ಅಮೋಘ ಸಾಂಘಿಕ ಹೋರಾಟದಲ್ಲಿ ನಾಲ್ಕನೇ ಫಿಫಾ ವಿಶ್ವಕಪ್‌ಗೆ ಮುದ್ದಿಟ್ಟ ಇಟಲಿ

೧೯೭೪ರಲ್ಲಿ ಮೊದಲ ಬಾರಿ ಆತಿಥ್ಯ ಹೊತ್ತಿದ್ದ ಸಂದರ್ಭದಲ್ಲೇ ಚಾಂಪಿಯನ್ ಆಗಿ ಹೊಸ ಇತಿಹಾಸ ಬರೆದಿದ್ದ ಜರ್ಮನಿ, ಎರಡನೇ ಆತಿಥ್ಯದಲ್ಲಿ ಮುಗ್ಗರಿಸಿತು. ೨೦೦೬ರ 18ನೇ ವಿಶ್ವಕಪ್ ಆತಿಥ್ಯದಲ್ಲಿ ಜರ್ಮನಿ ತೃತೀಯ ಸ್ಥಾನಕ್ಕೆ ಹೋರಾಟ ಮುಗಿಸಿದರೆ, ಇಟಲಿ ನಾಲ್ಕನೇ ಬಾರಿಗೆ ಚಾಂಪಿಯನ್ ಆಯಿತು

ಜೂನ್ ೯ರಿಂದ ಜುಲೈ ೯ರವರೆಗೆ ನಡೆದ ಹದಿನೆಂಟನೇ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ವಿಶ್ವದ ಆರು ಖಂಡಗಳಿಂದ ೧೯೮ಕ್ಕೂ ಹೆಚ್ಚಿನ ರಾಷ್ಟ್ರಗಳು ಸಕ್ರಿಯವಾಗಿ ಭಾಗವಹಿಸಿದ್ದವು. ಆದರೆ, ಅರ್ಹತಾ ಸುತ್ತಿನ ಸೆಣಸಾಟದಲ್ಲಿ ಅಂತಿಮವಾಗಿ ಆತಿಥೇಯ ಜರ್ಮನಿಯಲ್ಲಿ ಆಡಲು ಅರ್ಹತೆ ಪಡೆದವು ೩೧ ತಂಡಗಳಷ್ಟೆ.

ಫಿಫಾ ವಿಶ್ವಕಪ್‌ ವಿಜೇತರನ್ನು ಎರಡನೇ ಬಾರಿಗೆ ಪೆನಾಲ್ಟಿ ಶೂಟೌಟ್‌ನಲ್ಲಿ ನಿರ್ಧರಿಸಲಾಯಿತು. ಬರ್ಲಿನ್‌ನ ಒಲಿಂಪಿಯಾ ಸ್ಟೇಡಿಯಾದಲ್ಲಿ ೬೯,೦೦೦ ಸಹಸ್ರ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದ ಇಟಲಿ ಮತ್ತು ಫ್ರಾನ್ಸ್ ನಡುವಣದ ಪೂರ್ಣಾವಧಿಯ ಆಟದ ಜತೆಗೆ ಹೆಚ್ಚುವರಿ ಸಮಯದ ಆಟವೂ ೧-೧ ಗೋಲಿನಿಂದ ಸಮಬಲ ಕಂಡಿತು. ಅಂತಿಮವಾಗಿ ಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿ ೫-೩ ಗೋಲುಗಳಿಂದ ಫ್ರಾನ್ಸ್ ಮಣಿಸಿ ನಾಲ್ಕನೇ ಬಾರಿಗೆ ಟ್ರೋಫಿ ಎತ್ತಿಹಿಡಿದು ಸಂಭ್ರಮಿಸಿತು. ಟೂರ್ನಿಯಾದ್ಯಂತ ಸಾಂಘಿಕ ಹೋರಾಟ ನೀಡಿದ ಇಟಲಿ ಅದಕ್ಕೆ ತಕ್ಕ ಫಲ ಪಡೆಯಿತು.

ಅಂದಹಾಗೆ, ಈ ಅಂತಿಮ ಸುತ್ತಿನ ಕಾದಾಟದಲ್ಲಿ ಫ್ರಾನ್ಸ್ ನಾಯಕ ಹಾಗೂ ಸ್ಟಾರ್ ಆಟಗಾರ ಜಿನೇಡಿನ್ ಜಿಡಾನೆ ಇಟಲಿ ಆಟಗಾರ ಮಾರ್ಕೊ ಮೊಟೊರಜಿ ಎದೆಗೆ ಮೈದಾನದಲ್ಲೇ  ತಲೆಯಿಂದ ಗುದ್ದಿದ ಪ್ರಸಂಗ ನಾಚಿಕೆಗೇಡಿನದ್ದಾಗಿತ್ತಲ್ಲದೆ, ವೃಥಾ ಅನಗತ್ಯ ವಿವಾದವನ್ನೂ ಆತ ಮೈಮೇಲೆ ಎಳೆದುಕೊಂಡರು. ಅವರ ಈ ದುರ್ವರ್ತನೆ ಈ ವಿಶ್ವಕಪ್‌ಗೆ ಅಂಟಿಕೊಂಡ ಕಪ್ಪು ಚುಕ್ಕೆಯಾಯಿತು.

ವಿಶ್ವಸ್ನೇಹಿ ಟೂರ್ನಿ

ಈ ಪಂದ್ಯಾವಳಿಯನ್ನು ವಿಶ್ವಸ್ನೇಹಿಯಾಗಿಸಲು ಜರ್ಮನಿ ಅಪಾರ ಬಗೆಯಲ್ಲಿ ಶ್ರಮಿಸಿತ್ತು. ಮೇಲಾಗಿ ಪಂದ್ಯಾವಳಿಯ ಅಧಿಕೃತ ಘೋಷವಾಕ್ಯವೇ 'ಎ ಟೈಮ್ ಟು ಮೇಕ್ ಫ್ರೆಂಡ್ಸ್' ಎಂಬುದಾಗಿತ್ತು. ಅದನ್ನು ಕಾರ್ಯಗತಗೊಳಿಸಲು ಟೊಂಕ ಕಟ್ಟಿದ್ದ ಜರ್ಮನಿ ಹಾಗೂ ಸಂಘಟನಾ ಸಮಿತಿ, ವಿಶ್ವಕಪ್‌ ಇತಿಹಾಸದಲ್ಲೇ ಹಿಂದೆಂದೂ ಕಾಣದಂಥ ಆತಿಥ್ಯ ಆಯೋಜಿಸಿತ್ತು. ದೇಶದ ಉದ್ದಗಲಕ್ಕೂ ಫ್ಯಾನ್ ಪಾರ್ಕ್‌ಗಳನ್ನು ನಿರ್ಮಿಸಿದ್ದ ಜರ್ಮನಿ, ಈ ಮೂಲಕ ಫುಟ್ಬಾಲ್ ಪಂದ್ಯಾವಳಿಯ ರಸಕ್ಷಣಗಳನ್ನು ಪ್ರತೀ ಪ್ರವಾಸಿಗನೂ ಆಸ್ವಾದಿಸುವಂತೆ ಮಾಡಿತ್ತು. ಆದರೆ, ಇಷ್ಟೆಲ್ಲ ಚೆಂದದ ವಿಶ್ವಕಪ್‌ಗೆ ಮೆತ್ತಿಕೊಂಡ ಮಸಿ ಕೂಡ ಬೇಸರ ತರಿಸುವಂತಿತ್ತು.

ದುರಾಕ್ರಮಣಕ್ಕೆ ಇಲ್ಲದ ಎಲ್ಲೆ!

ಅಂದಹಾಗೆ, ಇಟಲಿ ಆಟಗಾರ ಮಾಟೊರೆಜ್ಜಿಯ ಮೇಲಿನ ಜಿಡಾನೆಯ ದುರಾಕ್ರಮಣಕ್ಕೆ ಟೂರ್ನಿಯಲ್ಲಿನ ಕೆಲವೊಂದು ಪ್ರಸಂಗಗಳು ಪ್ರೇರೇಪಣೆಯಾಗಿದ್ದರೆ ಅಚ್ಚರಿ ಏನೂ ಇಲ್ಲ ಎಂದು ಹೇಳಲಾಗುತ್ತದೆ. ಈ ಪಂದ್ಯಾವಳಿಯಲ್ಲಿ ೩೪೫ ಹಳದಿ ಕಾರ್ಡ್‌ಗಳು ಹಾಗೂ ೨೮ ರೆಡ್ ಕಾರ್ಡ್‌ಗಳನ್ನು ಬಳಸಲಾಗಿತ್ತು. ವಿಶ್ವಕಪ್ ಫುಟ್ಬಾಲ್ ಮಟ್ಟಿಗೆ ಇದೊಂದು ಇತಿಹಾಸವೇ ಆಗಿತ್ತು. ಇನ್ನು, ಎರಡನೇ ಸುತ್ತಿನ ಪೋರ್ಚುಗಲ್ ಹಾಗೂ ಹಾಲೆಂಡ್ ನಡುವಣದ ಪಂದ್ಯವು 'ದ ಬ್ಯಾಟಲ್ ಆಫ್ ನ್ಯೂರೆಂಬರ್ಗ್' ಎಂಬ ಕುಖ್ಯಾತಿ ಗಳಿಸಿತು. ಈ ಪಂದ್ಯದಲ್ಲಿ ರಷ್ಯನ್ ರೆಫರಿ ವಾಲೆಂಟಿನ್ ಇವಾನೊವ್ ೧೬ ಹಳದಿ ಕಾರ್ಡ್‌ ಮತ್ತು ನಾಲ್ಕು ರೆಡ್ ಕಾರ್ಡ್ ಬಳಸಿದ್ದರೆಂದರೆ ಆಟಗಾರರ ಅಶಿಸ್ತಿನ, ದುರಾಕ್ರಮಣದ ಆಟಕ್ಕೆ ಕನ್ನಡಿ ಹಿಡಿಯುತ್ತದೆ.

ಅಡಿಡಾಸ್‌ನ ವಿಶಿಷ್ಟ ಪ್ರಯೋಗ

ವಿಶ್ವಕಪ್‌ಗಾಗಿ ಹದಿನಾಲ್ಕು ಪ್ಯಾನಲ್‌ಗಳಿದ್ದ ಚೆಂಡನ್ನು ಅಡಿಡಾಸ್ ರೂಪುಗೊಳಿಸಿತ್ತು. ಇದಕ್ಕಿಂತಲೂ ಮಿಗಿಲಾಗಿ ಟೂರ್ನಿಯ ಅಷ್ಟೂ ಪಂದ್ಯಕ್ಕೂ ಅದರ ದಿನಾಂಕ, ಕ್ರೀಡಾಂಗಣ ಹಾಗೂ ಆ ಪಂದ್ಯದಲ್ಲಿ ಸೆಣಸುತ್ತಿರುವ ತಂಡಗಳ ಹೆಸರುಗಳಿದ್ದ ಚೆಂಡನ್ನು ಆಟಕ್ಕೆ ಒದಗಿಸಿದ್ದು ಕೂಡಾ ಹೊಸ ಪ್ರಯೋಗವಾಗಿತ್ತು. ಅಂತೆಯೇ ಪ್ರಶಸ್ತಿ ಸುತ್ತಿನ ಸೆಣಸಾಟಕ್ಕೆ ಚಿನ್ನದ ಬಣ್ಣವಿರುವ ಚೆಂಡನ್ನು ಒದಗಿಸಲಾಯಿತು.

ಅತಿ ಹೆಚ್ಚು ಮಂದಿ ವೀಕ್ಷಣೆ

ಹದಿನೆಂಟನೇ ವಿಶ್ವಕಪ್ ಪಂದ್ಯಾವಳಿಯು ಅತಿಹೆಚ್ಚು ಪ್ರೇಕ್ಷಕರಿಂದ ವೀಕ್ಷಿಸಲ್ಪಟ್ಟ ಟೂರ್ನಿಯಾಗಿ ಗಮನ ಸೆಳೆಯಿತು. ಈ ಪಂದ್ಯಾವಳಿಯನ್ನು ೨೬.೨೯ ಬಿಲಿಯನ್ ಜನತೆ ಟಿವಿಯಲ್ಲಿ ವೀಕ್ಷಿಸಿದರೆಂದು ದಾಖಲಾಗಿದೆ. ಫೈನಲ್ ಪಂದ್ಯವನ್ನಂತೂ ೭೧೫.೧ ಮಿಲಿಯನ್ ಜನತೆ ದೂರದರ್ಶನದಲ್ಲಿ ಕಣ್ತುಂಬಿಕೊಂಡಿದ್ದರೆಂದು ಹೇಳಲಾಗುತ್ತದೆ. ೧೯೯೪, ೨೦೦೨, ೧೯೯೦ರ ವಿಶ್ವಕಪ್ ಪಂದ್ಯಾವಳಿಗಳ ಬಳಿಕ ಅತಿಹೆಚ್ಚು ವೀಕ್ಷಿಸಲ್ಪಟ್ಟ ವಿಶ್ವಕಪ್ ಪಂದ್ಯಾವಳಿ ಇದಾಗಿದೆ.

ಜಿಡಾನೆಗೆ ಗೋಲ್ಡನ್ ಬಾಲ್ ಟ್ರೋಫಿ

ವಾಸ್ತವವಾಗಿ ಇಡೀ ಪಂದ್ಯಾವಳಿಯಲ್ಲಿ ಆಕರ್ಷಕ ಪ್ರದರ್ಶನ ನೀಡಿದ್ದು ಇಟಲಿ ಆಟಗಾರ ಫ್ಯಾಬಿಯೊ ಕನ್ನಾವರೊ. ನಂಬಲಸಾಧ್ಯವೆಂಬಂತೆ ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ವಿವಾದಾತ್ಮಕ ಆಟಗಾರ ಜಿಡಾನೆ ಪಡೆದುಕೊಂಡರು. ಭಾವನಾತ್ಮಕ ನೆಲೆಯಲ್ಲಿ ಅವರಿಗೆ ಹೆಚ್ಚು ಮತಗಳು ಬಂದಿದ್ದರಿಂದ ಜಿಡಾನೆ ಗೋಲ್ಡನ್ ಬಾಲ್ ಟ್ರೋಫಿ ಪಡೆದರು.

ಆದರೆ, ಇಟಲಿಯ ಅಪ್ರತಿಮ ಡಿಫೆಂಡರ್ ಫ್ಯಾಬಿಯೊಗೆ ಈ ಗೌರವ ಸಲ್ಲಬೇಕಿತ್ತು ಎಂದು ಹೇಳಲಾಗುತ್ತದೆ. ಆದಾಗ್ಯೂ ಇಟಲಿ ನಾಯಕ ಫ್ಯಾಬಿಯೊಗೆ ಅದೇ ವರ್ಷದ ಪ್ರತಿಷ್ಠಿತ ಬಲ್ಲಾನ್ ಡಿ'ಓರ್ ಪ್ರಶಸ್ತಿ ಸಂದಾಯವಾಗಿತ್ತು. ಈ ಮಧ್ಯೆ ಟೂರ್ನಿಯಲ್ಲಿ ಐದು ಗೋಲು ಬಾರಿಸಿದ ಜರ್ಮನಿಯ ಮಿರಾಸ್ಲಾವ್ ಕ್ಲೋಸ್ ಗೋಲ್ಡನ್ ಬೂಟ್ ಪ್ರಶಸ್ತಿ ಜಯಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More