೋಲುಗಳು ದಾಖಲಾಗದೆ ಸಮಬಲದಲ್ಲಿ ಮುಗಿದರೂ, ದ್ವಿತೀಯಾರ್ಧದಲ್ಲಿ ನಾಲ್ಕು ಗೋಲುಗಳು ದಾಖಲಾದವು.

ಇಟಲಿ ಪರ ರೊಸ್ಸಿ (೫೭ನೇ ನಿ.), ಟಾರ್ಡೆಲಿ (೬೯ನೇ ನಿ.) ಮತ್ತು ಅಲ್ಟೋಬೆಲ್ಲಿ (೮೧ನೇ ನಿ.) ತಲಾ ಒಂದೊಂದು ಗೋಲು ಬಾರಿಸಿದರೆ, ಪಶ್ಚಿಮ ಜರ್ಮನಿ ಪರ ದಾಖಲಾದ ಏಕಾಂಗಿ ಗೋಲನ್ನು ೮೩ನೇ ನಿಮಿಷದಲ್ಲಿ ಬ್ರೀಟ್ನರ್ ದಾಖಲಿಸಿದರು.  ೪೦ರ ಹರೆಯದ ಗೋಲ್‌ಕೀಪರ್ ಡಿನೊ ಜೊಫ್ ತಂಡವನ್ನು ಅದ್ಭುತಕರವಾಗಿ ಮುನ್ನಡೆಸಿ ವಿಶ್ವಕಪ್ ಗೆದ್ದ ಅತ್ಯಂತ ಹಿರಿಯ ಫುಟ್ಬಾಲಿಗ ಎನಿಸಿಕೊಂಡದ್ದು ಕೂಡಾ ಈ ವಿಶ್ವಕಪ್‌ನ ವಿಶೇಷಗಳ ಸಾಲಿಗೆ ಸೇರಿತು. ಇನ್ನು, ಈ ಟೂರ್ನಿಯಲ್ಲಿ ೬ ಗೋಲು ಬಾರಿಸಿದ ರೊಸ್ಸಿ ಗರಿಷ್ಠ ಗೋಲು ಗಳಿಸಿದ ಸಾಧಕನೆನಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More