ವಾಕಾ... ವಾಕಾ... ಶಕೀರಾ ಲಾಲಿತ್ಯವೂ, ಸ್ಪಾನಿಷರ ಚೊಚ್ಚಲ ವಿಶ್ವಕಪ್ ವಿಜಯವೂ

ಖ್ಯಾತ ಪಾಪ್ ಗಾಯಕಿ ಶಕೀರಾ ಹಾಡಿದ ವಾಕಾ.. ವಾಕಾ.. ಹಾಡಿನ ಲಾಲಿತ್ಯ ೧೯ನೇ ವಿಶ್ವಕಪ್‌ನ ಪ್ರಧಾನ ಆಕರ್ಷಣೆ ಮಾತ್ರವಲ್ಲ, ದಕ್ಷಿಣ ಆಫ್ರಿಕಾ ನೆಲದಲ್ಲಿ ಜರುಗಿದ್ದ ಟೂರ್ನಿಗೆ ಭರ್ಜರಿ ಮುನ್ನುಡಿ ಬರೆದಿತ್ತು. ಐನಿಸ್ಟಾ ದಾಖಲಿಸಿದ ಏಕೈಕ ಗೋಲಿನಲ್ಲಿ ಸ್ಪೇನ್ ವಿಶ್ವ ಚಾಂಪಿಯನ್ ಆಗಿ ಉದಯಿಸಿತು

ಜೂನ್ ೧೧ರಿಂದ ಜುಲೈ ೧೧ರವರೆಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಆಯೋಜನೆಯಾಗಿದ್ದ ೨೦೧೦ರ ಆವೃತ್ತಿ ಹರಿಣಗಳ ನೆಲದಲ್ಲಿ ನಡೆದ ಮೊಟ್ಟಮೊದಲ ವಿಶ್ವಕಪ್. ರಾಜಕೀಯ ಹಾಗೂ ಆರ್ಥಿಕ ಸಮಸ್ಯೆಗಳಿಂದ ಕೂಡಿದ್ದ ದಕ್ಷಿಣ ಆಫ್ರಿಕಾ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸದು ಎಂದೇ ಹಲವರು ನಂಬಿದ್ದರು. ಕೆಲವೊಂದು ರಾಷ್ಟ್ರಗಳು ಸ್ವತಃ ಟೂರ್ನಿ ಆತಿಥ್ಯ ಹೊತ್ತುಕೊಳ್ಳಲು ಮುಂದೆ ಬಂದಿದ್ದವು. ಆದರೆ, ಈ ಎಲ್ಲ ಅಪನಂಬಿಕೆಗಳನ್ನೂ ದಕ್ಷಿಣ ಆಫ್ರಿಕಾ ಹೋಗಲಾಡಿಸಿತ್ತಲ್ಲದೆ, ತನ್ನ ನೆಲದಲ್ಲಿ ನಡೆದ ಮೊಟ್ಟಮೊದಲ ವಿಶ್ವಕಪ್ ಅನ್ನು ವೈಭವವಾಗಿಯೇ ಆಯೋಜಿಸಿ ಎಲ್ಲರಿಂದಲೂ ಸೈ ಎನಿಸಿಕೊಂಡಿತು. ಅದರಲ್ಲೂ, ಕೊಲಂಬಿಯಾ ರೂಪದರ್ಶಿ ಶಕೀರಾ ಹಾಡು ಅಭಿಮಾನಿಗಳನ್ನು ಹುಚ್ಚೆಬ್ಬಿಸಿತ್ತು.

ಹಾಲೆಂಡ್ ತಂಡವನ್ನು ಫೈನಲ್‌ನಲ್ಲಿ ೧-೦ ಗೋಲಿನಿಂದ ಮಣಿಸಿದ ಸ್ಪೇನ್ ಚಾಂಪಿಯನ್ ಪಟ್ಟ ಧರಿಸಿತ್ತು. ಪಂದ್ಯ ಸಮಾಂತರದಲ್ಲಿ ಮುಗಿದಾಗ ನೀಡಲಾದ ಹೆಚ್ಚುವರಿ ಸಮಯದಲ್ಲಿ ಆಂಡ್ರೆ ಐನೀಸ್ಟಾ ೧೧೬ನೇ ನಿಮಿಷದಲ್ಲಿ ಸ್ಪೇನ್ ಮೊಗದಲ್ಲಿ ಮುಗುಳುನಗೆ ಹೊಮ್ಮಿಸಿದ್ದರು. ಇನ್ನು ಈ ಪಂದ್ಯಾವಳಿಯಲ್ಲಿ ನಾಲ್ವರು ಆಟಗಾರರು ತಲಾ ೫ ಗೋಲು ಗಳಿಸಿ ಗೋಲ್ಡನ್ ಬೂಟ್ ಗೌರವಕ್ಕೆ ಭಾಜನರಾದರು.

ಅವಿರತ ಹೋರಾಟದ ಫಲ

ದಶಕಗಳ ಕಾಲದ ಅವಿರತ ಹೋರಾಟ ಸ್ಪೇನ್‌ಗೆ ಕೊನೆಗೂ ಫಲ ಕೊಟ್ಟಿತ್ತು. ಎರಡು ವರ್ಷಗಳ ಹಿಂದಷ್ಟೇ ಯೂರೋ ಕಪ್ ಗೆದ್ದು ಬೀಗಿದ್ದ ಸ್ಪೇನ್, ಇದೇ ಅತ್ಯುತ್ಸಾಹದಲ್ಲಿ ದಕ್ಷಿಣ ಆಫ್ರಿಕಾವರೆಗೂ ಮುನ್ನಡೆದಿತ್ತು. ೨೦೦೬ರ ನವೆಂಬರ್‌ನಿಂದ ದಕ್ಷಿಣ ಆಫ್ರಿಕಾಗೆ ಕಾಲಿಡುವವರೆಗೂ ೫೪ ಪಂದ್ಯಗಳನ್ನು ಆಡಿದ್ದ ಸ್ಪೇನ್ ೪೯ ಪಂದ್ಯಗಳಲ್ಲಿ ಗೆದ್ದಿತ್ತಲ್ಲದೆ, ಕೇವಲ ೨ ಪಂದ್ಯಗಳಲ್ಲಿ ಸೋತಿತ್ತು.

ಆದರೆ, ಈ ಹಿಂದಿನ ಆವೃತ್ತಿಗಳಲ್ಲಿ ತಡವರಿಸಿದ್ದ ಸ್ಪೇನ್ ವಿಶ್ವಕಪ್ ಗೆಲ್ಲುವ ಬಗ್ಗೆ ಬಹುತೇಕರಲ್ಲಿ ಅನುಮಾನವಿತ್ತು. ಆದರೆ, ಪ್ರಚಂಡ ಫಾರ್ಮ್‌ನಲ್ಲಿದ್ದ ಸ್ಪೇನ್, ಈ ಬಾರಿ ಎಲ್ಲರ ಲೆಕ್ಕಾಚಾರಗಳನ್ನೂ ಬುಡಮೇಲು ಮಾಡಿ ಚಾಂಪಿಯನ್ ಆಯಿತು. ೧೯೯೮ರ ಆವೃತ್ತಿಯಲ್ಲಿ ಫ್ರಾನ್ಸ್ ನಂತರ ವಿಶ್ವಕಪ್ ಗೆದ್ದ ಮೊದಲ ಹೊಸ ದೇಶವೆನಿಸಿಕೊಂಡ ಸ್ಪೇನ್, ಅಂತೆಯೇ ಫಿಫಾ ವಿಶ್ವಕಪ್ ಗೆದ್ದ ಎಂಟನೇ ರಾಷ್ಟ್ರವೆನಿಸಿಕೊಂಡಿತು.

ಇದನ್ನೂ ಓದಿ : ಹೊಚ್ಚಹೊಸ ಟ್ರೋಫಿಯೊಂದಿಗೆ ತವರಿನಲ್ಲಿ ಚಾಂಪಿಯನ್ ಆಗಿ ಮೆರೆದ ಜರ್ಮನಿ

ಹಾಲೆಂಡ್ ಹಾಹಾಕಾರ!

ಜೋಹಾನ್ಸ್‌ಬರ್ಗ್‌ನ ಸಾಕರ್ ಸಿಟಿ ಸ್ಟೇಡಿಯಂ ಭರ್ತಿ ೮೪,೪೯೦ ಪ್ರೇಕ್ಷಕರಿಂದ ತುಂಬಿತ್ತು. ಆದರೆ, ಫೈನಲ್‌ನ ರೋಚಕತೆಗಾಗಿ ಸೇರಿದ್ದ ಈ ಜನಸ್ತೋಮಕ್ಕೆ ಪಂದ್ಯದ ಬಹುಪಾಲು ಸಮಯ ನೀರಸವಾಗಿತ್ತು. ಅರ್ಥಾತ್ ಎರಡೂ ತಂಡಗಳ ಆಟಗಾರರ ಗೋಲಿಗಾಗಿನ ಹೋರಾಟ ವ್ಯರ್ಥಾಲಾಪದಲ್ಲೇ ಮುಗಿದಿತ್ತು. ಎಲ್ಲಕ್ಕಿಂತ ಮಿಗಿಲಾಗಿ, ಇಂಗ್ಲಿಷ್ ರೆಫರಿ ಹೋವರ್ಡ್ ವೆಬ್ ೧೪ ಹಳದಿ ಕಾರ್ಡ್‌ಗಳನ್ನು ಬಳಸಿದ್ದರು. ಫಿಫಾ ಫೈನಲ್‌ ಪಂದ್ಯದ ದಾಖಲೆಗಳಲ್ಲಿ ಇದೂ ಒಂದು. ಜತೆಗೆ ಹೆಚ್ಚುವರಿ ಸಮಯದಲ್ಲಿ ಹಾಲೆಂಡ್ ಡಿಫೆಂಡರ್ ಜಾನ್ ಹೆಟಿಂಗಾ ಅವರನ್ನು ಹೊರಗೆ ಅಟ್ಟಲಾಗಿತ್ತು.

ಇಷ್ಟರ ಮಧ್ಯೆಯೂ ಟಿಕಿ ಟಾಕಾ ಫುಟ್ಬಾಲ್ ಎಂಬ ವಿಭಿನ್ನ ತಂತ್ರಗಾರಿಕೆಯ ಮೂಲಕವೇ ಇಡೀ ಟೂರ್ನಿಯಲ್ಲಿ ಮಿಂಚು ಹರಿಸಿದ ಸ್ಪೇನ್, ಮೊದಲ ೪೫ ನಿಮಿಷಗಳ ಕಾಲ ಆಕ್ರಮಣಕಾರಿ ಆಟದಿಂದ ಗೋಲಿಗಾಗಿ ಸತತ ದಾಳಿ ನಡೆಸಿತಾದರೂ, ಹಾಲೆಂಡ್ ರಕ್ಷಣಾ ವ್ಯೂಹವನ್ನು ಭೇದಿಸಲು ಸಾಧ್ಯವಾಗಲೇ ಇಲ್ಲ. ದೈಹಿಕ ಹಾಗೂ ಪ್ರತಿ ತಂತ್ರಗಾರಿಕೆಯಲ್ಲಿ ಬಲಾಢ್ಯವಾಗಿದ್ದ ಡಚ್ಚರು ಸ್ಪೇನ್‌ನ ಪ್ರಭಾವಿ ಮಿಡ್‌ಫೀಲ್ಡರ್‌ಗಳಾದ ಆಂಡ್ರೆಸ್ ಐನಿಸ್ಟಾ, ಕ್ಸೇವಿ ಹೆರಾಂಡೆಜ್ ಮತ್ತು ಕ್ಸೇಬಿ ಅಲೋನ್ಸೊ ಪ್ರಭುತ್ವ ಸಾಧಿಸಲು ಬಿಡಲಿಲ್ಲ.

ಅಂತಿಮವಾಗಿ ಪೆನಾಲ್ಟಿ ಶೂಟೌಟ್‌ನತ್ತ ಪಂದ್ಯ ಜಾರುತ್ತಿದೆ ಎಂದುಕೊಳ್ಳುವ ಹೊತ್ತಿನಲ್ಲಿ ಹಾಲೆಂಡ್ ಹಾಹಾಕಾರಕ್ಕೆ ಗುರಿಯಾಯಿತು. ೧೦೯ನೇ ನಿಮಿಷದಲ್ಲಿ ಎರಡನೇ ಹಳದಿ ಕಾರ್ಡ್ ಪಡೆದು ಹೆಟಿಂಗಾ ಮೈದಾನದಿಂದ ಹೊರಹೋದ ನಂತರದ ಏಳು ನಿಮಿಷಗಳಲ್ಲೇ ಐನೀಸ್ಟಾ ಮಿಂಚಿನಂತೆ ನುಗ್ಗಿಬಂದು ಹಾಲೆಂಡ್‌ ಪಾಲಿಗೆ ಮುಳುವಾದರು.

ಸಾಕಷ್ಟು ಸೆಣಸಾಡಿ ಹೈರಾಣಾಗಾಗಿದ್ದ ಹಾಲೆಂಡ್‌ನ ಪಾಳೆಯದಲ್ಲಿ ಅಶಿಸ್ತು ಢಾಳಾಗಿತ್ತು. ಈ ಸದವಕಾಶವನ್ನು ಗುರಿಯಾಗಿಸಿಕೊಂಡ ಐನೀಸ್ಟಾ, ಸಹ ಆಟಗಾರ ಸೆಸ್ಕ್ ಫ್ಯಾಬ್ರಿಗಸ್ ನೀಡಿದ ಪಾಸ್ ಅನ್ನು ಪೆನಾಲ್ಟಿ ಏರಿಯಾದಿಂದ ಹಾಲೆಂಡ್ ಗೋಲುಪೆಟ್ಟಿಗೆಯತ್ತ ನುಸುಳಿಸುತ್ತಲೇ ಸ್ಪೇನ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಡಬ್ಲ್ಯೂಟಿಎ ಫೈನಲ್ಸ್ | ಕ್ವಿಟೋವಾ ವಿರುದ್ಧ ಜಯ ಸಾಧಿಸಿದ ವೋಜ್ನಿಯಾಕಿ
ಫೇವರಿಟ್ ಭಾರತಕ್ಕೆ ವಿಶಾಖಪಟ್ಟಣದಲ್ಲೂ ಕೆರಿಬಿಯನ್ನರನ್ನು ಗೆಲ್ಲುವ ಧಾವಂತ
ವಿಶ್ವ ಕುಸ್ತಿಯಲ್ಲಿ ಎರಡು ಪದಕ ಗೆದ್ದ ಬಜರಂಗ್ ಪುನಿಯಾ ಚಾರಿತ್ರಿಕ ಸಾಧನೆ
Editor’s Pick More