ಫಿಫಾ ವಿಶ್ವಕಪ್‌ಗೆ ಮೊದಲೇ ಫುಟ್ಬಾಲ್ ಜ್ವರ ದಯಪಾಲಿಸಿದ ಸುನೀಲ್ ಛೆಟ್ರಿ ಪಡೆ!

ರಷ್ಯಾದಲ್ಲಿ ನಡೆಯಲಿರುವ ಫಿಫಾ ವಿಶ್ವ ಫುಟ್ಬಾಲ್‌ ಅತ್ಯಂತ ಸಮೀಪದಲ್ಲಿದೆ. ಭಾರತದ ಫುಟ್ಬಾಲ್‌ಗೆ ಇನ್ನೂ ವಿಶ್ವಕಪ್‌ನಲ್ಲಿ ಆಡುವ ಸುಯೋಗ ಕೂಡಿ ಬಂದಿಲ್ಲವಾದರೂ, ಸುನೀಲ್ ಛೆಟ್ರಿಯಂಥ ಪ್ರತಿಭಾನ್ವಿತ ಆಟಗಾರರು ಆ ಪ್ರಯತ್ನವನ್ನು ಜೀವಂತವಾಗಿಡುವಲ್ಲಿ ಯಶಸ್ವಿಯಾಗುತ್ತಿರುವುದು ಸುಳ್ಳಲ್ಲ

ಮುಂದಿನ ವರ್ಷ ನಡೆಯಲಿರುವ ಪ್ರತಿಷ್ಠಿತ ಎಎಫ್‌ಸಿ ಕಪ್ ಗೆಲ್ಲಲು ಪೂರ್ವ ತಯಾರಿಯಂತಿದ್ದ  ಇಂಟರ್‌ಕಾಂಟಿನೆಂಟಲ್ ಕಪ್‌ನಲ್ಲಿ ಭಾರತ ಜಯಭೇರಿ ಬಾರಿಸಿದೆ. ಭಾನುವಾರ (ಜೂನ್ ೧೦) ಮುಂಬೈನ ಫುಟ್ಬಾಲ್ ಅರೇನಾದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಕೀನ್ಯಾವನ್ನು ೨-೦ ಗೋಲುಗಳಿಂದ ಮಣಿಸಿದ ಆತಿಥೇಯ ಭಾರತ ಟ್ರೋಫಿಯೊಂದಿಗೆ ನಗೆಬೀರಿತು.

ಟೂರ್ನಿಯಾದ್ಯಂತ ಅತ್ಯಮೋಘ ಪ್ರದರ್ಶನ ನೀಡಿದ್ದ ಭಾರತ, ಲೀಗ್ ಹಂತದಲ್ಲಿ ನ್ಯೂಜಿಲೆಂಡ್ ವಿರುದ್ಧ ಮಾತ್ರ ಸೋಲಿನ ಕಹಿ ಅನುಭವಿಸಿತ್ತು. ಇನ್ನು, ಪಂದ್ಯಾವಳಿಯಲ್ಲಿ ಗರಿಷ್ಠ ಗೋಲು ಬಾರಿಸಿದ ಸುನೀಲ್ ಛೆಟ್ರಿ ಭಾರತದ ಈ ಗೆಲುವಿನಲ್ಲಿ ಮಹತ್ವಪೂರ್ಣ ಪಾತ್ರ ವಹಿಸಿದರು. ಅಂದಹಾಗೆ, ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿಯೂ ಛೆಟ್ರಿ ಎರಡು ಗೋಲು ಬಾರಿಸಿದ್ದು ಗಮನಾರ್ಹ.

ಪಂದ್ಯ ಶುರುವಾದ ಏಳು ನಿಮಿಷಗಳಲ್ಲೇ ಭಾರತದ ಗೋಲಿನ ಸಂಭ್ರಮವನ್ನಾಚರಿಸಿಕೊಂಡಿತು. ಕೀನ್ಯಾ ರಕ್ಷಣಾ ವ್ಯೂಹವನ್ನು ಭೇದಿಸಿದ ಛೆಟ್ರಿ ಭಾರತಕ್ಕೆ ೧-೦ ಮುನ್ನಡೆ ತಂದುಕೊಟ್ಟರು. ಅವರ ಈ ಗೋಲು ಗಳಿಕೆಗೆ ಸಹ ಆಟಗಾರ ಅನಿರುದ್ಧ ಥಾಪಾ ನೆರವಾದರು. ಎಡಭಾಗದಲ್ಲಿ ಛೆಟ್ರಿ ಅವರನ್ನು ಕೀನ್ಯಾ ಆಟಗಾರ ನೆಲಕ್ಕೆ ಕೆಡವಿದ್ದರಿಂದ ಭಾರತಕ್ಕೆ ಫ್ರೀ ಕಿಕ್ ಅವಕಾಶ ಸಿಕ್ಕಿತು.

ಥಾಪಾ ಕಿಕ್ ತೆಗೆದ ಚೆಂಡನ್ನು  ಛೆಟ್ರಿ ವ್ಯರ್ಥವಾಗಿಸದೆ ಭಾರತಕ್ಕೆ ಮೊದಲ ಗೋಲು ತಂದುಕೊಟ್ಟರು. ಛೆಟ್ರಿಯ ಗೋಲಿನ ಯತ್ನವನ್ನು ವಿಫಲಗೊಳಿಸಲು ಕೀನ್ಯಾ ಗೋಲಿ ಪ್ಯಾಟ್ರಿಕ್ ಮಟಾಸಿ ನಡೆಸಿದ ಯತ್ನ ಕೈಕೊಟ್ಟಿತು. ಶರವೇಗದಲ್ಲಿ ತೂರಿಬಂದ ಚೆಂಡು ಗೋಲುಪೆಟ್ಟಿಗೆಯೊಳಗೆ ನುಸುಳಿ ಕೀನ್ಯಾ ೦-೧ ಹಿನ್ನಡೆ ಅನುಭವಿಸಬೇಕಾಯಿತು.

ಇದನ್ನೂ ಓದಿ : ಫುಟ್ಬಾಲ್ ನಾಡು ಸಾಂಬಾದಲ್ಲಿ ಪೀಲೆ ಚಿಮ್ಮಿಸಿದ ಮೊದಲ ವಿಶ್ವಕಪ್ ಲಾಸ್ಯ

ಮೆಸ್ಸಿ ದಾಖಲೆ ಸರಿಗಟ್ಟಿದ ಛೆಟ್ರಿ

ಇನ್ನು ಮೊದಲ ಗೋಲಿನ ಅತ್ಯುತ್ಸಾಹದಲ್ಲಿ ಮುನ್ನುಗ್ಗಿದ ಭಾರತ ಪ್ರಥಮಾರ್ಧದಲ್ಲೇ ಮತ್ತೊಂದು ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು. ೨೯ನೇ ನಿಮಿಷದಲ್ಲಿ ಕ್ರೀಡಾಂಗಣದ ಮಧ್ಯಮ ಭಾಗದಿಂದ ಅನಾಸ್ ಎಡತೋಡಿಕಾ ಪಾಸ್ ಮಾಡಿದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಛೆಟ್ರಿ, ರಕ್ಷಣಾ ವಿಭಾಗದಲ್ಲಿದ್ದ ಮೂವರು ಆಟಗಾರರನ್ನು ವಂಚಿಸಿ ಮುನ್ನಡೆದ ಅವರು, ತಡಮಾಡದೆ ಎಡಗಾಲಿನಿಂದ ಚೆಂಡನ್ನು ಗೋಲುಪೆಟ್ಟಿಗೆಯ ಎಡಬದಿಗೆ ಜಾಡಿಸಿ ಭಾರತಕ್ಕೆ ೨-೦ ಮುನ್ನಡೆ ತಂದರು. ಅಂದಹಾಗೆ, ಈ ಗೋಲಿನೊಂದಿಗೆ ಛೆಟ್ರಿ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ೬೪ನೇ ಗೋಲು ದಾಖಲಿಸುವುದರೊಂದಿಗೆ ಅರ್ಜೆಂಟೀನಾ ತಂಡದ ನಾಯಕ ಲಯೋನೆಲ್ ಮೆಸ್ಸಿ ದಾಖಲೆಯನ್ನು ಸರಿಗಟ್ಟಿದರು.

ಭಾರತದ ಈ ಆಕ್ರಮಣಕಾರಿ ಆಟದಿಂದ ಕನಲಿದ ಕೀನ್ಯಾ, ದ್ವಿತೀಯಾರ್ಧದಲ್ಲಾದರೂ ಗೋಲು ಗಳಿಸಬೇಕೆಂಬ ಛಲದೊಂದಿಗೆ ಸೆಣಸಿತು. ಅದಕ್ಕೆ ತಕ್ಕಂತೆ ಪಂದ್ಯದ ೭೬ನೇ ನಿಮಿಷದಲ್ಲಿ ಪ್ರವಾಸಿ ತಂಡಕ್ಕೆ ಸಿಕ್ಕ ಪೆನಾಲ್ಟಿ ಕಿಕ್ ಅವಕಾಶವೂ ದೊರಕಿತು. ಆದರೆ, ಭಾರತದ ಗೋಲಿ ಗುರುಪ್ರೀತ್ ಸಿಂಗ್ ಸಂಧು ಗೋಲುಪೆಟ್ಟಿಗೆಯ ಎಡಕ್ಕೆ ಜಿಗಿದು ತೂರಿಬರುತ್ತಿದ್ದ ಚೆಂಡನ್ನು ಗೋಲುಪೆಟ್ಟಿಗೆಯ ಆಚೆಗಟ್ಟಿ ಕೀನ್ಯಾ ಗೋಲಿನ ಹವಣಿಕೆಯನ್ನು ಹೊಸಕಿಹಾಕಿದರು. ಅಲ್ಲಿಂದಾಚೆಗೆ ಭಾರತದ ರಕ್ಷಣಾ ವ್ಯೂಹವನ್ನು ಭೇದಿಸಲು ಕೀನ್ಯಾಗೆ ಆಗಲೇ ಇಲ್ಲ. ಅಂತಿಮವಾಗಿ, ಛೆಟ್ರಿ ಪಡೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ವಿಜಯೋತ್ಸವ ಆಚರಿಸಿಕೊಂಡಿತು.

ಖಂಡಿತ ಚಿನ್ನಕ್ಕೆ ಪಟ್ಟು ಹಾಕುವೆ ಎಂದ ಜಗಜಟ್ಟಿ ಬಜರಂಗ್ ಪುನಿಯಾ
ಏಷ್ಯನ್ ಚಾಂಪಿಯನ್ಸ್ | ಹಾಕಿಯಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಮಿಂಚಿದ ಭಾರತ
ವಿಶ್ವ ಕಿರೀಟ ತೊಡುವ ಹ್ಯಾಮಿಲ್ಟನ್ ತವಕಕ್ಕೆ ಬ್ರೇಕ್ ಹಾಕಿದ ಕಿಮಿ ರೈಕೊನೆನ್
Editor’s Pick More