ನಾಲ್ಕನೇ ವಿಶ್ವಕಪ್‌ ವಿಜಯದೊಂದಿಗೆ ಅಮೆರಿಕ ನೆಲದಲ್ಲಿ ನಲಿದಾಡಿದ ಸಾಂಬಾ

ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಪ್ರೇಕ್ಷಕರಿಂದ ವೀಕ್ಷಿಸಲ್ಪಟ್ಟ ಟೂರ್ನಿ ೧೯೯೪ರ ಆವೃತ್ತಿ. ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿಯನ್ನು ಹಣಿದ ಬ್ರೆಜಿಲ್ ನಾಲ್ಕನೇ ವಿಶ್ವಕಪ್ ಗೆದ್ದ ಮೊಟ್ಟಮೊದಲ ರಾಷ್ಟ್ರವೆನಿಸಿದರೆ, ಮಾಂತ್ರಿಕ ಆಟಗಾರ ಡೀಗೊ ಮರಡೋನಾಗೆ ಮೆತ್ತಿಕೊಂಡ ಕಳಂಕ ಮಾತ್ರ ವಿಪರ್ಯಾಸ

ಜೂನ್ ೧೭ರಿಂದ ಜುಲೈ ೧೭ರವರೆಗಿನ ಹದಿನಾರನೇ ವಿಶ್ವಕಪ್‌ಗೆ ಅಮೆರಿಕ ಸಂಯುಕ್ತ ಆತಿಥ್ಯ ಹೊತ್ತಿದೆ ಎಂದಾಗ ಬಹುತೇಕರು ನಂಬಲಿಲ್ಲ. ‘’ಬಿಟ್ಹಾಕಿ ಈ ವಿಶ್ವಕಪ್ ಖಂಡಿತಾ ತೋಪೆದ್ದು ಹೋಗುತ್ತದೆ. ಅರ್ಧದಷ್ಟು ಕ್ರೀಡಾಂಗಣವೂ ತುಂಬುವುದಿಲ್ಲ’’ ಎಂಬಿತ್ಯಾದಿ ಮಾತಾಡಿದವರು ಕಡೆಗೆ ನಾಚಿಕೆಯಿಂದ ಮುದುಡಿಹೋಗುವಂತೆ ಮಾಡಿದ್ದು ಈ ವಿಶ್ವಕಪ್‌ನ ಹೆಗ್ಗಳಿಕೆ. ಆದರೆ, ಹದಿನೈದನೇ ವಿಶ್ವ ಫುಟ್ಬಾಲ್ ಆವೃತ್ತಿಯನ್ನು ಒಟ್ಟಾರೆ ವೀಕ್ಷಿಸಿದವರ ಸಂಖ್ಯೆ ೩,೫೮೭,೫೩೮ ಮಂದಿ. ಅಂದರೆ, ಪ್ರತೀ ಪಂದ್ಯವನ್ನು ವೀಕ್ಷಿಸಿದವರ ಸಂಖ್ಯೆ ೬೮,೯೯೧ರಷ್ಟಿತ್ತು.

ವಿಶ್ವಕಪ್‌ ಪಂದ್ಯಾವಳಿಗೆ ಆಕ್ರಮಣಶೀಲತೆಯನ್ನು ನೀಡಿದ ಮೆಕ್ಸಿಕೊ ವಿಶ್ವಕಪ್‌ ಬಳಿಕ ಮರೆಯಾಗಿದ್ದ ಆಕ್ರಮಣಕಾರಿ ಆಟಕ್ಕೆ ಪುನರ್‌ ಪ್ರವೇಶಿಕೆಯನ್ನು ಕಲ್ಪಿಸಿಕೊಟ್ಟದ್ದು ಇದೇ ವಿಶ್ವಕಪ್. ಅಂತೆಯೇ, ಗೆದ್ದ ತಂಡಗಳಿಗೆ ಮೂರು ಪಾಯಿಂಟ್ಸ್‌ಗಳ ನೀಡುವಿಕೆಯೂ ಹೊಸ ಪರಿಕಲ್ಪನೆಯೇ. ಸೋಲುತ್ತೇವೆಂಬ ಭೀತಿಯಲ್ಲಿ ಆಟಗಾರರು ಅನುಸರಿಸುತ್ತಿದ್ದ ರಕ್ಷಣಾತ್ಮಕ ಹೋರಾಟದ ಮನೋಭಾವವನ್ನು ಪಕ್ಕಕ್ಕಿಟ್ಟದ್ದಲ್ಲದೆ, ಆಕ್ರಮಣಕಾರಿ ಆಟದಿಂದ ಅಮೆರಿಕ ಪ್ರೇಕ್ಷಕರನ್ನು ರಂಜಿಸಿದ ಆಟಗಾರರು ಶಹಭಾಸ್‌ಗಿರಿ ಪಡೆದರು.

ಮರಡೋನಾ ಡೋಪಿಂಗ್!

ಗ್ರೀಸ್, ನೈಜೀರಿಯಾ ಮತ್ತು ಸೌದಿ ಅರೇಬಿಯಾ ತಂಡಗಳು ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ್ದು ಕೂಡಾ ಇದೇ ಹದಿನೈದನೇ ಆವೃತ್ತಿಯಲ್ಲಿ. ಅರ್ಜೆಂಟೀನಾ ಆಟಗಾರ ಡೀಗೋ ಮರಡೋನಾ ನಿಷೇಧಿತ ಉದ್ದೀಪನಾ ಮದ್ದು ಸೇವಿಸಿದ ತಪ್ಪಿಗಾಗಿ ಪಂದ್ಯಾವಳಿಯ ಮಧ್ಯಂತರದಲ್ಲೇ ಹೊರಬಿದ್ದದ್ದು ಕೂಡಾ ಈ ವಿಶ್ವಕಪ್‌ನ ಬಹುದೊಡ್ಡ ಘಟನೆಗಳಲ್ಲಿ ಒಂದು. ಇನ್ನೊಂದೆಡೆ, ಮರಡೋನಾ ಪಾಲಿಗೆ ಇದು ಕೊನೆಯ ವಿಶ್ವಕಪ್ ಕೂಡಾ ಆಗಿದ್ದುದು ವಿಪರ್ಯಾಸ. ಈ ಹಿಂದೆ ೧೯೮೨, ೧೯೮೬ ಮತ್ತು ೧೯೯೦ರ ವಿಶ್ವಕಪ್‌ನಲ್ಲಿ ಆಡಿದ್ದ ಮರಡೋನಾ, ಕೆಟ್ಟ ಅಪವಾದದೊಂದಿಗೆ ವಿಶ್ವಕಪ್‌ನಿಂದ ಮರೆಯಾದರು.

ಇನ್ನು, ಇದಕ್ಕೂ ಮಿಗಿಲಾದ ಆಘಾತಕಾರಿ ಸಂಗತಿ ಏನೆಂದರೆ, ಆತಿಥೇಯ ಅಮೆರಿಕ ವಿರುದ್ಧದ ಪಂದ್ಯದಲ್ಲಿ ಕೊಲಂಬಿಯಾ ಗೋಲ್‌ಕೀಪರ್ ಆಂಡ್ರೆಸ್ ಎಸ್ಕೊಬಾರ್ ಸ್ವಯಂ ಗೋಲು (ಉಡುಗೊರೆ ಗೋಲು) ನೀಡಿದ್ದು ಗೊತ್ತಾಗುತ್ತಿದ್ದಂತೆ ಮುಂದಿನ ಹತ್ತೇ ದಿನಗಳಲ್ಲಿ ಅವರ ಹತ್ಯೆಯಾಗಿತ್ತು.

ಇದನ್ನೂ ಓದಿ : ಮರಡೋನಾ ಹ್ಯಾಂಡ್ ಆಫ್ ಗಾಡ್ ಮ್ಯಾಜಿಕ್‌ನಲ್ಲಿ ಅರ್ಜೆಂಟೀನಾ ಮತ್ತೆ ಚಾಂಪಿಯನ್

ರೋಸ್‌ ಬೌಲ್‌ನಲ್ಲಿ ಜಯದ ಲಾಸ್ಯ

ಸರಿಸುಮಾರು ೯೪ ಸಹಸ್ರ ಪ್ರೇಕ್ಷಕರು ಜಮಾಯಿಸಿದ್ದ ಐತಿಹಾಸಿಕ ಕ್ರೀಡಾ ತಾಣ ರೋಸ್ ಬೌಲ್‌ನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ವಿಶ್ವ ಫುಟ್ವಾಲ್‌ನ ಮದಗಜಗಳಂತಿದ್ದ ಬ್ರೆಜಿಲ್‌ ಹಾಗೂ ಇಟಲಿ ಸತ್ವಪರೀಕ್ಷೆಗಿಳಿದವು. ಈ ಇಬ್ಬರ ಕಾದಾಟವನ್ನು ತೀವ್ರತೆಯ ಉತ್ತುಂಗಕ್ಕೆ ಕೊಂಡೊಯ್ಯುವ ಕಾರಣ ಮತ್ತೊಂದಿತ್ತು. ಅದುವೇ ವಿಶ್ವ ಫುಟ್ಬಾಲ್ ಇತಿಹಾಸದಲ್ಲಿ ೪ನೇ ಕಪ್ ಗೆದ್ದ ಮೊದಲ ತಂಡವೆಂಬ ಹಪಾಹಪಿ.

ಅದಕ್ಕೆ ತಕ್ಕಂತೆ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಫಿಫಾ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಪೆನಾಲ್ಟಿ ಶೂಟೌಟ್‌ನಲ್ಲಿ ವಿಶ್ವ ಚಾಂಪಿಯನ್ನರನ್ನು ನಿರ್ಧರಿಸುವಂತಾದಾಗ ಬ್ರೆಜಿಲ್‌ ೩-೨ ಗೋಲುಗಳಿಂದ ಇಟಾಲಿಯನ್ನರ ಹೃದಯವನ್ನು ಹಿಂಡಿತು! ೨೪ ವರ್ಷಗಳ ಹಿಂದೆ ಇದೇ ಇಟಾಲಿಯನ್ನರನ್ನು ಮಣಿಸಿ ಪ್ರಶಸ್ತಿ ಗೆದ್ದಿದ್ದ ಬ್ರೆಜಿಲ್ ಆನಂತರದಲ್ಲಿ ಮತ್ತೊಮ್ಮೆ ವಿಶ್ವಕಪ್ ಎತ್ತಿಹಿಡಿಯಲು ಎರಡು ದಶಕಗಳನ್ನು ತೆಗೆದುಕೊಂಡದ್ದು, ವಿಶ್ವ ಫುಟ್ಬಾಲ್‌ನಲ್ಲಿದ್ದ ಜಿದ್ದಾಜಿದ್ದಿಗೆ ಸಾಕ್ಷಿ.

ಟೂರ್ನಿಯಲ್ಲಿ ತಲಾ ಆರು ಗೋಲುಗಳನ್ನು ದಾಖಲಿಸಿದ್ದ ರಷ್ಯಾದ ಒಲೆಗ್ ಸಲೆಂಕೊ ಹಾಗೂ ಬಲ್ಗೇರಿಯಾದ ಹ್ರಿಸ್ಟೊವ್ ಸ್ಟಾಯಿಚ್ ಕೊವ್ ಗೋಲ್ಡನ್ ಬೂಟ್‌ನ ಗೌರವವನ್ನು ಸಮನಾಗಿ ಹಂಚಿಕೊಂಡರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More