ಮರಡೋನಾ ಹ್ಯಾಂಡ್ ಆಫ್ ಗಾಡ್ ಮ್ಯಾಜಿಕ್‌ನಲ್ಲಿ ಅರ್ಜೆಂಟೀನಾ ಮತ್ತೆ ಚಾಂಪಿಯನ್

ಹದಿಮೂರನೇ ವಿಶ್ವಕಪ್ ಪಂದ್ಯಾವಳಿಯಲ್ಲಿ ಮಿಂಚಿದ್ದು ಅರ್ಜೆಂಟೀನಾ ಎನ್ನುವುದಕ್ಕಿಂತ ಪ್ರಚಂಡ ಆಟಗಾರ ಮರಡೋನಾ ಎನ್ನುವುದೇ ಹೆಚ್ಚು ಸೂಕ್ತ. ‘ದ ಹ್ಯಾಂಡ್ ಆಫ್ ಗಾಡ್’ ವಿವಾದದ ಮಧ್ಯೆಯೂ ಒನ್‌ ಮ್ಯಾನ್ ಶೋ ಆಗಿ ಮೆರೆದದ್ದು ಮರಡೋನಾ. ಪಶ್ಚಿಮ ಜರ್ಮನಿ ರನ್ನರ್‌ಅಪ್ ಆಯಿತು

ವಿಶ್ವ ಫುಟ್ಬಾಲ್ ಲೋಕದ ಅಪ್ರತಿಮ ಆಟಗಾರನೆಂದೇ ಕರೆಸಿಕೊಳ್ಳುವ ಡೀಗೋ ಮರಡೋನಾ ಫುಟ್ಬಾಲ್ ಶಕ್ತಿಯ ನೈಜ ಅನಾವರಣವಾಗಿದ್ದು ೧೯೮೬ರ ಫಿಫಾ ವಿಶ್ವಕಪ್‌ನ ವಿಶೇಷ. ನಾಲ್ಕು ವರ್ಷಗಳ ಹಿಂದೆ ಸ್ಪೇನ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿಯೇ ತಾನೆಂಥ ಆಟಗಾರ ಎಂಬುದನ್ನು ನಿರೂಪಿಸಿದ್ದ ಮರಡೋನಾ, ಮೆಕ್ಸಿಕೋದಲ್ಲಿಯೂ ಅರ್ಜೆಂಟೀನಾವನ್ನು ವಿಶ್ವಕಪ್‌ನತ್ತ ಮುನ್ನಡೆಸಿದಾತ. ೧೯೫೮ರ ವಿಶ್ವಕಪ್‌ನಲ್ಲಿ ಪೀಲೆ ಆಗಲೀ ಇಲ್ಲವೇ, ೧೯೮೨ರ ವಿಶ್ವಕಪ್‌ನಲ್ಲಿ ಇಟಲಿಯ ಪೌಲೊ ರೊಸ್ಸಿಯಾಗಲೀ, ಮರಡೋನಾ ಹಾಗೆ ಇಡೀ ಟೂರ್ನಿಯ ಕೇಂದ್ರಬಿಂದುವಾಗಿರಲಿಲ್ಲ.

ಆಕ್ರಮಣಕಾರಿ ಆಟದೊಂದಿಗೆ ಅತ್ಯದ್ಭುತ ಡಿಫೆನ್ಸ್‌ನ ನೈಪುಣ್ಯತೆಯನ್ನು ಮೆರೆದ ಮರಡೋನಾ ಅಕ್ಷರಶಃ ಮೆಕ್ಸಿಕೋದಲ್ಲಿ ಮ್ಯಾಜಿಕ್ ಮಾಡಿದಾತ. ಇಂಗ್ಲೆಂಡ್‌ನ ಗ್ಯಾರಿ ಲಿನೇಕರ್ ಆರು ಗೋಲು ಬಾರಿಸಿ ಟೂರ್ನಿಯಲ್ಲಿ ಅತ್ಯಧಿಕ ಗೋಲ್‌ ಸ್ಕೋರರ್ ಎನಿಸಿದರಾದರೂ, ಐದು ಗೋಲುಗಳನ್ನು ದಾಖಲಿಸಿದ ಮರಡೋನಾ, ಟೂರ್ನಿಯಲ್ಲಿ ಅತಿ ಮೌಲ್ಯಾಧಾರಿತ ಪಟು ಎನಿಸಿದ್ದಲ್ಲದೆ, ಗೋಲ್ಡನ್ ಬೂಟ್ ಪಡೆದರು.

ಮೆಕ್ಸಿಕೋ ಸಿಟಿಯಲ್ಲಿ ನಡೆದ ಪ್ರಶಸ್ತಿ ಸುತ್ತಿನಲ್ಲಿ ೨೫ರ ಹರೆಯದ ಡೀಗೊ ಮರಡೋನಾ ಸಾರಥ್ಯದಲ್ಲಿ ೩-೨ ಗೋಲುಗಳಿಂದ ಪಶ್ಚಿಮ ಜರ್ಮನಿಯನ್ನು ಹಣಿದ ಅರ್ಜೆಂಟೀನಾ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಎನಿಸಿಕೊಂಡಿತು. ೧೯೭೮ರಲ್ಲಿ ಮೊಟ್ಟಮೊದಲ ಬಾರಿಗೆ ಪ್ರಶಸ್ತಿ ಗೆದ್ದಿದ್ದ ಅರ್ಜೆಂಟೀನಾ, ಎರಡನೇ ಬಾರಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಕೆನಡಾ, ಡೆನ್ಮಾರ್ಕ್ ಹಾಗೂ ಇರಾಕ್ ತಂಡಗಳು ಮೊದಲ ಬಾರಿ ಫೈನಲ್ ಹಂತದವರೆಗೆ ಧಾವಿಸಿಬಂದಿದ್ದವು.

ಶತಮಾನದ ಗೋಲು

೧೯೮೬ರ ವಿಶ್ವಕಪ್ ಪಂದ್ಯಾವಳಿಯ ಪ್ರಧಾನ ಆಕರ್ಷಣೆ 'ದ ಹ್ಯಾಂಡ್ ಆಫ್ ಗಾಡ್'. ಪಂದ್ಯದ ೫೧ನೇ ನಿಮಿಷದಲ್ಲಿ ಇಂಗ್ಲೆಂಡ್ ವಿರುದ್ಧ ಮರಡೋನಾ ದಾಖಲಿಸಿದ ಮೊದಲ ಗೋಲು ಈ ವಿಶೇಷಣಕ್ಕೆ ಪಾತ್ರವಾಯಿತು. ಮಾತ್ರವಲ್ಲ, ಈ ವಿವಾದಗ್ರಸ್ತ ಗೋಲು 'ಶತಮಾನದ ಗೋಲು' ಎಂದು ಕರೆಸಿಕೊಂಡದ್ದು ಕೂಡಾ ವಿಸ್ಮಯದ ಸಂಗತಿ. ಇನ್ನು, ಇದೇ ಇಂಗ್ಲೆಂಡ್ ವಿರುದ್ಧ ಅವರು ದಾಖಲಿಸಿದ ಎರಡನೇ ಗೋಲು ಫುಟ್ಬಾಲ್ ಆಟದ ಕಲಾತ್ಮಕ ಗೋಲು ಎಂದೆನಿಸಿಕೊಂಡಿತು.

೬೦ ಗಜಗಳಿಂದ ಶರವೇಗದಲ್ಲಿ ಮುನ್ನುಗ್ಗಿಬಂದ ಮರಡೊನಾ, ಆಕರ್ಷಕ ಡ್ರಿಬ್ಲಿಂಗ್‌ನಲ್ಲಿ ಐವರು ಆಂಗ್ಲ ಆಟಗಾರರನ್ನು ವಂಚಿಸಿ ಚೆಂಡನ್ನು ಪೆನಾಲ್ಟಿ ಏರಿಯಾದಿಂದ ಗೋಲುಪೆಟ್ಟಿಗೆಯತ್ತ ಕಿಕ್ ಮಾಡಿದ ಚೆಂಡನ್ನು ಇಂಗ್ಲೆಂಡ್ ಗೋಲಿ ಪೀಟರ್ ಶಿಲ್ಟನ್ ತಡೆಯುವಲ್ಲಿ ವಿಫಲವಾದರು. ೨೦೦೨ರಲ್ಲಿ ಫಿಫಾ ನಡೆಸಿದ ಸಾರ್ವಕಾಲಿಕ ಶ್ರೇಷ್ಠ ಗೋಲಿನ ಸ್ಪರ್ಧೆಯಲ್ಲಿ ಮರಡೋನಾ ಚಾಂಪಿಯನ್ ಆದರಲ್ಲದೆ, ಆಜ್ಟೆಕಾ ಕ್ರೀಡಾಂಗಣದ ಹೊರಗಡೆ ಮರಡೋನಾ ಪುತ್ಥಳಿಯೂ ತಲೆಎತ್ತಿತು.

ಮೇ ೩೧ರಿಂದ ಜೂನ್ ೨೯ರವರೆಗೆ ಒಟ್ಟು ೩೦ ದಿನಗಳ ಕಾಲ ನಡೆದ ಹದಿಮೂರನೇ ವಿಶ್ವಕಪ್ ಪಂದ್ಯಾವಳಿಯಲ್ಲಿ ೨೪ ತಂಡಗಳು ಭಾಗವಹಿಸಿದ್ದವು. ಹನ್ನೆರಡನೇ ವಿಶ್ವಕಪ್‌ಗೆ ಸ್ಪೇನ್ ಆತಿಥ್ಯ ಹೊತ್ತಿದ್ದ ಕಾರಣದಿಂದಾಗಿ ಯೂರೋಪ್‌ನ ಯಾವುದೇ ರಾಷ್ಟ್ರಗಳೂ ಈ ಬಾರಿಯ ವಿಶ್ವಕಪ್ ಆತಿಥ್ಯಕ್ಕೆ ಒಲವು ತೋರಲಿಲ್ಲ. ಕೊಲಂಬಿಯಾ ಆತಿಥ್ಯದ ಹಕ್ಕನ್ನು ಪಡೆದಿತ್ತಾದರೂ, ಹಣಕಾಸಿನ ಸಮಸ್ಯೆಯಿಂದಾಗಿ ಅದು ಹಿಂದೆ ಸರಿಯಿತು. ಹೀಗಾಗಿ, ಮೆಕ್ಸಿಕೊದಲ್ಲಿ ಮತ್ತೊಮ್ಮೆ ವಿಶ್ವಕಪ್ ಪಂದ್ಯಾವಳಿಗೆ ಆತಿಥ್ಯ ಹೊತ್ತುಕೊಂಡಿತು.

ಇನ್ನು, ೧೧೧,೬೦೦ ಜನರಿಂದ ತುಂಬಿದ್ದ ಮೆಕ್ಸಿಕೊ ಸಿಟಿಯ ಇಸ್ಟಾಡಿಯೊ ಅಜ್ಟೆಕಾ ಮೈದಾನದಲ್ಲಿ ನಡೆದ ಜೂನ್ ೨೯ರ ಫೈನಲ್‌ ಹಣಾಹಣಿಯಲ್ಲಿ ಪಶ್ಚಿಮ ಜರ್ಮನಿ ಇನ್ನೊಂದು ರನ್ನರ್‌ಅಪ್ ಸ್ಥಾನಕ್ಕೆ ತೃಪ್ತವಾಯಿತು. ಮೊದಲಿಗೆ, ಅರ್ಜೆಂಟೀನಾ ಪರ ಬ್ರೌನ್ (೨೩ನೇ ನಿ.) ಗೋಲು ಬಾರಿಸಿದರೆ, ವಲ್ಡಾನೊ (೫೫ನೇ ನಿ.) ಮತ್ತು ಬುರ್ರುಚಾಗ (೮೩ನೇ ನಿ.) ತಲಾ ಒಂದೊಂದು ಗೋಲು ಬಾರಿಸಿದರು. ಜರ್ಮನಿ ಪರ ರುಮ್ಮೆನಿಗ್ಗೆ ಮತ್ತು ವೋಲರ್ ಕ್ರಮವಾಗಿ ೭೪ ಮತ್ತು ೮೦ನೇ ನಿಮಿಷದಲ್ಲಿ ತಲಾ ಒಂದೊಂದು ಗೋಲು ದಾಖಲಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More