ಕ್ಲೇ ಕೋರ್ಟ್ ಕಿಂಗ್‌ಗೆ ಸಾಟಿಯಾಗದ ಥೀಮ್; ಮತ್ತೊಮ್ಮೆ ಪಾರಮ್ಯ ಮೆರೆದ ನಡಾಲ್

ಗಟ್ಟಿ ಅಂಕಣದ ಮಾಸ್ಟರ್ ರಾಫೇಲ್ ನಡಾಲ್ ತನ್ನ ಸಾಮರ್ಥ್ಯವನ್ನು ಮತ್ತೆ ಋಜುಪಡಿಸಿದರು. ೩೨ರ ಹರೆಯದ ಸ್ಪೇನ್ ಟೆನಿಸಿಗನ ಪಾಲಿಗೆ ಸವಾಲಾಗಿ ಪರಿಣಮಿಸಿದ್ದ ಆಸ್ಟ್ರಿಯಾ ಆಟಗಾರ ಡಾಮಿನಿಕ್ ಥೀಮ್ ಫೈನಲ್‌ನಲ್ಲಿ ಎಡವಿದ ನಿಮಿತ್ತ ೧೧ನೇ ಫ್ರೆಂಚ್ ಓಪನ್‌ ಒಡೆಯನಾಗಿ ರಾಫೆಲ್ ನಡಾಲ್ ಮಿಂಚಿದರು

ಫಿಲಿಪ್ಪಿ ಚಾಟ್ರಿಯರ್ ಕೋರ್ಟ್‌ ಕಿಕ್ಕಿರಿದು ತುಂಬಿತ್ತು. ಕ್ಲೇ ಕೋರ್ಟ್ ಕಿಂಗ್ ರಾಫೆಲ್ ನಡಾಲ್‌ಗೆ ಈ ಬಾರಿ ಏಳನೇ ಶ್ರೇಯಾಂಕಿತ ಆಟಗಾರ ಡಾಮಿನಿಕ್ ಥೀಮ್ ಪ್ರಬಲ ಸವಾಲಾಗಿ ಪರಿಣಮಿಸಲಿದ್ದಾರೆ ಎಂಬ ಯೋಜನೆಗಳೆಲ್ಲ ತಲೆಕೆಳಗಾದವು. ನಡಾಲ್ ಅನುಭವದ ಮುಂದೆ ಡಾಮಿನಿಕ್ ಥೀಮ್ ಮಂಕಾದರು.

ಭಾನುವಾರ (ಜೂ.೧೦) ಪ್ಯಾರಿಸ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಸೆಣಸಾಟ ಟೆನಿಸ್ ಲೋಕ ಸೇರಿದಂತೆ ಬಹುತೇಕರು ಭಾವಿಸಿದಂತೆ ರೋಚಕ ಇಲ್ಲವೇ ಪ್ರಬಲ ಕಾದಾಟದಿಂದೇನೂ ಕೂಡಿರಲಿಲ್ಲ. ಬದಲಿಗೆ, ನಡಾಲ್ ಎಂಬ ಅಪ್ರತಿಮ ಆಟಗಾರನ ಕೈಯಲ್ಲಿ ಅದು ಸಂಪೂರ್ಣ ಏಕಪಕ್ಷೀಯವಾಗಿತ್ತು. ಹದಿನಾರು ಗ್ರಾಂಡ್‌ಸ್ಲಾಮ್ ಪ್ರಶಸ್ತಿ ವಿಜೇತ ರಾಫೆಲ್ ನಡಾಲ್, ಡಾಮಿನಿಕ್ ಥೀಮ್ ಆಕ್ರಮಣಕಾರಿ ಆಟಕ್ಕೆ 6-4, 6-3, 6-2 ನೇರ ಸೆಟ್‌ಗಳಿಂದ ತೆರೆ ಎಳೆದರಲ್ಲದೆ, ಪ್ಯಾರಿಸ್‌ನಲ್ಲಿನ ತನ್ನ ಅಧಿಪತ್ಯವನ್ನು ೧೧ಕ್ಕೆ ವಿಸ್ತರಿಸಿ, ವೃತ್ತಿಬದುಕಿನ ೧೭ನೇ ಗ್ರಾಂಡ್‌ಸ್ಲಾಮ್ ಗೆದ್ದು ಸಂಭ್ರಮಿಸಿದರು.

ಡಾಮಿನಿಕ್ ಆಟದ ಮಜಲುಗಳನ್ನು ಅರಿತಿದ್ದ ಸ್ಪೇನ್ ಆಟಗಾರ ನಡಾಲ್, ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಈ ಋತುವಿನ ಇಟಾಲಿಯನ್ ಓಪನ್‌ನಲ್ಲಿ ಚಾಂಪಿಯನ್ ಆಗುತ್ತಿದ್ದಂತೆ, ''ಫ್ರೆಂಚ್ ಓಪನ್‌ನಲ್ಲಿ ಮತ್ತೊಂದು ಗೆಲುವು ಸಾಧಿಸಲು ಆಕ್ರಮಣಕಾರಿ ಆಟವಲ್ಲದೆ ಮತ್ತೇನೂ ನನ್ನ ಮಟ್ಟಿಗೆ ನೆರವಾಗದು,'' ಎಂದು ನುಡಿದಿದ್ದ ನಡಾಲ್, ಅದರಂತೆಯೇ ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಮತ್ತೊಮ್ಮೆ ಚಾಂಪಿಯನ್ ಆಗಿ ಮೆರೆದರು.

ಒಂದೇ ಒಂದು ಗ್ರಾಂಡ್‌ಸ್ಲಾಮ್ ಇಲ್ಲವೇ ಮೇಜರ್ ಪಂದ್ಯಾವಳಿಯಲ್ಲಿ ಗರಿಷ್ಠ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ ಮಾರ್ಗರೆಟ್ ಕೋರ್ಟ್ ಅವರ ದಾಖಲೆಯನ್ನು ನಡಾಲ್ ಸರಿಗಟ್ಟಿದರು. (೧೯೬೦ರಿಂದ ೧೯೭೩ರ ಅವಧಿಯಲ್ಲಿ ಮಾರ್ಗರೆಟ್ ೧೧ ಆಸ್ಟ್ರೇಲಿಯನ್ ಓಪನ್ ಜಯಿಸಿದ್ದರು). ಜೊತೆಗೆ, ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪೈಕಿ ಒಬ್ಬರಾಗಿರುವ ಸ್ವಿಸ್ ಮಾಸ್ಟರ್ ರೋಜರ್ ಫೆಡರರ್ ಅವರ ೨೦ ಗ್ರಾಂಡ್‌ಸ್ಲಾಮ್ ಸಾಧನೆಯ ಸಮೀಪ ಸಾಗುವಲ್ಲಿ ನಡಾಲ್ ಮುಂದಡಿ ಇಟ್ಟರು. ನಡಾಲ್ ಅನುಭವದ ಆಟ ಥೀಮ್‌ಗೆ ಬಹುದೊಡ್ಡ ಪಾಠ ಕಲಿಸಿದ್ದರಲ್ಲಿ ಅಚ್ಚರಿ ಇಲ್ಲ. ಆದಾಗ್ಯೂ, ನೊವಾಕ್ ಜೊಕೊವಿಚ್‌ಗೆ ಸೋಲುಣಿಸಿದ್ದ ಥೀಮ್, ಕ್ಲೇ ಕೋರ್ಟ್ ಕಿಂಗ್‌ಗೆ ಕಡೆಗೂ ಮಣಿಯಬೇಕಾಯಿತು.

ನಡಾಲ್ ನಾಲ್ಕರ ನಂಟು

ರೊಲ್ಯಾಂಡ್ ಗ್ಯಾರೋಸ್‌ನಲ್ಲಿನ ರಾಫೆಲ್ ನಡಾಲ್ ಅಧಿಪತ್ಯಕ್ಕೆ ನಾಲ್ಕರ ನಂಟಿರುವುದನ್ನು ಮರೆಯಲಾಗದು. ಪ್ಯಾರಿಸ್‌ನಲ್ಲಿ ನಡಾಲ್ ಪ್ರಶಸ್ತಿ ಜಯಿಸಿದ್ದು ೨೦೦೫ರಲ್ಲಿ. ಅಲ್ಲಿಂದಾಚೆಗೆ ಸತತ ಮೂರು ಬಾರಿ ಚಾಂಪಿಯನ್ ಆದ ನಡಾಲ್, ಮತ್ತೆ ಈ ಗಟ್ಟಿ ಅಂಕಣದ ಟೂರ್ನಿಯಲ್ಲಿ ಚಾಂಪಿಯನ್ ಆದದ್ದು ೨೦೧೦ರಲ್ಲಿ. ಕಾಕತಾಳೀಯ ಎಂಬಂತೆ ಇಲ್ಲಿಂದಾಚೆಗೆ ಮತ್ತೆ ಇಲ್ಲಿ ಹ್ಯಾಟ್ರಿಕ್ ಸೇರಿದಂತೆ ಅದರಾಚೆಗೂ ಸಾಧನೆ ಮೆರೆದದ್ದು ನಡಾಲ್ ಪ್ರಭುತ್ವಕ್ಕೆ ಸಾಕ್ಷಿ.

“ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ನೀವು ಮೊದಲ ಪ್ರಶಸ್ತಿ ಗೆದ್ದಾಗ ನನಗಿನ್ನೂ ೧೧ರ ಹರೆಯವಷ್ಟೆ. ಇಲ್ಲೊಂದು ದಿನ ಫೈನಲ್ ಆಡುತ್ತೇನೆ ಎಂದು ನಾನೆಂದೂ ಯೋಚಿಸಿದವನಲ್ಲ. ಈ ಬಾರಿಯಂತೆ ಮತ್ತೊಂದು ರೊಲ್ಯಾಂಡ್ ಗ್ಯಾರೋಸ್‌ ಫೈನಲ್‌ನಲ್ಲಿ ನಾನು ಆಡುವ ವಿಶ್ವಾಸವಿದೆ. ಅದೂ ನಿಮ್ಮ ವಿರುದ್ಧವೇ ಆಡುವ ಭರವಸೆ ಹೊಂದಿದ್ದೇನೆ. ಇದೇ ವೇಳೆ, ಮುಂದಿನ ಫೈನಲ್ ಆಡುವ ಹೊತ್ತಿಗೆ ನಾನು ಫ್ರೆಂಚ್ ಭಾಷೆಯಲ್ಲೇ ಮಾತನಾಡುತ್ತೇನೆ,’’ ಎಂದು ನಡಾಲ್ ಅವರನ್ನು ಉದ್ದೇಶಿಸಿ ಹೇಳಿದ ಡಾಮಿನಿಕ್ ಥೀಮ್, ಫಿಲಿಪ್ಪಿ ಚಾಟ್ರಿಯರ್ ಕೋರ್ಟ್‌ನಲ್ಲಿದ್ದ ಟೆನಿಸ್ ಪ್ರೇಮಿಗಳ ಚಪ್ಪಾಳೆ ಗಿಟ್ಟಿಸಿದರು.

ಇನ್ನು, ನಡಾಲ್ ಕೂಡ ಥೀಮ್ ಮತ್ತು ಅವರ ಆಟದ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. “ನನಗೆ ಚೆನ್ನಾಗಿ ಗೊತ್ತಿದೆ, ಶೀಘ್ರದಲ್ಲೇ ನೀನು ಫ್ರೆಂಚ್ ಓಪನ್ ಗೆಲ್ಲುವ ಬಗ್ಗೆ ನನಗೆ ಖಾತ್ರಿ ಇದೆ. ಫೈನಲ್‌ನಲ್ಲಿ ನಿನ್ನ ಜೊತೆಗೆ ಸೆಣಸುವ ಅವಕಾಶ ಸಿಕ್ಕಿದ್ದಕ್ಕಾಗಿ ಸಂತಸವಾಗುತ್ತಿದೆ. ನಿನಗೂ ಹಾಗೂ ನಿನ್ನ ತಂಡಕ್ಕೂ ನನ್ನ ಅಭಿನಂದನೆಗಳು,’’ ಎಂದು ಕ್ಲೇ ಕೋರ್ಟ್ ಕಿಂಗ್ ನುಡಿದರು.

ಈ ಋತುವಿನ ಮಾಂಟೆ ಕಾರ್ಲೊ ಹಾಗೂ ಬಾರ್ಸಿಲೋನಾದಲ್ಲಿ ೧೧ನೇ ಪ್ರಶಸ್ತಿ ಜಯಿಸಿದ್ದ ನಡಾಲ್, ಫ್ರೆಂಚ್ ಓಪನ್‌ನಲ್ಲಿಯೂ ಹನ್ನೊಂದರ ಹ್ಯಾಟ್ರಿಕ್ ಸಾಧನೆಯ ಸುಳಿವು ನೀಡಿದ್ದರು. ಅವರ ಈ ಸಾಧನೆಗೆ ಜರ್ಮನ್ ಆಟಗಾರ ಅಲೆಕ್ಸಾಂಡರ್ ಜ್ವೆರೇವ್ ಹಾಗೂ ಡಾಮಿನಿಕ್ ಥೀಮ್ ತೀವ್ರ ಪೈಪೋಟಿ ಒಡ್ಡುತ್ತಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಗಟ್ಟಿ ಅಂಕಣದಲ್ಲಿನ ತನ್ನ ಪಾರುಪತ್ಯವನ್ನು ಮುಂದುವರಿಸಿದ ನಡಾಲ್, ಯುವ ಆಟಗಾರರ ಪಾಲಿಗೆ ಗುರುವಾದದ್ದು ಈ ಟೂರ್ನಿಯಲ್ಲಿ ಋಜುವಾಯಿತು.

ಇದನ್ನೂ ಓದಿ : ವೃತ್ತಿಬದುಕಿನ ಹನ್ನೊಂದರ ಹ್ಯಾಟ್ರಿಕ್‌ಗೆ ಅಣಿಯಾದ ರಾಫೆಲ್ ನಡಾಲ್

ಗ್ರಾಂಡ್‌ಸ್ಲಾಮ್‌ನಲ್ಲಿ ನಡಾಲ್ ವಿಜಯೋತ್ಸವ

ಆಸ್ಟ್ರೇಲಿಯನ್ ಓಪನ್: 2009

ಫ್ರೆಂಚ್ ಓಪನ್: ೨೦೦೫, ೨೦೦೬, ೨೦೦೭, ೨೦೦೮, ೨೦೧೦, ೨೦೧೧, ೨೦೧೨, ೨೦೧೩, ೨೦೧೪, ೨೦೧೭, ೨೦೧೮

ವಿಂಬಲ್ಡನ್: ೨೦೦೮, ೨೦೧೦

ಯುಎಸ್ ಓಪನ್: ೨೦೧೦, ೨೦೧೩, ೨೦೧೭

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More