ಏಷ್ಯಾ ಉಪಖಂಡದಲ್ಲಿನ ಚೊಚ್ಚಲ ಟೂರ್ನಿಯಲ್ಲಿ ಬ್ರೆಜಿಲ್‌ಗೆ ಐದನೇ ಫಿಫಾ ಕಿರೀಟ

ಏಷ್ಯಾ ಉಪಖಂಡದಲ್ಲಿ ನಡೆದ ಬಹುದೊಡ್ಡ ಕ್ರೀಡೋತ್ಸವದಲ್ಲಿ ಸಾಂಬಾ ನಾಡು ಬ್ರೆಜಿಲ್ ದಾಖಲೆಯ ಐದನೇ ಬಾರಿಗೆ ಪ್ರಶಸ್ತಿ ಜಯಿಸಿತು. ಕಳೆದ ಆವೃತ್ತಿಯಲ್ಲಿ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತವಾಗಿದ್ದ ಬ್ರೆಜಿಲ್, ಫೈನಲ್‌ನಲ್ಲಿ ಜರ್ಮನಿಯನ್ನು ೨-೦ ಗೋಲುಗಳಿಂದ ಮಣಿಸಿ ಚಾಂಪಿಯನ್ ಆಗಿ ಮತ್ತೆ ಚರಿತ್ರೆ ಬರೆಯಿತು

ಏಷ್ಯಾದಲ್ಲಿ ನಡೆದ ಈ ಬಾರಿಯ ವಿಶ್ವಕಪ್ ಕೂಡಾ ಕೆಲವೊಂದು ವಿ‍ಶೇಷಗಳಿಂದ ಗಮನ ಸೆಳೆಯಿತು. ಅರ್ಹತಾ ಸುತ್ತಿನಲ್ಲಿ ಆಸ್ಟ್ರೇಲಿಯಾ ತಂಡ, ಸಮೋವಾ ವಿರುದ್ಧ ೩೧-೦ ಗೋಲುಗಳಿಂದ ಜಯ ಸಾಧಿಸಿದ್ದು ಫಿಫಾ ಫುಟ್ಬಾಲ್ ಇತಿಹಾಸದಲ್ಲಿಯೇ ಬಹುದೊಡ್ಡದಾದ ಗೆಲುವೆಂದು ದಾಖಲಾಯಿತು. ಅಂತೆಯೇ, ಆಸ್ಟ್ರೇಲಿಯಾದ ಆರ್ಚಿ ಥಾಮ್ಸನ್ ೧೩ ಗೋಲುಗಳ ಸಾಧನೆಯಿಂದ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಯಾವೊಬ್ಬ ಆಟಗಾರನೂ ಸಾಧಿಸದ ಗೋಲಿನ ದಾಖಲೆ ಬರೆದರು.ಇನ್ನು, ಡೇವಿಡ್ ಡ್ರಿಲಿಕ್ ಎಂಟು ಗೋಲು ಬಾರಿಸಿದರು. ಈ ಇಬ್ಬರ ಈ ಸಾಧನೆ ಪ್ರಥಮ ವಿಶ್ವ ಸಮರದಿಂದಾಚೆಗೆ ನಡೆದ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಗಳಲ್ಲೇ ಮೊಟ್ಟಮೊದಲನೆಯದಾಯಿತು.

ಇತ್ತ, ಫೈನಲ್‌ನಲ್ಲಿ ಬ್ರೆಜಿಲ್, ಜರ್ಮನಿಯನ್ನು ೨-೦ ಗೋಲುಗಳಿಂದ ಮಣಿಸಿ ಮತ್ತೆ ವಿಶ್ವಕಪ್‌ ಅನ್ನು ತಾನೇ ಪಡೆಯಿತು. ಆದರೆ, ಹಾಲಿ ಚಾಂಪಿಯನ್ ಫ್ರಾನ್ಸ್ ಗುಂಪು ಹಂತದಿಂದಲೇ ಹೊರಬಿದ್ದಿತು. ಚಾಂಪಿಯನ್ ಬ್ರೆಜಿಲ್ ತಂಡದ ರೊನಾಲ್ಡೊ ನಜಾರಿಯೊ ಲಿಮಾ ೮ ಗೋಲು ಗಳಿಸಿ ಗೋಲ್ಡನ್ ಬೂಟ್ ಅನ್ನು ತನ್ನದನ್ನಾಗಿಸಿಕೊಂಡರು.

ಆತಿಥ್ಯದ ಮಾದರಿ

ಮೇ ೩೧ರಿಂದ ಜೂನ್ ೩೦ರವರೆಗೆ ನಡೆದ ಹದಿನೇಳನೇ ಫಿಫಾ ವಿಶ್ವಕಪ್ ಆತಿಥ್ಯವನ್ನು ದಕ್ಷಿಣ ಕೊರಿಯಾ ಹಾಗೂ ಜಪಾನ್ ಜಂಟಿಯಾಗಿ ಹೊತ್ತಿದ್ದವು. ಫಿಫಾ ಫುಟ್ಬಾಲ್ ಇತಿಹಾಸದಲ್ಲಿಯೇ ೭೨ ವರ್ಷಗಳ ಬಳಿಕ ಮೊಟ್ಟಮೊದಲ ಬಾರಿಗೆ ಏಷ್ಯಾ ಉಪಖಂಡದಲ್ಲಿ ಈ ಮಹಾನ್ ಟೂರ್ನಿ ಜರುಗಿತು. ಫಿಫಾದಿಂದ ಹೇಗೂ ಆತಿಥ್ಯ ಹಕ್ಕನ್ನು ಪಡೆದ ದಕ್ಷಿಣ ಕೊರಿಯಾ ಹಾಗೂ ಜಪಾನ್‌ ಪಾಲಿಗೆ ಈ ಟೂರ್ನಿ ಅತ್ಯಂತ ಪ್ರತಿಷ್ಠೆಯದ್ದಾಗಿತ್ತು.

ಬಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ವಿನಿಯೋಗಿಸಿದ ಈ ಎರಡೂ ದೇಶಗಳು ತಂತಮ್ಮ ಪ್ರಮುಖ ನಗರಗಳಲ್ಲಿ ವಿಶ್ವದರ್ಜೆಯ ಸುಸಜ್ಜಿತ ಮೂಲಸೌಕರ್ಯದಿಂದ ಕೂಡಿದ್ದ ಕ್ರೀಡಾಂಗಣಗಳನ್ನು ನಿರ್ಮಿಸಿದ್ದವು. ಮಹತ್ವಪೂರ್ಣ ಟೂರ್ನಿಯೊಂದಕ್ಕೆ ಆತಿಥ್ಯ ಹೊತ್ತುಕೊಂಡರೆ ಅದನ್ನು ಹೇಗೆ ದಕ್ಷತೆಯಿಂದ ನಿಭಾಯಿಸಬೇಕೆಂಬ ಪಾಠವನ್ನು ಈ ಎರಡೂ ರಾಷ್ಟ್ರಗಳು ವಿಶ್ವಕ್ಕೇ ಮನವರಿಕೆ ಮಾಡಿಕೊಟ್ಟದ್ದು ಕೂಡ ಈ ವಿಶ್ವಕಪ್‌ನ ಮಹತ್ವದ ಅಂಶಗಳಲ್ಲಿ ಒಂದು. ಟೂರ್ನಿ ಮುಗಿಯುತ್ತಿದ್ದಂತೆ ಫಿಫಾ ಮಾತ್ರವಲ್ಲದೆ, ವಿಶ್ವಾದ್ಯಂತ ಫುಟ್ಬಾಲ್ ಪ್ರೇಮಿಗಳು ಈ ಎರಡೂ ದೇಶಗಳ ಆತಿಥ್ಯದ ದಕ್ಷತೆಗಾಗಿ ಮನಸಾರೆ ಶ್ಲಾಘಿಸಿದರು.

ಇದನ್ನೂ ಓದಿ : ಇನ್ನು ಮುಂದೆ ಎರಡು ವರ್ಷಕ್ಕೊಮ್ಮೆ ನಡೆಯಲಿದೆಯೇ ವಿಶ್ವಕಪ್ ಫುಟ್ಬಾಲ್?

ಇನ್ನು, ಆತಿಥ್ಯದ ಭಾಗಿದಾರರಲ್ಲಿ ಒಂದಾಗಿದ್ದ ದಕ್ಷಿಣ ಕೊರಿಯಾ ಈ ಆವೃತ್ತಿಯಲ್ಲಿ ನಾಲ್ಕರ ಘಟ್ಟ ತಲುಪುವುದರೊಂದಿಗೆ ವಿಶ್ವವನ್ನೇ ಚಕಿತಗೊಳಿಸಿತ್ತು. ಆದರೆ, ದಕ್ಷಿಣ ಕೊರಿಯಾದ ಈ ಯಶಸ್ಸಿನ ಹಿಂದೆ ರೆಫರಿಗಳ ಕೃಪಾಕಟಾಕ್ಷವಿತ್ತೆಂಬ ಮಾತೂ ಸೇರಿಕೊಂಡಿದೆ. ಇನ್ನುಳಿದಂತೆ ಯೂರೋಪ್‌, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಆಫ್ರಿಕಾ ಮತ್ತು ಆತಿಥೇಯ ಏಷ್ಯಾದ ರಾಷ್ಟ್ರಗಳು ಮೊಟ್ಟಮೊದಲ ಬಾರಿಗೆ ನಾಕೌಟ್ ಹಂತಕ್ಕೇರಿದ್ದು ಕೂಡ ಈ ವಿಶ್ವಕಪ್‌ನ ಪ್ರಥಮಗಳ ಪೈಕಿ ಒಂದಾಗಿತ್ತು.

ರೊನಾಲ್ಡೊ ಮಿಂಚು

ಫ್ರೆಂಚರ ನೆಲದಲ್ಲಿ ನಡೆದ ಈ ಹಿಂದಿನ ಆವೃತ್ತಿಯಲ್ಲಿ ಹೀನಾಯ ಸೋಲನುಭವಿಸಿದ್ದ ಬ್ರೆಜಿಲ್ ದಾಖಲೆಯ ಐದನೇ ಟ್ರೋಫಿ ಎತ್ತಿಹಿಡಿಯಲು ರೊನಾಲ್ಡೊ ಪ್ರಧಾನ ಪಾತ್ರ ವಹಿಸಿದ್ದರು. ಟೂರ್ನಿಯಾದ್ಯಂತ ಆಕರ್ಷಕ ಪ್ರದರ್ಶನ ನೀಡಿದ್ದ ಅವರು, ತಂಡದ ಪರ ಮಿಂಚಿನ ಆಟವಾಡಿದ್ದಲ್ಲದೆ, ಸ್ವತಃ ೮ ಗೋಲುಗಳನ್ನು ದಾಖಲಿಸಿ ಗೋಲ್ಡನ್ ಬೂಟ್ ಪಡೆದರು. ಫ್ರಾನ್ಸ್‌ ಆವೃತ್ತಿಯಲ್ಲಿಯೂ ಗಮನ ಸೆಳೆದಿದ್ದ ರೊನಾಲ್ಡೊ, ಗಾಯದ ಸಮಸ್ಯೆಗೆ ಸಿಲುಕಿದ್ದರು.

ಫ್ರೆಂಚರ ನೆಲದಲ್ಲಿ ೦-೩ ಗೋಲುಗಳಿಂದ ಬ್ರೆಜಿಲ್ ಸೋಲನುಭವಿಸಲು ಅವರ ಈ ಗಾಯದ ಸಮಸ್ಯೆ ಕೂಡಾ ಕಾರಣವಾಗಿತ್ತು. ಇನ್ನು ಈ ಟೂರ್ನಿಯಲ್ಲಿನ ಅವರ ಅಪೂರ್ವ ಪ್ರದರ್ಶನ ತಂಡಕ್ಕಷ್ಟೇ ಅಲ್ಲ, ಟೂರ್ನಿಯಲ್ಲಿನ ವೈಯಕ್ತಿಕ ಆಟಗಾರನ ಗೋಲಿನ ದಾಖಲೆಯನ್ನೂ ಪರಿಷ್ಕರಿಸಿತು. ೧೯೭೪ರಲ್ಲಿ ಪೋಲೆಂಡ್‌ನ ಗ್ರೆಜ್ಗಾರ್ಜ್ ಲ್ಯಾಟೊ (ಏಳು ಗೋಲುಗಳು) ಸಾಧನೆಯನ್ನು ರೊನಾಲ್ಡೊ ಹಿಂದಿಕ್ಕಿದರು.

ಮದಗಜಗಳ ಕದನ

ವಿಶ್ವ ಫುಟ್ಬಾಲ್‌ನ ಎರಡು ದೈತ್ಯ ರಾಷ್ಟ್ರಗಳೆಂದೇ ಕರೆಯಲಾಗುವ ಬ್ರೆಜಿಲ್ ಮತ್ತು ಜರ್ಮನಿ ಈ ವಿಶ್ವಕಪ್‌ ಫೈನಲ್‌ನಲ್ಲಿ ಪ್ರಥಮವಾಗಿ ಎದುರು ಬದುರಾಗಿದ್ದವು. ೬೯ ಸಹಸ್ರ ಪ್ರೇಕ್ಷಕರಿಂದ ಕೂಡಿದ್ದ ಯೋಕೊಹಾಮ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜರ್ಮನಿ ಯಾವುದೇ ಗೋಲು ಗಳಿಸಲು ಸಾಧ್ಯವಾಗದಂಥ ಅಭೇದ್ಯ ರಕ್ಷಣಾ ವ್ಯೂಹ ರಚಿಸಿದ್ದ ಬ್ರೆಜಿಲ್, ದ್ವಿತೀಯಾರ್ಧದಲ್ಲಿ ರೊನಾಲ್ಡೊ ದಾಖಲಿಸಿದ ಎರಡು ಅಪೂರ್ವ ಗೋಲುಗಳೊಂದಿಗೆ ಜಯಭೇರಿ ಬಾರಿಸಿತು. ಪಂದ್ಯದ ೬೭ ಮತ್ತು ೭೯ನೇ ನಿಮಿಷದಲ್ಲಿ ರೊನಾಲ್ಡೊ ಗೋಲು ಬಾರಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More