ಜಿಡಾನೆಯ ಜಬರ್ದಸ್ತ್ ಆಟದಲ್ಲಿ ಕಡೆಗೂ ಅಧಿಪತ್ಯ ಸ್ಥಾಪಿಸಿದ ಫ್ರೆಂಚರು

ಯೂರೋಪ್‌ನ ಅನೇಕ ರಾಷ್ಟ್ರಗಳು ವಿಶ್ವಕಪ್‌ ಜಯದ ಅಲೆಯಲ್ಲಿ ತೇಲುತ್ತಿದ್ದರೂ, ಫ್ರಾನ್ಸ್‌ಗೆ ಮಾತ್ರ ವಿಶ್ವಕಪ್ ಗಗನಕುಸುಮವಾಗಿತ್ತು. ಜಿನೇಡಿನ್ ಜಿಡಾನೆ ಎಂಬ ಪ್ರಚಂಡ ಆಟಗಾರನೊಂದಿಗೆ ತನ್ನ ನೆಲದಲ್ಲಿ ನಡೆದ ೧೯೯೮ರ ಹದಿನಾರನೇ ಆವೃತ್ತಿಯಲ್ಲಿ ಫ್ರೆಂಚರು ಕಪ್ ಗೆದ್ದು ಬೀಗಿದರು

ಜೂನ್ ೧೦ರಿಂದ ಜುಲೈ ೧೨ರವರೆಗೆ ಒಟ್ಟು ೩೩ ದಿನಗಳ ಕಾಲ ನಡೆದ ಫಿಫಾ ವಿಶ್ವಕಪ್‌ನ ಹದಿನಾರನೇ ಆವೃತ್ತಿಯ ಕೆಲವು ವಿಶೇಷಗಳಲ್ಲಿ ಮೊದಲನೆಯದು, ೬೦ ವರ್ಷಗಳ ಫ್ರಾನ್ಸ್ ವಿಶ್ವಕಪ್‌ಗೆ ಆತಿಥ್ಯ ಹೊತ್ತಿದ್ದು. ೧೯೩೮ರ ಆವೃತ್ತಿಗೆ ಫ್ರಾನ್ಸ್ ಆತಿಥ್ಯ ಹೊತ್ತಿತ್ತಾದರೂ, ಪ್ರಶಸ್ತಿ ಗೆಲ್ಲಲು ಅದು ವಿಫಲವಾಗಿತ್ತು. ಎರಡನೆಯದು, ೨೪ ತಂಡಗಳಿದ್ದ ಸಂಖ್ಯೆಯನ್ನು ೩೨ಕ್ಕೆ ವಿಸ್ತರಿಸಿದ್ದು. ಇನ್ನು, ಮೂರನೆಯದು ಮೊಟ್ಟಮೊದಲ ಬಾರಿ ವಿಶ್ವಕಪ್ ಚೆಂಡಿನಲ್ಲಿ ಬಣ್ಣದ ಬಳಕೆಯಾದದ್ದು.ಅಡಿಡಾಸ್ ಈ ವಿಶ್ವಕಪ್‌ಗೆ ಸಜ್ಜುಗೊಳಿಸಿದ್ದ ಚೆಂಡು ನೀಲಿ ಹಾಗೂ ಕೆಂಪು ಬಣ್ಣದ್ದಾಗಿತ್ತು.

ಪ್ರಚಂಡರ ದಂಡು

ಫ್ರೆಂಚ್ ಈ ಬಾರಿ ವಿಶ್ವಕಪ್‌ನಿಂದ ವಂಚಿತವಾಗುವಂತೆಯೇ ಇರದ ಒಂದು ಸದೃಢ ಹಾಗೂ ಸುಭದ್ರ ತಂಡ ವಿಶ್ವ ಸವಾಲಿಗೆ ಎದೆಯೊಡ್ಡಿ ನಿಂತಿತ್ತು. ವಿಶ್ವ ದರ್ಜೆಯ ಪ್ರತಿಭಾನ್ವಿತ ಆಟಗಾರರಾದ ಜಿನೇಡಿನ್ ಜಿಡಾನೆ, ಲಿಲಿಯನ್ ತುರಾಮ್, ನಾಯಕ ಡಿಡಿಯರ್ ಡೆಶೆಂಪ್ಸ್ ಹಾಗೂ ಮಾರ್ಸೆಲ್ ಡಿಸೇಲಿಯಂಥವರನ್ನು ಭೇದಿಸಿ ವಿಶ್ವಕಪ್ ಬೇಟೆಯಾಡುವುದು ಮಿಕ್ಕ ೩೧ ತಂಡಗಳ ಪಾಲಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿತ್ತು. ಫೈನಲ್‌ನಲ್ಲಂತೂ ರೊನಾಲ್ಡೊ ಸಾರಥ್ಯದ ಹಾಲಿ ಚಾಂಪಿಯನ್‌ ಬ್ರೆಜಿಲ್ ಎದುರಾದಾಗಲೂ ಫ್ರೆಂಚರು ಎದೆಗುಂದಲಿಲ್ಲ. ರೊನಾಲ್ಡೊಗೆ ಪರ್ಯಾಯವಾಗಿ ಜಿಡಾನೆಯ ಆನೆಬಲ ತನಗಿದೆ ಎಂಬುದು ಅದರ ಆತ್ಮವಿಶ್ವಾಸವನ್ನು ನೂರ್ಮಡಿಗೊಳಿಸಿತ್ತು.

ಬೆಚ್ಚಿಬಿದ್ದ ಬ್ರೆಜಿಲ್

ಇದನ್ನೂ ಓದಿ : ಸಾಂಬಾ ನೆಲದಲ್ಲಿ ವಿಶ್ವಕಪ್ ಆಡುವ ಫಿಫಾ ಆಹ್ವಾನವನ್ನು ಭಾರತ ತಿರಸ್ಕರಿಸಿತೇಕೆ?

ಐದನೇ ವಿಶ್ವಕಪ್ ಎತ್ತಿಹಿಡಿಯುವ ವಾಂಛೆಯೊಂದಿಗೆ ಪ್ಯಾರಿಸ್‌ಗೆ ಆಗಮಿಸಿದ್ದ ಬ್ರೆಜಿಲ್ ಆತಿಥೇಯ ಕೈಯಲ್ಲಿ ಸಿಕ್ಕಿ ನಲುಗಿತು. ಫ್ರಾನ್ಸ್‌ನ ಪ್ರಚಂಡ ಆಟಕ್ಕೆ ಮಂಕಾದ ಅದು ಯಾವುದೇ ಗೋಲು ದಾಖಲಿಸಲು ವಿಫಲವಾಗಿ ೦-೩ ಗೋಲುಗಳ ಅಂತರದಿಂದ ಸೋಲಪ್ಪಿತು. ತವರು ನೆಲದ ಸ್ಟಾರ್ ಆಟಗಾರ ಜಿಡಾನೆ ೨೭ ಹಾಗೂ ೪೫+೧ನೇ ನಿಮಿಷದಲ್ಲಿ ಎರಡು ಗೋಲು ತಂದುಕೊಟ್ಟು ಆತಿಥೇಯರ ಗೆಲುವಿಗೆ ಮುನ್ನುಡಿ ಬರೆದರೆ, ೯೦+೩ನೇ ನಿಮಿಷದಲ್ಲಿ ಪೆಟಿಟ್ ದಾಖಲಿಸಿದ ಮೂರನೇ ಗೋಲು ವಿಶ್ವಕಪ್‌ನಲ್ಲಿ ಫ್ರೆಂಚ್ ಆಧಿಪತ್ಯದ ಹೆಗ್ಗುರುತೆನಿಸಿತು.

ಸೇಂಟ್ ಡೆನಿಸ್‌ನ ಸ್ಟೇಡ್ ಡಿ ಫ್ರಾನ್ಸ್ ಮೈದಾನದಲ್ಲಿ ಜರುಗಿದ ಈ ವಿಶ್ವಕಪ್ ಫೈನಲ್‌ಗಾಗಿ ಸೇರಿದ್ದ ಜನಸಾಗರ ೮೦,೦೦೦ ಸಹಸ್ರ ಮಂದಿ. ಅಂದಹಾಗೆ, ಮೊಟ್ಟ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಆಡಿದ ಕ್ರೊವೇಷಿಯಾ ೩ನೇ ಸ್ಥಾನ ಗಳಿಸಿ ಅಚ್ಚರಿ ಫಲಿತಾಂಶ ನೀಡಿತು. ಇಷ್ಟಲ್ಲದೆ, ಇದೇ ಕ್ರೊವೇಷಿಯಾದ ಸ್ಟ್ರೈಕರ್ ದಾವೊರ್ ಸುಕರ್ ಆರು ಗೋಲು ಗಳಿಸಿ ಗೋಲ್ಡನ್ ಬೂಟ್‌ಧಾರಿ ಎನಿಸಿದರು.  ಫ್ರಾನ್ಸ್‌ನ ಐತಿಹಾಸಿಕ ಗೆಲುವು ಜೂಲ್ಸ್ ರಿಮೆಟ್ ಮತ್ತು ಹೆನ್ರಿ ಡಿಲಾನೆ ಅವರ ಮೊಗದಲ್ಲಿ ಸಾರ್ಥಕತೆಯ, ಸಂತೃಪ್ತ ಭಾವವನ್ನು ಹೊಮ್ಮಿಸಿತ್ತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More